Asianet Suvarna News Asianet Suvarna News

ಪತ್ನಿ ಬಳಿ ಸಾಲ ಪಡೆದಿದ್ದ ಕಿಚ್ಚ ಸುದೀಪ್!

ಸುದೀಪ್ ಅವರೊಂದಿಗೆ ಒಂದು ಸುದೀರ್ಘ ಮಾತುಕತೆ. ಗೊತ್ತಿರುವ ವಿಚಾರಗಳು, ಗೊತ್ತಿಲ್ಲದ ಸಂಗತಿಗಳು, ಸುದೀಪ್ ಬಗೆಗಿನ ಆರೋಪ- ಮೆಚ್ಚುಗೆ, ಕನಸುಗಳು, ಕುಟುಂಬ, ಸಿನಿಮಾ, ಕ್ರಿಕೆಟ್, ಸ್ನೇಹಿತರ ಬಳಗ, ಮುಂದಿನ ಚಿತ್ರಗಳ ಕುರಿತು, ಈಗಿನ ಚಿತ್ರಗಳ ಮೇಲಿನ ಭರವಸೆಗಳು... ಹೀಗೆ ಎಲ್ಲದರ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.

Pailwan Actor Kiccha Sudeep Exclusive interview
Author
Bangalore, First Published Jul 8, 2019, 9:24 AM IST

ಆರ್. ಕೇಶವಮೂರ್ತಿ

ನೀವು ಒಂದು ಕತೆಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಒಂದೇ ರೀತಿಯ ಪಾತ್ರಗಳು ಇಲ್ಲದ, ಏಕತಾನತೆಗೆ ಹೊರತಾದ ಕತೆಗಳನ್ನ. ಒಂದು ಸಲ ಪೊಲೀಸ್ ಪಾತ್ರ ಮಾಡಿದೆ. ಮತ್ತೆ ಅದೇ ಪಾತ್ರದ ಸುತ್ತ ಕತೆ ಎಂದಾಗ ಬೇಡ ಎನ್ನುತ್ತೇನೆ. ಪಾತ್ರಗಳ ವಿಚಾರದಲ್ಲಿ ಹೊಸತನ ಹುಡುಕುತ್ತೇನೆ. ನನಗೆ ನೀವು ಮಾಡಿಕೊಂಡ ಕತೆ ಹೊಸ ರೀತಿಯಲ್ಲಿ ಹೇಳಿದರೆ ಸಾಕು.

ಬೇರೆ ಭಾಷೆಗಳಲ್ಲಿ ಗೆಸ್ಟ್ ರೋಲ್‌ಗಳಿಗೆ ಮಾತ್ರ ಸೀಮಿತವಾಗುತ್ತಿದ್ದೀರಾ?

ನಿಮಗೆ ಗೊತ್ತಿದಿಯೋ ಇಲ್ವೋ, ‘ತನಿ ಒರುವನ್’ ಚಿತ್ರದಲ್ಲಿ ನಾನೇ ಹೀರೋ ಆಗಿ ಮಾಡಬೇಕಿತ್ತು. ಎಲ್ಲವೂ ಮುಗಿದು ಸಿನಿಮಾ ಸೆಟ್ಟೇರಬೇಕು ಎಂದಾಗ ತಡವಾಯಿತು. ನನಗೆ ಇಲ್ಲಿ ಮಾಣಿಕ್ಯ ಸಿನಿಮಾ ಶುರುವಾಯಿತು. ಹೀಗಾಗಿ ನಾನು ‘ತನಿ ಒರುವನ್’ಗಾಗಿ ಕಾಯಲಿಲ್ಲ. ಈಗ ಅದೇ ತಂಡ ನನ್ನ ಹೀರೋ ಆಗಿ ಇಟ್ಟುಕೊಂಡು ಸಿನಿಮಾ ಮಾಡಕ್ಕೆ ಮುಂದೆ ಬಂದಿದೆ. ಕತೆ ಚರ್ಚೆಯಲ್ಲಿದೆ. ಹಿಂದಿಯಲ್ಲೂ ಇದೇ ರೀತಿ ಚರ್ಚೆಗಳು ನಡೆಯುತ್ತಿವೆ. ಸದ್ಯದಲ್ಲೇ ಒಂದು ಪಕ್ಕಾ ಮಾಹಿತಿ ಹೇಳುತ್ತೇನೆ.

ಕೃಷ್ಣ ಅವರ ಉತ್ಸಾಹ ಮತ್ತು ಅವರು ಮಾಡಿಕೊಂಡ ಕತೆಗೆ ನಾನು ಫಿದಾ ಆಗಿ ‘ಪೈಲ್ವಾನ್’ ಒಪ್ಪಿಕೊಂಡೆ. ಇದರ ನಡುವೆ ‘ಕೋಟಿಗೊಬ್ಬ ೩’ ಬಂತು. ಸೂರಪ್ಪ ಬಾಬು ನನಗೆ ಒಳ್ಳೆಯ ಗೆಳೆಯರು. ಸಿನಿಮಾ ಶುರು ಮಾಡಿದರೆ ಬೇರೆ ಬೇರೆ ರೀತಿ ಸಹಾಯ ಆಗುತ್ತದೆ ಅಂದ್ರು. ಅವರ ಮಾತಿಗೆ ಮತ್ತು ಸ್ನೇಹಕ್ಕೆ ‘ಪೈಲ್ವಾನ್’ ಜತೆಗೆ ‘ಕೋಟಿಗೊಬ್ಬ ೩’ ಚಿತ್ರವನ್ನೂ ಶುರು ಮಾಡಿದೆ. 
 

ನೀವು ದುಬಾರಿ ಸಂಭಾವನೆಯ ಹೀರೋ ಎನ್ನುವ ಮಾತಿದೆ?

ಹೌದು, ಐ ಯಾಮ್ ವೆರಿ ಕಾಸ್ಟ್ಲಿ ಹೀರೋ. ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ನಾನೇ ಎನ್ನುವ ಮಾತೂ ಇರಬಹುದು. ಅದು ನಿಜ ಕೂಡ. ನನ್ನ ಮಾರುಕಟ್ಟೆ, ನನ್ನ ಸಿನಿಮಾಗಳ ಬ್ಯುಸಿನೆಸ್ ಏನಾಗುತ್ತಿದೆ ಎನ್ನುವ ಅರಿವು ನನಗಿದೆ. ಹಾಗೆ ನನ್ನ ಮುಂದೆ ಈಗಲೂ ಸಿನಿಮಾ ಮಾಡುತ್ತೇವೆ ಎಂದು ಕಾಯುತ್ತಿರುವ 25 ಮಂದಿ ನಿರ್ಮಾಪಕರಿಗೂ ನನ್ನ ಸಿನಿಮಾಗಳಿಂದ, ನನ್ನಿಂದ ಸಿಗುವ ಲಾಭ ಗೊತ್ತಿದೆ. ಹಾಗಿದ್ದ ಮೇಲೆ ನಾನೂ ಯಾಕೆ ದುಬಾರಿ ನಟ ಆಗಬಾರದು, ಹಾಗಂತ ನಾನು ಇವತ್ತಿಗೂ ಅಡ್ವಾನ್ಸ್ ತೆಗೆದುಕೊಂಡು ಕಾಲ್‌ಶೀಟ್ ಕೊಟ್ಟಿಲ್ಲ. ಕತೆ ಕೇಳುತ್ತೇವೆ. ಕತೆಗೇ ತುಂಬಾ ಬಜೆಟ್ ಬೇಕಾಗುತ್ತದೆಯೇ ಎಂದಾಗ ರಿಯಾಯಿತಿ ಕೊಡುತ್ತೇನೆ.

ಸಿನಿಮಾ ಹೊರತಾದ ಸುದೀಪ್ ಹೇಗಿರುತ್ತಾರೆ?
ನಾನೂ ತುಂಬಾ ಕ್ಯಾಶುವಲ್ ಮನುಷ್ಯ. ಸಿನಿಮಾ, ಕ್ಯಾಮೆರಾದಿಂದ ಆಚೆ ಬಂದರೆ ನಾರ್ಮಲ್ ಸುದೀಪ್. ನಾನು ಒಬ್ಬನೇ ಬೈಕ್‌ನಲ್ಲಿ ಬೆಂಗಳೂರಿನಲ್ಲಿ ತಿರುಗಾಡುತ್ತೇನೆ. ಗೊತ್ತಿಲ್ಲದ ಊರುಗಳಿಗೆ ಬೈಕ್‌ನಲ್ಲಿ ಹೋಗುತ್ತೇನೆ. ಸ್ಟ್ರೀಟ್‌ಗಳಲ್ಲಿ ರುಚಿಯಾಗಿ ಸಿಕ್ಕಿದ್ದನ್ನು ಕೊಂಡು ತಿನ್ನುತ್ತೇನೆ. ಆಗ ನಿಮಗೆ ಸಿನಿಮಾ ನಟ ಸುದೀಪ್ ಕಾಣೋದೆ ಇಲ್ಲ. ನಿಮಗೆ ಗೊತ್ತಿರಲಿ ಚಿತ್ರೀಕರಣಕ್ಕೆ ಬ್ಯಾಂಕಾಕ್‌ಗೆ ಹೋದಾಗ ಬಿಡುವಿನ ಮೇಲೆ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿದ್ದೇನೆ. ಎರಡು ದಿನ ಬ್ಯಾಂಕಾಕ್ ಹೋಟೆಲ್‌ನಲ್ಲಿ ಕುಕ್ಕಿಂಗ್ ಮಾಡಿದ್ದೇನೆ.

ದರ್ಶನ್ ಈ ಗುಣಕ್ಕೆ ಸುದೀಪ್ ಫಿದಾ!

ಅಡುಗೆ ಮಾಡೋ ಪ್ರತಿಭೆ ಬಂದಿದ್ದು ಹೇಗೆ? ನಿಮ್ಮ ಅಡುಗೆ ಮನೆಯಲ್ಲಿರುವವರು ರುಚಿ ನೋಡಿದ್ದಾರೆಯೇ?

ಅಡುಗೆ, ನಟನೆ ಹಾಗೂ ನಿರ್ದೇಶನ ಈ ಮೂರು ಯಾರಿಂದಲೂ ಕಲಿಯಲಿಲ್ಲ. ಆದರೆ, ಈ ಮೂರು ನನಗೆ ಚೆನ್ನಾಗಿ ಬರುತ್ತದೆ. ಚಿಕನ್‌ನಲ್ಲೇ ಹತ್ತು ರೀತಿ ರೆಸಿಪಿಗಳನ್ನು ಮಾಡುತ್ತೇನೆ. ಅಡುಗೆ ಮಾತ್ರವಲ್ಲ, ಬೇಕಿಂಗ್ ಕ್ಲಾಸ್‌ಗೆ ಹೋಗಿ ಈಗಿನ ಎಲ್ಲ ಬೇಕರಿ ಐಟಂಗಳನ್ನೂ ಮಾಡುತ್ತೇನೆ. ನನ್ನ ಫ್ರೆಂಡ್ಸ್‌ಗೆ ಪಾರ್ಟಿ ಕೊಟ್ಟರೆ ನಾನೇ ಅಡುಗೆ ಮಾಡಿ ಹಾಕುತ್ತೇನೆ. ಹೈದರಾಬಾದ್‌ನಲ್ಲಿ ನನ್ನ ಅಸಿಸ್ಟೆಂಟ್ ಇದ್ದಾನೆ. ಅವನಿಗೆ ನಾನೇ ಅಡುಗೆ ಮಾಡಿ ಬಡಿಸಿದ್ದೇನೆ. ನನ್ನ ಮನೆಯಲ್ಲೇ ಎಲ್ಲರೂ ನನ್ನ ಅಡುಗೆ ರುಚಿ ನೋಡಿದ್ದಾರೆ. ಮಗಳಿಗೆ ನಾನು ಮಾಡೋ ಬ್ರೇಕ್ ಫಾಸ್ಟ್ ಅಂದ್ರೆ ತುಂಬಾ ಇಷ್ಟ.

ನಟನನ್ನಾಗಿಸುವ ನಿಟ್ಟಿನಲ್ಲಿ ನಿಮ್ಮ ಕುಟುಂಬದಲ್ಲಿ ಯಾರ ಪಾತ್ರ ಹೆಚ್ಚು? 

ಪ್ರತಿಯೊಬ್ಬರ ಪಾತ್ರವೂ ಇದೆ. ಇಂಥವರದ್ದೇ ಅಂತ ಹೇಳಕ್ಕಾಗಲ್ಲ. ತುಂಬಾ ಕಡಿಮೆ ವೆಚ್ಚದಲ್ಲಿ ‘ಸ್ಪರ್ಶ’ ಚಿತ್ರ ಮಾಡೋದಿಕ್ಕೆ ಹೊರಟ್ವಿ. ಅಂದುಕೊಂಡಂತೆ ಆಗಲಿಲ್ಲ. ಬಜೆಟ್ ಹೆಚ್ಚಾಯಿತು. ಆಗ ನನ್ನ ಅಕ್ಕ ತಮ್ಮ ಬಳಿ ಇದ್ದ ಆಭರಣ ಮಾರಿ ಹಣ ಕೊಟ್ಟರು. ಕೈಯಲ್ಲಿ ಒಂದು ಪೈಸೆ ಇರಲಿಲ್ಲ. ಬೇರೆ ಕಡೆ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಪ್ರಿಯಾ ಬಳಿ 25 ಸಾವಿರ ರುಪಾಯಿ ಸಾಲ ಕೇಳಿ ಪಡೆದುಕೊಂಡೆ. ಎಲ್ಲ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಾಗ ಮತ್ತೆ ದುಡ್ಡು ಖಾಲಿ. ಆಗ ಮಧು ಬಂಗಾರಪ್ಪ ಬಂದು 5 ಲಕ್ಷ ಸಾಲ ಕೊಟ್ಟರು. ಇದೆಲ್ಲವನ್ನು ಮರೆಯೋಕಾಗಲ್ಲ. ಇದರ ಜತೆಗೆ ‘ಹುಚ್ಚ’ ಸಿನಿಮಾ ತಂಡ. ಈ ಎಲ್ಲವೂ ಸೇರಿಯೇ ಸುದೀಪ್ ಹೀರೋ ಆಗಿದ್ದು. ಯಾರೋ ಒಬ್ಬರಿಂದಲ್ಲ.

ಏಕಕಾಲಕ್ಕೆ ಕನ್ನಡದ ಎರಡು ಚಿತ್ರಗಳಲ್ಲಿ ನಟಿಸುವ, ಒಂದು ಚಿತ್ರವನ್ನು ಪ್ರಕಟಿಸುವ, ಪರಭಾಷೆಗಳಲ್ಲೂ ನಟಿಸುವಷ್ಟು ಅನಿವಾರ್ಯತೆ ಅಥವಾ ಒತ್ತಡ ಏನಿತ್ತು?

ನಾನೂ ಯಾವತ್ತೂ ಒತ್ತಡಗಳಿಗೆ, ಅನಿವಾರ್ಯತೆಗಳಿಗೆ ಸಿಕ್ಕಿಕೊಂಡವನಲ್ಲ. ಸಿಕ್ಕಿಕೊಳ್ಳುವುದೂ ಇಲ್ಲ. ಖುಷಿಯಿಂದ ಕೆಲಸ ಮಾಡುತ್ತೇನೆ. ಕೃಷ್ಣ ಅವರ ಉತ್ಸಾಹ ಮತ್ತು ಅವರು ಮಾಡಿಕೊಂಡ ಕತೆಗೆ ನಾನು ಫಿದಾ ಆಗಿ ‘ಪೈಲ್ವಾನ್’ ಒಪ್ಪಿಕೊಂಡೆ. ಇದರ ನಡುವೆ ‘ಕೋಟಿಗೊಬ್ಬ ೩’ ಮುಂದೆ ಬಂತು. ಸೂರಪ್ಪ ಬಾಬು ನನಗೆ ಒಳ್ಳೆಯ ಗೆಳೆಯರು. ಸಿನಿಮಾ ಶುರು ಮಾಡಿದರೆ ಬೇರೆ ಬೇರೆ ರೀತಿ ಸಹಾಯ ಆಗುತ್ತದೆ ಎನ್ನುವ ಅವರ ಮಾತಿಗೆ ಮತ್ತು ಸ್ನೇಹಕ್ಕೆ ‘ಪೈಲ್ವಾನ್’ ಜತೆಗೆ ‘ಕೋಟಿಗೊಬ್ಬ 2’ ಚಿತ್ರವನ್ನೂ ಶುರು ಮಾಡಿದೆ. ‘ಕೋಟಿಗೊಬ್ಬ 2’ ಚಿತ್ರದಲ್ಲಿ ಸಿಕ್ಕಾಪಟ್ಟೆ ಸೆಟ್‌ಗಳಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರತಿ ಸಲ ಸೆಟ್ ಹಾಕಬೇಕಾದರೆ ಒಂದಿಷ್ಟು ದಿನ ನಾನೂ ಖಾಲಿ ಕೂತಿರುತ್ತೇನೆ ಎಂದುಕೊಳ್ಳುವಾಗ ಬೇರೆ ಭಾಷೆಗಳಿಂದ ಆಫರ್ ಬಂತು. ನಾನೇ ಬೇಕು ಅಂತ ಬುಲಾವ್ ಬಂದಾಗ ಯಾಕೆ ಬೇಡ ಅನ್ನಲಿ? ಒಪ್ಪಿಕೊಂಡೆ.

ಕಾಲೇಜು ದಿನಗಳಲ್ಲಿ ಗರ್ಲ್‌ಫ್ರೆಂಡ್‌ ಇಂಪ್ರೆಸ್ ಮಾಡಲು ಸುದೀಪ್ ಹೀಗ್ಮಾಡ್ತಾ ಇದ್ರಂತೆ!

ಚಿರಂಜೀವಿ, ಸಲ್ಮಾನ್ ಖಾನ್ ದೊಡ್ಡ ಸ್ಟಾರ್‌ಗಳು ಎನ್ನುವ ಕಾರಣಕ್ಕೆ ‘ಸೈರಾ’ ಹಾಗೂ ‘ದಬಾಂಗ್ ೩’ ಚಿತ್ರಗಳನ್ನು ಒಪ್ಪಿಕೊಂಡಿದ್ದಾ?

ಸ್ನೇಹ, ವಿಶ್ವಾಸದ ಆಚೆಗೂ ಒಂದು ಚಿತ್ರವನ್ನು ಒಪ್ಪುವಾಗ ನಾನು ನಟನಾಗಿ ಯೋಚಿಸುತ್ತೇನೆ. ಮೆಗಾಸ್ಟಾರ್ ಫ್ಯಾಮಿಲಿಯ ಚಿತ್ರ ಎನ್ನುವ ಕಾರಣಕ್ಕೆ ‘ಸೈರಾ’ ಒಪ್ಪಲಿಲ್ಲ. ನನ್ನ ಪಾತ್ರಕ್ಕೆ ಅಲ್ಲಿ ಮಹತ್ವ ಇದೆ. ಒಂದು ಸಮುದಾಯದ ನಾಯಕನ ಪಾತ್ರ ಮಾಡುತ್ತಿದ್ದೇನೆ. ಅಮಿತಾಬ್ ಬಚ್ಚನ್ ಅವರೇ ನಟಿಸುತ್ತಿದ್ದಾರೆ. ‘ದಬಾಂಗ್ 2’ ಯಲ್ಲಿ ಹೀರೋನಷ್ಟೇ ನನಗೂ ಪ್ರಾಮುಖ್ಯತೆ ಇದೆ. ಒಂದು ವೇಳೆ ಬಯೋಪಿಕ್ ಸಿನಿಮಾ ಮಾಡುವುದಾದರೆ ನಿಮಗೆ ಯಾರ ಜೀವನ ಚರಿತ್ರೆ ಸೂಕ್ತ ಅನಿಸುತ್ತದೆ? ಯೋಚನೆ ಮಾಡಿಲ್ಲ. ಬಯೋಪಿಕ್‌ಗಳನ್ನು ಸಿನಿಮಾ ಮಾಡುವುದೂ ಸುಲಭವಲ್ಲ. ಆದರೆ, ನಾನು ಅಂದುಕೊಂಡಿರುವುದಕ್ಕಿಂತ ನನಗೇ ಒಂದಿಬ್ಬರು ಸೈನಿಕರ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಫೈನಲ್ ಆಗಿಲ್ಲ. ಒಂದು ವೇಳೆ ಅಂದುಕೊಂಡಂತೆ ಆದರೆ ಸೈನಿಕರ ಬಯೋಪಿಕ್‌ನಲ್ಲಿ ನಾನು ನಟಿಸಬಹುದು.

ನಿಮ್ಮ ಮಗಳು ಸಾನ್ವಿಗೆ ಚಿತ್ರರಂಗಕ್ಕೆ ಬರುವ ಆಸಕ್ತಿ ಇದಿಯೇ?

ನನ್ನ ಮಗಳು ತುಂಬಾ ಚಿಕ್ಕವಳು. ಶಾಲೆ, ಪೈಂಟಿಂಗ್, ಮ್ಯೂಸಿಕ್... ಅಂತ ಓಡಾಡಿಕೊಂಡಿರುವ ಪುಟ್ಟ ಕಂದ. ಅವಳು ಚಿತ್ರರಂಗಕ್ಕೆ ಬರುತ್ತಾಳೆಯೇ, ಇಲ್ಲವೇ
ಎನ್ನುವುದು ಈಗ ಚರ್ಚಿಸುವ ವಿಷಯ ಅಲ್ಲ. 

ಪೈಲ್ವಾನ್‌ನಲ್ಲಿ ಕುಸ್ತಿ ಸುದೀಪ್ ಹೊರತಾಗಿಬೇರೆ ಸುದೀಪ್ ಇದ್ದಾರೆಯೇ?

ಇದ್ದಾರೆ. ಹಾಗಂತ ಇದು ದ್ವಿಪಾತ್ರವಲ್ಲ. ಪೈಲ್ವಾನ್ ಸುದೀಪ್ ಜತೆಗೆ ಮೆಕ್ಯಾನಿಕ್ ಸುದೀಪ್ ಕೂಡ ಇದ್ದಾರೆ. ಅಂದರೆ ನಾನು ಇಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಪಾತ್ರ ಮಾಡಿದ್ದೇನೆ. ಮೂರು ಗೆಟಪ್ ಇದೆ.

ಹ್ಯಾಟ್ರಿಕ್ ಹೀರೋ ಪುತ್ರಿಗೆ ಈ ಸ್ಟಾರ್‌ ನಟ ಸಿಕ್ಕಾಪಟ್ಟೆ ಇಷ್ಟವಂತೆ!

ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ನಿಮಗೆ ಬೇಸರವಿದೆಯೇ?

ಯಾವ ಕಾರಣಕ್ಕೂ ನಾನು ಡಿಸ್ಟರ್ಬ್ ಆಗಿಲ್ಲ. ಹಾಗೆ ನೋಡಿದರೆ ನಾನು ಟ್ವೀಟ್ ಮಾಡಿದ ಮೇಲೆ ಅದಕ್ಕೆ ಬರುವ ಕಾಮೆಂಟ್‌ಗಳನ್ನೂ ನೋಡಲ್ಲ. ಅಭಿಮಾನಿಗಳ ಜತೆಗೆ ಮಾತನಾಡಲು ನಾನು ಟ್ವಿಟರ್ ಬಳಸುತ್ತಿದ್ದೇನೆ. ಅಭಿಮಾನಿಗಳು ನಮಗೆ ತುಂಬಾ ಕೊಟ್ಟಿದ್ದಾರೆ. ಯಾವುದೋ ಊರು, ಯಾರದೋ ಮಕ್ಕಳು ನಮ್ಮ ಚಿತ್ರ ನೋಡುತ್ತಾರೆ. ನನ್ನ ಹೆಸರು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ನನ್ನ ಪೋಸ್ಟರ್, ಕಟೌಟ್ ಹಾಕಿ ಸಂಭ್ರಮಿಸುತ್ತಾರೆ. ಅಂಥವರಿಗೆ ನಾನು ಏನೂ ಮಾಡಕ್ಕೆ ಸಾಧ್ಯ? ಪ್ರೀತಿಯಿಂದ ನಾಲ್ಕು ಮಾತು, ಅವರ ಹುಟ್ಟು ಹಬ್ಬಗಳಿಗೆ ವಿಶ್ ಮಾಡುತ್ತೇನೆ ಅಷ್ಟೆ. ಯಾರೋ ಏನೋ ಅಂದರು, ಕಾಲೆಳೆಯುವವರಿಗೆ, ಟ್ರೋಲ್ ಮಾಡುವವರಿಗೆ ನಾನು ಟ್ವಿಟರ್ ಬಳಸುತ್ತಿಲ್ಲ. ನನ್ನ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕೆ ಸೋಷಿಯಲ್ ಮೀಡಿಯಾ ಬಳಸುತ್ತಿದ್ದೇನೆ. ಹೀಗಾಗಿ ಡಿಸ್ಟರ್ಬ್ ಆಗುವ ಪ್ರಶ್ನೆಯೇ ಇಲ್ಲ.

Follow Us:
Download App:
  • android
  • ios