ಪುಟ್ಟಕ್ಕನ ಮಕ್ಕಳು ಉಮಾಶ್ರೀ ಆಸ್ಪತ್ರೆ ವಿಡಿಯೋ ವೈರಲ್: ನಟಿಗೆ ಏನಾಯ್ತು?

Synopsis
ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಅರ್ಥಾತ್ ನಟಿ ಉಮಾಶ್ರೀ ಆಸ್ಪತ್ರೆಗೆ ದಾಖಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಏನಿದರ ಅಸಲಿಯತ್ತು? ಅಲ್ಲಿ ಆಗಿದ್ದೇನು?
ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ ನಟಿ ಉಮಾಶ್ರೀ. ಈಗ 67ರ ಹರೆಯದಲ್ಲಿಯೂ ಅವರ ಮಾಗಿದ ನಟನೆಗೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿನ ಅವರ ನಟನೆಗೆ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ ಪ್ರತಿಭಾನ್ವಿತ ಅಭಿನೇತ್ರಿ ಇವರು. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಣ್ಣುಗಳಲ್ಲಿಯೇ ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.
ಇದೀಗ ನಟಿ ಉಮಾಶ್ರೀಯವರು ಆಸ್ಪತ್ರೆಯಲ್ಲಿ ಇರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನು ಹಾಗೆಯೇ ನೋಡಿದರೆ, ನಿಜಕ್ಕೂ ನಟಿಗೇ ಏನೋ ಆಗಿರಬೇಕು ಎನ್ನಿಸುವಂತಿದೆ. ಆದರೆ, ಇದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೇಕಿಂಗ್ ವಿಡಿಯೋ. ಪುಟ್ಟಕ್ಕ ಆಸ್ಪತ್ರೆಗೆ ಸೀರಿಯಲ್‌ನಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ತೆಗೆದಿರುವ ವಿಡಿಯೋ. ಆಸ್ಪತ್ರೆಯ ಶೂಟಿಂಗ್ ಮಾಡುವಾಗ ತಂತ್ರಜ್ಞರು, ಕ್ಯಾಮೆರಾಮನ್ಗಳು ಎಷ್ಟೊಂದು ಕಷ್ಟಪಡುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಹಾಸಿಗೆಯನ್ನೇ ಹತ್ತಿ ವಿಡಿಯೋ ಮಾಡುವ ಕಷ್ಟವನ್ನೂ ಇದರಲ್ಲಿ ಕಾಣಬಹುದು. ಅದೇ ಇನ್ನೊಂದೆಡೆ, ಉಮಾಶ್ರೀಯವರು ಇಲ್ಲಿಯೂ ನಿಜವಾಗಿ ಆಸ್ಪತ್ರೆ ಸೇರಿದವಂತೆ ಆ್ಯಕ್ಟ್ ಮಾಡಿ ಮತ್ತೊಮ್ಮೆ ಜನಮನ ಗೆದ್ದಿದ್ದಾರೆ.
ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...
ಇನ್ನು ನಟಿ ಕುರಿತು ಹೇಳುವುದಾದರೆ,, ಇವರು, 325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದ ಶಾಸನ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗ ಇಲಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು. ವೈಯಕ್ತಿಕ ಜೀವನದಲ್ಲಿ ಬರೀ ನೋವುಂಡ ನಟಿ ಈಕೆ. ಇದರ ಬಗ್ಗೆಯೂ ಈ ಹಿಂದೆ ಮಾತನಾಡಿದ್ದರು ಉಮಾಶ್ರೀ.
ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ ಕುರಿತು ಹೇಳುವುದಾದರೆ, ತನ್ನ ಪತ್ನಿ ಸ್ನೇಹಾಳ ಹೃದಯವನ್ನು ತಮ್ಮ ಮನೆಯಲ್ಲಿಯೇ ಇರುವ ಸ್ನೇಹಾಳಿಗೆ ಹಾಕಲಾಗಿದೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆಯೇ ಕಂಠಿಗೆ ಸ್ನೇಹಾಳ ಮೇಲೆ ಲವ್ ಶುರುವಾಗಿದೆ. ಮೊದಲಿಗೆ ಈ ಹೊಸ ಸ್ನೇಹಾ ಎಂದರೆ ಗುರ್ ಎನ್ನುತ್ತಿದ್ದ ಕಂಠಿ ಈಗ ಅವಳನ್ನು ಹೇಗಾದರೂ ಒಲಿಸಿಕೊಳ್ಳುವ ಪ್ಲ್ಯಾನ್ ಮಾಡುತ್ತಿದ್ದಾನೆ. ತನ್ನ ಪ್ರೇಮದ ಕಥೆಯನ್ನು ಪುಟ್ಟಕ್ಕನ ಬಳಿಯೂ ಹೇಳಿಕೊಂಡಿದ್ದಾನೆ ಕಂಠಿ. ಆದರೆ ಈಮೊದಲು ತನ್ನನ್ನು ಕಂಡ್ರೆ ಕಂಠಿಗೆ ಆಗಿಬರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಾ ಇಲ್ಲಿಯವರೆಗೆ ಕಂಠಿಯ ಹತ್ತಿರ ಹೋಗುತ್ತಿರಲಿಲ್ಲ. ಈಗ ಹೇಗಾದರೂ ಮಾಡಿ ಇವರಿಬ್ಬರನ್ನು ಒಂದು ಮಾಡಲು ಪುಟ್ಟಕ್ಕ ಕಂಠಿಗೆ ಪ್ಲ್ಯಾನ್ ಹೇಳಿಕೊಟ್ಟಿದ್ದಾಳೆ. ಕಂಠಿಗೆ ಪುಟ್ಟಕ್ಕನೇ ಲವ್ಗುರು.
ಕಂಠಿ ಜೊತೆ ಲವ್ ಆಗ್ತಿದ್ದಂಗೇ 'ತನು ಕುಣಿದು ಕುಣಿದು ತನನ' ಎಂದು ಸ್ಟೆಪ್ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ!