ಭಾರತೀಯ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರನ್ನು ಹಿಂದಿಕ್ಕಿ ಕ್ರಿಕೆಟಿಗ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಹೊಸ ರಿಯಾಲಿಟಿ ಶೋಗಾಗಿ ಅವರು ಪ್ರತಿ ಎಪಿಸೋಡ್‌ಗೆ 10-15 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು(ನ.16): ಭಾರತೀಯ ಕಿರುತೆರೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರು ಎಂದಾಗ ಹಲವು ವರ್ಷಗಳಿಂದ ಬಾಲಿವುಡ್‌ನ ಇಬ್ಬರು ದಿಗ್ಗಜರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಒಬ್ಬರು 'ಬಿಗ್‌ಬಾಸ್‌' ನಿರೂಪಕ ಸಲ್ಮಾನ್‌ ಖಾನ್‌ ಆಗಿದ್ದರೆ, ಮತ್ತೊಬ್ಬರು 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ನಿರೂಪಕ ಅಮಿತಾಭ್‌ ಬಚ್ಚನ್‌. ಈ ಇಬ್ಬರು ಸೂಪರ್‌ಸ್ಟಾರ್‌ಗಳು ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ.

ಆದರೆ, ಇದೀಗ ಕ್ರಿಕೆಟ್‌ ಮೈದಾನದಿಂದ ಬಂದಿರುವ ಹೊಸ ನಿರೂಪಕರೊಬ್ಬರು ಈ ಲೆಕ್ಕಾಚಾರವನ್ನೇ ಬದಲಿಸಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸ್ಟಾರ್‌ ಬ್ಯಾಟರ್‌ ರೋಹಿತ್‌ ಶರ್ಮಾ ಅವರು ಪ್ರತಿ ಎಪಿಸೋಡ್‌ಗೆ ಪಡೆಯುವ ಸಂಭಾವನೆಯ ವಿಚಾರದಲ್ಲಿ ಕಿರುತೆರೆಯ ದುಬಾರಿ ನಿರೂಪಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ ಎಂದು ವರದಿಯಾಗಿದೆ.

1. ರೋಹಿತ್‌ ಶರ್ಮಾ

ಎಪಿಬಿ ವರದಿಯ ಪ್ರಕಾರ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟರ್‌ ರೋಹಿತ್‌ ಶರ್ಮಾ ಅವರು ಭಾರತದ ಕಿರುತೆರೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಾಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್‌ ಮೈದಾನದಲ್ಲಿ ಸಿಕ್ಸರ್‌ಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ, ಇದೀಗ ನಿರೂಪಣಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸೋನಿ ಎಂಟರ್‌ಟೈನ್‌ಮೆಂಟ್‌ ಟೆಲಿವಿಷನ್‌ನ 'ಫ್ಯಾಮಿಲಿ ಫುಲ್‌ ಹೌಸ್‌ ವಿತ್‌ ರೋಹಿತ್‌ ಶರ್ಮಾ' ಕಾರ್ಯಕ್ರಮದ ಮೂಲಕ ಅವರು ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಈ ಕಾರ್ಯಕ್ರಮದ ಪ್ರತಿ ಎಪಿಸೋಡ್‌ಗೆ ರೋಹಿತ್‌ ಶರ್ಮಾ ಅವರು ಬರೋಬ್ಬರಿ ₹10ರಿಂದ ₹15 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ರೋಹಿತ್‌ ಆಗಲಿ ಅಥವಾ ವಾಹಿನಿಯಾಗಲಿ ಈ ಸಂಭಾವನೆ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

2. ಸಲ್ಮಾನ್‌ ಖಾನ್‌

ಭಾರತದ ದುಬಾರಿ ಟಿವಿ ನಿರೂಪಕರಲ್ಲಿ ಸಲ್ಮಾನ್‌ ಖಾನ್‌ ಅವರ ಹೆಸರು ಹಲವು ವರ್ಷಗಳಿಂದ ಮುಂಚೂಣಿಯಲ್ಲಿದೆ. ಸುಮಾರು 15 ವರ್ಷಗಳಿಂದ 'ಬಿಗ್‌ಬಾಸ್‌' ಕಾರ್ಯಕ್ರಮದೊಂದಿಗೆ ಅವರು ಹೊಂದಿರುವ ನಂಟು ಇದಕ್ಕೆ ಪ್ರಮುಖ ಕಾರಣ. ಸಲ್ಮಾನ್‌ ಖಾನ್‌ ಅವರು ಆರಂಭದಲ್ಲಿ ಪ್ರತಿ ಎಪಿಸೋಡ್‌ಗೆ ₹2.5 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ, ಹಿಂದಿನ ಕೆಲವು ಸೀಸನ್‌ಗಳಲ್ಲಿ ಅವರ ಸಂಭಾವನೆ ವಾರಕ್ಕೆ ಸುಮಾರು ₹15 ಕೋಟಿ ತಲುಪಿತ್ತು. ಇದರಿಂದಾಗಿ ಒಂದು ದೀರ್ಘಾವಧಿಯ ಸೀಸನ್‌ಗೆ ಅವರ ಒಟ್ಟು ಗಳಿಕೆ ಸುಮಾರು ₹250 ಕೋಟಿ ಆಗಿತ್ತು ಎಂದು ಅಂದಾಜಿಸಲಾಗಿದೆ.

3. ಅಮಿತಾಭ್‌ ಬಚ್ಚನ್‌

ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೂಡ ಕಿರುತೆರೆಯ ಅತ್ಯಂತ ದುಬಾರಿ ನಿರೂಪಕರಲ್ಲಿ ಒಬ್ಬರು. 2000ರಲ್ಲಿ ಆರಂಭವಾದ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಮೊದಲ ಸೀಸನ್‌ನಿಂದಲೂ ಅವರು ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಮಧ್ಯದಲ್ಲಿ ಒಂದು ಸೀಸನ್‌ ಅನ್ನು ಶಾರುಖ್‌ ಖಾನ್‌ ನಿರೂಪಿಸಿದ್ದರು. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ, ಅಮಿತಾಭ್‌ ಬಚ್ಚನ್‌ ಅವರ ಒಂದು ಸೀಸನ್‌ನ ಸಂಭಾವನೆ ₹100 ಕೋಟಿಯನ್ನೂ ಮೀರಬಹುದು. ಅವರ ವಾರದ ಸಂಭಾವನೆ ಸುಮಾರು ₹15ರಿಂದ ₹20 ಕೋಟಿ ಎಂದು ಅಂದಾಜಿಸಲಾಗಿದ್ದು, ಪ್ರತಿ ಎಪಿಸೋಡ್‌ಗೆ ₹2.5ರಿಂದ ₹3 ಕೋಟಿ ಪಡೆಯುತ್ತಾರೆ ಎನ್ನಲಾಗಿದೆ.

4. ಅಜಯ್‌ ದೇವಗನ್‌

ಟಿವಿ ನಿರೂಪಣಾ ಕ್ಷೇತ್ರಕ್ಕೆ ಇತ್ತೀಚಿನ ವರ್ಷಗಳಲ್ಲಿ ಪ್ರವೇಶಿಸಿರುವ ಪ್ರಮುಖ ನಟರಲ್ಲಿ ಅಜಯ್‌ ದೇವಗನ್‌ ಕೂಡ ಒಬ್ಬರು. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ, 'ಕ್ರೈಂ ಪೆಟ್ರೋಲ್‌ 2026: ಕ್ರೈಂ ಕಾ ಕರೆಂಟ್‌ ಸೀಸನ್‌' ಕಾರ್ಯಕ್ರಮದ 15 ಎಪಿಸೋಡ್‌ಗಳಿಗೆ ಅವರು ಸುಮಾರು ₹90 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಂದರೆ, ಪ್ರತಿ ಎಪಿಸೋಡ್‌ಗೆ ಅಂದಾಜು ₹6 ಕೋಟಿ ಆಗುತ್ತದೆ.

2003ರಲ್ಲಿ ಆರಂಭವಾದ 'ಕ್ರೈಂ ಪೆಟ್ರೋಲ್‌' ಕಾರ್ಯಕ್ರಮವು ಹಲವು ಆವೃತ್ತಿಗಳ ಮೂಲಕ ಬೆಳೆದು ಬಂದಿದೆ. 'ಕ್ರೈಂ ಪೆಟ್ರೋಲ್‌ ಸತರ್ಕ್‌', 'ಕ್ರೈಂ ಪೆಟ್ರೋಲ್‌ ದಸ್ತಕ್‌', 'ಕ್ರೈಂ ಪೆಟ್ರೋಲ್‌ ಡಯಲ್‌ 100' ಮತ್ತು 'ಕ್ರೈಂ ಪೆಟ್ರೋಲ್‌ 2.0' ಸೇರಿದಂತೆ ವಿವಿಧ ಆವೃತ್ತಿಗಳು ಪ್ರಸಾರವಾಗಿವೆ. ಈ ಕಾರ್ಯಕ್ರಮದ ಹಲವು ಸೀಸನ್‌ಗಳನ್ನು ನಿರೂಪಿಸುವ ಮೂಲಕ ನಟ ಅನುಪ್‌ ಸೋನಿ ಪ್ರೇಕ್ಷಕರಿಗೆ ಹೆಚ್ಚು ಪರಿಚಿತರಾಗಿದ್ದರು. ಕಾಲಕ್ರಮೇಣ ಸಾಕ್ಷಿ ತನ್ವರ್‌, ಸೋನಾಲಿ ಕುಲಕರ್ಣಿ, ದಿವ್ಯಾಂಕಾ ತ್ರಿಪಾಠಿ, ಆಶುತೋಷ್‌ ರಾಣಾ, ರೇಣುಕಾ ಶಹಾನೆ ಮತ್ತು ನಕುಲ್‌ ಮೆಹ್ತಾ ಸೇರಿದಂತೆ ಹಲವು ಕಲಾವಿದರು ಕೂಡ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.

5. ಕರಣ್‌ ಜೋಹರ್‌

ಕರಣ್‌ ಜೋಹರ್‌ ನಿರೂಪಣೆ ಮಾಡುತ್ತಿರುವ 'ಕಾಫಿ ವಿತ್‌ ಕರಣ್‌' ಕಾರ್ಯಕ್ರಮವು ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಚರ್ಚಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳ ಮುಕ್ತ ಮಾತುಕತೆ, ಕ್ಷಿಪ್ರ ಪ್ರಶ್ನೋತ್ತರ ಸುತ್ತು ಹಾಗೂ ಬಾಲಿವುಡ್‌ ಗಾಸಿಪ್‌ಗಳ ಮೂಲಕ ಈ ಕಾರ್ಯಕ್ರಮ ತನ್ನದೇ ಆದ ಗುರುತನ್ನು ಪಡೆದುಕೊಂಡಿದೆ. ಚಿತ್ರ ನಿರ್ದೇಶಕ ಹಾಗೂ ನಿರೂಪಕರಾಗಿರುವ ಕರಣ್‌ ಜೋಹರ್‌, ನಟರಲ್ಲದ ಟಿವಿ ನಿರೂಪಕರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಒಬ್ಬರು ಎನ್ನಲಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಅಂದಾಜಿನ ಪ್ರಕಾರ, ಕಾರ್ಯಕ್ರಮದ ಇತ್ತೀಚಿನ ಸೀಸನ್‌ಗಾಗಿ ಅವರು ₹25 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ.

6. ರೋಹಿತ್‌ ಶೆಟ್ಟಿ

ನಿರ್ದೇಶಕ ರೋಹಿತ್‌ ಶೆಟ್ಟಿ ಅವರು 'ಖತ್ರೋನ್‌ ಕೆ ಖಿಲಾಡಿ' ಕಾರ್ಯಕ್ರಮದೊಂದಿಗೆ ನಿಕಟ ನಂಟು ಹೊಂದಿದ್ದಾರೆ. ಹಲವು ಸೀಸನ್‌ಗಳಿಂದ ಈ ಸಾಹಸಮಯ ರಿಯಾಲಿಟಿ ಶೋ ಅನ್ನು ಅವರು ನಿರೂಪಿಸುತ್ತಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಅಂದಾಜಿನ ಪ್ರಕಾರ, ಈ ಕಾರ್ಯಕ್ರಮದ ನಿರೂಪಣೆಗಾಗಿ ರೋಹಿತ್‌ ಶೆಟ್ಟಿ ಸುಮಾರು ₹12ರಿಂದ ₹14 ಕೋಟಿ ಸಂಭಾವನೆ ಪಡೆಯುತ್ತಾರೆ. ಕಾರ್ಯಕ್ರಮದೊಂದಿಗೆ ಅವರ ದೀರ್ಘಕಾಲದ ನಂಟು ಹಾಗೂ ಆ್ಯಕ್ಷನ್‌ ನಿರ್ದೇಶಕರಾಗಿ ಅವರು ಹೊಂದಿರುವ ವ್ಯಕ್ತಿತ್ವ ಕಿರುತೆರೆಯಲ್ಲೂ ಅವರಿಗೆ ನೆರವಾಗಿದೆ. ಈ ವರ್ಷ 'ಖತ್ರೋನ್‌ ಕೆ ಖಿಲಾಡಿ'ಯ 15ನೇ ಸೀಸನ್‌ ಅನ್ನು ರೋಹಿತ್‌ ಶೆಟ್ಟಿ ನಿರೂಪಿಸಿದ್ದರು. ಈ ಕಾರ್ಯಕ್ರಮವು ಜುಲೈ ಆರಂಭದಲ್ಲಿ ಕಲರ್ಸ್‌ ಟಿವಿಯಲ್ಲಿ ಪ್ರಸಾರ ಆರಂಭಿಸಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲೂ ಸ್ಟ್ರೀಮಿಂಗ್‌ ಆಗುತ್ತಿದೆ.