ಸಿಂಪಲ್ ಫ್ಯಾಷನ್‌ಗೆ ಹೆಸರಾದ ನಟಿ ಮೃಣಾಲ್ ಠಾಕೂರ್, ತಮಗೆ ಕ್ಲಾಸಿಕ್ ವಾಚ್‌ಗಳ ಮೇಲಿರುವ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ವಾಚ್ ಧರಿಸದಿದ್ದರೆ ಡ್ರೆಸ್ಸಿಂಗ್ ಕಂಪ್ಲೀಟ್ ಆಗಲ್ಲ, ಅದು ನನ್ನ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.

ಸಿಂಪಲ್ ಹಾಗೂ ಕ್ಲಾಸಿಕ್ ಫ್ಯಾಷನ್ ಮೂಲಕವೇ ಗಮನ ಸೆಳೆಯುವ ನಟಿ ಮೃಣಾಲ್ ಠಾಕೂರ್, ತಮಗೆ ಕ್ಲಾಸಿಕ್ ವಾಚ್‌ಗಳ ಮೇಲಿರುವ ಕ್ರೇಜ್ ಬಗ್ಗೆ ಬಿಚ್ಚಿಟ್ಟಿದ್ದಾರೆ. ತಮ್ಮ ತಾಯಿಯನ್ನು 'ಕ್ಲಾಸಿಕ್ ಲೇಡಿ' ಎಂದು ಕರೆದಿರುವ ಅವರು, ಅಮ್ಮನಿಂದಲೇ ತಮಗೆ ಈ ವಾಚ್‌ಗಳ ಹುಚ್ಚು ಅಂಟಿಕೊಂಡಿತು ಎಂದಿದ್ದಾರೆ.

'ಅಮ್ಮನೇ ನನ್ನನ್ನು ಮುದ್ದಿಸಿ ಕೆಡಿಸಿದ್ದು'

ಪ್ರಮುಖ ಕಾರ್ಯಕ್ರಮಗಳಿಗೆ ಹೋಗುವಾಗ ಅಮ್ಮನ ವಾರ್ಡ್‌ರೋಬ್‌ನಿಂದ ವಾಚ್‌ಗಳನ್ನು 'ಕದಿಯುತ್ತಿದ್ದ' ದಿನಗಳನ್ನು ಮೃಣಾಲ್ ನೆನಪಿಸಿಕೊಂಡಿದ್ದಾರೆ. ತಮ್ಮ ಕ್ಲಾಸಿಕ್ ಸ್ಟೈಲ್ ಹಿಂದೆ ಅಮ್ಮನ ಪಾತ್ರ ದೊಡ್ಡದಿದೆ ಎಂದಿದ್ದಾರೆ. ನನ್ನ ಅಮ್ಮ ಯಾವತ್ತಿಗೂ ಒಬ್ಬಳು ಕ್ಲಾಸಿಕ್ ಲೇಡಿ. ಆಕೆಯೇ ನನ್ನನ್ನು ಮುದ್ದಿಸಿ ಕೆಡಿಸಿದ್ದು ಅನಿಸುತ್ತೆ. ಕೆಲವೊಮ್ಮೆ ಮುಖ್ಯವಾದ ಇವೆಂಟ್‌ಗಳಿಗೆ ಹೋಗುವಾಗ ನಾನು ಅಮ್ಮನ ವಾಚ್ ಕದ್ದು ಹಾಕಿಕೊಂಡು ಹೋಗುತ್ತಿದ್ದೆ ಎಂದು ಮೃಣಾಲ್ ಎಎನ್‌ಐ (ANI) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಾಚ್ ಇಲ್ಲದೆ ಡ್ರೆಸ್ಸಿಂಗ್ ಕಂಪ್ಲೀಟ್ ಆಗಲ್ಲ

ವಸಂತ್ ಕುಂಜ್‌ನ ಡಿಎಲ್‌ಎಫ್ ಪ್ರೊಮೆನೇಡ್‌ನಲ್ಲಿ ನಡೆದ ಟಿಸ್ಸಾಟ್ (Tissot) ಬೊಟಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೃಣಾಲ್ ಭಾಗವಹಿಸಿದ್ದರು. ರೆಡ್-ಕಾರ್ಪೆಟ್, ಫಾರ್ಮಲ್ ಮೀಟಿಂಗ್ ಹಾಗೂ ಡಿನ್ನರ್ ಪಾರ್ಟಿಗಳಿಗೆ ತಮ್ಮದೇ ಕಲೆಕ್ಷನ್‌ನ ವಾಚ್‌ಗಳನ್ನು ಬಳಸುವುದಾಗಿ ಅವರು ಹೇಳಿದ್ದಾರೆ. ಮೃಣಾಲ್ ಪಾಲಿಗೆ ವಾಚ್ ಕೇವಲ ಸಮಯ ನೋಡುವ ವಸ್ತುವಲ್ಲ. ಅದು ಅವರ ಸಿಂಪಲ್ ಸ್ಟೈಲ್‌ಗೆ ಮೆರುಗು ನೀಡುವ ಹಾಗೂ ವ್ಯಕ್ತಿತ್ವವನ್ನು ಎತ್ತಿ ತೋರಿಸುವ ಪ್ರಮುಖ ಆಕ್ಸೆಸರಿ.

ವಾಚ್ ಇಲ್ಲದೆ ನಿಮ್ಮ ಔಟ್‌ಫಿಟ್ ಕಂಪ್ಲೀಟ್ ಆಗಲ್ಲ. ಅದು ನೋಡಲು ಸಿಂಪಲ್, ಚಿಕ್ ಹಾಗೂ ಕ್ಲಾಸಿ ಲುಕ್ ಕೊಡುತ್ತದೆ. ನನ್ನ ಡ್ರೆಸ್ಸಿಂಗ್ ಯಾವತ್ತೂ ಸಿಂಪಲ್ ಆಗಿರುತ್ತದೆ, ಆದರೆ ನಾನು ಬಳಸುವ ಆಕ್ಸೆಸರಿಗಳು ನನ್ನ ಸ್ಟೈಲ್ ಬಗ್ಗೆ ಮಾತನಾಡಬೇಕು ಎಂದು 'ಸೀತಾ ರಾಮಂ', 'ಜೆರ್ಸಿ', 'ಹೈ ಜವಾನಿ ತೋ ಇಷ್ಕ್ ಹೋನಾ ಹೈ', 'ಡಕಾಯತ್: ಎ ಲವ್ ಸ್ಟೋರಿ' ಮುಂತಾದ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ಮೃಣಾಲ್ ಹೇಳಿದ್ದಾರೆ.

ಕ್ಲಾಸಿಕ್ ವಸ್ತುಗಳ ಜೊತೆ ಸಿಂಪಲ್ ಸ್ಟೈಲಿಂಗ್

ತಮ್ಮ ಸ್ಟೈಲಿಂಗ್ ಬಗ್ಗೆ ಮಾತನಾಡಿದ ಮೃಣಾಲ್, ಹೆಚ್ಚಾಗಿ ಮೊನೊಟೋನ್ (ಒಂದೇ ಬಣ್ಣದ) ಬಟ್ಟೆಗಳನ್ನು ಧರಿಸಿ, ಅದಕ್ಕೆ ತಕ್ಕಂತೆ ಒಂದು ಕ್ಲಾಸಿಕ್ ಆಕ್ಸೆಸರಿ ಹೈಲೈಟ್ ಆಗುವಂತೆ ನೋಡಿಕೊಳ್ಳುತ್ತಾರಂತೆ. ನನ್ನ ವಾರ್ಡ್‌ರೋಬ್‌ನಲ್ಲಿ ಕ್ಲಾಸಿಕ್ ವಸ್ತುಗಳಿರುವುದು ನನಗಿಷ್ಟ ಎಂದಿರುವ ಅವರು, ಬಿಳಿ ಶರ್ಟ್, ಬ್ಲೂ ಡೆನಿಮ್, ಚಿನ್ನದ ಕಿವಿಯೋಲೆ ಅಥವಾ ಸಾಲಿಟೇರ್ಸ್ ಹಾಗೂ ಒಂದು ಕ್ಲಾಸಿಕ್ ವಾಚ್ ತಮ್ಮ ವಾರ್ಡ್‌ರೋಬ್‌ನಲ್ಲಿ ಕಡ್ಡಾಯವಾಗಿ ಇರುತ್ತದೆ ಎಂದಿದ್ದಾರೆ.

ಮೃಣಾಲ್ ಮುಂದಿನ ಸಿನಿಮಾಗಳು

ಇನ್ನು ಮೃಣಾಲ್ ಇತ್ತೀಚೆಗಷ್ಟೇ 'ಪೂಜಾ ಮೇರಿ ಜಾನ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಹುಮಾ ಖುರೇಷಿ ಕೂಡ ನಟಿಸಿದ್ದಾರೆ. ನವಜೋತ್ ಗುಲಾಟಿ ನಿರ್ದೇಶನದ, ದಿನೇಶ್ ವಿಜನ್ ಹಾಗೂ ಅಮರ್ ಕೌಶಿಕ್ ನಿರ್ಮಾಣದ ಈ ಮ್ಯಾಡಾಕ್ ಫಿಲ್ಮ್ಸ್ (Maddock Films) ಸಿನಿಮಾ 2026ರ ಅಕ್ಟೋಬರ್ 2ರಂದು ಜೀ5 (ZEE5) ಒಟಿಟಿಯಲ್ಲಿ ರಿಲೀಸ್ ಆಗಿತ್ತು.