ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್
ಪುನೀತ್ ರಾಜ್‌ಕುಮಾರ್ ಅವರ ಬಣ್ಣ ಕಪ್ಪು ಎಂದು ಹೇಳಿದ್ದಾಗ, ಡಾ.ರಾಜ್‌ಕುಮಾರ್ ಹೇಳಿದ್ದೇನು? ಹಳೆಯ ವಿಡಿಯೋ ವೈರಲ್ ಆಗಿದೆ.
ಪುನೀತ್ ರಾಜ್‌ಕುಮಾರ್ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ನಡುವೆಯೇ ಪುನೀತ್ ರಾಜ್ ಅವರಿಗೆ ಸೇರಿರುವ ವಿಡಿಯೋಗಳನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಪುನೀತ್ ಅವರ ಬಣ್ಣದ ಕುರಿತು ಅವರ ಅಮ್ಮ ಪಾರ್ವತಮ್ಮಾ ರಾಜ್‌ಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹೇಳಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅಪ್ಪು ಬಣ್ಣ ಕಪ್ಪು ಎಂದು ಪದೇಪದೇ ಕೆಲವರು ಹೇಳುತ್ತಿದ್ದ ಬಗ್ಗೆ ಪಾರ್ವತಮ್ಮ ಅವರು ತಿಳಿಸಿದ್ದಾರೆ. ಪುನೀತ್ ಬಣ್ಣದ ಬಗ್ಗೆ ಕೆಲವರು ಹೇಳುತ್ತಲೇ ಇದ್ದರು. ಆಗ ಕೆಲವೊಮ್ಮೆ ಅಪ್ಪು ಕೂಡ ಬೇಸರ ಮಾಡಿಕೊಂಡದ್ದು ಇದೆ. ಅದಕ್ಕೆ ನಾನು ಯಾವಾಗಲೂ ಹೇಳುತ್ತಿದ್ದೆ. ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅಪ್ಪುನೂ ಕಪ್ಪು ಎಂದು ಸಮಾಧಾನ ಮಾಡುತ್ತಿದ್ದೆ. ಅಪ್ಪು ದೇವರ ಸಮಾನ. ಅದಕ್ಕೇ ಆತನಿಗೆ ದೇವರ ಬಣ್ಣ ಬಂದಿದೆ ಎಂದು ಹೇಳುತ್ತಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದರು.
ನೋಡಲು ಥೇಟ್ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್ ಟು ಸೇಮ್... ಅವನ ಮಾತು ಕೇಳಿ...
ಇದೇ ವೇಳೆ ಡಾ.ರಾಜ್‌ಕುಮಾರ್ ಅವರು, ಅಪ್ಪುವಿನ ಬಣ್ಣದ ಬಗ್ಗೆ ಮಾತನಾಡುವವರಿಗೆ ತಮಾಷೆಯಾಗಿಯೇ ತಿರುಗೇಟು ಕೊಡುತ್ತಿದ್ದ ಬಗೆಯನ್ನೂ ಈ ವಿಡಿಯೋದಲ್ಲಿ ಪಾರ್ವತಮ್ಮ ಹೇಳಿದ್ದನ್ನು ನೋಡಬಹುದು. ‘ಕಪ್ಪು ಕಸ್ತೂರಿ ಕಣ್ರೋ, ಕೆಂಪು ಕಿಸ್ಬಾಯಿ. ನನಗಂತೂ ನನ್ನ ಮಗನ ಬಣ್ಣ ತುಂಬಾ ಇಷ್ಟ ಆಯ್ತು’ ಎಂದು ಅವರಪ್ಪ ಹೇಳುತ್ತಿದ್ದರು ಎಂದು ಪಾರ್ವತಮ್ಮ ನೆನಪಿಸಿಕೊಂಡಿದ್ದಾರೆ. ಅಂದಹಾಗೆ, ಅಪ್ಪು ಅಂತ ಮೊದಲು ಹೆಸರಿಟ್ಟಿದ್ದು ಡಾ.ರಾಜ್ ಕುಮಾರ್ ಅವರ ತಾಯಿ. ಆರಂಭದಲ್ಲಿ ಲೋಹಿತ್ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಲೋಹಿತ್ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ, ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೂ ಪುನೀತ್ ಅವರು ಅಲ್ಪಾಯುವಿನಲ್ಲಿಯೇ ತೀರಿಕೊಂಡದ್ದು ಮಾತ್ರ ಬಹುದೊಡ್ಡ ದುರಂತ.
ಇನ್ನು ಪುನೀತ್ ಅವರ ಬಾಲ್ಯದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯವೇ. ಪುನೀತ್ ಆರು ತಿಂಗಳು ಮಗುವಿದ್ದಾಗ 1976ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಕಾಣಿಸಿಕೊಂಡರು. ಇದಾದ ಬಳಿಕ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ', ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ',ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು' ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಕಾಣಿಸಿಕೊಂಡರು. ಇವರು ನಟಿಸಿದ್ದ `ಚಲಿಸುವ ಮೋಡಗಳು' ಮತ್ತು `ಎರಡು ನಕ್ಷತ್ರಗಳು' ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದ್ದವು.