ನಾನು ಐಸ್ ಕ್ರೀಂ ತಿನ್ತೀನಿ, ಅನುಕರಿಸಬೇಡಿ ಅಂತಿದ್ದರು: ಮಂಜುಳಾ ಗುರುರಾಜ್
ಕಲಾವಿದರು ಯಾವುದೇ ಕಾರಣಕ್ಕೂ ಸಮಾಜಕ್ಕೆ ಕೆಟ್ಟದ್ದು ನೀಡಬಾರದು, ಒಳ್ಳೆಯದ್ದನ್ನೇ ನೀಡಬೇಕು. ಅದು ಶಾಶ್ವತವಾಗಿ ಉಳಿಯುತ್ತದೆ ಎನ್ನುತ್ತಿದ್ದ ಎಸ್‌ಪಿಬಿ| ದೇವರು ನನಗೆ ಸಿಂಗರ್ ಪಾತ್ರ ಕೊಟ್ಟಿದ್ದಾನೆ, ನಾನು ಇದನ್ನು ಚೆನ್ನಾಗಿ ಮಾಡಬೇಕು ಎನ್ನುತ್ತಿದ್ದ ಗಾನ ಗಾರುಡಿಗ|
ಬೆಂಗಳೂರು(ಸೆ.26): ನನ್ನ ಕೆರಿಯರ್‌ನ ಎರಡನೇ ಹಾಡು ಹಾಡಿದ್ದೇ ಬಾಲು ಸರ್ ಜೊತೆಗೆ. ಅಲ್ಲಿಂದ ಅವರ ಜತೆ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದೇನೆ. ಸಹ ಗಾಯಕನೊಂದಿಗೆ ಹಾಡಬೇಕಿದ್ದರೆ ಒಂದು ಕಂಫರ್ಟ್ ಫೀಲ್ ಇದ್ದರೆ ಚೆಂದ. ಅದು ಬಾಲು ಸರ್ ವಿಚಾರದಲ್ಲಿ ಸಾಕಷ್ಟು ಇರುತ್ತಿತ್ತು. ಅವರೊಂದಿಗೆ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಹಾಡಿದ್ದೇನೆ. ನಾನು ತಪ್ಪು ಮಾಡಿದಾಗ ಅದನ್ನು ಅವರು ತಿದ್ದುತ್ತಿದ್ದರು. ಅದೇ ರೀತಿ ಕನ್ನಡದ ಪದಗಳ ಅರ್ಥ ಏನು, ಉಚ್ಚಾರ ಹೇಗೆ ಎಂದೆಲ್ಲಾ ನನ್ನ ಕೇಳುತ್ತಿದ್ದರು. ಯಾವುದೇ ಕಾರಣಕ್ಕೂ ತಪ್ಪು ಅರ್ಥ ಬರುವ, ಅಶ್ಲೀಲ ಅನ್ನಿಸುವ ಪದ ಬಳಕೆ ಮಾಡಬಾರದು ಎನ್ನುವುದು ಅವರ ನಿಲುವು ಎಂದು ಎಸ್‌ಪಿಬಿ ಅವರ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಅವರು ಹಂಚಿಕೊಂಡಿದ್ದಾರೆ.
ಕೆಲವು ಸಲ ಪ್ರಾಸಕ್ಕೆ ಅನುಗುಣವಾಗಿ ಸಾಹಿತಿಗಳು ಅಶ್ಲೀಲ ಅನ್ನಿಸುವ ಅಥವಾ ಬೇರೆ ಬೇರೆ ಅರ್ಥ ನೀಡುವ ಪದಗಳನ್ನು ಬಳಕೆ ಮಾಡಿದ್ದರೆ ನಾನು ಅದನ್ನು ಬಾಲು ಸರ್ ಗಮನಕ್ಕೆ ತರುತ್ತಿದ್ದೆ. ತಕ್ಷಣ ಅವರು ಸಂಬಂಧಿಸಿದವರ ಬಳಿ ಮಾತನಾಡಿ ಆ ಪದವನ್ನು ತೆಗೆಸುತ್ತಿದ್ದರು, ಬೇರೆ ಪದ ಬಳಕೆ ಮಾಡುತ್ತಿದ್ದರು. ಕಲಾವಿದರು ಯಾವುದೇ ಕಾರಣಕ್ಕೂ ಸಮಾಜಕ್ಕೆ ಕೆಟ್ಟದ್ದು ನೀಡಬಾರದು, ಒಳ್ಳೆಯದ್ದನ್ನೇ ನೀಡಬೇಕು. ಅದು ಶಾಶ್ವತವಾಗಿ ಉಳಿಯುತ್ತದೆ ಎನ್ನುತ್ತಿದ್ದರು.
ನನ್ನನ್ನು ಫಾಲೋ ಮಾಡಬೇಡಿ ಎನ್ನುತ್ತಿದ್ದರು
ಪ್ರತಿಭೆ, ಸನ್ನಡತೆ, ಸಜ್ಜನಿಕೆಯ ಪ್ಯಾಕೇಜ್ ಎಸ್‌ಪಿಬಿ: ರಮೇಶ್ ಅರವಿಂದ್
ಬಾಲು ಸರ್ ರಾಶಿ, ನಕ್ಷತ್ರ ಇದೆಲ್ಲಾ ನೋಡುತ್ತಿದ್ದರು. ನನ್ನ ಮತ್ತು ಅವರ ನಕ್ಷತ್ರ ಒಂದೇ ಆಗಿತ್ತು. ನಮ್ಮ ಕಾಂಬಿನೇಷನ್ ಚೆನ್ನಾಗಿಯೇ ಇತ್ತು. ಒಳ್ಳೆಯ ಒಡನಾಟ ಕೂಡ ಇತ್ತು. ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನನ್ನ ಮಗನ ನಾಮಕರಣಕ್ಕೆ ಬಂದಿದ್ದರು. ಮದುವೆಗೆ ಬರಲಾಗದೇ ಇದ್ದಾಗ ಕರೆ ಮಾಡಿ ಬರಲು ಆಗಲಿಲ್ಲ ಎಂದು ಹೇಳಿದ್ದರು. ಅಷ್ಟುಪ್ರೀತಿ ನಮ್ಮ ಮೇಲೆ ಅವರಿಗೆ. ನಮ್ಮ ಸಂಗೀತ ಶಾಲೆಗೆ ವಿಶೇಷ ಅತಿಥಿಯಾಗಿ ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಿದ್ದರು. ನನ್ನ ರೀತಿ ಆಗಬೇಡಿ, ನನ್ನನ್ನು ಅನುಕರಣೆ ಮಾಡಬೇಡಿ. ಹಾಡುಗಾರರು ಐಸ್‌ಕ್ರೀಂ ತಿನ್ನಬೇಡಿ ಎನ್ನುತ್ತಾರೆ, ನಾನು ತಿನ್ನುತ್ತೇನೆ. ನಾನು ತಿನ್ನುವ ವಿಚಾರದಲ್ಲಿ ಕಟ್ಟುನಿಟ್ಟು ಮಾಡಿಕೊಂಡಿಲ್ಲ, ನೀವು ಹೀಗೆ ಮಾಡಬೇಡಿ ಎನ್ನುತ್ತಿದ್ದರು. ನಾನು ಹಾಡುಗಾರ್ತಿಯಾಗಿ 25 ವರ್ಷಗಳು ತುಂಬಿದಾಗ ನಡೆದ ಕಾರ್ಯಕ್ರಮಕ್ಕೆ ಬಂದು ಸುಮಾರು 4 ಗಂಟೆಗಳ ಕಾಲ ಇದ್ದು, ನನ್ನನ್ನು ಹರಸಿದ್ದರು.
ನಟನೆ ಮಾಡಲೇ ಎಂದು ಕೇಳಿದ್ದರು
ತೆಲುಗಿನಲ್ಲಿ ಬಂದ ‘ಮಾಮಗಾರು’ ಸಿನಿಮಾ ಕನ್ನಡದಲ್ಲಿ ‘ಮುದ್ದಿನ ಮಾವ’ ಹೆಸರಿನಲ್ಲಿ ರೀಮೆಕ್ ಆಯ್ತು. ಅದರಲ್ಲಿ ಮಾವನ ಪಾತ್ರ ಮಾಡಿದ್ದರು. ಅವರಿಗೆ ಮೊದಲಿನಿಂದಲೂ ನಟಿಸುವ ಆಸೆ. ಹಾಗಾಗಿ ಈ ಅವಕಾಶ ಸಿಕ್ಕ ತಕ್ಷಣ ನನಗೆ ಕರೆ ಮಾಡಿ ನಾನು ಈ ಪಾತ್ರದಲ್ಲಿ ನಟಿಸಲೇ, ಕನ್ನಡದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಜನ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದರು. ಅದಕ್ಕೆ ನಾನು ಅದು ದೊಡ್ಡ ಕ್ಯಾರೆಕ್ಟರ್, ತುಂಬಾ ಸವಾಲು ಇದೆ ನೋಡಿ ಎಂದಿದ್ದೆ. ಆಗ ನಾನು ಮಾಡಿಯೇ ಮಾಡುತ್ತೇನೆ ನೋಡು ಎಂದು ಉತ್ಸಾಹದಿಂದ ಹೇಳಿದ್ದರು. ಅವರು ಹೇಳಿದ ಹಾಗೆಯೇ ಮಾಡಿದರು. ಆ ಸಿನಿಮಾ ಸೂಪರ್‌ಹಿಟ್ ಆಯಿತು. ನಾನು ಆ ಚಿತ್ರದ ‘ದೀಪಾವಳಿ ದೀಪಾವಳಿ’ ಹಾಡು ಹಾಡಿದ್ದೆ.
ದೇವರು ಸಿಂಗರ್ ಪಾತ್ರ ಕೊಟ್ಟಿದ್ದಾನೆ ಎನ್ನುತ್ತಿದ್ದರು
ಶಾಸ್ತ್ರೀಯ ಸಂಗೀತ ಕಲಿಯದೆ ಹಿನ್ನೆಲೆ ಗಾಯನದಲ್ಲಿ ಯಶಸ್ಸುಸಾಧಿಸಿದ ಗಾನ ಗಂಧರ್ವ ಎಸ್‌ಪಿಬಿ
ಒಮ್ಮೆ ಚೆನ್ನೈನಿಂದ ಬೆಂಗಳೂರಿಗೆ ಹಾಡಿನ ರೆಕಾರ್ಡಿಂಗ್‌ಗೆ ಬಂದಾಗ ನನಗೆ ಕಾಲ್ ಮಾಡಿ, ‘ಮಂಜುಳಾ ನಾನು ರೆಕಾರ್ಡಿಂಗ್‌ಗೆ ಬಂದಿದ್ದೇನೆ. ಆದರೆ ನಿರ್ಮಾಪಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ನೀನು ಸಂಕೇತ್ ಸ್ಟುಡಿಯೋಗೆ ಬಾ. ಲಿರಿಕ್ಸ್ ಹೇಳು, ನಮ್ಮ ಪಾಡಿಗೆ ನಾವು ರೆಕಾರ್ಡಿಂಗ್ ಮುಗಿಸೋಣ’ ಎಂದರು. ನಾನು ಅಲ್ಲಿಗೆ ಹೋದೆ. ಅವರು ಹೋಟೆಲ್‌ನಿಂದ ಆಟೋದಲ್ಲಿ ಬಂದಿಳಿದರು. ಬಂದವರೇ ಹಾಡುಗಳ ರೆಕಾರ್ಡಿಂಗ್ ಮುಗಿಸಿದರು. ಅಷ್ಟುದೊಡ್ಡ ಗಾಯಕ ಆಟೋದಲ್ಲಿ ಬಂದು ತಾನಾಗಿಯೇ ಹಾಡುವುದು ನೋಡಿ ನನಗೆ ಅಚ್ಚರಿ. ಸರಳತೆ, ಒಳ್ಳೆಯತನಕ್ಕೆ ಅವರಿಗಿಂತ ದೊಡ್ಡ ಉದಾಹರಣೆ ಬೇಕೇ? ನಿರ್ಮಾಪಕ ಸಿಗದಿದ್ದರೂ, ನಮ್ಮ ಕೆಲಸ ನಾವು ಮಾಡಬೇಕು, ಅವರ ಪರಿಸ್ಥಿತಿ ಹೇಗಿದೆಯೋ ಎಂದುಕೊಳ್ಳುತ್ತಿದ್ದರು. ದೇವರು ನನಗೆ ಸಿಂಗರ್ ಪಾತ್ರ ಕೊಟ್ಟಿದ್ದಾನೆ, ನಾನು ಇದನ್ನು ಚೆನ್ನಾಗಿ ಮಾಡಬೇಕು ಎನ್ನುತ್ತಿದ್ದರು.
ವಿಲ್ ಪವರ್ ಸಾಕಷ್ಟಿತ್ತು
ಕಳೆದ ವರ್ಷದ ಕಡೆಯಲ್ಲಿ ಸಿಂಗರ್ಸ್ ರೈಟ್ಸ್ ಕುರಿತು ಎಂ.ಜಿ. ರೋಡ್‌ನ ಹೋಟೆಲ್ ಒಂದರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನಾನು ಅವರನ್ನು ಕಡೆಯ ಬಾರಿಗೆ ಭೇಟಿ ಮಾಡಿದ್ದು. ಬಾಲು ಸರ್ ಹಿಡಿದ ಕಾರ್ಯವನ್ನು ಬಿಡದೇ ಮಾಡುತ್ತಿದ್ದರು. ಆ ವಿಲ್‌ಪವರ್ ಕಾರಣಕ್ಕೆ ಆಸ್ಪತ್ರೆಯಲ್ಲಿ ಸತತ 50 ದಿನ ಹೋರಾಟ ಮಾಡಿದರು. ಕಡೆಗೂ ವಿಧಿ ನಮ್ಮನ್ನು ಸೋಲಿಸಿತು.