ಸೋಶಿಯಲ್ ಮೀಡಿಯಾದಲ್ಲಿ 'ಕುರ್ಚಿ ಮಡತಬೆಟ್ಟಿ' ಎಂಬ ಒಂದೇ ಡೈಲಾಗ್‌ನಿಂದ ಫೇಮಸ್ ಆಗಿದ್ದ ಕುರ್ಚಿ ತಾತ ಇನ್ನಿಲ್ಲ. ಬಿಸಿಲಿನ ಹೊಡೆತಕ್ಕೆ ಸಿಲುಕಿ ಅವರು ಹಠಾತ್ ಆಗಿ ನಿಧನರಾಗಿದ್ದಾರೆ. ಈ ದುರಂತದ ಕುರಿತ ವಿವರಗಳು ಇಲ್ಲಿದೆ.
ಕೆಲವರು ಫೇಮಸ್ ಆಗಲು ವರ್ಷಗಟ್ಟಲೆ ಸಮಯ ಬೇಕಿಲ್ಲ, ಕ್ಷಣಾರ್ಧದಲ್ಲಿ ಜನಪ್ರಿಯರಾಗುತ್ತಾರೆ. ಅಂತಹವರಲ್ಲಿ ಕುರ್ಚಿ ತಾತ ಅಲಿಯಾಸ್ ಮೊಹಮ್ಮದ್ ಪಾಷಾ ಕೂಡ ಒಬ್ಬರು. 'ಕುರ್ಚಿ ಮಡತಬೆಟ್ಟಿ' ಎಂಬ ಡೈಲಾಗ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಅವರು ಸಖತ್ ವೈರಲ್ ಆಗಿದ್ದರು. ಆದರೆ, ಈಗ ಕುರ್ಚಿ ತಾತನ ಬಗ್ಗೆ ದುಃಖದ ಸುದ್ದಿಯೊಂದು ಬಂದಿದೆ. ಅವರು ಬುಧವಾರ ಹಠಾತ್ ಆಗಿ ನಿಧನರಾಗಿದ್ದಾರೆ.

ಕುರ್ಚಿ ತಾತ ಅವರು ಸನ್‌ಸ್ಟ್ರೋಕ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಕುರ್ಚಿ ತಾತನಿಗೆ ಬಹಳ ಹತ್ತಿರವಾಗಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವೈಜಾಗ್ ಸತ್ಯ ಈ ದುರಂತದಿಂದ ಕಣ್ಣೀರು ಹಾಕುತ್ತಿದ್ದಾರೆ. ಬಿಸಿಲಿನ ಹೊಡೆತವೇ ಸಾವಿಗೆ ಕಾರಣ ಎಂದು ವೈಜಾಗ್ ಸತ್ಯ ಖಚಿತಪಡಿಸಿದ್ದಾರೆ.
ಕುರ್ಚಿ ತಾತ ಹೈದರಾಬಾದ್‌ನ ಕೃಷ್ಣಾ ನಗರದಲ್ಲಿ ವಾಸಿಸುತ್ತಿದ್ದರು. ಸಂಜೆ ಕೃಷ್ಣಕಾಂತ್ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವಾಗ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೆಟ್ಟಿಗರು ಸಂತಾಪ ಸೂಚಿಸುತ್ತಿದ್ದಾರೆ. 'ಕುರ್ಚಿ ಮಡತಬೆಟ್ಟಿ' ಡೈಲಾಗ್ ಬಳಸಿ ಮಹೇಶ್ ಬಾಬು ಸಿನಿಮಾದಲ್ಲಿ ಒಂದು ಹಾಡನ್ನು ಮಾಡಲಾಗಿತ್ತು. ಆ ಹಾಡಿನಲ್ಲಿ ತನ್ನ ಡೈಲಾಗ್ ಬಳಸಿದ್ದಕ್ಕೆ ಸಂಗೀತ ನಿರ್ದೇಶಕ ತಮನ್ ತನಗೆ 1 ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದಾಗಿ ತಾತ ಹೇಳಿಕೊಂಡಿದ್ದರು.
ಮಜ್ಜಿಗೆ ಕೊಟ್ಟಿದ್ದೆ
ಆದರೆ, ಮಹೇಶ್ ಬಾಬು ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಮೇ 19ರಂದು ತಾತನ ಜೊತೆ ಮಾತನಾಡಿದ್ದೆ, ಆಗ ಅವರು ಮದ್ಯ ಕೇಳಿದ್ದರು, ನಾನು ಕೊಡದೆ ಮಜ್ಜಿಗೆ ಕೊಟ್ಟಿದ್ದೆ, ಅದನ್ನೇ ಅವರು ಕೊನೆಯದಾಗಿ ಕುಡಿದಿದ್ದು ಎಂದು ವೈಜಾಗ್ ಸತ್ಯ ಹೇಳಿದ್ದಾರೆ. ಈ ಹಿಂದೆ ಕೂಡ ತಾತನ ಸಾವಿನ ಬಗ್ಗೆ ವದಂತಿಗಳು ಹಬ್ಬಿದ್ದವು, ಆದರೆ ಈ ಬಾರಿ ಬಂದಿರುವ ಸುದ್ದಿ ನಿಜ.


