Mithun Sridevi ಸಂಬಂಧದ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸಿದ್ದರು ಎಂಬ ಹೇಳಿಕೆ ಇದೀಗ ಬಾಲಿವುಡ್‌ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
80ರ ದಶಕದಲ್ಲಿ ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ಸಂಬಂಧ ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಹಿರಿಯ ಪತ್ರಕರ್ತರೊಬ್ಬರು, ಅವರಿಬ್ಬರೂ ಮೂರು ತಿಂಗಳು ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಾಲಿವುಡ್‌ನ ಸಾರ್ವಕಾಲಿಕ ಚರ್ಚಿತ ಪ್ರೇಮಕಥೆಗಳಲ್ಲಿ ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ಅವರ ಸಂಬಂಧಕ್ಕೆ ಒಂದು ವಿಶೇಷ ಸ್ಥಾನವಿದೆ. ತೆರೆ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಿದ್ದರು ಅನ್ನೋ ಮಾತುಗಳು ಆಗಿನಿಂದಲೂ ಕೇಳಿಬರುತ್ತಲೇ ಇವೆ.
80ರ ದಶಕದಲ್ಲಿ ಇಬ್ಬರೂ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದರು. ಇವರ ಸಂಬಂಧ, ರಹಸ್ಯ ಮದುವೆ, ನಂತರದ ಬೇರ್ಪಡಿಕೆ ಬಗ್ಗೆ ದಶಕಗಳಿಂದಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಮಿಥುನ್ ಆಗಲಿ, ಶ್ರೀದೇವಿಯಾಗಲಿ ತಮ್ಮ ಮದುವೆ ಬಗ್ಗೆ ಎಂದಿಗೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಇದೀಗ, ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್ ಈ ಹಳೆ ಕಥೆಗೆ ಹೊಸ ಜೀವ ನೀಡಿದ್ದಾರೆ. ಅಷ್ಟಕ್ಕೂ ಜ್ಯೋತಿ ವೆಂಕಟೇಶ್ ಈ ಇಬ್ಬರ ಸಂಬಂಧದ ಬಗ್ಗೆ ಹೇಳಿದ್ದೇನು? ನೋಡೋಣ ಬನ್ನಿ...
ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ನಡುವೆ ಏನಿತ್ತು ಸಂಬಂಧ?
ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದಲೇ ಸದ್ದು ಮಾಡಿದ್ದರು. ಶ್ರೀದೇವಿ ಈಗ ನಮ್ಮೊಂದಿಗಿಲ್ಲದಿದ್ದರೂ, ಅವರಿಬ್ಬರ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. TOI ವರದಿ ಪ್ರಕಾರ, 'ಹಿಂದಿ ರಶ್' ಜೊತೆ ಮಾತನಾಡಿದ ಹಿರಿಯ ಸಿನಿಮಾ ಪತ್ರಕರ್ತ ಜ್ಯೋತಿ ವೆಂಕಟೇಶ್, ಈ ಇಬ್ಬರೂ ನಟರು ಸ್ವಲ್ಪ ಕಾಲ ಗಂಡ-ಹೆಂಡತಿಯಂತೆ ಜೀವನ ನಡೆಸಿದ್ದರು ಎಂದು ಹೇಳಿದ್ದಾರೆ.
"ಅವರಿಬ್ಬರ ನಡುವೆ ಆಪ್ತ ಸಂಬಂಧವಿತ್ತಾ ಅಂತ ನೀವು ಕೇಳಿದರೆ, ಹೌದು, ಅವರು ಸುಮಾರು ಮೂರು ತಿಂಗಳ ಕಾಲ ಮದುವೆಯಾದ ಜೋಡಿಯಂತೆ ಒಟ್ಟಿಗೆ ಇದ್ದರು," ಎಂದು ಜ್ಯೋತಿ ಹೇಳಿದ್ದಾರೆ. ಒಂದು ಹೊರಾಂಗಣ ಶೂಟಿಂಗ್ ನೆನಪಿಸಿಕೊಂಡ ಜ್ಯೋತಿ, ಆ ದಿನಗಳನ್ನು ತಾವೇ ಕಣ್ಣಾರೆ ಕಂಡಿದ್ದಾಗಿ ಹೇಳುತ್ತಾರೆ. "ಮಿಥುನ್ ಅವರ ಒಂದು ಔಟ್‌ಡೋರ್ ಶೂಟಿಂಗ್‌ಗೆ ನಾನೂ ಹೋಗಿದ್ದೆ. ಶ್ರೀದೇವಿ ಯಾವತ್ತೂ ಸೆಟ್‌ಗೆ ಬರುತ್ತಿರಲಿಲ್ಲ. ಅವರು ತಮ್ಮ ರೂಮಿನಲ್ಲೇ ಇರುತ್ತಿದ್ದರು. ಆದರೆ, ಅವರಿಬ್ಬರೂ ಒಟ್ಟಿಗೆ ಇದ್ದಾರೆ ಅನ್ನೋದು ಅಲ್ಲಿ ಎಲ್ಲರಿಗೂ ಗೊತ್ತಿತ್ತು," ಎಂದು ಜ್ಯೋತಿ ನೆನಪಿಸಿಕೊಂಡರು.
ಮಿಥುನ್ ಚಕ್ರವರ್ತಿ-ಶ್ರೀದೇವಿಗೆ ಸಂಬಂಧಿಸಿದ ಸ್ವಾರಸ್ಯಕರ ಘಟನೆ
ಹಿರಿಯ ಪತ್ರಕರ್ತ ಜ್ಯೋತಿ ವೆಂಕಟೇಶ್, ಆ ಸಮಯದಲ್ಲಿ ಮಿಥುನ್ ಚಕ್ರವರ್ತಿ ಜೊತೆ ನಡೆದ ಒಂದು ತಮಾಷೆಯ ಸಂಭಾಷಣೆಯನ್ನೂ ಹಂಚಿಕೊಂಡಿದ್ದಾರೆ. "ಮಿಥುನ್ ನನಗೆ ಬಹಳ ಒಳ್ಳೆಯ ಸ್ನೇಹಿತ. ನಾನೊಮ್ಮೆ ಅವರ ಕಾಲೆಳೆದಿದ್ದೆ. 'ಮಿಥುನ್ ಸರ್, ಈಗಂತೂ ನೀವು ತಮಿಳು ಕಲಿತೇ ಇರುತ್ತೀರಿ' ಅಂದೆ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ಅವರಿಗೆ ತಕ್ಷಣ ಅರ್ಥವಾಯಿತು. ಅವರು, 'ದಯವಿಟ್ಟು ನನ್ನ ಜೊತೆ ತಮಿಳಿನಲ್ಲಿ ಮಾತನಾಡಬೇಡ. ಹೇಗಿದ್ದೀಯಾ ಅಂತ ಮಾತ್ರ ಕೇಳು' ಅಂದರು. ಸ್ಪಷ್ಟವಾಗಿ ಅವರ ಮಾತು ಶ್ರೀದೇವಿಯ ಕಡೆಗಿತ್ತು," ಎಂದು ಜ್ಯೋತಿ ವಿವರಿಸಿದರು. ಈ ಸಂಬಂಧ ಯಾಕೆ ಮುರಿದುಬಿತ್ತು ಎಂದು ಕೇಳಿದಾಗ, ಜ್ಯೋತಿ ಹೀಗೆ ಉತ್ತರಿಸಿದರು:
"ಅವರಿಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಗಳಿದ್ದವು. ಜೊತೆಗೆ, ಆ ಸಮಯದಲ್ಲಿ ಶ್ರೀದೇವಿಯವರ ಸ್ಟಾರ್‌ಡಮ್ ತುಂಬಾ ದೊಡ್ಡದಾಗಿತ್ತು. ಮಿಥುನ್ ಯಶಸ್ವಿ ನಟರಾಗಿದ್ದರೂ, ಶ್ರೀದೇವಿ ಅವರಿಗಿಂತ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದರು." "ಅದಕ್ಕೂ ಮೊದಲು ಮಿಥುನ್ ಹಲವು ಸಂಬಂಧಗಳಲ್ಲಿದ್ದರು. ಹಾಗಾಗಿ, ಸಂಬಂಧಗಳ ವಿಚಾರದಲ್ಲಿ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು," ಎಂದೂ ಅವರು ಸೇರಿಸಿದರು. ಆದರೆ, ಯೋಗಿತಾ ಬಾಲಿ ಜೊತೆಗಿನ ಮಿಥುನ್ ಮದುವೆ ಯಶಸ್ವಿಯಾಯಿತು ಎಂದು ವೆಂಕಟೇಶ್ ತಿಳಿಸಿದರು. "ಮೊದಲ ಪತ್ನಿ ಹೆಲೆನಾ ಲೂಕ್‌ಗೆ ವಿಚ್ಛೇದನ ನೀಡಿ ಯೋಗಿತಾ ಬಾಲಿ ಅವರನ್ನು ಮದುವೆಯಾದಾಗ, ಈ ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಆದರೆ ಅವರ ಮದುವೆಗೆ ಹಲವು ವರ್ಷಗಳಾಗಿವೆ. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬ ದತ್ತು ಪುತ್ರಿ ಇದ್ದಾರೆ," ಎಂದು ಜ್ಯೋತಿ ಮಾಹಿತಿ ನೀಡಿದರು.
ಮದುವೆ ಬಗ್ಗೆ ತುಟಿ ಬಿಚ್ಚದ ಮಿಥುನ್-ಶ್ರೀದೇವಿ
ಅಂದಹಾಗೆ, ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ತಮ್ಮ ಮದುವೆಯ ಬಗ್ಗೆ ಎಂದಿಗೂ ಖಚಿತಪಡಿಸಲಿಲ್ಲ. ಆದರೆ, 80ರ ದಶಕದ ಕೊನೆಯಲ್ಲಿ ಅವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬಲು ಶುರುವಾಗಿದ್ದವು. ಬಹಳ ಕಾಲದಿಂದ ಹರಿದಾಡುತ್ತಿರುವ ವರದಿಗಳ ಪ್ರಕಾರ, 80ರ ದಶಕದ ಆರಂಭದಲ್ಲಿ 'ಜಾಗ್ ಉಟಾ ಇನ್ಸಾನ್' ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಅಲ್ಲಿಂದ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನಿಜ ಜೀವನದ ಪ್ರೀತಿಗೆ ತಿರುಗಿತ್ತು. ಹಲವು ವರದಿಗಳು ಹೇಳುವಂತೆ, ಇಬ್ಬರೂ 1985ರಲ್ಲಿ ರಹಸ್ಯವಾಗಿ ಮದುವೆಯಾಗಿ 1988ರವರೆಗೆ ಒಟ್ಟಿಗೆ ಇದ್ದರು.
ಆದರೆ, ಆ ಸಮಯದಲ್ಲಿ ಮಿಥುನ್‌ಗೆ ಆಗಲೇ ಯೋಗಿತಾ ಬಾಲಿ ಜೊತೆ ಮದುವೆಯಾಗಿತ್ತು. ಈ ಸಂಬಂಧದಿಂದಾಗಿ ಮಿಥುನ್ ಮತ್ತು ಯೋಗಿತಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗುತ್ತದೆ. ಮಿಥುನ್ ತನ್ನ ಪತ್ನಿಯನ್ನು ಬಿಡುವುದಿಲ್ಲ ಎಂದು ಖಚಿತವಾದಾಗ, ಶ್ರೀದೇವಿ ಈ ಸಂಬಂಧವನ್ನು ಮುರಿದುಕೊಂಡರು ಎಂದು ಕೂಡ ಹಲವು ವರದಿಗಳು ಹೇಳುತ್ತವೆ. ನಂತರ, 1996ರಲ್ಲಿ ಶ್ರೀದೇವಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಈಗ ನಟಿಯರಾಗಿದ್ದಾರೆ.


