ಆಸೆಗಳು ಸಿರಿತನದ ಸಿಂಹಾಸನಕ್ಕೆ ಗುರಿ ಇಟ್ಟರೆ, ಅಂತಸ್ತಿನ ಹಾಸಿಗೆ ಮೇಲೆ ಶ್ರೀಮಂತಿಕೆಯ ಕನಸುಗಳು ನರ್ತಿಸುತ್ತವೆ. ಭೂಮಿ ಮೇಲೆ ಸಂಪತ್ತು ರಾರಾಜಿಸಿದರೆ, ಸಾವು ಕೇಕೆ ಹಾಕುತ್ತದೆ. ಕೋಟೆಗಳು ತಲೆ ಎತ್ತಿದರೆ, ಆ ಕೋಟೆ ಕಟ್ಟಲು ಮಣ್ಣಿನ ಮಕ್ಕಳ ಮೈ ಮುರಿಯುತ್ತದೆ. ಹಾಗೆ ಅವರಲ್ಲೊಬ್ಬ ಮೈ ಕೊಡವಿ ಎದ್ದು ನಿಲ್ಲುತ್ತಾನೆ. ಹಾಗೆ ಎದ್ದು ನಿಂತವನು ಚರಿತ್ರೆಯ ವೀರನಾ? ವರ್ತಮಾನದ ಹೀರೋನಾ? ‘ಕೆ.ಜಿ.ಎಫ್’ ಸಿನಿಮಾ ನೋಡಿ ಮೇಲೆ ಹೀಗೊಂದು ಸಾಲುಗಳು ನಿಮ್ಮೊಳಗೂ ಹುಟ್ಟಿಕೊಳ್ಳಬಹುದು.

ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಹುಡುಗ ಕ್ರಿಮಿನಲ್ ಆಗುವುದು, ಆ ಕ್ರಿಮಿನಲ್ ಡಾನ್ ಆಗುವ ಹಾದಿಯಲ್ಲಿ ಫೇಮಸ್ ಆಗುತ್ತಿ ದ್ದಂತೆಯೇ ಅವನಿಗೊಂದು ಡೀಲು ಬಂದು, ಆ ಡೀಲು ಬದುಕಿನ ದಿಕ್ಕನ್ನೇ ಬದಲಿಸಿ, ರೌಡಿ ಹೀರೋ ಆಗುತ್ತಾನೆ.

ಕೆ.ಜಿ.ಎಫ್’ ಕತೆಯನ್ನು ಮೇಲ್ನೋಟಕ್ಕೆ ಹೀಗೆ ಹೇಳಿಬಿಡ ಬಹುದು. ಸಂಪತ್ತು, ದುಡಿಮೆ, ಗುಲಾಮತನ, ಭಯ, ಸಾವು ಒಟ್ಟಿಗಿದ್ದರೆ ಏನಾಗುತ್ತದೆ ಎಂಬುದನ್ನು ಹೇಳುವುದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಜೀತದಾಳುಗಳು ಬೇಕಿತ್ತು.

ಚಿತ್ರದ ನಾಯಕನಿಗೆ ಶ್ರೀಮಂತನಾಗುವ ಗುರಿಯ ದಾರಿ ಬೇಕಿತ್ತು. ನಿರ್ದೇಶಕರು ಕೆಜಿಎಫ್‌ಗೆ ಬರುತ್ತಾರೆ. ಅದೇ ಕೆಜಿಎಫ್‌ನ ಬಂಗಾರದ ಸಂಪತ್ತು ನಾಯಕನ ಗುರಿಯ ಕಣ್ಣು ಕುಕ್ಕುತ್ತದೆ. ಈಗ ಸಂಪತ್ತು ಮತ್ತು ಜೀತಗಾರಿಕೆ ಎರಡೂ ಒಂದೇ ಕಡೆ ಇದೆ. ನಿರ್ದೇಶಕನ ಈ ಅಗತ್ಯ, ನಾಯಕನ ಈ ಗುರಿ ಜತೆಯಾಗಿ ಯಶಸ್ಸು ಕಾಣುವ ಹೊತ್ತಿಗೆ ಸಿನಿಮಾ ಮುಕ್ತಾಯಗೊಳ್ಳುತ್ತದೆ. ಆದರೆ, ಬಂಗಾರ ದಂತಹ ಕತೆ ಇಲ್ಲದಿದ್ದರೂ ಚಿನ್ನಂತಹ ತಾಂತ್ರಿಕತೆಯ ಸೊಗಡು ಇದೆ.

ಗೋಲ್ಡ್‌ನಂತೆ ಪಳಪಳನೇ ಹೊಳೆಯುವ ಅದ್ದೂರಿ ಮೇಕಿಂಗ್ ಇದೆ. ಈ ಕಾರಣಕ್ಕೆ ಇದು ಅಜ್ಞಾತ ಜೀವಗಳಿಗೆ ಅಂದವಾಗಿ ರೂಪಿಸಿರುವ ತಾಂತ್ರಿಕ ಚೌಕಟ್ಟು. ಹಾಗಂತ ಕೆ.ಜಿ.ಎಫ್ ಕುರಿತಾದ ನಿಜವಾದ ಅನ್‌ಟೋಲ್ಡ್ ಸ್ಟೋರಿ ಇರುತ್ತದೆ.

ನಮ್ಮ ದೇಶದ ಚಿನ್ನದ ಊರಿನ ಕುರಿತ ಅಚ್ಚರಿ ಚಾರಿತ್ರಿಕತೆಗಳಿರುತ್ತವೆ ಎಂದುಕೊಂಡು ಹೋದರೆ ತಪ್ಪಾಗು ತ್ತದೆ. ಯಾಕೆಂದರೆ ಚರಿತ್ರೆಯ ಕನ್ನಡಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಒಂದು ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ.

ಚಿತ್ರದಲ್ಲಿ ಕಾಮಿಡಿ, ಲವ್, ಹ್ಯಾಪಿನೆಸ್‌ನಂತಹ ಅಂಶಗಳನ್ನು ನಿರೀಕ್ಷಿಸಲಾಗದು. ಹೀಗಾಗಿ ಇತಿಹಾಸಕ್ಕಿಂತ ರೋಚಕ ಸಂಗತಿಗಳು ಚಿತ್ರವನ್ನು ಆವರಿಸಿಕೊಂಡರೂ ‘ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧನಿಲ್ಲ’ ಎನ್ನುವಂತಹ ಸಂಭಾಷಣೆಗಳು ಚಿತ್ರದ ಗಟ್ಟಿತನ ತೋರುತ್ತವೆ. ಹಾಗೆ ಭುವನ್ ಗೌಡ ಛಾಯಾಗ್ರಹಣ, ಸಂಕಲನಕಾರ ಶ್ರೀಕಾಂತ್ ಚಿತ್ರದ ನಿಜವಾದ ಹೀರೋಗಳು.

ರವಿ ಬಸ್ರೂರು ಉಗ್ರಂ ಹಿನ್ನೆಲೆ ಸಂಗೀತವನ್ನೇ ಅವಲಂಬಿಸಿದ್ದಾರೆ. ಪ್ರಶಾಂತ್ ನೀಲ್ ಚಿತ್ರದ ಕ್ಯಾಪ್ಟನ್ ಅನಿಸಿಕೊಂಡಿದ್ದಾರೆ. ಇನ್ನೂ ನಾಯಕ, ನಾಯಕಿ ಸೇರಿದಂತೆ ಪಾತ್ರದಾರಿಗಳ ವಿಚಾರಕ್ಕೆ ಬಂದರೆ ಇಲ್ಲಿ ಎಲ್ಲರು ಒಂದೊಂದು ಕ್ಯಾರೆಕ್ಟರ್ ಅಷ್ಟೆ. ಪ್ರತಿ ಫ್ರೇಮ್‌ನಲ್ಲೂ ಯಶ್ ತುಂಬಿಕೊಂಡಿದ್ದರೂ ಪ್ರತಿಯೊಬ್ಬರೂ ಎದ್ದು ಕಾಣಿಸುತ್ತಾರೆ.  ನಾಯಕಿ ಶ್ರೀನಿಧಿ ಶೆಟ್ಟಿಗೆ ಇಲ್ಲಿ ನಾಲ್ಕು ಡೈಲಾಗು, ಮೂರು ಕಾಸ್ಟ್ಯೂಮು ಮತ್ತು ಕಂಠಪೂರ್ತಿ ಮೌನ. ತಾಯಿಯ ಹಾಡು ಬಿಟ್ಟರೆ, ಉಳಿದವು ನಾಯಕನ ವೈಭವೀಕರಣಕ್ಕೆ ಸೀಮಿತ.