ಸೀತಾರಾಮ ಸೀರಿಯಲ್ ಮುಗಿದು ಎಲ್ಲರೂ ನೋವಿನಿಂದ ಬೀಳ್ಕೊಟ್ಟಿದ್ದಾರೆ. ಮುಂದಿನ ಪಾಜೆಕ್ಟ್ಗೆ ಕಾಯುತ್ತಿದ್ದಾರೆ. ಆದರೆ ಸದ್ಯ ಸಿಹಿ ಪಾತ್ರಧಾರಿ ರೀತು ಸಿಂಗ್ ಮಾತ್ರ ಕಣ್ಣೀರಿಡುತ್ತಿದ್ದಾಳೆ. ಈಕೆಗೆ ಏನಾಯ್ತು?
ಸಿಹಿ ಎಂದರೆ ಸಾಕು. ಸೀತಾರಾಮ ಸೀರಿಯಲ್ನ ಪುಟಾಣಿಯ ಮುದ್ದು ಮುಖ ಎಲ್ಲರ ಕಣ್ಣಮುಂದೆ ಬರುತ್ತದೆ . ವಯಸ್ಸಿಗಿಂತಲೂ ಹೆಚ್ಚಿನ ಟ್ಯಾಲೆಂಟ್ ಇರುವ ಕಾರಣಕ್ಕೆ ಕೆಲವೊಮ್ಮೆ ಈ ವಯಸ್ಸಿಗೆ ಇಷ್ಟು ಎಕ್ಸ್ಪೋಸ್ ಬೇಡದಿತ್ತು ಎನ್ನುವಷ್ಟರ ಮಟ್ಟಿಗೆ ಸೀತಾರಾಮ ಈಕೆಗೆ ಹೆಸರು ತಂದುಕೊಟ್ಟಿದೆ. ಪ್ರತಿಯೊಂದು ದೃಶ್ಯಗಳನ್ನು ಆಹ್ವಾನಿಸಿಕೊಂಡು ಅದು ಖುಷಿ, ಅಳು, ನೋವು ಏನೇ ಇದ್ದರೂ ದೊಡ್ಡವರನ್ನೂ ಮೀರಿಸುವ ಟ್ಯಾಲೆಂಟ್ ಈ ಬಾಲೆಗೆ ಇದ್ದದ್ದನ್ನು ನೋಡಿ ಅಚ್ಚರಿ ಪಟ್ಟುಕೊಂಡವರೇ ಎಲ್ಲ. ಇದು ಈ ಜನ್ಮದ ಟ್ಯಾಲೆಂಟ್ ಅಂತೂ ಸಾಧ್ಯವೇ ಅಲ್ಲ, ಹೋದ ಜನ್ಮದಿಂದಲೇ ಸಿಹಿ ಅರ್ಥಾತ್ ರೀತು ಸಿಂಗ್ ಪಡೆದುಕೊಂಡು ಬಂದಿದ್ದಾಳೆ, ಹುಟ್ಟಿನಿಂದಲೇ ಆಕೆ ತನ್ನ ಜೊತೆ ನಟನೆಯನ್ನೂ ತಂದಿದ್ದಾಳೆ ಎನ್ನುವಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿದ್ದಳು ರೀತು.
ಆದರೆ ಇದೀಗ ಆಕೆಯ ಬದುಕು ಕತ್ತಲಾಗಿ ಹೋಗಿದೆ. ಇದಕ್ಕೆ ಹಲವು ಕಾರಣಗಳು ಇದೆ. ಇದಾಗಲೇ ಬಹುತೇಕರಿಗೆ ತಿಳಿದಿರುವಂತೆ ರೀತು ತೀರಾ ಚಿಕ್ಕವಳು ಇರುವಾಗಲೇ ಅಪ್ಪ ಬಿಟ್ಟು ಹೋಗಿರುವ ಕಾರಣದಿಂದ ಈಕೆಯ ಅಮ್ಮನೇ ರೀತು ಮತ್ತು ತಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೆ ಹೇಳುವುದಾದರೆ ರೀತು ಸಿಂಗ್ ಮನೆಯ ಆದಾಯದ ಮೂಲ. ಆಕೆಯೇ ಮನೆಯನ್ನು ನಡೆಸುತ್ತಿದ್ದಾಳೆ. ನಟನೆಯ ಜೊತೆ ಶಾಲೆಗೂ ಹೋಗುತ್ತಿರುವ ರೀತು ಒಂದು ಹಂತದಲ್ಲಿ ಮನೆಯ ಜವಾಬ್ದಾರಿಯನ್ನೂಹೊತ್ತುಕೊಂಡವಳು. ಅದಕ್ಕಿಂತಲೂ ಹೆಚ್ಚಾಗಿ ಆಕೆಗೆ ಈ ಚಿಕ್ಕ ವಯಸ್ಸಿನಲ್ಲಿಯೇ ಬೆಟ್ಟದಷ್ಟು ಹೆಸರು, ಕೀರ್ತಿ ಸಿಕ್ಕಿದೆ. ಇವೆರಡೂ ಈಗ ಮುಗಿದು ಹೋಗಿದೆ ಎನ್ನಿಸುತ್ತಿದೆ ಆಕೆಗೆ. ಇದೇ ಕಾರಣಕ್ಕೆ ಸೀತಾರಾಮ ಸೀರಿಯಲ್ ಮುಗಿದಾಗ ಎಲ್ಲಕ್ಕಿಂತ ಹೆಚ್ಚಾಗಿ ದುಃಖ ಪಟ್ಟಿದ್ದು ರೀತು ಸಿಂಗ್. ಈ ಬಗ್ಗೆ ಎಫ್ಡಿಎಫ್ಎಸ್ ಯುಟ್ಯೂಬ್ನ ಚಾನೆಲ್ಗೆ ಅಶೋಕ್ ಪಾತ್ರಧಾರಿ ಅಶೋಕ್ ಶರ್ಮಾ ಅವರು ನೀಡಿರುವ ಸಂದರ್ಶನಲ್ಲಿ ವಿವರಿಸಿದ್ದಾರೆ. ಸಿಹಿಗೆ ಸಿಕ್ಕಾಪಟ್ಟೆ ಟ್ಯಾಲೆಂಟ್ ಇರುವುದರಿಂದ ಆಕೆಗೆ ಮುಂದೆ ಅವಕಾಶಗಳುಸಿಗುತ್ತವೆ. ಆದರೆ ಸದ್ಯ ಸೀತಾರಾಮ ಸೀರಿಯಲ್ ಬಿಟ್ಟು ಹೋಗುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಅತ್ತಳು. ಆಕೆಗೆ ತನ್ನ ಭವಿಷ್ಯದ ಚಿಂತೆ ಶುರುವಾಗಿ ಬಿಟ್ಟಿದೆ. ನಿನಗೆ ಎಲ್ಲಾದರೂ ಅವಕಾಶ ಸಿಗುತ್ತದೆ. ನೀನು ಹುಟ್ಟಿರೋದೇ ನಟನೆಗೆ ಎಂದು ನಾನು ಆಕೆಗೆ ಸಮಾಧಾನ ಮಾಡಿದಾಗ, ನಾನು ಹುಟ್ಟಿರೋದೇ ಸೀತಾರಾಮ ನಟನೆಗೆ ಎಂದು ಬಿಕ್ಕಿಬಿಕ್ಕಿ ಅತ್ತಳು. ಅವಳು ತುಂಬಾ ನೋವಿನಲ್ಲಿದ್ದಾಳೆ ಎಂದು ನುಡಿದರು.
ಬೇರೆ ನಟರಿಗಾದರೆ ಸೀರಿಯಲ್, ಸಿನಿಮಾಗಳಲ್ಲಿ ಅವಕಾಶಗಳು ಸಿಗಬಹುದು. ಆದರೆ ರೀತು ಸಿಂಗ್ ತುಂಬಾ ಚಿಕ್ಕವಳಾಗಿರುವ ಕಾರಣ, ಚಿಕ್ಕ ಮಕ್ಕಳ ಪಾತ್ರವೇ ಪ್ರಧಾನ ಆಗಿರುವಂಥ ಸೀರಿಯಲ್ಗಲ್ಲಿ ಆಕೆಗೆ ಅವಕಾಶ ಸಿಗಬೇಕಷ್ಟೇ. ಇಲ್ಲವೇ ಚಿಕ್ಕಪುಟ್ಟ ಪಾತ್ರಗಳು ಸಿಗಬಹುದು, ಸಿನಿಮಾಗಳಲ್ಲಿಯೂ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಎಲ್ಲಿ ಹೋದರೂ ಅದು ಚಿಕ್ಕಮಕ್ಕಳ ಪಾತ್ರ ಇರಬೇಕಲ್ಲ, ಅದೇ ರೀತು ಸಿಂಗ್ಗೂ ನೋವು ತರಿಸುತ್ತಿದೆ. ಒಂದು ಕಡೆ ಹಣ, ಇನ್ನೊಂದು ಕಡೆ ಹೆಸರು... ಎರಡೂ ಎಲ್ಲರಿಗೂ ಕ್ಷಣಿಕವೇ ಸರಿ. ಆದರೆ, ಈ ವಿಷಯ ತುಂಬಾ ದೊಡ್ಡವರಾದ ಮೇಲೆ ಹಲವರ ಅರಿವಿಗೆ ಬರುತ್ತದೆ. ಆದರೆ ಪುಟಾಣಿ ರೀತು ಈಗಾಗಲೇ ಈ ಬಗ್ಗೆ ಅರಿತುಕೊಂಡಿರುವಂತೆ ಕಾಣಿಸುತ್ತಿದೆ.
ಈ ಹಿಂದೆ ರೀತು ಸಿಂಗ್ ಅಮ್ಮ ಗೀತಾ ಕೂಡ ತಮ್ಮ ಮಗಳ ಬಗ್ಗೆ ಹೇಳಿದ್ದರು. ಕುಡುಕ ಗಂಡ ಕೈಬಿಟ್ಟು ಹೋದ ಸಂದರ್ಭದಲ್ಲಿ, ಒಂಟಿಯಾಗಿ ಮಗಳನ್ನು ಸಾಕಿದವರು ಗೀತಾ. ಈ ಹಿಂದೆ ರಿಯಾಲಿಟಿ ಷೋನಲ್ಲಿ ಗೀತಾ, ನಾನು ಇವಳಿಗೆ ಅಮ್ಮ ಅಲ್ಲ, ಇವಳೇ ನನ್ನ ಅಮ್ಮ ಎಂದುಹೇಳಿದ್ದರು. ನಾನು ಊಟ ಮಾಡಿಲ್ಲ ಅಂದ್ರೆ ರಿತು ಯಾಕೆ ಊಟ ಮಾಡಿಲ್ಲ ಅಂತ ಕೇಳ್ತಾಳೆ. ಮಕ್ಕಳನ್ನು ತಾಯಿ ಕೇರ್ ಮಾಡಬೇಕು, ಆದರೆ ನನ್ನ ಮಗಳು ನನ್ನನ್ನು ಕೇರ್ ಮಾಡ್ತಾಳೆ, ನನಗೆ ಕನ್ನಡ ಬರೋದಿಲ್ಲ. ನೇಪಾಳದಲ್ಲಿ ಕೂಡ ಜೀ ಕನ್ನಡ ವಾಹಿನಿ ನೋಡ್ತಾರೆ. ಅವರು ರಿತು ನೋಡಿ ಹೊಗಳ್ತಾರೆ. ರಿತು ತಂದೆಗೂ ಕೂಡ ಮಗಳು ಏನು ಅಂತ ಗೊತ್ತಾಗಬೇಕು ಅಂತ ಜನರು ಹೇಳ್ತಾರೆ ಗೀತಾ ಹೇಳಿದ್ದರು. ರಿತು ಸಿಂಗ್ ತಾಯಿ ಗೀತಾ ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಕುಟುಂಬಕ್ಕೆ ಸದ್ಯ ರಿತು ಸಿಂಗ್ ಆಧಾರವಾಗಿದ್ದಾಳೆ.

