ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾಗೆ 'ಡೇರ್‌ಡೆವಿಲ್' ಅಂತ ಟೈಟಲ್ ಫಿಕ್ಸ್ ಆಗಿದೆ. ಆದಿಕ್ ರವಿಚಂದ್ರನ್ ನಿರ್ದೇಶಿಸಲಿರುವ ಈ ಚಿತ್ರವನ್ನು ಅಜಿತ್ ಪತ್ನಿ ಶಾಲಿನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

ತಮಿಳು ಚಿತ್ರರಂಗದಲ್ಲಿ 'ಸೂಪರ್ ಸ್ಟಾರ್' ರಜನಿಕಾಂತ್, 'ದಳಪತಿ' ವಿಜಯ್‌ಗೆ ಸರಿಸಾಟಿಯಾಗಿ ನಿಲ್ಲುವ ಸ್ಟಾರ್ ನಟ 'ತಲಾ' ಅಜಿತ್ ಕುಮಾರ್. ವಿಜಯ್ ನಟನೆಯಿಂದ ದೂರ ಸರಿದು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಅಜಿತ್ ಕೂಡ ತಮ್ಮ 63ನೇ ಚಿತ್ರ 'ಗುಡ್ ಬ್ಯಾಡ್ ಅಗ್ಲಿ' ನಂತರ ಯಾವುದೇ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿರಲಿಲ್ಲ. ಈ ನಡುವೆ, ಅಜಿತ್ ಅವರ 64ನೇ ಚಿತ್ರದ ಘೋಷಣೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕೆ 'ಡೇರ್‌ಡೆವಿಲ್' (DAREDEVIL) ಎಂದು ಹೆಸರಿಡಲಾಗಿದೆ.

ಆದಿಕ್ ರವಿಚಂದ್ರನ್ ನಿರ್ದೇಶಿಸಲಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಕೆಂಪು ಮತ್ತು ಬಿಳಿ ಬಣ್ಣದ ಕಾಂಬಿನೇಷನ್‌ನಲ್ಲಿ, ಪಗಡೆ ದಾಳಗಳ ಮೇಲೆ ಅಕ್ಷರಗಳನ್ನು ಕೆತ್ತಿದಂತೆ ವಿನ್ಯಾಸ ಮಾಡಲಾಗಿದೆ. ಅಜಿತ್ ಅವರ ಸಿನಿಮಾವನ್ನು ಅವರ ಪತ್ನಿ ಶಾಲಿನಿ ನಿರ್ಮಿಸುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್. ಶಾಲಿನಿ ಅಜಿತ್ ಕುಮಾರ್ ತಮ್ಮ 'ಬ್ರೇವ್‌ಹಾರ್ಟ್ಸ್ ಪ್ರೊಡಕ್ಷನ್' (Bravehearts Production) ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪತ್ನಿಯೇ ನಿರ್ಮಾಪಕಿಯಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಶಾಲಿನಿ ಕೊನೆಯದಾಗಿ 2001ರಲ್ಲಿ 'ಪಿರಿಯಾದ ವರಂ ವೆಂದುಂ' ಚಿತ್ರದಲ್ಲಿ ನಟಿಸಿದ್ದರು. ಅಜಿತ್ ಜೊತೆ ಪ್ರೀತಿಸಿ ಮದುವೆಯಾದ ನಂತರ ಅವರು ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಹಲವು ಹಿರಿಯ ನಟಿಯರು ಕಂಬ್ಯಾಕ್ ಮಾಡುತ್ತಿರುವಾಗ, ಶಾಲಿನಿ ಕೂಡ ಹಿಂತಿರುಗುತ್ತಾರಾ ಎಂಬ ನಿರೀಕ್ಷೆ ಇತ್ತು. ಇದೀಗ, ನಟಿಯಾಗಿ ಅಲ್ಲ, ಬದಲಿಗೆ ತಮ್ಮ ಪತಿಯ ಚಿತ್ರಕ್ಕೆ ನಿರ್ಮಾಪಕಿಯಾಗಿ ಶಾಲಿನಿ ಚಿತ್ರರಂಗಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಅಜಿತ್ - ಆದಿಕ್ ಹಿಟ್ ಕಾಂಬೋ

ಈ ಹಿಂದೆ ಅಜಿತ್ - ಆದಿಕ್ ರವಿಚಂದ್ರನ್ ಕಾಂಬಿನೇಷನ್‌ನಲ್ಲಿ ಬಂದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಈಗ ಈ ಹಿಟ್ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ. 'ಡೇರ್‌ಡೆವಿಲ್' ಚಿತ್ರಕ್ಕೆ 'ರಾಕ್ ಸ್ಟಾರ್' ಅನಿರುಧ್ ಸಂಗೀತ ಸಂಯೋಜಿಸಲಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನ, ಸುಪ್ರೀಂ ಸುಂದರ್ ಸಾಹಸ ನಿರ್ದೇಶನ ಮತ್ತು ಅನು ವರ್ಧನ್ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಚಿತ್ರದ ನಾಯಕಿ ಹಾಗೂ ಶೂಟಿಂಗ್ ಕುರಿತ ವಿವರಗಳು ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.