ದಿ ವಿಲನ್ ಬಿಡುಗಡೆಗೆ ಒಂದೇ ದಿನ ಬಾಕಿ | ರಿಲೀಸ್‌ಗೂ ಮೊದಲೇ ಟಿಕೆಟ್ ಸೋಲ್ಡ್ ಔಟ್ | ಜೋರಾಗಿದೆ ವಿಲನ್ ಹವಾ 

ಬೆಂಗಳೂರು (ಅ. 17): ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಬಿಡುಗಡೆಗೆ ಒಂದೇ ದಿನ ಬಾಕಿ. ಅಕ್ಟೋಬರ್ 18 ರಂದು ಚಿತ್ರ ಅದ್ದೂರಿ ಬಿಡುಗಡೆ ಕಾಣುತ್ತಿದೆ. ಈಗಾಗಲೇ ಅಭಿಮಾನಿಗಳ ಅಬ್ಬರ ಜೋರಾಗಿದೆ.

ಕಳೆದ ಎರಡ್ಮೂರು ದಿನಗಳಿಂದಲೇ ಟಿಕೆಟ್‌ಗಾಗಿ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಹಲವಾರು ಕಡೆ ನಾಯಕ ನಟರ ಅಭಿಮಾನಿಗಳು ಪೂರ್ತಿ ಶೋಗಳನ್ನೇ ಬುಕ್ ಮಾಡಿಕೊಂಡಿದ್ದಾರೆ. ದಿ ವಿಲನ್ ಕ್ರೇಜ್‌ನಿಂದ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ.

ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !

ಮಲ್ಪಿಪ್ಲೆಕ್ಸ್‌ಗಳಲ್ಲೂ ದುಪ್ಪಟ್ಟು ರೇಟು ನಿಗದಿ ಮಾಡಿದ್ದಾರೆ. ಆದರೂ ದಿ ವಿಲನ್ ಚಿತ್ರ ನೋಡುವವರಿಗೆ ಟಿಕೆಟ್ ರೇಟು ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ಎಲ್ಲೆಲ್ಲೂ ದಿ ವಿಲನ್ ಹವಾ ನಡೆಯುತ್ತಿದೆ. ಇಡೀ ಚಿತ್ರರಂಗ, ಅಭಿಮಾನಿ ಸಮೂಹ ಕುತೂಹಲದಿಂದ ನೋಡುತ್ತಿದೆ. ಅಲ್ಲದೇ ಥಿಯೇಟರ್‌ಗಳಲ್ಲಿ ಪೊಲೀಸರ ನಿಯೋಜನೆಯಾಗಿದೆ. ಇಬ್ಬರು ಸ್ಟಾರ್‌ಗಳ ಅಭಿಮಾನಿಗಳ ಬಳಿ ಪೊಲೀಸರು ಸಂಯಮ ಕಾಯ್ದುಕೊಳ್ಳಲು ತಿಳಿಸಿದ್ದಾರೆ. ಕನ್ನಡ ಚಿತ್ರವೊಂದು ಈ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದನ್ನು ಜಗತ್ತು ವಿಸ್ಮಯದಿಂದ ನೋಡುತ್ತಿದೆ. 

ಆ್ಯಮಿ, ನೀ ಯಾಕೆ ಹಿಂಗಮ್ಮಿ?

ಎಲ್ಲೆಲ್ಲಿ ಬಿಡುಗಡೆ?

ಕರ್ನಾಟಕದಲ್ಲೇ 450 ರಿಂದ 500 ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕದ ಹೊರತಾಗಿ ಬಾಂಬೆ, ಆಂಧ್ರ ಪ್ರದೇಶ, ಚೆನ್ನೈ, ರಾಯದುರ್ಗ ಕೇರಳ ಸೇರಿಂದ ಒಟ್ಟು 83 ಕಡೆ ಸಿನಿಮಾ ತೆರೆ ಬರುತ್ತಿದೆ. ಒಟ್ಟು ೬೫೦ರಿಂದ 700 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಹೊರ ದೇಶಗಳಲ್ಲಿ ಇಲ್ಲಿ ತೆರೆಕಂಡ ಎರಡು ವಾರಗಳ ನಂತರ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡುತ್ತಿದೆ.

9 ಥಿಯೇಟರ್‌ನಲ್ಲಿ ಪೂರ್ತಿ ಶೋ ಬುಕ್ ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ, ತಾವರಕೆರೆಯ ಲಕ್ಷ್ಮೀ, ಕಮಲನಗರದ ವೀರಭದ್ರೇಶ್ವರ, ಕೆಜಿ ರಸ್ತೆಯ ನರ್ತಕಿ, ಶಂಕರ್ ನಗರದ ರಾಜ್‌ಮುರಳಿ, ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್, ಮೈಸೂರಿನ ಡಿಸಿಆರ್ ಮಾಲ್, ವುಡ್‌ಲ್ಯಾಂಡ್ ಮೈಸೂರು, ತುಮಕೂರಿನ ಪ್ರಶಾಂತ್ ಚಿತ್ರಮಂದಿರಗಳ ಎಲ್ಲಾ ಸೀಟ್‌ಗಳನ್ನು ಒಬ್ಬೊಬ್ಬರೇ ಬುಕ್ ಮಾಡಿಕೊಂಡಿದ್ದಾರೆ. ಅದರಲ್ಲೂ ಮೈಸೂರಿನ ಡಿಸಿಆರ್ ಮಾಲ್‌ನ ಮೊದಲ ದಿನದ ನಾಲ್ಕು ಶೋಗಳನ್ನೂ ಒಬ್ಬರೇ ಬುಕ್ ಮಾಡಿಕೊಂಡಿದ್ದಾರೆ.

ಪೊಲೀಸ್ ಭದ್ರತೆ

ನಿರ್ಮಾಪಕ ಸಿಆರ್ ಮನೋಹರ್ ಅವರು ಸಿನಿಮಾ ಬಿಡುಗಡೆಯಾಗುವ ಥಿಯೇಟರ್‌ಗಳಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಕೂಡ ಇಬ್ಬರು ನಟರ ಅಭಿಮಾನಿ ಸಂಘದವರನ್ನು ಕರೆಸಿ ಸಮನ್ವಯ ಸಮಿತಿ ಮಾಡಿದ್ದು, ಈ ಸಮಿತಿ ನೇತೃತ್ವದಲ್ಲಿ ತುಮಕೂರಿನಲ್ಲಿ ಪತ್ರಿಕಾಗೋಷ್ಟಿ ಕೂಡ ಕರೆದಿದ್ದು, ಸಿನಿಮಾ ಪ್ರದರ್ಶನಕ್ಕೂ ಮುನ್ನ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳನ್ನು ಒಳಗೊಂಡು ಮೆರವಣಿಗೆ ನಡೆಯಲಿದೆ.