NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್‌.ಎಸ್‌. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

ಎನ್‌.ಎಸ್‌. ಶಂಕರ್‌.... ಈ ಹೆಸರು ಚಿತ್ರರಂಗದವರ ಪಾಲಿಗೆ ‘ಉಲ್ಟಾ ಪಲ್ಟಾ’ ಸಿನಿಮಾದ ನಿರ್ದೇಶಕರಾಗಿ, ಪತ್ರಿಕಾ ವಲಯದ ಪಾಲಿಗೆ ‘ಸುದ್ದಿ ಸಂಗಾತಿ’ಯಾಗಿ, ಸಾಹಿತ್ಯ ಹಾಗೂ ಚಳವಳಿಗಳ ದೃಷ್ಟಿಯಲ್ಲಿ ಸಾಂಸ್ಕೃತಿಕ ಚಿಂತಕರಾಗಿ ಸದಾ ನೆನಪಿರುತ್ತದೆ. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಪ್ರಗತಿಪರ ಚಳವಳಿಗಳ ಸಂಗಾತಿಯಾಗಿದ್ದ ಎನ್‌.ಎಸ್‌. ಶಂಕರ್‌ ಅವರ ‘ಹುಡುಕಾಟ’ವು ನಿಲ್ಲದ ಪಯಣ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಬೆಳೆದಿದ್ದು ಮಂಡ್ಯ ಜಿಲ್ಲೆ, ಓದಿದ್ದು ಮೈಸೂರು, ಪತ್ರಕರ್ತನಾಗಿಸಿದ್ದು ಬೆಂಗಳೂರು, ಸಾಂಸ್ಕೃತಿಕ ಚಿಂತಕ, ಹೋರಾಟಗಾರನ್ನಾಗಿಸಿದ್ದು ಚಳವಳಿಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಪತ್ರಕರ್ತರಾಗಿ ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದ ಎನ್‌.ಎಸ್‌. ಶಂಕರ್‌ ಅವರು ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಮುಂದೆ ಸಾಂಸ್ಕೃತಿಕ ಚಳವಳಿ ಹಾಗೂ ಬಂಡಾಯ ಸಾಹಿತ್ಯದ ತತ್ವಗಳಿಗೆ ಧ್ವನಿಗೂಡಿಸಿದರು. ಇದರ ಜೊತೆಗೆ ಎನ್‌. ಎಸ್‌. ಶಂಕರ್‌ ಅವರನ್ನು ತೀವ್ರವಾಗಿ ಸೆಳೆಯುತ್ತಿದ್ದು ಸಿನಿಮಾ. ಹೀಗಾಗಿಯೇ ತಮ್ಮ ಪ್ರಥಮ ಸಿನಿಮಾ ರಮೇಶ್‌ ಅರವಿಂದ್‌ ನಟನೆಯ ‘ಉಲ್ಟಾ ಪಲ್ಟಾ’ (1997) ಮೂಲಕ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡುವಂತೆ ಮಾಡಿದ್ದರು. ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಈಗಲೂ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.

ವೈಚಾರಿಕ ಬರಹ ಹಾಗೂ ಚಿಂತನೆಗಳ ಹಿನ್ನೆಲೆಯಿಂದ ಬಂದ ಎನ್‌.ಎಸ್‌.ಶಂಕರ್‌ ಅವರನ್ನು ಅವರ ಆತ್ಮೀಯರು ಆಪ್ತವಾಗಿ ಸ್ಮರಿಸಿಕೊಂಡಿದ್ದಾರೆ. ‘ಬರವಣಿಗೆ ಅನ್ನುವುದು ಅಮೃತಕ್ಕೆ ಹಾರುವ ಗರುಡನ ಹಾಗಿರಬೇಕು ಎಂದು ನನ್ನ ಲೇಖನ ಓದಿ ಹೇಳಿದವರು ಎನ್‌.ಎಸ್‌. ಶಂಕರ್‌ ಅವರು. ಆದರೆ, ಅವರ ಮಾತು ನನಗೆ ಆಗ ಅರ್ಥ ಆಗಲಿಲ್ಲ. ಇಂದು ಅವರನ್ನು ಕೊನೆಯ ಬಾರಿಗೆ ಕಂಡೆ. ‘ಅಮೃತಕ್ಕೆ ಹಾರುವ ಗರುಡ’ ಮಾತು ರಿಂಗಣಿಸುತ್ತಿತ್ತು. ರಾತ್ರಿ ಮಲಗಿದವರು ಬೆಳಗ್ಗೆ ಇಲ್ಲ! ಸುಖದ ಸಾವು, ನಿಜ.

ಆದರೆ ಬಾಕಿ ಉಳಿದ ಕನಸುಗಳ ಗತಿಯೇನು? ಕ್ರಾಂತಿಕಾರಿ ವಿಚಾರಧಾರೆಯ ಅವರ ನೊಸಲಿಗೆ ಯಾರೋ ವಿಭೂತಿ ಬಳಿದಿದ್ದರು. ಮತ್ತಾರೋ ಅಕ್ಕಿ ಲೋಟದಲ್ಲಿ ಗಂಧದ ಕಡ್ಡಿ ಹಚ್ಚಿಟ್ಟರು. ಉರಿವ ದೀಪ ಬದಿಯಲ್ಲಿ ಇಟ್ಟವರು ಮತ್ತೊಬ್ಬರು. ಇದನ್ನು ಅಲ್ಲಿಂದ ನೋಡಿ ಶಂಕರ್‌ ತಲೆ ಚಚ್ಚಿಕೊಂಡರೇ? ನಾನು ಎನ್‌.ಎಸ್‌.ಶಂಕರ್‌ ಅವರನ್ನು ‘ಅಣ್ಣಾ’ ಎನ್ನುತ್ತಿದ್ದೆ. ಅವರು ‘ಅಯ್ಯಾ’ ಎನ್ನುತ್ತಿದ್ದರು. ಅವರೊಂದಿಗೆ ಡಾ.ರಾಜ್‌ಕುಮಾರ್ ಮನೆಗೆ ಹೋಗಿ ಮಾತನಾಡಿಸಿದ್ದು, ಪಿ.ಲಂಕೇಶ್ ಅವರನ್ನು ಸಂದರ್ಶಿಸಿದ್ದು ಮರೆಯಲಾಗದ ಅನುಭವಗಳು. ಆ ದಿನಗಳ ಗಮ್ಮತ್ತೇ ಗಮ್ಮತ್ತು.

ನನ್ನ ಬಳಿ ಲೂನಾ ಮ್ಯಾಗ್ನಮ್ ಇತ್ತು. ಶಂಕರ್ ಹಿಂದೆ ಕೂರುತ್ತಿದ್ದರು. ನಾವು ಅದರಲ್ಲಿ ಇಡೀ ಬೆಂಗಳೂರು ಸುತ್ತಿದ್ದೇವೆ. ಶಂಕರ್ ಪ್ರತಿಭೆ ಕಂಡು ನಮಗೆಲ್ಲಾ ಅಚ್ಚರಿಯಾಗುತ್ತಿತ್ತು. ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂದು ಲೆಕ್ಕ ಹಾಕುತ್ತಿದ್ದೆವು. ಅದೇನೋ ಒಂದೂ ಕೈಗೂಡುತ್ತಿರಲಿಲ್ಲ. ಶಂಕರ್ ನಮಗೆಲ್ಲ ಆದರ್ಶ ನಾಯಕನಂತಿದ್ದರು. ಗಡ್ಡ ಬಿಟ್ಟು, ಜುಬ್ಬ ತೊಟ್ಟು, ಕತ್ತಿನ ಸುತ್ತ ಶಾಲು ಹಾಕಿಕೊಂಡು, ಎರಡು ಬೆರಳುಗಳ ನಡುವೆ ಸಿಗರೇಟು ಸೇದುತ್ತಾ ಹೋರಾಟಗಾರನಂತಿರುತ್ತಿದ್ದರು. ಅವರ ಮಾತು ಕೇಳುವುದೇ ಒಂದು ರೀತಿಯ ಸೊಗಸು’ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಎನ್‌. ಎಸ್‌. ಶಂಕರ್‌ ಅವರಿಗೆ ನುಡಿ ನಮನ ಸಲ್ಲಿದ್ದಾರೆ.

ಪ್ರತಿಭೆಯೊಂದು ಕಣ್ಮರೆ

‘ಕನ್ನಡದ ಮಹತ್ವದ ಲೇಖಕ, ಪತ್ರಕರ್ತ, ಸಿನೆಮಾ ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವದ ಎನ್.ಎಸ್. ಶಂಕರ್ ಅವರು ನಮ್ಮ ಕಾಲದ ದೊಡ್ಡ ಪ್ರತಿಭೆಯೊಂದು ಕಣ್ಮರೆಯಾಯಿತು.’ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಅವರು ನೆನಪಿಸಿಕೊಂಡಿದ್ದಾರೆ. ‘ಕರ್ನಾಟಕದ ಪ್ರಗತಿಪರ ಚಿಂತಕರು, ಪತ್ರಕರ್ತರು, ಸಾಹಿತಿಗಳು, ಸಿನಿಮಾ ನಿರ್ದೇಶಕರೂ ಆದ ಎನ್.ಎಸ್ ಶಂಕರ್ ಅವರು ನಿನ್ನೆ ಕೋಟಿಗಾನಹಳ್ಳಿ ರಾಮಯ್ಯ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದವರು ಬೆಳಿಗ್ಗೆ ಏಳಲಿಲ್ಲ ಅನ್ನುವ ಸುದ್ದಿ ಕೇಳಿ ಬೇಸರವಾಯ್ತು. ಇತ್ತೀಚೆಗಷ್ಟೇ ಅವರ ಮಡದಿ ತೀರಿಕೊಂಡಿದ್ದರು. ಆ ನೋವಿನಿಂದ ಅವರು ಹೊರಗೆ ಬಂದಿರಲಿಲ್ಲ. ಅವರ ‘ಉಲ್ಟಾ ಪಲ್ಟಾ’ ಸಿನಿಮಾ ಕನ್ನಡದ ಕೆಲವೇ ಕೆಲವು ಶ್ರೇಷ್ಠ ಕಾಮಿಡಿ ಸಿನಿಮಾಗಳಲ್ಲಿ ಒಂದು’ ಎಂದು ಮತ್ತೊಬ್ಬ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ನೆನಪು ಮಾಡಿಕೊಂಡಿದ್ದಾರೆ.