ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬೃಂದಾ ವಿಹಾರಿ ಸಿನಿಮಾ ಹೇಗಿದೆ? ಪ್ರೀತಿ, ಭಾವುಕತೆ, ಅನಿರೀಕ್ಷಿತ ತಿರುವುಗಳ ಕಥೆ, ಕಲಾವಿದರ ಅಭಿನಯ ಮತ್ತು ಚಿತ್ರದ ಪ್ಲಸ್-ಮೈನಸ್‌ಗಳ ಸಂಪೂರ್ಣ ವಿಮರ್ಶೆ ಇಲ್ಲಿದೆ.

ರಾಜೇಶ್ ಶೆಟ್ಟಿ

ಒಬ್ಬ ವ್ಯಕ್ತಿಯನ್ನು ಒಂದಿಡೀ ಸಮಾಜ ಬಂಧಿಯನ್ನಾಗಿ ಇಡುವ ಒಂದು ಐಡಿಯಾವನ್ನು ನಿರ್ದೇಶಕರು ಈ ಚಿತ್ರದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಈ ಸಮಾಜದಲ್ಲಿ ಬಹುತೇಕರು ತಮಗೆ ಗೊತ್ತೇ ಆಗದೆ ಯಾರದೋ ಬಂಧಿಗಳಾಗಿ ಇರುತ್ತಾರೆ. ವೃತ್ತಿಯಲ್ಲಿ ಇರಬಹುದು, ಸಂಬಂಧದಲ್ಲಿ ಇರಬಹುದು. ಬೇರೆಯವರು ಆಡಿಸಿದಂತೆ ಆಡಬೇಕು. ಆ ವ್ಯಕ್ತಿಗೆ ತಾನು ಬಂಧಿ ಎಂದು ಗೊತ್ತಾಗುವ ಕ್ಷಣವೇ ಬಿಡುಗಡೆ.

ಈ ಐಡಿಯಾವನ್ನು ನಿಭಾಯಿಸಲು ನಿರ್ದೇಶಕರು ಸಾಕಷ್ಟು ಶ್ರಮಿಸಿದ್ದಾರೆ. ಒಂದು ಹಸಿರಿನ, ಬಣ್ಣ ಬಣ್ಣದ ಬೃಂದಾವನ ಕಟ್ಟಿದ್ದಾರೆ. ಅಲ್ಲಿ ಎಲ್ಲವೂ ಸೊಗಸು. ಪ್ರಥಮಾರ್ಧ ಪೂರ್ತಿ ಆ ಲವಲವಿಕೆಯಲ್ಲಿಯೇ ಕಳೆದುಹೋಗುತ್ತದೆ. ಇಂಟರ್‌ವಲ್‌ ಹೊತ್ತಿಗೆ ಒಂದು ದೊಡ್ಡ ತಿರುವು ಬರುತ್ತದೆ. ಆಮೇಲಿನದು ಮತ್ತೊಂದು ಕತೆ. ಸಂಪೂರ್ಣ ಭಿನ್ನ.

ಕತೆಯೊಳಗೆ ಇರುವಷ್ಟು ಹೊತ್ತು ಏನೂ ಅನ್ನಿಸದು. ಆದರೆ ಸ್ವಲ್ಪ ಆಚೆ ಹೋದರೂ ಲಾಜಿಕ್ ಇಲ್ಲ ಅನ್ನಿಸುತ್ತದೆ. ನಂಬಿಸುವುದಕ್ಕೆ ಕತೆ ಸೋಲುತ್ತದೆ. ಮುಕ್ತಾಯ ತುಂಬಾ ಹಗುರವಾಗಿ ಇಷ್ಟೇನಾ ಅನ್ನಿಸಿಬಿಡುತ್ತದೆ. ಆದರೆ ಭಾವುಕತೆ ಈ ಚಿತ್ರದ ಜೀವಾಳ. ಗಣೇಶ್ ಎಂದಿನಂತೆ ಲವರ್ ಬಾಯ್ ಪಾತ್ರವನ್ನು ಮತ್ತು ಭಾವುಕ ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ದೇವಿಕಾ ಭಟ್ ಪ್ರಥಮಾರ್ಧದಲ್ಲಿ ರಾಧೆಯೇ ಆಗಿ ಜೀವಿಸಿ ಇಷ್ಟವಾಗುತ್ತಾರೆ. ಮಾಳವಿಕಾ ಶರ್ಮಾ ಮೋಹಕವಾಗಿ ಅಭಿನಯಿಸಿದ್ದಾರೆ. ಈ ಮೂವರೂ ಈ ಸಿನಿಮಾದ ಆಸ್ತಿ.

ಚಿತ್ರ: ಬೃಂದಾ ವಿಹಾರಿ

ನಿರ್ದೇಶನ: ಶ್ರೀನಿವಾಸ ರಾಜು

ತಾರಾಗಣ: ಗೋಲ್ಡನ್‌ಸ್ಟಾರ್‌ ಗಣೇಶ್‌, ಮಾಳವಿಕಾ ಶರ್ಮಾ, ದೇವಿಕಾ ಭಟ್, ರಾಮ್‌ಕುಮಾರ್‌, ಲಕ್ಷ್ಮೀ

ರೇಟಿಂಗ್: 3

ಅಲ್ಲದೇ ನಿರ್ದೇಶಕರು ತಾಂತ್ರಿಕವಾಗಿ ಶ್ರೀಮಂತವಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಬಹಳಷ್ಟು ಹಾಡುಗಳನ್ನು ಇಟ್ಟಿದ್ದಾರೆ. ಸೆಟ್‌ಗಳು ಸುಂದರವಾಗಿವೆ. ತಾರಾಗಣವೂ ಅದ್ದೂರಿಯಾಗಿದೆ. ಅವರಿಗೆಲ್ಲಾ ಸೀನ್‌ಗಳೂ ಬಹಳ ಕಡಿಮೆ ಇವೆ. ಸಿನಿಮಾ ಪೂರ್ತಿ ನಾಯಕ ಮತ್ತು ನಾಯಕಿಯರು ಆವರಿಸಿಕೊಂಡಿದ್ದಾರೆ. ವಿಶೇಷ ಎಂದರೆ ರಾಮ್‌ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಬಣ್ಣಬಣ್ಣವಾಗಿದೆ.