ಡಿಸೆಂಬರ್ 8 ರಂದು ಧರ್ಮೇಂದ್ರ ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಹುಟ್ಟುಹಬ್ಬಕ್ಕೆ ಕೆಲವೇ ದಿನಗಳಿರುವಾಗ ಅವರು ಜಗತ್ತನ್ನು ಅಗಲಿದ್ದಾರೆ. ಧರ್ಮೇಂದ್ರ ಬಗ್ಗೆ ಸಲ್ಮಾನ್ ಖಾನ್ ಆಡಿರುವಾ ಭಾವುಕ ನುಡಿಗಳು ಇಲ್ಲಿವೆ ನೋಡಿ…
ಸಲ್ಮಾನ್ ಖಾನ್ ಮಾತು
ಬಾಲಿವುಡ್‌ನ 'ಹೀ ಮ್ಯಾನ್', ಭಾರತೀಯ ಚಿತ್ರರಂಗದ ದಂತಕಥೆ ಧರ್ಮೇಂದ್ರ (Dharmendra) ಅವರ ಅಗಲಿಕೆ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ತಮ್ಮ ನೆಚ್ಚಿನ ಹಿರಿಯ ನಟನ ಅಗಲಿಕೆಯ ನೋವಿನಿಂದ ಬಾಲಿವುಡ್‌ನ ಸುಲ್ತಾನ್ ಸಲ್ಮಾನ್ ಖಾನ್ (Salman Khan) ಕೂಡ ಹೊರಬಂದಿಲ್ಲ. ಹೌದು, ಸದಾ ನಗುನಗುತ್ತಾ, ತಮಾಷೆ ಮಾಡುತ್ತಾ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಸಲ್ಮಾನ್ ಖಾನ್, ಶನಿವಾರ ನಡೆದ 'ಬಿಗ್ ಬಾಸ್ ಸೀಸನ್ 19'ರ ವೇದಿಕೆಯಲ್ಲಿ ಅತ್ಯಂತ ಭಾವುಕರಾಗಿ ಕಂಡುಬಂದರು. ತಮ್ಮ ನೆಚ್ಚಿನ ಧರಮ್ ಪಾಜಿ ಅವರನ್ನು ಕಳೆದುಕೊಂಡ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ವೇದಿಕೆಯಲ್ಲಿ ಮೌನ ಮುರಿದ ಸಲ್ಮಾನ್:
ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವಾಗ ಸಲ್ಮಾನ್ ಖಾನ್, ಕಳೆದ ಒಂದು ವಾರ ತಮಗೆ ಮತ್ತು ಇಡೀ ಚಿತ್ರರಂಗಕ್ಕೆ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ತೋಡಿಕೊಂಡರು. ನೇರವಾಗಿ ಧರ್ಮೇಂದ್ರ ಅವರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಅವರ ಮಾತುಗಳು ಯಾರನ್ನು ಉದ್ದೇಶಿಸಿದ್ದವು ಎಂಬುದು ಸ್ಪಷ್ಟವಾಗಿತ್ತು. "ಈ ವಾರ ಕೇವಲ ದೇಶಕ್ಕೆ ಮಾತ್ರವಲ್ಲ, ನಮ್ಮ ಅಭಿಮಾನಿಗಳಿಗೆ ಮತ್ತು ವಿಶೇಷವಾಗಿ ಬಾಲಿವುಡ್ ಇಂಡಸ್ಟ್ರಿಗೆ ಅತ್ಯಂತ ಭಾರವಾದ ವಾರವಾಗಿತ್ತು.
ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ" ಎಂದು ಸಲ್ಮಾನ್ ಗದ್ಗದಿತರಾದರು.
ಮುಂದುವರಿದು ಮಾತನಾಡಿದ ಅವರು, ತಮ್ಮ ಮನದಾಳದ ನೋವನ್ನು ಹಂಚಿಕೊಂಡರು. "ನಿಜ ಹೇಳಬೇಕೆಂದರೆ, ಈ ವಾರ ನನಗೆ ಬಿಗ್ ಬಾಸ್ ನಡೆಸಿಕೊಡಲು ಮನಸ್ಸೇ ಇರಲಿಲ್ಲ. ಆದರೆ ಏನು ಮಾಡುವುದು? ಅಂತಿಮವಾಗಿ ಜೀವನ ಮುಂದುವರಿಯಲೇಬೇಕಲ್ಲವೇ? (Life goes on)" ಎಂದು ಹೇಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು. ಈ ಮಾತುಗಳನ್ನು ಕೇಳಿ ಅಭಿಮಾನಿಗಳು ಕೂಡ ಭಾವುಕರಾದರು.
ಡಿಯೋಲ್ ಕುಟುಂಬಕ್ಕೆ ಆಸರೆಯಾದ ಸಲ್ಲು:
ನವೆಂಬರ್ 24 ರಂದು, ತಮ್ಮ 89ನೇ ವಯಸ್ಸಿನಲ್ಲಿ ಧರ್ಮೇಂದ್ರ ಅವರು ಇಹಲೋಕ ತ್ಯಜಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ಕಂಬನಿ ಮಿಡಿಯಿತು. ಆದರೆ ಸಲ್ಮಾನ್ ಖಾನ್ ಕೇವಲ ಟ್ವೀಟ್ ಮಾಡಿ ಸಂತಾಪ ಸೂಚಿಸುವವರ ಸಾಲಿನಲ್ಲಿ ನಿಲ್ಲಲಿಲ್ಲ. ಧರ್ಮೇಂದ್ರ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಮಶಾನಕ್ಕೆ ದೌಡಾಯಿಸಿದ ಮೊದಲ ಸೆಲೆಬ್ರಿಟಿಗಳಲ್ಲಿ ಸಲ್ಮಾನ್ ಕೂಡ ಒಬ್ಬರು. ಅಷ್ಟೇ ಅಲ್ಲದೆ, ನವೆಂಬರ್ 27 ರಂದು ಡಿಯೋಲ್ ಕುಟುಂಬ ಆಯೋಜಿಸಿದ್ದ ಪ್ರಾರ್ಥನಾ ಸಭೆಗೂ (Prayer Meet) ಹಾಜರಾಗಿ, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರಿಗೆ ಧೈರ್ಯ ತುಂಬಿದರು. ಕಷ್ಟದ ಸಮಯದಲ್ಲಿ ಡಿಯೋಲ್ ಕುಟುಂಬದ ಜೊತೆಗೆ ಬಂಡೆಯಂತೆ ನಿಂತರು.
50 ವರ್ಷಗಳ ಅವಿನಾಭಾವ ಸಂಬಂಧ:
ಸಲ್ಮಾನ್ ಖಾನ್ ಮತ್ತು ಧರ್ಮೇಂದ್ರ ಅವರ ನಡುವಿನ ಬಾಂಧವ್ಯ ಕೇವಲ ಸಹನಟರ ಸಂಬಂಧವಾಗಿರಲಿಲ್ಲ. ಅದು ತಂದೆ-ಮಗನ ವಾತ್ಸಲ್ಯದಂತಿತ್ತು. ಇವರಿಬ್ಬರೂ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಕಾಜಲ್ ಮತ್ತು ಅರ್ಬಾಜ್ ಖಾನ್ ಕೂಡ ಇದ್ದರು. ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿತ್ತು.
ಇನ್ನು ಖಾನ್ ಕುಟುಂಬ ಮತ್ತು ಧರ್ಮೇಂದ್ರ ಅವರ ಸ್ನೇಹ ಬರೋಬ್ಬರಿ 50 ವರ್ಷಗಳಷ್ಟು ಹಳೆಯದು. ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಜಾವೇದ್ ಅಖ್ತರ್ ಅವರೊಂದಿಗೆ ಸೇರಿ ಬರೆದ ಭಾರತೀಯ ಚಿತ್ರರಂಗದ ಐತಿಹಾಸಿಕ ಸಿನಿಮಾ 'ಶೋಲೆ'ಯಲ್ಲಿ ಧರ್ಮೇಂದ್ರ ಅವರು 'ವೀರೂ' ಪಾತ್ರವನ್ನು ನಿರ್ವಹಿಸಿದ್ದರು. ಆ ಪಾತ್ರ ಇಂದಿಗೂ ಬಾಲಿವುಡ್‌ನ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿ ಉಳಿದಿದೆ. ಹೀಗಾಗಿ ಸಲ್ಮಾನ್ ಅವರಿಗೆ ಧರ್ಮೇಂದ್ರ ಅವರು ಕೇವಲ ಹಿರಿಯ ನಟನಾಗಿರದೆ, ಕುಟುಂಬದ ಸದಸ್ಯರಂತೆಯೇ ಇದ್ದರು.
ಅಂತಿಮ ನಮನ ಸಲ್ಲಿಸಿದ ತಾರೆಯರು:
ನವೆಂಬರ್ 25 ರಂದು, ಅಂದರೆ ಧರ್ಮೇಂದ್ರ ಅವರು ನಿಧನರಾದ ಮರುದಿನ, ಚಿತ್ರರಂಗದ ಗಣ್ಯರು ಡಿಯೋಲ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಜಿತೇಂದ್ರ, ರಾಕೇಶ್ ರೋಷನ್, ರೇಖಾ ಅವರಂತಹ ಹಿರಿಯರಿಂದ ಹಿಡಿದು ಹೃತಿಕ್ ರೋಷನ್, ವರುಣ್ ಧವನ್, ಜಾಕಿ ಭಗ್ನಾನಿ, ರಕುಲ್ ಪ್ರೀತ್ ಸಿಂಗ್, ಅಜಯ್ ದೇವಗನ್ ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಸೇರಿದಂತೆ ಹಲವು ಪ್ರಮುಖರು ಮೃತ ನಟನಿಗೆ ಗೌರವ ಸಲ್ಲಿಸಿದರು.
ಡಿಸೆಂಬರ್ 8 ರಂದು ಧರ್ಮೇಂದ್ರ ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಹುಟ್ಟುಹಬ್ಬಕ್ಕೆ ಕೆಲವೇ ದಿನಗಳಿರುವಾಗ ಅವರು ಜಗತ್ತನ್ನು ಅಗಲಿದ್ದಾರೆ. ಸಲ್ಮಾನ್ ಖಾನ್ ಅವರ ಈ ಭಾವುಕ ನುಡಿಗಳು, ಧರ್ಮೇಂದ್ರ ಅವರು ಚಿತ್ರರಂಗದ ಮೇಲೆ ಮತ್ತು ಸಹನಟರ ಮೇಲೆ ಬೀರಿದ ಪ್ರಭಾವಕ್ಕೆ ಸಾಕ್ಷಿಯಾಗಿದೆ.


