ನಟ ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಮತ್ತು ಮಗ ಇಶಾಂತ್ ಜೊತೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಂಜಾನೆಯ ತೋಮಾಲ ಸೇವೆಯಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದರು.

ನಟ ಸೋನು ಸೂದ್ ಬುಧವಾರ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಪವಿತ್ರ ತೋಮಾಲ ಸೇವೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ್ರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ಮುಂಜಾನೆ ನಡೆಯುವ ಈ ವಿಶೇಷ ಸೇವೆಯಲ್ಲಿ ಅವರ ಪತ್ನಿ ಸೋನಾಲಿ ಮತ್ತು ಮಗ ಇಶಾಂತ್ ಕೂಡ ಜೊತೆಗಿದ್ದರು.

Add Asianetnews Kannada as a Preferred SourcegooglePreferred

ಸೋನು ಸೂದ್ ಮತ್ತು ಅವರ ಮಗ ಬಿಳಿ ಪಂಚೆ (ಧೋತಿ) ಧರಿಸಿದ್ದರು. ದಕ್ಷಿಣ ಭಾರತದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಜೊತೆಗೆ ಕೆಂಪು-ಚಿನ್ನದ ಬಣ್ಣದ ಅಂಗವಸ್ತ್ರವನ್ನು ಹೊದ್ದಿದ್ದರು. ಇಬ್ಬರೂ ಕೈಗೆ ಮೌಳಿ ದಾರವನ್ನು ಕಟ್ಟಿಕೊಂಡಿದ್ದರು. ಸೋನಾಲಿ ಸೂದ್ ಅವರು ಚಿನ್ನದ ಜರಿ ಅಂಚಿರುವ ಪಚ್ಚೆ ಹಸಿರು ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದರು.

ಇತರ ಗಣ್ಯರಿಂದಲೂ ತಿಮ್ಮಪ್ಪನ ದರ್ಶನ

ಇದೇ ವೇಳೆ ಬೇರೆ ಗಣ್ಯರು ಕೂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ನಟಿ ಸಂಯುಕ್ತಾ ಮೆನನ್ ಬಿಳಿ ಬಣ್ಣದ ಸೀರೆಯಲ್ಲಿ ಬಂದು ಪೂಜೆ ಸಲ್ಲಿಸಿದ್ರು. ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಮಿಥಾಲಿ ರಾಜ್ ಕೂಡ ತೋಮಾಲ ಸೇವೆಯಲ್ಲಿ ಭಾಗಿಯಾಗಿದ್ದರು. ಇನ್ನು, ಭಾರತದ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿದಂಬಿ ತಮ್ಮ ಪತ್ನಿ ಜೊತೆ ಬಂದು ದೇವರ ಆಶೀರ್ವಾದ ಪಡೆದರು.

ತಿರುಮಲ ವೆಂಕಟೇಶ್ವರ ದೇವಸ್ಥಾನದ ಬಗ್ಗೆ

ಆಂಧ್ರಪ್ರದೇಶದ ಶೇಷಾಚಲಂ ಬೆಟ್ಟದ ಏಳನೇ ಶಿಖರದ ಮೇಲೆ ತಿರುಮಲ ವೆಂಕಟೇಶ್ವರ ದೇವಸ್ಥಾನವಿದೆ. ಈ ದೇಗುಲ ವೆಂಕಟೇಶ್ವರ ಸ್ವಾಮಿಗೆ (ಬಾಲಾಜಿ) ಸಮರ್ಪಿತವಾಗಿದೆ. ಶತಮಾನಗಳಷ್ಟು ಹಳೆಯದಾದ ಈ ದೇವಸ್ಥಾನ, ದೇಶದ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.