ಸೋನು ನಿಗಮ್ ನಾಳೆ ಬೆಂಗಳೂರಿನ ಯಲಹಂಕದಲ್ಲಿನ ಕಾರ್ಯಕ್ರಮಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ಕನ್ನಡ ಹಾಡೇ ಹಾಡಬೇಕು, ಬೇರೆ ಹಾಡು ಹಾಡಂಗಿಲ್ಲ ಎಂದಿದ್ದಾರೆ.
ಬೆಂಗಳೂರು (ಅ.23) ಗಾಯಕ ಸೋನು ನಿಗಮ್ ಕನ್ನಡಿಗರ ವಿರುದ್ದ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಲವು ಕೋಲಾಹಲ ಸೃಷ್ಟಿಸಿ ಕ್ಷಮೆಯಾಚನೆಯಿಂದ ತಣ್ಣಗಾಗಿತ್ತು. ಕನ್ನಡಿಗರ ನೋಯಿಸಿದ್ದ ಸಿಂಗರ್ ಸೋನು ಭೇಷರತ್ ಕ್ಷಮೆಯಾಚಿಸಿದ್ದರು. ಈ ಕ್ಷಮೆಯಾಚನೆ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಗಾಯಕನ ಕ್ಷಮಿಸಿ ಕಾರ್ಯಕ್ರಮ ವಿರುದ್ದ ನೀಡಿದ್ದ ದೂರು ಹಿಂಪಡೆದಿತ್ತು. ಆದರೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ನಾಳೆ (ಅ.24) ಯಲಹಂಕದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಹಾಡುಗಳನ್ನೇ ಹಾಡಬೇಕು ಎಂದು ಎಚ್ಚರಿಸಿದ್ದಾರೆ.
ಬೇರೆ ಭಾಷೆ ಹಾಡಬಾರದು, ವಾಟಾಳ್ ಎಚ್ಚರಿಕೆ
ಯಲಹಂಕಾ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಭಾಷೆಯ ಹಾಡುಗಳನ್ನೇ ಹಾಡಬೇಕು. ಬೇರೆ ಭಾಷೆ ಹಾಡುಗಳನ್ನು ಹಾಡಲು ಅವಕಾಶ ನೀಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ. ಯಲಹಂಕ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ. ನಾನು ಖುದ್ದಾಗಿ ಕಾರ್ಯಕ್ರಮದಲ್ಲಿದ್ದು ಈ ಕುರಿತು ಗಮನಿಸುತ್ತೇನೆ. ಇತರ ಭಾಷೆಯ ಹಾಡುಗಳಿಗೆ ಅವಕಾಶ ನೀಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ವಾಟಾಳ್ ನಾಗರಾಜ್ ಸ್ವತಃ ಸೋನು ನಿಮಗ್ ಕಾರ್ಯಕ್ರಮದಲ್ಲಿ ಹಾಜರಿರುವುದಾಗಿ ಹೇಳಿದ್ದಾರೆ. ಈ ಮೂಲಕ ಸೋನು ನಿಗಮ್ ಯಾವ ಹಾಡುಗಳನ್ನು ಹಾಡುತ್ತಾರೆ ಅನ್ನೋ ಕುರಿತು ಖುದ್ದಾಗಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಸಾಕಷ್ಟು ಅತ್ಯುತ್ತಮ ಕನ್ನಡ ಹಾಡುಗಳಿವೆ. ಅದನ್ನೇ ಹಾಡಲಿ ಎಂದು ವಾಟಾಳ್ ನಾಗರಾಜ್ ಸೂಚಿಸಿದ್ದಾರೆ.
ಸೋನು ನಿಗಮ್ ವಿವಾದ
2025ರ ಏಪ್ರಿಲ್ನಲ್ಲಿ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮದಲ್ಲಿ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ಸೋನು ನಿಗಮ್ ವಿರುದ್ಧ 2025ರ ಮೇ 2ರಂದು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿತ್ತು. ಈ ವಿವಾದಾತ್ಮಕ ಹೇಳಿಕೆ ಬಳಿಕ ಕನ್ನಡ ಪರ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಿಂದ ಸೋನು ನಿಗಮ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದರು.
ಸೋನು ನಿಮಗ್ ಕ್ಷಮೆಯಾಚನೆ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ದೂರು ಹಿಂಪಡೆದಿತ್ತು. ಕ್ಷಮಿಸುವುದು ಕನ್ನಡಿಗರ ದೊಡ್ಡ ಗುಣ. ಹಲವು ಇತರ ಭಾಷೆ ಗಾಯಕರು ಕನ್ನಡವನ್ನು ಹಾಡಿನ ಮೂಲಕ ಶ್ರೀಮಂತಗೊಳಿಸಿದ್ದಾರೆ. ಈ ಸಾಲಿನಲ್ಲಿ ಸೋನು ನಿಗಮ್ ಕೂಡ ಸೇರಿದ್ದಾರೆ. ಆದರೆ ಕನ್ನಡಿಗರು, ಈ ಭಾಷೆ, ನೆಲ, ಜಲದ ಬಗ್ಗೆ ಅಗೌರವ ತೋರಿದರೆ ಕನ್ನಡಿಗರು ಸುಮ್ಮನಿರಲ್ಲ. ಈ ಪ್ರಕರಣ ಎಲ್ಲರಿಗೂ ಪಾಠ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದರು.







