ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸಂಧ್ಯಾ ಪಾತ್ರ ಮಾಡ್ತಿರೋ ನಟಿ ದೀಪಾ ಕಟ್ಟೆ, ಸೊಂಪಾದ ಹೂಬಿರಿದು ನಕ್ಕಂತ ಹಾಡಿಗೆ ರೀಲ್ಸ್​ ಮಾಡಿದ್ದಾರೆ.

ಶ್ರೀರಸ್ತು ಶುಭಮಸ್ತು ಸೀರಿಯಲ್​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದೇ ಅಂದುಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್​ ಸಮರ್ಥ್​ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿದೆ. ಅಬ್ಬಾ, ಅಂತೂ ಒಂದು ಸೀರಿಯಲ್​ ಮುಗಿಸುತ್ತಾರೆ ಎಂದುಕೊಂಡಿದ್ದರು ಬಹುತೇಕ ವೀಕ್ಷಕರು. ಆದರೆ ಆದದ್ದೇ ಬೇರೆ. ಶಾರ್ವರಿ ಏನೋ ಸಿಕ್ಕಿಬಿಟ್ಟು, ಅವಳನ್ನು ಪೊಲೀಸರು ಅರೆಸ್ಟ್​ ಮಾಡಿ ಜೈಲಿಗೆ ತಳ್ಳಿದರೆ ಅಲ್ಲಿಗೆ ಸೀರಿಯಲ್​ ಮುಗಿಯತ್ತೆ ಎಂದುಕೊಂಡ ವೀಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಏಕೆಂದ್ರೆ ಒಬ್ಬಳು ವಿಲನ್​ ತಪ್ಪಿಸಿಕೊಂಡ ನಡುವೆಯೇ ಇನ್ನೊಬ್ಬ ವಿಲನ್​ ಎಂಟ್ರಿ ಕೊಟ್ಟಿದ್ದಾಳೆ! ಅವಳೇ ಶಾರ್ವರಿ ಮಗಳು ನಿಧಿ.

ಸೀರಿಯಲ್​ ಹೀಗೆ ಮುಂದುವರೆದಿದ್ದರೆ, ಅತ್ತ ಸಂಧ್ಯಾ ಒಳ್ಳೆಯವಳಾಗಿದ್ದಾಳೆ. ಓಡಿಹೋದವ್ಳೇ ಎಂದು ಅಜ್ಜ ಸದಾ ಈಕೆಯನ್ನು ಕರೆಯುವುದರಿಂದ, ಅದೇ ಹೆಸರಿನಲ್ಲಿಯೇ ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ ಫೇಮಸ್​ ಕೂಡ ಆಗಿದ್ದಾರೆ. ಸದಾ ಆಸೆಬುರುಕಿಯಾಗಿದ್ದ ಸಂಧ್ಯಾ ಬದಲಾಗಿದ್ದು, ಇದೀಗ ಅಮ್ಮನಿಗೆ ತಕ್ಕ ಮಗಳು ಎನ್ನಿಸಿಕೊಂಡಿದ್ದಾಳೆ. ಗಂಡನ ಜೊತೆ ಸರಿಯಾಗಿ ಸಂಸಾರ ಮಾಡುತ್ತಿದ್ದಾಳೆ. ಇಂತಿಪ್ಪ ಸಂಧ್ಯಾ ಉರ್ಫ್​ ದೀಪಾ ಕಟ್ಟೆ ಅವರು, ಬೆಳ್ಳಿ ಬೆಳಕನ್ನು ಹೀರಿ ಸೊಂಪಾದ ಹೂಬಿರಿದು ನಕ್ಕಂತ ನಗುವಲ್ಲಿ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಅದನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ಡಾನ್ಸ್​ನಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ ದೀಪಾ.

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ಮಲೆನಾಡ ಬೆಡಗಿ. ದೀಪಾ ಕಟ್ಟೆ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ (IT company) ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ, ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಭವನದಲ್ಲಿ ದೀಪಾ ಕಟ್ಟೆ ಅವರು ರಕ್ಷಿತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಇವರು ಈ ಹಿಂದೆ ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ.

ಶ್ರೀರಸ್ತು ಶುಭಮಸ್ತುವಿನಲ್ಲಿ ನೆಗೆಟಿವ್​ ರೋಲ್​ ಮಾಡ್ತಾ ಇದ್ದ ಕಾರಣ, ಜನರು ಹೊರಗಡೆ ಹೋದಾಗ ಜನ ತಮ್ಮನ್ನು ಹೇಗೆ ಕೆಟ್ಟ ರೀತಿಯಲ್ಲಿ ನೋಡುತ್ತಾರೆ ಎನ್ನುವುದನ್ನು ಈ ಹಿಂದೆ ನಟಿ ಹೇಳಿದ್ದರು. ಒಮ್ಮೆ ನಾನು ದೇವಸ್ಥಾನಕ್ಕೆ ಹೋಗಿದ್ದರೆ. ಅಲ್ಲಿ ನನ್ನನ್ನು ಕೆಲವು ಮಹಿಳೆಯರು ನೋಡಿದರು. ಅವರಲ್ಲಿಯೇ ಮಾತನಾಡಿಕೊಳ್ಳುವುದು ನನಗೆ ಕೇಳಿಸಿತು. ನನ್ನನ್ನು ನೋಡಿದ ಆ ಮಹಿಳೆಯರು ಇವಳು ಅವಳೇ ಅಲ್ವಾ ಅಂದು ಅವರಲ್ಲಿಯೇ ಮಾತನಾಡುತ್ತಿದ್ದರು. ನಂತರ ಅದರಲ್ಲಿ ಒಬ್ಬ ಮಹಿಳೆ, ಥೂ ಅವ್ಳೇ ಇವ್ಳು.. ಇವ್ಳಿಗೇನ್​ ಮಾತಾಡ್ಸೋದು ಅಂದರು ಎಂದು ನೆನಪಿಸಿಕೊಂಡಿರುವ ದೀಪಾ, ಒಂದು ಕೆಟ್ಟ ಪಾತ್ರ ಹೇಗೆ ಜನರ ಮನಸ್ಸನ್ನು ಕದಡುತ್ತದೆ ಎಂಬುದನ್ನು ತಿಳಿಸಿದ್ದರು.