ಇನ್ನೇನು ಮುಗಿಯತ್ತೆ ಅಂದುಕೊಂಡಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಮತ್ತೆ ಎಳೆಯಲಾಗಿದೆ. ಹಾಗಿದ್ದರೆ ಸೀರಿಯಲ್​​ ಯಾವಾಗ ಮುಗಿಯತ್ತೆ? ನಟಿ ಸುಧಾರಾಣಿ ಹೇಳಿದ್ದೇನು?

ಶ್ರೀರಸ್ತು ಶುಭಮಸ್ತು ಸೀರಿಯಲ್​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದೇ ಅಂದುಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್​ ಸಮರ್ಥ್​ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿದೆ. ಅಬ್ಬಾ, ಅಂತೂ ಒಂದು ಸೀರಿಯಲ್​ ಮುಗಿಸುತ್ತಾರೆ ಎಂದುಕೊಂಡಿದ್ದರು ಬಹುತೇಕ ವೀಕ್ಷಕರು. ಆದರೆ ಆದದ್ದೇ ಬೇರೆ. ಶಾರ್ವರಿ ಏನೋ ಸಿಕ್ಕಿಬಿಟ್ಟು, ಅವಳನ್ನು ಪೊಲೀಸರು ಅರೆಸ್ಟ್​ ಮಾಡಿ ಜೈಲಿಗೆ ತಳ್ಳಿದರೆ ಅಲ್ಲಿಗೆ ಸೀರಿಯಲ್​ ಮುಗಿಯತ್ತೆ ಎಂದುಕೊಂಡ ವೀಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಏಕೆಂದ್ರೆ ಒಬ್ಬಳು ವಿಲನ್​ ತಪ್ಪಿಸಿಕೊಂಡ ನಡುವೆಯೇ ಇನ್ನೊಬ್ಬ ವಿಲನ್​ ಎಂಟ್ರಿ ಕೊಟ್ಟಿದ್ದಾಳೆ, ಅವಳೇ ಶಾರ್ವರಿ ಮಗಳು ನಿಧಿ.

ಹಾಗಿದ್ರೆ ಸೀರಿಯಲ್​ ಮುಗಿಯೋದು ಯಾವಾಗ ಎನ್ನುವ ಪ್ರಶ್ನೆ ಈಗ ಬಹುತೇಕ ವೀಕ್ಷಕರನ್ನು ಕಾಡುತ್ತಿದೆ. ಇದಾಗಲೇ ಸೀರಿಯಲ್​ 800 ಎಪಿಸೋಡ್​ ಮುಗಿಸಿರೋ ಕಾರಣ, ಸೀತಾರಾಮದಂತೆ ಮುಗಿಸುತ್ತಾರೆಯೇ ಎಂದುಕೊಂಡರೆ ಅದು ಆಗಿರಲಿಲ್ಲ. ಆದ್ದರಿಂದ ಯಾವಾಗ ಮುಗಿಯತ್ತೆ ಎನ್ನುವ ಪ್ರಶ್ನೆ ಶ್ರೀರಸ್ತು ಶುಭಮಸ್ತು ತುಳಸಿ ಅರ್ಥಾತ್​ ಸುಧಾರಾಣಿ ಅವರಿಗೆ ಕೇಳಲಾಗಿದೆ. ಸೀರಿಯಲ್​ ಟಿಆರ್​ಪಿ ಹೆಚ್ಚಿಗೆ ಇದ್ದಾಗ ಯಾವುದೇ ಕಾರಣಕ್ಕೂ ಸೀರಿಯಲ್​ ಮುಗಿಸೋ ಛಾನ್ಸೇ ಇಲ್ಲ. ಏನಾದರೊಂದು ಟ್ವಿಸ್ಟ್​ ತುರುಕಿ ತುರುಕಿ ಮತ್ತೊಂದಷ್ಟು ವರ್ಷ ಎಳೆಯುವುದು ಎಲ್ಲಾ ಭಾಷೆಗಳಲ್ಲಿಯೂ ನಡೆದುಕೊಂಡೇ ಬಂದಿದೆ. ಅದಕ್ಕೆ ಕನ್ನಡ ಸೀರಿಯಲ್​ಗಳೂ ಹೊಸದೇನಲ್ಲ. ಇದೇ ಕಾರಣಕ್ಕೆ ನಿಧಿಯನ್ನು ವಿಲನ್​ ಮಾಡಿ ಮತ್ತೆ ಸೀರಿಯಲ್​ ಎಳೆಯಲಾಗಿದೆ.

ಈ ಬಗ್ಗೆ ಎಫ್​ಡಿಎಫ್​ಎಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ನಟಿ ಸುಧಾರಾಣಿಯವರಿಗೆ ಈ ಬಗ್ಗೆ ಕೇಳಿದಾಗ ಅವರು ಜಾಣತನದ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದನ್ನು ಡಿಸೈಡ್​ ಮಾಡುವವರು ಚಾನೆಲ್​ನವರು ಎಂದಿದ್ದಾರೆ. ಹಾಗೆ ನೋಡಿದರೆ, ಸೀರಿಯಲ್​ ಯಾವಾಗ ಮುಗಿಸಬೇಕು ಎನ್ನುವ ನಿರ್ಧಾರ ಮಾಡುವುದು ಆಯಾ ಸೀರಿಯಲ್​ ಬರ್ತಿರೋ ಚಾನೆಲ್​ನವರೇ ಎನ್ನುವುದು ಸತ್ಯವೇ. ಸೀರಿಯಲ್​ ಯಾವಾಗ ಮುಗಿಸಬೇಕು ಎನ್ನುವುದು ನಿರ್ದೇಶಕರ ಕೈಯಲ್ಲಿಯೂ ಇರುವುದಿಲ್ಲ. ಟಿಆರ್​ಪಿ ಹೆಚ್ಚು ಇದ್ದರೆ ಸೀರಿಯಲ್​ ಅನ್ನು ಹೇಗಾದರೂ ಮಾಡಿ, ಏನಾದರೂ ತುರುಕಿ ಚ್ಯೂಯಿಂಗ್​ ಗಮ್​ನಂತೆ ಎಳೆಯುವ ಅನಿವಾರ್ಯತೆ ಕಥೆ ಬರೆಯುವವರಿಗೆ, ನಿರ್ದೇಶಕರಿಗೆ ಇದ್ದೇ ಇರುತ್ತದೆ. ಆದ್ದರಿಂದ ನಟ-ನಟಿಯರಿಗೂ ಈ ಬಗ್ಗೆ ತಿಳಿದಿರುವುದಿಲ್ಲ.

ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯ ಪಾತ್ರ ಸಾಯಿಸುತ್ತಿದ್ದಂತೆಯೇ ಟಿಆರ್​ಪಿ ಕಡಿಮೆಯಾಗಿ, ಟೈಮಿಂಗ್​ ಬದಲಾಯಿತು. ಕೊನೆಗೆ ಸೀರಿಯಲ್​ ಮುಗಿಸಬೇಕಾಯಿತು. ಆದರೆ ಒಂದೊಳ್ಳೇ ರೀತಿಯಲ್ಲಿಯೇ ಅದನ್ನು ಮುಗಿಸಿದರು. ಅದೇ ರೀತಿ ಶ್ರೀರಸ್ತು ಶುಭಮಸ್ತುವನ್ನೂ ಒಳ್ಳೆಯ ರೀತಿಯಲ್ಲಿ ಮುಗಿಸಲಾಗುತ್ತಿದೆ ಎಂದುಕೊಳ್ಳುವಾಗಲೇ ಒಳ್ಳೆಯವಳಾಗಿದ್ದ ನಿಧಿಯನ್ನು ವಿಲನ್​ ಮಾಡಲಾಗಿದೆ. ಇದನ್ನೇ ಸುಧಾರಾಣಿ ಹೇಳಿದ್ದು, ತಮಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಈ ಸೀರಿಯಲ್​ ಅನ್ನು ಕೆಲವರು ಕೆಲವು ರೀತಿಯಲ್ಲಿ ಸ್ವೀಕರಿಸುತ್ತಾ ಇದ್ದಾರೆ. ಹಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಕೆಲವರು ನೆಗೆಟಿವ್​ ಕಮೆಂಟ್​ ಕೂಡ ಮಾಡುವುದು ಇದೆ. ಇವೆರಡನ್ನೂ ತಾವು ಸಮನಾಗಿ ಸ್ವೀಕರಿಸುವುದಾಗಿ ನಟಿ ಹೇಳಿದ್ದಾರೆ. ಬಣ್ಣದ ಲೋಕಕ್ಕೆ ಬಂದು 40 ವರ್ಷ ಆದರೂ ತಾವು ಕಲಿಯುವುದು ಇನ್ನೂ ಇದೆ, ಸೀರಿಯಲ್​ ಜಾಗದಲ್ಲಿಯೂ ಪ್ರತಿದಿನವೂ ಹೊಸತನ್ನು ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ.

YouTube video player