ಜೂನ್ 16ರಿಂದ ತೆರೆ ಕಾಣಬೇಕಿದ್ದ ಕರ್ಣ ಸೀರಿಯಲ್ ಮುಂದೂಡಿಕೆಯಾಗಿದ್ದು, ಇದಕ್ಕೆ ಕಾರಣವೇನು? ಎದುರಾದ ಕೋರ್ಟ್ ಸಂಕಷ್ಟವೇನು? ನಟರಾದ ಕಿರಣ್ ರಾಜ್, ನಮ್ರತಾ ಗೌಡ ಹೇಳಿದ್ದೇನು?
ಜೀ ಕನ್ನಡದಲ್ಲಿ ಕರ್ಣ ಸೀರಿಯಲ್ ಪ್ರೊಮೋ ಸಾಕಷ್ಟು ಹವಾ ಸೃಷ್ಟಿಸಿತ್ತು. ನಿನ್ನೆಯಿಂದ ಅಂದರೆ ಜೂನ್ 16ರಿಂದ ಇದು ಆರಂಭವಾಗಬೇಕಿತ್ತು. ಇದಕ್ಕಾಗಿಯೇ ಹಾಲಿ ಇರುವ ಕೆಲವು ಸೀರಿಯಲ್ಗಳ ಸಮಯವನ್ನೂ ಬದಲು ಮಾಡಲಾಗಿತ್ತು. ವಿಭಿನ್ನ ಕಥೆಯನ್ನು ಹೊತ್ತ ಕರ್ಣ ಸೀರಿಯಲ್ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಏಕಾಏಕಿ, ಸೀರಿಯಲ್ ಮುಂದೂಡುವುದಾಗಿ ವಾಹಿನಿ ಹೇಳಿಕೊಂಡು ವೀಕ್ಷಕರಿಗೆ ಶಾಕ್ ಕೊಟ್ಟಿತ್ತು. ಇದಕ್ಕೆ ಸೀರಿಯಲ್ನಲ್ಲಿ ನಟಿಸ್ತಿರೋ ಕಿರಣ್ ರಾಜ್ ಮತ್ತು ನಮ್ರತಾ ವೀಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ. ಇದರ ಜೊತೆಗೆ ಸೀರಿಯಲ್ ಸ್ಥಗಿತಕ್ಕೆ ಕಾರಣ ಕೂಡ ಬಯಲಾಗಿದೆ. ಧಾರಾವಾಹಿಗೆ ಕಾನೂನು ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈ ಸೀರಿಯಲ್ನಲ್ಲಿ ನಟಿಸ್ತಿರೋ ಭವ್ಯಾ ಗೌಡ ಅವರು ಇನ್ನೊಂದು ಚಾನೆಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರಕಾರ ಅವರು ಕೆಲ ತಿಂಗಳ ಮಟ್ಟಿಗೆ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತೆ ಇರಲಿಲ್ಲ. ಆದರೆ, ಅದನ್ನು ಭವ್ಯಾ ಅವರು ಮೀರಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಆ ಚಾನೆಲ್ ಕೋರ್ಟ್ಗೆ ದೂರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಸೀರಿಯಲ್ಗೆ ತಡೆ ಬಂದಿದೆ. ಈ ಬಗ್ಗೆ ನೇರವಾಗಿ ಹೇಳದೇ ಇದ್ದರೂ ಕರ್ಣ ಉರ್ಫ್ ಕಿರಣ್ ರಾಜ್ ಅವರು ಸೀರಿಯಲ್ ಪ್ರಸಾರ ಆಗದೇ ಇರುವುದಕ್ಕೆ ಕ್ಷಮೆ ಕೋರಿದ್ದಾರೆ. 'ಎಲ್ಲರಿಗೂ ನಮಸ್ಕಾರ, ನಾನು ಕರ್ಣನಾಗಿ ನಿಮ್ಮೆಲ್ಲರ ಮನೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೆ ಮೊದಲಿಗೆ ನಾನು ಎಲ್ಲ ಪ್ರೇಕ್ಷಕರ ಕ್ಷಮೆ ಕೇಳುತ್ತೇನೆ. ನೀವು ಕೊಟ್ಟ ಸ್ಪಂದನೆ, ಪ್ರೀತಿಗೆ ನಾವು ಕೂಡ ಈ ಸೀರಿಯಲ್ ಅನ್ನ ನಿಮ್ಮ ಮುಂದೆ ಇಡಬೇಕು ಎಂದು ಉತ್ಸಾಹದಿಂದ ಕಾದಿದ್ವಿ. ಪ್ರತಿ ದಿನವೂ ನಮ್ಮ ಸೀರಿಯಲ್ ಯಾವಾಗ ಲಾಂಚ್ ಆಗುತ್ತೆ? ಯಾವಾಗ ಎಂಟು ಗಂಟೆಯಾಗುತ್ತೆ. ಯಾವಾಗ ನೀವು ಮೊದಲ ಎಪಿಸೋಡ್ ನೋಡ್ತೀರಿ? ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಎನ್ನುವ ಕುತೂಹಲ ನಮ್ಮಲ್ಲೂ ಇತ್ತು' ಎಂದು ಅವರು ಹೇಳಿದ್ದಾರೆ.
ನಾನು ಕೂಡ ಈ ದಿನಕ್ಕೆ ಕಾಯುತ್ತಿದ್ದೆ. ಸುಮಾರು ಎರಡು ವರ್ಷಗಳ ನಂತರ ನಿಮ್ಮ ಮುಂದೆ, ನಿಮ್ಮ ಮನೆಗೆ ಕರ್ಣನಾಗಿ ಬರಬೇಕು ಅಂದುಕೊಂಡಿದ್ದೆ. ಆದರೆ ನನಗೆ ತಿಳಿದಿರುವ ಮಾಹಿತಿ ಪ್ರಕಾರ ಏನೋ ಲೀಗಲ್ ಸಮಸ್ಯೆ ಆಗಿದೆ. ಇದನ್ನು ಪರಿಹರಿಸಿಕೊಂಡು ಆದಷ್ಟು ಬೇಗನೆ ನಿಮ್ಮ ಮುಂದೆ ಬರ್ತೀವಿ, ಸ್ವಲ್ಪ ತಡ ಆಗಬಹುದು, ಆದರೆ ಬಂದೇ ಬರ್ತೀವಿ. ನಮಗೆ ಇನ್ನು ಸ್ವಲ್ಪ ಸಮಯ ಕೊಡಿ. ಇದು ಈ ಸಮಯದಲ್ಲಿ ಆಗಬಾರದಿತ್ತು. ಆದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲ. ನಿರ್ಮಾಪಕರು ಕೋಟಿ ಕೋಟಿ ಖರ್ಚು ಮಾಡಿ ಒಂದು ಒಳ್ಳೆಯ ಪ್ರಾಜೆಕ್ಟ್ ಅನ್ನ ನಿಮ್ಮ ಮುಂದೆ ಇಡಬೇಕು ಎನ್ನುವ ದೃಢಸಂಕಲ್ಪಕ್ಕೆ, ಹಲವು ಕಲಾವಿದರ ಪರಿಶ್ರಮಕ್ಕೆ ಹಾಗೂ ಕರ್ಣನಿಗೆ ನ್ಯಾಯ ಸಿಕ್ಕೇ ಸಿಗುತ್ತೆ. ಈ ಸಮಯದಲ್ಲಿ ನಿಮ್ಮ ಬೆಂಬಲ ನಮಗೆ ಬೇಕಿದೆ ಎಂದು ಕಿರಣ್ ರಾಜ್ ಕೋರಿಕೊಂಡಿದ್ದಾರೆ.
ಅದೇ ಇನ್ನೊಂದೆಡೆ, ಇನ್ಸ್ಟಾಗ್ರಾಮ್ನಲ್ಲಿ ನಮ್ರತಾ ಗೌಡ ಅವರು, ನೀವೆಲ್ಲಾ ಕೇಳುತ್ತಿರೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ತುಂಬಾ ಜನ ಮೆಸೇಜ್ ಮಾಡಿದ್ರಿ. 16ನೇ ತಾರೀಖು ಪ್ರಸಾರ ಆಗಬೇಕಿದ್ದ ಕರ್ಣ ಧಾರಾವಾಹಿ ಏಕೆ ಪ್ರಸಾರ ಆಗಲಿಲ್ಲ ಅಂತ ಕೇಳಿದ್ರಿ. ಆದ್ರೆ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಕಾರಣಾಂತರಗಳಿಂದ ನಾವು ಬರೋದಕ್ಕೆ ಆಗಿಲ್ಲ. ಆದ್ರೆ ಪ್ರಾಮಿಸ್ ಮತ್ತೆ 8 ಗಂಟೆಗೆ ನಾವು ಆದಷ್ಟು ಬೇಗನೇ ಬರುತ್ತೇವೆ ಅಂತ ಹೇಳಿದ್ದಾರೆ.
