ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ವಾರ್ನ್ ಮಾಡಿದ್ದಾರೆ. ಏನದು?
ನೋಡಿ, ನಾನು ಪರ್ಸನಲ್ಲಾಗಿ ಶಾರ್ವರಿ ಅಲ್ಲ. ನೀವು ಶಾರ್ವರಿಯನ್ನು ಎಷ್ಟೇ ಬೇಕಾದರೂ ಉಗಿದುಕೊಳ್ಳಿ, ಬೈದುಕೊಳ್ಳಿ ನನಗೆ ಬೇಸರ ಇಲ್ಲ. ಇದಾಗಲೇ ಸುಮಾರ್ ಮಂದಿ ಹಾಳಾದವಳು, ನೀನು ಸಾಯ್ಬಾರ್ದಾ ಹಾಗೆ ಹೀಗೆ ಅಂತೆಲ್ಲಾ ಹೇಳ್ತಾರೆ. ನನಗೆ ಅದು ಸ್ವಲ್ಪನೂ ಬೇಸರ ಇಲ್ಲ. ಏಕೆಂದ್ರೆ ಶಾರ್ವರಿ ಕ್ಯಾರೆಕ್ಟರೇ ಹಾಗೆ. ಆ ರೀತಿ ಕ್ಯಾರೆಕ್ಟರ್ ಅಷ್ಟು ಕಿರಿಕಿರಿ ತಂದಿದೆ ಎಂದರೆ ಆ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೇನೆ ಎಂದು ಅರ್ಥ. ಆದ್ದರಿಂದ ಎಷ್ಟು ಬೇಕಾದ್ರೂ ಬೈದುಕೊಂಡರೂ ನನಗೆ ಬೇಜಾರು ಇಲ್ಲ ಎನ್ನುತ್ತಲೇ ಕೆಲವರು ಪರ್ಸನಲ್ ಆಗಿ ಅಟ್ಯಾಕ್ ಮಾಡುವ ಬಗ್ಗೆಯೂ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್ ಅಸಮಾಧಾನ ಹೊರಹಾಕಿದ್ದಾರೆ.
ಎಫ್ಡಿಎಫ್ಎಸ್ ಯೂಟ್ಯೂಬ್ ಚಾನೆಲ್ಗೆ ಅವರು ನೀಡಿರುವ ಸಂದರ್ಶನದಲ್ಲಿ, ಕೆಲವೊಮ್ಮೆ ನನ್ನ ಮೇಲೆ ಪರ್ಸನಲ್ ಆಗಿ ಅಟ್ಯಾಕ್ ಮಾಡಲಾಗುತ್ತದೆ. ಇದು ನನಗೆ ತುಂಬಾ ನೋವು ಉಂಟು ಮಾಡುತ್ತದೆ. ಮಹಿಳೆಯೊಬ್ಬರು ನೇರವಾಗಿ ಸಪ್ನಾ ದೀಕ್ಷಿತ್ ಸಾಯ್ಬಾರ್ದಾ ಎಂದು ಕೇಳಿದರು. ಅವರಿಗೆ ಪರ್ಸನಲ್ ಆಗಿ ಮೆಸೇಜ್ ಮಾಡಿ ವಾರ್ನ್ ಮಾಡಿದೆ. ಹೀಗೆ ಮುಂದುವರೆಗೆ ಕಂಪ್ಲೇಂಟ್ ಕೊಡಬೇಕಾಗುತ್ತದೆ. ನೀವು ಪಾತ್ರವನ್ನು ಬೈರಿ ಆದ್ರೆ ನನ್ನನ್ನಲ್ಲ ಎಂದೆ. ಕೊನೆಗೆ ಆಕೆ ಸಾರಿ ಕೇಳಿ ಮೆಸೇಜ್ ಅನ್ನು ಡಿಲೀಟ್ ಮಾಡಿದ್ರು. ಆದ್ದರಿಂದ ಎಲ್ಲರೂ ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾನು ಪರ್ಸನಲ್ ಆಗಿ ಬೇರೆಯೇ ಕ್ಯಾರೆಕ್ಟರ್ನವಳು. ನಾನಷ್ಟೇ ಅಲ್ಲದೇ ಆನ್ಸ್ಕ್ರೀನ್ನಲ್ಲಿ ವಿಲನ್ ಆಗಿರುವವರೆಲ್ಲರೂ ಇಂಥದ್ದನ್ನೇ ಅನುಭವಿಸುತ್ತಾರೆ ಎನ್ನುವ ಬಗ್ಗೆ ಸಪ್ನಾ ಮಾತನಾಡಿದ್ದಾರೆ.
ಅಷ್ಟಕ್ಕೂ, ಸೀರಿಯಲ್ಗಳು ಇಂದು ಹೆಚ್ಚಿನವರಿಗೆ ಅದೆಷ್ಟು ಆಪ್ಯವಾಗಿದೆ ಎಂದರೆ, ಅದರೊಳಗೇ ಹೊಕ್ಕು, ಅದರಲ್ಲಿರುವ ಪಾತ್ರಗಳನ್ನೇ ಮೈಮೇಲೆ ಆಹ್ವಾನಿಸಿಕೊಳ್ಳುವವರಿದ್ದಾರೆ. ತಾವು ಟಿ.ವಿಯಲ್ಲಿ ನೋಡುತ್ತಿರುವುದು ಕಾಲ್ಪನಿಕ ಕಥೆ, ಇಲ್ಲಿರುವವರು ಪಾತ್ರಧಾರಿಗಳಷ್ಟೇ. ಈ ಸೀರಿಯಲ್ನಲ್ಲಿ ವಿಲನ್ ಆಗಿದ್ದರೆ, ಇನ್ನೊಂದು ಸೀರಿಯಲ್ನಲ್ಲಿ ನಾಯಕ-ನಾಯಕಿಯಾಗುತ್ತಾರೆ ಎನ್ನುವ ಯೋಚನೆ ಮಾಡದ ಹಲವು ಮಂದಿ ಇಂದಿಗೂ ಇದ್ದಾರೆ. ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು ತಾವು ಎಲ್ಲಾದರೂ ಹೋದರೆ ಜನ ತಮ್ಮನ್ನು ನೋಡುವ ರೀತಿ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಹಿಂದೊಮ್ಮೆ ಇದೇ ಸೀರಿಯಲ್ ತುಳಸಿ ಮಗಳಾಗಿರುವ ಹಾಗೂ ಒಂದು ರೀತಿಯಲ್ಲಿ ವಿಲನ್ ಎನಿಸಿಕೊಂಡಿದ್ದ ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ ಈ ಬಗ್ಗೆ ಮಾತನಾಡಿದ್ದರು. ಹೊರಗಡೆ ಹೋದಾಗ ಜನ ಹೇಗೆ ಛೀಮಾರಿ ಹಾಕುತ್ತಾರೆ ಎಂದು ಹೇಳಿದ್ದರು.
ಇನ್ನು ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್ ಕುರಿತು ಹೇಳುವುದಾದರೆ, ಇವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ಎಂಟ್ರಿ ಕೊಟ್ಟವರು. ಇವರ ಮೊದಲ ಸೀರಿಯಲ್ ಪ್ರಾಯಶ್ಚಿತ ಧಾರಾವಾಹಿಯಲ್ಲಿ. ತದ ನಂತರ ಪಾ.ಪ ಪಾಂಡು, ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾಂಡುರಂಗ ವಿಠಲ, ದಂಡ ಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ, ಮಾಂಗಲ್ಯ, ಪುರುಷೋತ್ತಮ, ಪದ್ಮಾವತಿ ಸೇರಿದಂತೆ ಎಪ್ಪತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬೇರೆ ಭಾಷೆಗಳ ಸೀರಿಯಲ್ಗಳಲ್ಲಿಯೂ ನಟಿಸಿರುವ ಅವರು, ಕೆಲವು ಸಿನಿಮಾಗಳನ್ನೂ ಮಾಡಿದ್ದಾರೆ. ರನ್ನ, ರಂಗಿತರಂಗ, ಕೃಷ್ಣ ರುಕ್ಕು, ನಿಜ,ಪ್ರೀತಿಯ ಲೋಕ, ಶಿವಲಿಂಗ, ಭರ್ಜರಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನವುಗಳಲ್ಲಿ ಇವರದ್ದು ಪೋಷಕ ಪಾತ್ರ.

