ಶ್ರೀರಸ್ತು ಶುಭಮಸ್ತು ಸೀರಿಯಲ್​ ಮುಗಿಯುವ ಹಂತಕ್ಕೆ ಬಂದ ಸಮಯದಲ್ಲಿಯೇ ಶಾರ್ವರಿಯ ಕುತಂತ್ರ ಮುಗಿದಿಲ್ಲ. ತುಲಾಭಾರದ ಸಮಯದಲ್ಲಿ ಚಾಕು ಕಾಣಿಸಿಕೊಂಡಿದೆ ಮುಂದೇನು? 

ಶ್ರೀರಸ್ತು ಶುಭಮಸ್ತು ಸೀರಿಯಲ್​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್​ ಸಮರ್ಥ್​ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.

ಇದರ ನಡುವೆಯೇ, ಸಮರ್ಥ್​ ನಿರಪರಾಧಿ ಎಂದು ತಿಳಿಯುತ್ತಿದ್ದಂತೆಯೇ ತುಳಸಿಯ ತುಲಾಭಾರ ಮಾಡಿಸುವ ತಯಾರಿ ನಡೆದಿದೆ. ಈ ಸಂದರ್ಭದಲ್ಲಿ ತುಳಸಿ ಮಗುವನ್ನು ಹಿಡಿದುಕೊಂಡು ತಕ್ಕಡಿಯಲ್ಲಿ ಕುಳಿತಿದ್ದಾಳೆ. ಅದಕ್ಕೂ ಮೊದಲು ದೇವಾಲಯ ಪ್ರದಕ್ಷಿಣೆ ಹಾಕುವಾಗಲೂ ತುಳಸಿಗೆ ಅಲ್ಲಿ ಯಾರೋ ತನ್ನನ್ನೇ ಹಿಂಬಾಲಿಸಿರುವಂತೆ ಕಂಡಿದೆ. ಆದರೆ ಅದು ಭ್ರಮೆ ಇರಬಹುದು ಎಂದು ಮುಂದೆ ಸಾಗಿದ್ದಾಳೆ. ಆದರೆ ತುಲಾಭಾರದ ಸಮಯದಲ್ಲಿ ಆಕೆಯ ಮೈಮೇಲೆ ಹಾಕುತ್ತಿದ್ದಂತೆಯೇ ಅದರಲ್ಲಿ ಚಾಕುಒಂದು ಬೀಳುವುದನ್ನು ನೋಡಬಹುದು. ಅದು ಯಾರ ಕಣ್ಣಿಗೂ ಬಿದ್ದಿರುವುದಿಲ್ಲ. ಏಕಾಏಕಿಯಾಗಿ ಆ ಚಾಕು ತುಳಸಿಯ ಮೈಮೇಲೆ ಬೀಳುತ್ತಿದ್ದಂತೆಯೇ ಅದನ್ನು ಮಾಧವ್​ ನೋಡಿ ಓಡಿ ಹೋಗಿದ್ದಾನೆ. ಇಷ್ಟು ಪ್ರೊಮೋ ಬಿಡುಗಡೆಯಾಗಿದೆ. ಅಲ್ಲಿಗೆ ಶಾರ್ವರಿ ಅಲ್ಲಿಯೇ ಸಮೀಪದಲ್ಲಿ ಇರುವುದು ತಿಳಿದಿದೆ. ಆಕೆ ಸಿಗುತ್ತಾಳೆಯೋ ಕಾದು ನೋಡಬೇಕಿದೆ.

ಸೀರಿಯಲ್​ ವಿಷ್ಯ ಒಂದೆಡೆಯಾದರೆ, ನೆಟ್ಟಿಗರು ಈಗ ಪಾಪುವಿನ ಕಡೆ ಗಮನ ಹರಿಸಿದ್ದಾರೆ. ತುಳಸಿ ಹಿಡಿದುಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ್ದು ಗೊಂಬೆ ಎಂದು ತಮಾಷೆ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ನೆಟ್ಟಿಗರು ತುಳಸಿಯ ಹೂವಿನ ಕಡೆ ಗಮನ ಹರಿಸಿದ್ದರು. ಸಹಸ್ರಾರು ಕೋಟಿಯ ಒಡತಿಯಾಗಿರುವ ತುಳಸಿಗೆ ಒರಿಜಿನಲ್​ ಹೂವು ಧರಿಸಲು ಆಗಲ್ವಾ? ಯಾವಾಗ ನೋಡಿದ್ರೂ ಆರ್ಟಿಫಿಷಿಲ್​ ಹೂವು ಧರಿಸೋದು ಯಾಕೆ ಎನ್ನುವುದು ಅವರ ಪ್ರಶ್ನೆ. ಕೃತಕ ಹೂವು ಧರಿಸೋದೇ ಆಗಿದ್ರೆ ಯಾಕೆ ಧರಿಸಬೇಕಿತ್ತು, ಇದೊಂದು ರೀತಿಯಲ್ಲಿ ವಿಚಿತ್ರ ಎನ್ನಿಸುತ್ತದೆ ಎಂದಿದ್ದರು.

ಇದೀಗ ಮಗುವಿನ ವಿಷ್ಯ ತೆಗೆದಿದ್ದಾರೆ. ಅಷ್ಟಕ್ಕೂ, ಸೀರಿಯಲ್​ ಶೂಟಿಂಗ್​ ಎನ್ನುವುದು ಅಷ್ಟು ಸುಲಭದಲ್ಲಿ ಮುಗಿಯುವ ಮಾತಲ್ಲ. ಪ್ರತಿ ಬಾರಿಯೂ ರಿಯಲ್​ ಹೂವು ತಂದು ಮುಡಿಸಿದರೆ, ಬಹುಶಃ ಸೀರಿಯಲ್​ನ ಕಾಲು ಭಾಗದ ದುಡ್ಡು ಹೂವಿಗೇ ಬೇಕಾಗಬಹುದು. ಹೂವು ತಂದಿಟ್ಟರೆ ಇನ್ನೊಂದು ಶಾಟ್​ ಬರುವವರೆಗೆ ಅದು ಬಾಡಿ ಹೋಗುವ ಸಂಭವವೇ ಹೆಚ್ಚು. ಒಂದೇ ಒಂದು ಸೀನ್​ ಕೆಲವೊಮ್ಮೆ ದಿನಗಟ್ಟಲೇ ಶೂಟ್​ ಮಾಡುವುದು ಇದೆ. ಆ ಸಂದರ್ಭದಲ್ಲಿ ರಿಯಲ್​ ಹೂವು ನಟಿಯರಿಗೆ ಮುಡಿಸುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ನಕಲಿ ಹೂವನ್ನೇ ಹಾಕಲಾಗುತ್ತದೆ. ಇನ್ನು ಮಗುವಿನ ವಿಷಯಕ್ಕೆ ಬರುವುದಾದರೆ, ಪ್ರತಿಬಾರಿಯೂ ಮಗುವನ್ನು ತಂದು ಶೂಟಿಂಗ್​ ಮಾಡುವುದು ಸುಲಭದ ಮಾತಲ್ಲ. ಮಗುವಿಗೆ ಹಿಂಸೆ ಕೊಡುತ್ತಿಲ್ಲ ಎಂದು ಮಗುವನ್ನು ತೋರಿಸಿದಾಗಲ್ಲೆಲ್ಲಾ ಒಂದು ಸೂಚನೆ ಕೊಡುತ್ತಿದ್ದುದನ್ನು ನೋಡಬಹುದು. ಶೂಟಿಂಗ್​ ವೇಳೆ ಪ್ರಾಣಿ, ಮಕ್ಕಳನ್ನು ಬಳಸಿಕೊಳ್ಳುವಾಗ ಹಲವು ರೂಲ್ಸ್​ ಇರುವ ಕಾರಣ, ಕೆಲವೊಮ್ಮೆ ಗೊಂಬೆಗಳನ್ನೇ ಬಳಸಲಾಗುತ್ತದೆ.

View post on Instagram