ನ್ಯಾಷನಲ್ ಕ್ರಷ್ ಎಂದೇ ಬಿಂಬಿತ ಆಗಿರೋ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಭವಿಷ್ಯವನ್ನು ಅಂದೇ ನುಡಿದಿದ್ದರು ನಟ ಪುನೀತ್ ರಾಜ್. ಆ ವಿಡಿಯೋ ಮತ್ತೆ ವೈರಲ್ ಆಗಿದೆ. ಅವರು ಹೇಳಿದ್ದೇನು?
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ತಮ್ಮ ಮಾತುಗಳಿಂದ ಸದ್ದು ಮಾಡುತ್ತಲೇ ಇರುವವರು. ಅದೇ ರೀತಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುವುದರಲ್ಲಿಯೂ ಅವರದ್ದು ಎತ್ತಿದ ಕೈ. ಕಾಂಟ್ರವರ್ಸಿ ಲೇಡಿ ಎಂದೇ ಫೇಮಸ್ ಆಗಿರೊ ಕಿರಿಕ್ ರಶ್ಮಿಕಾ ಹೊಸ ರೂಪದಲ್ಲಿ ಈಗ ತೆರೆಯ ಮೇಲೆ ಬರಲಿದ್ದಾರೆ. ಅದರ ಪೋಸ್ಟರ್ ಅನ್ನು ಈಚೆಗಷ್ಟೇ ಅವರು ಶೇರ್ ಮಾಡಿದ್ದಾರೆ. ನಟಿ ರಕ್ತಸಿಕ್ತ ಅವತಾರದಲ್ಲಿ ಭಯಾನಕ ರೂಪದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಂದಹಾಗೆ ಇದು ರಶ್ಮಿಕಾ ಅವರ ಹೊಸ ಚಿತ್ರದ ದೃಶ್ಯ. ಚಿತ್ರದ ಹೆಸರು ‘ಮೈಸಾ’ (Mysaa). ಇದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಮಹಿಳಾ ಪ್ರಧಾನ ಚಿತ್ರವಾಗಿರುವ ಮೈಸಾದಲ್ಲಿ ರಶ್ಮಿಕಾ ತಮ್ಮ ಹಿಂದಿನ ಎಲ್ಲಾ ಗೆಟಪ್ಗಳನ್ನು ಮೀರಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ನಟ ಪುನೀತ್ ರಾಜ್ಕುಮಾರ್ ಅವರು ಹಿಂದೊಮ್ಮೆ ನಟಿಯ ಕುರಿತು ಆಡಿರುವ ಮಾತುಗಳ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ನಟಿಯ ಭವಿಷ್ಯವನ್ನು ಅವರು ಅಂದೇ ನುಡಿದಿದ್ದರು ಎನ್ನುವುದು ಈ ವಿಡಿಯೋದಿಂದ ತಿಳಿದುಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಅವರು, ರಶ್ಮಿಕಾ ಮಂದಣ್ಣ ಅವರನ್ನು ರಶ್ಮಿಕಾ ಶೆಟ್ಟಿ ಎನ್ನುವ ಮೂಲಕ ತಮಾಷೆ ಮಾಡಿದ್ದರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಎಂಟ್ರಿಕೊಟ್ಟಿದ್ದ ರಶ್ಮಿಕಾ ತಮ್ಮ ಮೊದಲ ಚಿತ್ರದಲ್ಲಿಯೇ ಅದರ ನಾಯಕ ರಕ್ಷಿತ್ ಶೆಟ್ಟಿ ಜೊತೆ ಲವ್ನಲ್ಲಿ ಬಿದ್ದಿದ್ದರು. ಇವರ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ.ಮದುವೆ ಮುರಿದು ಬಿತ್ತು. ಇದರ ನಡುವೆಯೇ ಅಂದರೆ ಲವ್ ಮಾಡುತ್ತಿರುವ ವಿಷಯ ತಿಳಿದಿದ್ದರಿಂದ ಪುನೀತ್ ಅವರು ರಶ್ಮಿಕಾ ಶೆಟ್ಟಿ ಎಂದಾಗ ನಟಿ ನಾಚಿ ನೀರಾಗಿದ್ದರು. ಇಂಡಸ್ಟ್ರಿಯವರಿಗೆ ತಿಳಿದಿರುವಂತೆ ರಶ್ಮಿಕಾ ವೈಯಕ್ತಿಯವಾಗಿ ಎಷ್ಟೇ ಕಾಂಟ್ರವರ್ಸಿ ಮಾಡಿಕೊಂಡರೂ, ಅವರು ಹಾರ್ಡ್ ವರ್ಕರ್ ಎಂದು ಎಲ್ಲರೂ ಹೇಳುತ್ತಾರೆ. ಚಿತ್ರದ ವಿಷಯಕ್ಕೆ ಬಂದರೆ ಹಗಲೂ ರಾತ್ರಿ ಕಷ್ಟಪಡುತ್ತಾರೆ ಎಂದೇ ಅವರ ಸಹ ಕಲಾವಿದರು ಹೇಳುವುದು ಉಂಟು.
ಇದನ್ನು ಗಮನಿಸಿದ್ದ ಪುನೀತ್ ಅವರು, 'ರಶ್ಮಿ ಕಾ ನಮ್ಮ ಸೆಟ್‌ನಲ್ಲಿ ತುಂಬ ಪುಟ್ಟ ಹುಡುಗಿ, ನಮಗೆಲ್ಲರಿಗೂ ಚಿಕ್ಕ ಮಗು ರಿತಿ ಅವಳು. ವಯಸ್ಸಿನಲ್ಲಿ ತುಂಬಾ ಚಿಕ್ಕವಳು. ಆಕೆ ತುಂಬ ಒಳ್ಳೆ ಹುಡುಗಿ. ಹಾರ್ಡ್ ವರ್ಕರ್, ಸಾಕಷ್ಟು ಚೆನ್ನಾಗಿ ಸಿನಿಮಾ ಮಾಡಬೇಕು. ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡಬೇಕು. ದುಡ್ಡಿಗಿಂತ ಒಳ್ಳೆಯ ಹೆಸರು ಸಂಪಾದಿಸಬೇಕು ಎಂದಿದ್ದರು. ಮನಸ್ಸಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ಬಂದಂಥ ಹುಡುಗಿ ಅವಳು. ಒಳ್ಳೆಯದಾಗಲಿ ಅವಳ ಜೊತೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ' ಎಂದಿದ್ದರು ಪುನೀತ್. ಅಲ್ಲಿಂದಲೇ ರಶ್ಮಿಕಾ ಬಾಳಲ್ಲಿ ಒಂದರ ಮೇಲೊಂದರಂತೆ ಚಾನ್ಸ್ ಸಿಗುತ್ತಾ ಹೋಯಿತು.
ಸ್ಯಾಂಡಲ್ವುಡ್ ಬಳಿಕ ತೆಲುಗಿನ 'ಚಲೋ' ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಟಾಲಿವುಡ್ನಲ್ಲಿ ಸಕತ್ ಫೇಮಸ್ ಆದರು. ನಂತರ ವಿಜಯ್ ದೇವರಕೊಂಡ ಜತೆಗಿನ ಸಿನಿಮಾಗಳು ಹಿಟ್ ಮೇಲೆ ಹಿಟ್ ಆದವು. ಬಾಲಿವುಡ್ಗೂ ಪ್ರವೇಶಿಸಿ ನ್ಯಾಷನಲ್ ಕ್ರಷ್ ಆಗಿಹೋದರು. 'ಅನಿಮಲ್' ಸಿನಿಮಾ ಮೂಲಕ ಸಾಕಷ್ಟು ಖ್ಯಾತ ಪಡೆದರು. ಈಗಲೂ ರಶ್ಮಿಕಾಗೆ ಸಾಲು ಸಾಲು ಸಿನಿಮಾ ಆಫರ್ಗಳಿವೆ. ಇವುಗಳ ಮಧ್ಯೆಯೇ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪಾ' ಸರಣಿಯಲ್ಲಿ ರಶ್ಮಿಕಾ ಯಾವ ಮಟ್ಟಿಗೆ ಸೂಪರ್ ಹಿಟ್ ಆದರು ಎನ್ನುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಆದರೆ, ಕೊಡಗಿನ ಬೆಡಗಿ ರಶ್ಮಿಕಾ ತಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಹಿಂದೇಟು ಹಾಕಿ ಹಲವು ಬಾರಿ ಸಾಕಷ್ಟು ವಿವಾದ ಸೃಷ್ಟಿಸಿಕೊಂಡಿರುವುದೂ ಇದೆ.



