ಅದ್ಭುತ ಮಿಮಿಕ್ರಿ ಪಟು: ಹಾಡಿದ ಅಷ್ಟೂ ಹಾಡಿನ ಕ್ಯಾಸೆಟ್ ಇಡ್ಕೊಂಡಿದ್ರು SPB
ಎಸ್‌ಪಿಬಿಗೆ ಪಿಬಿಎಸ್ ಆಗಬೇಕೆಂಬ ಆಸೆ ಇತ್ತು | ಅದ್ಭುತ ಮಿಮಿಕ್ರಿ ಪಟು | ಅವರಿಗೆ ಕೋಪ ಬಂದರೆ ಅಸಿಸ್ಟಂಟ್‌ಗಳು ತಲೆಮರೆಸಿಕೊಳ್ಳುತ್ತಿದ್ದರು | ಹಾಡಿದ ಅಷ್ಟೂಹಾಡಿನ ಕ್ಯಾಸೆಟ್ ಹೊಂದಿದ್ದರು ಬಾಲಸುಬ್ರಹ್ಮಣ್ಯಂ
ಎರಡು ಬಗೆಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆತ್ಮೀಯರು. ಒಂದು ಈಟಿವಿಯಲ್ಲಿ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದ ನಿರ್ಮಾಪಕ, ಮುಖ್ಯಸ್ಥನಾಗಿದ್ದಾಗ ಪ್ರತೀ ಹಂತದಲ್ಲೂ ಅವರ ಜೊತೆಗಿದ್ದೆ. ಇನ್ನೊಂದು ಅವರು ವೈಯಕ್ತಿಕವಾಗಿಯೂ ನನಗೆ ಆಪ್ತರಾಗಿದ್ದರು.
ಎಸ್‌ಪಿಬಿ ಪರಿಚಯವಾದದ್ದು 2002ರಲ್ಲಿ. ಆಗ ‘ಎದೆ ತುಂಬಿ ಹಾಡುವೆನು’ ಟೈಟಲ್ ಇನ್ನೂ ಫಿಕ್ಸ್ ಆಗಿರಲಿಲ್ಲ. ಆ ಕಾರ್ಯಕ್ರಮದ ಬಗ್ಗೆ ಮಾತನಾಡಲು ಎಸ್‌ಪಿಬಿ ತಮ್ಮ ರೂಮ್‌ಗೆ ಆಹ್ವಾನಿಸಿದ್ದರು. ಆ ಸಣ್ಣ ರೂಮ್‌ನಲ್ಲಿ ಎಸ್‌ಪಿಬಿ ಕುರ್ಚಿಯ ತುಂಬ ತುಂಬಿಕೊಂಡಿದ್ದರು. ಅವರ ಗಟ್ಟಿಮಾತು ರೂಮ್‌ನಲ್ಲಿ ಎಕೋ ಆಗಿ ವಿಶಿಷ್ಟವಾಗಿ ಕೇಳ್ತಿತ್ತು. ಅವತ್ತು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಿ ಬೀಳ್ಕೊಟ್ಟರು.
ಶಾಸ್ತ್ರೀಯ ಸಂಗೀತ ಕಲಿಯದೆ ಹಿನ್ನೆಲೆ ಗಾಯನದಲ್ಲಿ ಯಶಸ್ಸುಸಾಧಿಸಿದ ಗಾನ ಗಂಧರ್ವ ಎಸ್‌ಪಿಬಿ
ಇದಾಗಿ ಒಂದು ವಾರ ಬಿಟ್ಟು ಮತ್ತೆ ಅವರ ಭೇಟಿ. ಕಾರ್ಯಕ್ರಮದ ಬಗ್ಗೆ ವಿಚಾರಿಸಿ, ಶೀರ್ಷಿಕೆ ರೆಡಿ ಆಯ್ತಾ ಅಂತ ಕೇಳಿದರು. ನಾನಾಗ ಜಿಎಸ್‌ಎಸ್ ಅವರ ‘ಎದೆ ತುಂಬಿ ಹಾಡಿದೆನು’ ಹಾಡಿನ ಸಾಲನ್ನು ‘ಎದೆತುಂಬಿ ಹಾಡುವೆನು’ ಅಂತ ಮಾಡಿ ಅದನ್ನು ಫೈನಲ್ ಮಾಡಿದ್ದೆ. ಆ ಶೀರ್ಷಿಕೆಯನ್ನು, ಅದರ ಅರ್ಥವನ್ನು ಅವರಿಗೆ ವಿವರಿಸಿದೆ. ಒಂದು ನಿಮಿಷ ಮೌನ. ಆಮೇಲೆ ಮೂಳೆಮುರಿಯುವಷ್ಟುಬಿಗಿಯಾಗಿ ತಬ್ಬಿಕೊಂಡರು. ‘ನಿಮ್ಮ ಈ ಪ್ರೀತಿ ಜಿಎಸ್‌ಎಸ್ ಅವರಿಗೆ ಸಲ್ಲಬೇಕು. ಇದು ಅವರು ಬರೆದದ್ದು’ ಅಂದಿದ್ದೆ. ಆಮೇಲೆ ಒಂದೂ ಕಾಲು ವರ್ಷದ ಬಳಿಕ ಆ ಕಾರ್ಯಕ್ರಮದ ಪ್ರಸಾರ ಶುರುವಾಯ್ತು. ತಯಾರಿಗೆ ಅಷ್ಟುಸಮಯ ತಗೊಂಡಿದ್ದೆ.
ಹಾಡು ಕೇಳಿ ಕಾಲಿಗೆ ಬೀಳಲು ಹೊರಟಿದ್ದರು
ಈ ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಅವರು ಎಷ್ಟುತಲ್ಲೀನರಾಗಿದ್ದರು, ಕಾರ್ಯಕ್ರಮ ಹೇಗೆ ಮನೆ ಮಾತಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲಿ ಹಾಡಿನ ಸೆಲೆಕ್ಷನ್‌ನಿಂದ ಹಿಡಿದು ಪ್ರತಿಯೊಂದರ ಉಸ್ತುವಾರಿಯೂ ನನ್ನದೇ ಇತ್ತು. ನಮ್ಮ ತಂಡದವರೂ ಚೆನ್ನಾಗಿ ತೊಡಗಿಸಿಕೊಂಡಿದ್ದರು. ಆದರೆ ನಾನ್ಯಾವತ್ತೂ ವೇದಿಕೆ ಮೇಲೆ ಬರುತ್ತಿರಲಿಲ್ಲ. ಅದು ನನಗೆ ಇಷ್ಟವೂ ಆಗುತ್ತಿರಲಿಲ್ಲ. ಎಸ್‌ಪಿ ಅವರು ಯಾವ ಮಟ್ಟಿಗೆ ತಲ್ಲೀನರಾಗುತ್ತಿದ್ದರು ಅಂದರೆ, ಒಂದು ಚಿಕ್ಕ ಹುಡುಗಿ ಕೃಷ್ಣನ ಬಗೆಗಿನ ಹಾಡು ಹಾಡಿದಾಗ ಅವರ ಕಣ್ತುಂಬಾ ನೀರು! ಮಕ್ಕಳನ್ನು ಬಹಳ ಪ್ರೋತ್ಸಾಹ ಮಾಡುತ್ತಿದ್ದರು, ಅವರ ಜೊತೆಗೆ ಹಾಡುತ್ತಿದ್ದರು.
ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ದ ಎಸ್‌ಪಿಬಿ!
ಚೆಂದ ಹಾಡಿದರೆ, ಅವರನ್ನು ಎತ್ತಿಕೊಂಡು ಅವರ ಜೊತೆಗೆ ಹಾಡುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರು. ಆಗ ಗೋಡ್ಕಿಂಡಿ ಅವರಿನ್ನೂ ಪಂಡಿತ್ ಆಗಿರಲಿಲ್ಲ. ಆದರೆ ಅವರೊಬ್ಬ ಅಸಾಮಾನ್ಯ ಪ್ರತಿಭೆ ಅನ್ನೋದು ನಮಗೆಲ್ಲಾ ಗೊತ್ತಾಗಿತ್ತು. ಗೋಡ್ಕಿಂಡಿ ಅವರನ್ನು ಎಸ್‌ಪಿಬಿ ‘ಪಂಡಿತ್ ಜೀ’ ಎಂದೇ ಕರೆಯುತ್ತಿದ್ದರು. ರಾಗಕ್ಕೆ ಸಂಬಂಧಿಸಿದಂತೆ ಅವರನ್ನು ಮಾತಿಗೆಳೆಯುತ್ತಿದ್ದರು. ಒಮ್ಮೆ ಫಯಾಜ್ ಖಾನ್ ಕಾರ್ಯಕ್ರಮಕ್ಕೆ ಬಂದಿದ್ದ. ಅವನ ಹಾಡು ಕೇಳಿ ಕಾಲಿಗೇ ಬೀಳಲು ಮುಂದಾಗಿದ್ದರು. ಪ್ರತಿಭೆಯನ್ನು ಗುರುತಿಸುವುದರಲ್ಲಿ, ಅದನ್ನು ಗೌರವಿಸುವುದರಲ್ಲಿ ಎಸ್‌ಪಿಬಿ ಬಿಟ್ಟರಿಲ್ಲ. ಎದೆತುಂಬಿ ಹಾಡಿದೆನು ಕಾರ್ಯಕ್ರಮ ಬರೋಬ್ಬರಿ ಹತ್ತು ವರ್ಷಗಳ ಕಾಲ ಪ್ರಸಾರ ಕಂಡಿತು.
SPB ಕುರಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಸ್‌ಪಿಬಿ ಅವರಿಗೆ ರಫಿ ಅಂದ್ರೆ ಜೀವ. ನಾವೊಮ್ಮೆ ರಫಿ ಹಾಡುಗಳದ್ದೇ ಕಾರ್ಯಕ್ರಮ ಮಾಡಿದ್ದೆವು. ರಫಿ ಅವರ ಹಾಡುಗಳನ್ನು ಜಯಂತ್ ಕಾಯ್ಕಿಣಿ, ಹಂಸಲೇಖ ಅವರು ಕನ್ನಡಕ್ಕೆ ಅನುವಾದಿಸಿ ಕೊಟ್ಟರು. ಮಕ್ಕಳು ಒಂದಿಷ್ಟುಹಾಡು ಹಾಡೋದು, ಒಂದೆರಡು ಹಾಡು ಎಸ್‌ಪಿಬಿ ಅವರು ಹಾಡೋದು ಅಂತಾಯ್ತು. ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂತು. ಬಹುಶಃ ಎಸ್‌ಪಿಬಿ ಅವರಿಗೂ ಇಷ್ಟುಚೆನ್ನಾಗಿ ಬರುತ್ತೆ ಅನ್ನುವ ನಿರೀಕ್ಷೆ ಇರಲಿಲ್ಲ ಅನಿಸುತ್ತೆ. ಕಾರ್ಯಕ್ರಮದ ನಡುವೆಯೇ ಅವರು ನನಗೆ ಕಾಲ್ ಮಾಡಿದರು. ‘ಎಲ್ಲಿದ್ದಿ, ಸ್ಟೇಜ್ ಹತ್ರ ಬಾ’ ಅಂದ್ರು. ನಾನ್ಯಾವತ್ತೂ ಸ್ಟೇಜ್ ಮೇಲೆ ಹೋಗೋದಿಲ್ಲ. ಆದ್ರೆ ಅವತ್ತು ಎಸ್‌ಪಿಬಿ ಅವರು ನನ್ನ ವೇದಿಕೆಗೆ ಕರೆಸಿದ್ದೇ ಅಲ್ಲದೇ ವಾಚಾಮಗೋಚರವಾಗಿ ಹೊಗಳಿಬಿಟ್ರು. ಬಿಗಿಯಾಗಿ ತಬ್ಬಿಕೊಂಡರು. ಆ ಹಿಡಿತದ ಬಿಸುಪು ಇನ್ನೂ ಇದೆ.
ಸಿಟ್ಟು ಬಂದರೆ ಕೆಂಡಾಮಂಡಲ
ಎಸ್‌ಪಿಬಿ ಅವರಿಗೆ ಸಿಟ್ಟು ಬಂದರೆ ಕೆಂಡಾಮಂಡಲ ಆಗಿ ಬಿಡುತ್ತಿದ್ದರು. ಅವರ ಅಸಿಸ್ಟೆಂಟ್‌ಗಳಿಗೆ ಇದು ಚೆನ್ನಾಗಿ ಗೊತ್ತು. ಬಾಲಸುಬ್ರಹ್ಮಣ್ಯಂ ಅವರಿಗೆ ಸಿಟ್ಟು ಬಂದಿದೆ ಅಂತ ಗೊತ್ತಾದ ತಕ್ಷಣ ಇವರೆಲ್ಲಾದ್ರೂ ತಲೆ ಮರೆಸಿಕೊಳ್ಳುತ್ತಿದ್ದರು. ಅಲ್ಲೇ ಇದ್ದರೆ ಸಿಟ್ಟಲ್ಲಿ ಎದುರಿರೋರು ಯಾರು ಅಂತಲೂ ನೋಡದೇ ಭಯಂಕರವಾಗಿ ರೇಗಿ ಬಿಡುವ ಸ್ವಭಾವ. ಅರ್ಧ ಗಂಟೆ ಆದ ಮೇಲೆ ನಿಧಾನಕ್ಕೆ ಆ ಅಸಿಸ್ಟೆಂಟ್ಸ್ ಅವರ ಬಳಿ ಹೋಗ್ತಿದ್ರು. ಅಷ್ಟೊತ್ತಿಗೆ ಸಿಟ್ಟಿಳಿದು ಕೂಲ್ ಆಗಿ ‘ಯಾಕ್ರೋ ಹಾಗೆ ಮಾಡಿದ್ರಿ’ ಅಂದು ಸುಮ್ಮನಾಗುತ್ತಿದ್ದರು. ಒಮ್ಮೆ ಅಂಥಾ ಸಂದರ್ಭ, ಅವರ ಅಸಿಸ್ಟೆಂಟ್ ಹತ್ತಿರ ಎಸ್‌ಪಿಬಿ ಬಗ್ಗೆ ಕೇಳಿದೆ, ಮೇಲಿದ್ದಾರೆ, ಹೋಗಿ ಅಂದ್ರು. ನಾನು ಹೋದರೆ ಮುಖ, ಮೈಯೆಲ್ಲ ಕೆಂಪಾಗಿ ಕೂತಿದ್ರು, ಮಾತಿನಲ್ಲಿ ಬಿಗು. ಎಷ್ಟುಬೇಕೋ ಅಷ್ಟೇ ಮಾತು. ಒಂದಿಷ್ಟುಹೊತ್ತು ಹೀಗೇ ಹೋಯ್ತು. ಕೊನೆಗೊಮ್ಮೆ ಅವರ ಸಿಟ್ಟು ತಿಳಿಯಾಯ್ತು. ಆಮೇಲೆ ಸ್ವಲ್ಪ ಹೊತ್ತಿಗೆ ಎಂದಿನ ಲವಲವಿಕೆಯ ಎಸ್‌ಪಿಬಿ.
ನಾನು ಪಿಬಿಎಸ್ ಆಗ್ಬೇಕು
‘ನಾನು ಬರೀ ಎಸ್‌ಪಿಬಿ ಆಗಿದ್ದೀನಿ. ನಾನು ಪಿಬಿಎಸ್ ಆಗ್ಬೇಕು’ ಅನ್ನುವ ಮಾತುಗಳನ್ನು ಎಸ್‌ಪಿಬಿ ಬಾಯಲ್ಲಿ ಕೇಳಿದ್ದೀನಿ. ಪಿ.ಬಿ. ಶ್ರೀನಿವಾಸ್ ಅವರಿಗೆ ಅದ್ಭುತ ಶಾಸ್ತ್ರೀಯ ಸಂಗೀತ ಜ್ಞಾನ ಇತ್ತು. ಇವರಿಗೆ ತಾನು ಸಂಗೀತ ಕಲಿತಿಲ್ಲ ಅನ್ನುವುದಿತ್ತು. ಆದರೆ ಆ ಎತ್ತರಕ್ಕೆ ಹೋದರೂ ನಾನು ಪಿ.ಬಿ. ಶ್ರೀನಿವಾಸ್‌ರಂಥಾಗಬೇಕು ಅನ್ನುವ ವಿನಮ್ರತೆ ಇದೆಯಲ್ಲ, ಅದು ಗ್ರೇಟ್ ಅನಿಸುತ್ತೆ. ಜೊತೆಗೆ ಈ ಕಾಲದ ಹಾಡುಗಳಲ್ಲಿ ಸಂಗೀತ, ನಾದ ಗುಣವೇ ಮಾಯವಾಗ್ತಿರುವ ಬಗ್ಗೆ ಅವರು ವಿಷಾದಪಡುವುದನ್ನು ಕಂಡಿದ್ದೇನೆ.
ಕೊನೆಯ ಹಾಡು
ಎಸ್‌ಪಿಬಿ ಅವರು ಕೊನೆಯ ಹಾಡು ಹಾಡಿದ್ದು ರಾಮೋಜಿ ಫಿಲ್ಮಂ ಸಿಟಿಯಲ್ಲಿ. ನಮ್ಮ ಚೇರ್‌ಮೆನ್ ರಾಮೋಜಿ ಅವರೆಂದರೆ ಎಸ್‌ಪಿ ಅವರಿಗೆ ತಂದೆಯಂಥಾ ಭಾವ, ಗೌರವ. ಬಹುಶಃ ಎಸ್‌ಪಿಬಿ ಅವರು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಗೌರವಿಸುತ್ತಿದ್ದ ವ್ಯಕ್ತಿ ರಾಮೋಜಿ ರಾವ್. ತನ್ನನ್ನು ಅವರು ಬೆಳೆಸಿದವರು ಎಂಬ ಅಭಿಮಾನ. ಇವತ್ತು ಬೆಳಗ್ಗೆ ರಾಮೋಜಿ ಅವರ ಬಳಿ ಮಾತನಾಡಿದ್ದೆ. ಅವರ ದನಿಯಲ್ಲಿ ಸಂಕಟವಿತ್ತು, ಮನಸ್ಸಲ್ಲಿ ಮಗನನ್ನು ಕಳೆದುಕೊಂಡ ನೋವು ತುಂಬಿದಂತಿತ್ತು.
ನಟನೆ ಅಂದರೆ ಬಹಳ ಇಷ್ಟ
ಎಸ್‌ಪಿಬಿ ಅವರು ಅದ್ಭುತ ಮಿಮಿಕ್ರಿ ಪಟು. ಅವತ್ತೊಮ್ಮೆ ಕಾಳಿಂಗ ರಾಯರನ್ನು ಡಿಟ್ಟೋ ಅವರದೇ ಧ್ವನಿಯಲ್ಲಿ ಇಮಿಟೇಟ್ ಮಾಡಿ ಹಾಡಿದ್ದರು. ಆದರೆ ನಮಗೆ ಎಸ್‌ಪಿಬಿ ಅವರ ದನಿಯೇ ಬೇಕಿತ್ತು. ಸಿನಿಮಾದಲ್ಲಿ ಹಾಡಿದಾಗ ಅದು ಹೀರೋನೇ ಹಾಡಿದ್ದು ಅಂತ ಅನಿಸುತ್ತೆ, ಒಬ್ಬ ಹೀರೋನ ಟೆಂಪರ್ ಅನ್ನು ಹಿಡಿಯಬಲ್ಲ ಎಸ್‌ಪಿಬಿ ಅವರ ಜಾಣ್ಮೆ ಇದರ ಹಿಂದಡಗಿದೆ. ಅವರು ಬಹಳ ಚೇಷ್ಟೆಮಾಡುತ್ತಾರೆ. ಇನ್ನೊಬ್ಬ ನಟರನ್ನು ಮಿಮಿಕ್ ಮಾಡೋದು ಬಹಳ ಚೆನ್ನಾಗಿರುತ್ತದೆ. ಕಂಡರಾಗದವರ ಬಗೆಗೂ ಹೀಗೇ ಮಿಮಿಕ್ರಿ ಮಾಡಿ ಚೇಷ್ಟೆಮಾಡುತ್ತಿದ್ದರು. ಅವರಿಗೆ ತಾನು ನಟನಾಗಬೇಕು ಅನ್ನುವ ಆಸೆ ಬಹಳ ಇತ್ತು. ಆದರೆ ನಟನೆಯನ್ನು ಒರೆಗೆ ಹಚ್ಚುವ ಅವಕಾಶ ಸಿಗಲಿಲ್ಲ ಅನಿಸುತ್ತೆ.
ಸದಾ ಜೊತೆಗಿರುವ ಹಾಡಿನ ಪುಸ್ತಕ
ರೆಕಾರ್ಡಿಂಗ್‌ಗೆ ಹೋಗುವಾಗ ಅವರ ಕೈಯಲ್ಲಿ ನಾಲ್ಕೈದು ಬೈಂಡ್ ಮಾಡಿದ ಪುಸ್ತಕಗಳಿರುತ್ತಿದ್ದವು. ಅದರಲ್ಲಿ ಅವರು ಕೈಯಾರೆ ತೆಲುಗಿನಲ್ಲಿ ಬರೆದ ಹಾಡುಗಳಿರುತ್ತಿದ್ದವು. ರಾಗ, ಸ್ವರ, ಟಿಪ್ಪಣಿಗಳೆಲ್ಲ ಇರುತ್ತಿದ್ದವು. ಅವರು ಮತ್ತೊಮ್ಮೆ ಆ ಹಾಡು ಹಾಡ್ಬೇಕು ಅಂತಾದಾಗ ಅದನ್ನು ಒಮ್ಮೆ ನೋಡಿ ರೆಡಿಯಾಗುತ್ತಿದ್ದರು. ಅವರು ಒಂದು ಹಾಡು ಹಾಡಲು ಮಾಡಿಕೊಳ್ಳುವ ಸಿದ್ಧತೆಯೂ ಸಣ್ಣದಿರಲಿಲ್ಲ. ಅವರ ಬಳಿ ಅವರ ಅಷ್ಟೂಹಾಡುಗಳ ಕ್ಯಾಸೆಟ್ಸ್ ಇದ್ದವು.
ಅಣ್ಣನ ಥರ ಆಶೀರ್ವಾದ
ಮಗಳ ಮದುವೆಗೆ ಕರೆಯಲು ಎಸ್‌ಪಿಬಿ ಅವರಿಗೆ ಕರೆ ಮಾಡಿ ನಿಮ್ಮ ಮನೆಗೆ ಬರ್ತೀನಿ ಅಂದೆ. ಶುರುವಿಗೆ ಬೇಡ, ಅಷ್ಟುದೂರ ಯಾಕೆ ಬರ್ತೀಯಾ, ಎಲ್ಲಾದ್ರೂ ಸಿಕ್ಕಿದಾಗ ಕೊಡು ಅಂದ್ರು. ಅವರಾಗ ಚೆನ್ನೈಯಲ್ಲಿದ್ದರು. ನಾನೊಪ್ಪಲಿಲ್ಲ. ‘ನನಗಿರೋದು ಒಬ್ಬಳೇ ಮಗಳು, ಮನೆಗೆ ಬಂದೇ ಕರೀಬೇಕು’ ಅಂದೆ. ಸರಿ, ಬಾ ಅಂತ ಕರೆದರು. ಮನೆಗೆ ಹೋದೆವು. ಒಂದಿಷ್ಟುವಿಚಾರ ಮಾತನಾಡಿದ ಬಳಿಕ ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸಿದೆ. ಆಗ ಅವರು ಪತ್ನಿಯನ್ನು ಕರೆದು ತೆಲುಗಿನಲ್ಲಿ ಏನೋ ಹೇಳಿದರು. ಅವರ ಪತ್ನಿ ಅಕ್ಷತೆ ತಂದು ಕೊಟ್ಟರು. ಅವರು ಕುರ್ಚಿಯಿಂದ ಎದ್ದು, ಕಾಲಿಗೆ ಬಿದ್ದ ನನ್ನ ಮಗಳಿಗೆ ಆಶೀರ್ವಾದ ಮಾಡಿದರು. ಆ ಕ್ಷಣ ಅವರು ನನಗೆ ಸಾಕ್ಷಾತ್ ನನ್ನ ಅಣ್ಣನ ಹಾಗೇ ಕಂಡರು.
-ಸುರೇಂದ್ರನಾಥ್