Anchor Anushree: ಕಿರುತೆರೆ ನಟಿ ಹಾಗೂ ನಿರೂಪಕಿ ಅನುಶ್ರೀ ತಮ್ಮ ಸರಳತೆಯಿಂದಲೇ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಶಿಕ್ಷಕಿ ವಂದನಾ ರೈ ಅವರನ್ನು ಮಾರ್ಗಮಧ್ಯೆ ಕಂಡ ಅನುಶ್ರೀ, ತಾವೇ ಖುದ್ದಾಗಿ ಕಾರಿನಿಂದ ಕೆಳಗಿಳಿದು ಬಂದು, 'ನಿಮ್ಮ ವಿಡಿಯೋ ನಮ್ಮ ಅಮ್ಮನಿಗೆ ತುಂಬಾ ಇಷ್ಟ' ಎಂದು ಶಾಲಾ ದಿನಗಳನ್ನು ಮೆಲುಕು ಹಾಕಿದ ಮುದ್ದಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ, ಜನಮೆಚ್ಚಿದ ಆ್ಯಂಕರ್ ಅನುಶ್ರೀ ತಮ್ಮ ಸರಳತೆ ಮತ್ತು ಮುಗ್ಧ ವ್ಯಕ್ತಿತ್ವದಿಂದಲೇ ಕನ್ನಡಿಗರ ಮನಗೆದ್ದವರು. ಎಷ್ಟೇ ಎತ್ತರಕ್ಕೆ ಬೆಳೆದರೂ ಅನುಶ್ರೀ ಡೌನ್ ಟು ಅರ್ಥ್ ಗುಣ ಹೊಂದಿದ್ದಾರೆ ಎಂಬುದಕ್ಕೆ ಇದೀಗ ಮತ್ತೊಂದು ನಿದರ್ಶನ ಸಿಕ್ಕಿದೆ. ಮಕ್ಕಳೊಂದಿಗೆ ವಿಭಿನ್ನವಾಗಿ ಪಾಠ ಮಾಡಿ ಗಮನ ಸೆಳೆದಿರುವ ಖ್ಯಾತ ಶಿಕ್ಷಕಿ ಕಾರ್ಕಳದ ವಂದನಾ ರೈ ಅವರನ್ನು ಮಾರ್ಗಮಧ್ಯೆ ಕಂಡ ಅನುಶ್ರೀ, ತಾವೇ ಖುದ್ದಾಗಿ ಕಾರಿನಿಂದ ಕೆಳಗಿಳಿದು ಬಂದು ಪ್ರೀತಿಯಿಂದ ಮಾತನಾಡಿಸಿ ಅಚ್ಚರಿ ಮೂಡಿಸಿದ್ದಾರೆ.
ಶಿಕ್ಷಕಿ ವಂದನಾ ರೈ ಅವರು ಈ ಸುಂದರ ಕ್ಷಣದ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಕಾರಿಂದ ಇಳಿದು ಬಂದು ನಮ್ಮತ್ರ ಮಾತಾಡಿದ ಅನುಶ್ರೀ" ಎಂದು ಕ್ಯಾಪ್ಷನ್ ಬರೆದು ಸಂಭ್ರಮ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಣುವ ಆ ಮುದ್ದಾದ ಮಾತುಕತೆ ಇಲ್ಲಿದೆ
ಅನುಶ್ರೀ ಅವರ ಧ್ವನಿಯನ್ನು ದೂರದಿಂದಲೇ ಗುರುತಿಸಿ ಅವರಿಗಾಗಿ ಕಾದು ನಿಂತಿದ್ದ ಶಿಕ್ಷಕಿ ವಂದನಾ ರೈ ಅವರನ್ನು ಕಂಡೊಡನೆ ಅನುಶ್ರೀ ಮುಖದಲ್ಲಿ ಮಂದಹಾಸ ಮೂಡಿತು. ಶಿಕ್ಷಕಿಯನ್ನು ಪ್ರೀತಿಯಿಂದ ಮಾತನಾಡಿಸಿದ ಅನುಶ್ರೀ, "ನಿಮ್ಮನ್ನು ನೋಡಿ ನನಗೆ ನಮ್ಮ ಶಾಲೆಯ ಗೀತಾ ಮಿಸ್ ನೆನಪಾದರು. ನಿಮ್ಮನ್ನು ನೋಡಲು ನನಗೆ ತುಂಬಾನೇ ಖುಷಿಯಾಗುತ್ತಿದೆ. ನೀವು ಮಕ್ಕಳಿಗೆ ಕೇವಲ ಪುಸ್ತಕದ ಪಾಠವಷ್ಟೇ ಹೇಳಿಕೊಡದೆ, ಅವರ ಜೊತೆ ಬೆರೆತು ಡ್ಯಾನ್ಸ್, ಹಾಡು ಸೇರಿದಂತೆ ಹಲವು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸುತ್ತೀರಲ್ಲ, ಅದು ನಿಜಕ್ಕೂ ಅದ್ಭುತ" ಎಂದು ಮನಸಾರೆ ಕೊಂಡಾಡಿದರು.
ಇಷ್ಟೇ ಅಲ್ಲದೆ, ತಮ್ಮ ಕುಟುಂಬದ ಪ್ರೀತಿಯನ್ನು ಹಂಚಿಕೊಂಡ ಅನುಶ್ರೀ, "ನಿಮ್ಮ ಶಾಲೆಯ ಮತ್ತು ಮಕ್ಕಳ ಚಟುವಟಿಕೆಗಳ ವಿಡಿಯೋಗಳು ನಮ್ಮ ಅಮ್ಮನಿಗೆ ತುಂಬಾನೇ ಇಷ್ಟ. ಅವರು ನಿಮ್ಮ ವಿಡಿಯೋಗಳನ್ನು ಸದಾ ನೋಡುತ್ತಾರೆ. ನೀವು ಇಲ್ಲಿದ್ದೀರಿ ಎಂದು ಗೊತ್ತಾದ ತಕ್ಷಣವೇ, ಫೋನ್ ಬಂದಾಗ ನಾನು ಕಾರಿನಿಂದ ಕೆಳಗೆ ಇಳಿದು ನಿಮ್ಮನ್ನು ಭೇಟಿಯಾಗಲು ಬಂದೆ" ಎಂದು ಅತ್ಯಂತ ವಿನಮ್ರವಾಗಿ ಹೇಳಿದರು.
ಕೊನೆಯಲ್ಲಿ, "ನಿಮಗೆ ಆಲ್ ದಿ ಬೆಸ್ಟ್, ನಿಮ್ಮ ಕೆಲಸ ಹೀಗೇ ಮುಂದುವರಿಯಲಿ, ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಆತ್ಮೀಯವಾಗಿ ಹಾರೈಸಿ ಅಲ್ಲಿಂದ ತೆರಳಿದರು.
ಅನುಶ್ರೀ ಅವರ ಈ ಸರಳತೆ ಮತ್ತು ಪ್ರೀತಿಯ ನಡೆಗೆ ಇಂಟರ್ನೆಟ್ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ವಂದನಾ ರೈ ಹಂಚಿಕೊಂಡಿರುವ ಈ ವಿಡಿಯೋಗೆ ನೆಟ್ಟಿಗರು ಸಾಲು ಸಾಲಾಗಿ ಹಾರ್ಟ್ ಹಾಗೂ ಫೈರ್ ಇಮೋಜಿಗಳನ್ನು ಹಾಕಿ ಕಮೆಂಟ್ ಮಾಡುತ್ತಿದ್ದಾರೆ. "ದೊಡ್ಡ ಸ್ಟಾರ್ ಆಗಿದ್ದರೂ ಇಷ್ಟೊಂದು ವಿನಯತೆ ಇರುವುದು ನಿಜಕ್ಕೂ ಗ್ರೇಟ್" ಎಂದು ಅಭಿಮಾನಿಗಳು ಅನುಶ್ರೀ ಗುಣವನ್ನು ಹಾಡಿ ಹೊಗಳುತ್ತಿದ್ದಾರೆ.
ವಿಡಿಯೋಗಳು ಇಂಟರ್ನೆಟ್ನಲ್ಲಿ ಸದಾ ವೈರಲ್
ಅಂದಹಾಗೆ, ಶಿಕ್ಷಕಿ ವಂದನಾ ರೈ ಕೇವಲ ಸಾಮಾನ್ಯ ಶಿಕ್ಷಕಿಯಲ್ಲ, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಜಾನಪದ ಹಾಡು, ನೃತ್ಯ ಮತ್ತು ಆಟ-ಪಾಠಗಳ ಮೂಲಕವೇ ಬೋಧನೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ಶಿಕ್ಷಕಿ. ಸರ್ಕಾರಿ ಶಾಲಾ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಅವರ ವಿಡಿಯೋಗಳು ಇಂಟರ್ನೆಟ್ನಲ್ಲಿ ಸದಾ ವೈರಲ್ ಆಗುತ್ತಿರುತ್ತವೆ.
ಅನುಶ್ರೀಗೆ ಕಾಡಿದ ಶಾಲಾ ದಿನಗಳ ನೆನಪು
ವಂದನಾ ರೈ ಅವರನ್ನು ಕಂಡೊಡನೆ ಅನುಶ್ರೀಗೆ ತಮ್ಮ ಬಾಲ್ಯದ ದಿನಗಳು ಹಾಗೂ ತಮಗೆ ಪಾಠ ಕಲಿಸಿದ ‘ಗೀತಾ ಮಿಸ್’ ನೆನಪಾಗಿದ್ದಾರೆ. ತಾವು ಎಷ್ಟೇ ದೊಡ್ಡ ಸ್ಟಾರ್ ಆದರೂ, ಅಂದು ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಮತ್ತು ಶಾಲಾ ದಿನಗಳನ್ನು ಮರೆತಿಲ್ಲ ಎಂಬುದನ್ನು ಅನುಶ್ರೀ ಈ ಮೂಲಕ ಸಾಬೀತುಪಡಿಸಿದ್ದಾರೆ.



