ಬಿಗ್ಬಾಸ್ 12 ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ ಇಂದಿಗೂ ಜನಮಾನಸದಲ್ಲಿದೆ. ಇತ್ತೀಚೆಗೆ ಸಿನಿಮಾ ಪ್ರಮೋಷನ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಈ ಜೋಡಿ, ನಾಯಕ-ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ತಮಾಷೆಯ ಮಾತುಕತೆ ನಡೆಸಿ ಗಮನ ಸೆಳೆದರು.
ಬೆಂಗಳೂರು: ಬಿಗ್ಬಾಸ್ 13 ನಡೆಯುತ್ತಿದೆ ಎನ್ನೋದೇ ತಿಳಿಯದಷ್ಟು ಮಟ್ಟಿಗೆ ಇನ್ನೂ ಬಿಗ್ಬಾಸ್ 12ರ ಹವಾ ನಿಂತಿಲ್ಲ. ಸಾಮಾನ್ಯವಾಗಿ ಇಂಥ ಷೋಗಳಲ್ಲಿ ಮಿಂಚಿದವರೆಲ್ಲಾ ಕೆಲ ತಿಂಗಳುಗಳ ಸೆಲೆಬ್ರಿಟಿಗಳಷ್ಟೇ. ಆಮೇಲೆ ಜನಮಾನಸದಿಂದ ಅವರು ಮರೆಯಾಗಿ ಬಿಡುತ್ತಾರೆ. ಬಹುತೇಕ ಎಲ್ಲರೂ ತಮ್ಮ ಹೆಸರಿನ ಹಿಂದೆ- ಮುಂದೆ ಬಿಗ್ಬಾಸ್ ಖ್ಯಾತಿಯ ಎಂದು ಬರೆದುಕೊಳ್ಳುವುದು ಬಿಟ್ಟರೆ, ಜನರ ಮನಸ್ಸಿನಲ್ಲಿ ಅಷ್ಟೆಲ್ಲಾ ನೆನಪು ಇರುವುದೇ ಇಲ್ಲ. ಆದರೆ ಬಿಗ್ಬಾಸ್ 12ರ ಗಿಲ್ಲಿ ನಟ ಮಾತ್ರ ಇಂದಿಗೂ ಹೈಲೈಟ್ ಆಗುತ್ತಲೇ ಇದ್ದಾರೆ. ಗಿಲ್ಲಿ ನಟ ಎಂಬ ಹೆಸರು ಕೇಳಿದ ತಕ್ಷಣ, ಅವರ ಜೊತೆಗೆ ನಟಿ ಕಾವ್ಯಾ ಶೈವ ಹೆಸರೂ ಥಳಕು ಹಾಕಿಕೊಳ್ಳುತ್ತದೆ. ಈ ಜೋಡಿ ಕಳೆದ ಸೀಸನ್ನಲ್ಲಿ ಅಷ್ಟರಮಟ್ಟಿಗೆ ಹವಾ ಸೃಷ್ಟಿಸಿತ್ತು.
ಈ ಜೋಡಿಗೆ ಈಗಲೂ ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಯೋದು ಇದೆ. ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೃಂದಾ ವಿಹಾರಿ (Brunda Vihari) ಸಿನಿಮಾದ ಪ್ರಮೋಷನ್ಗೆ ಈ ಜೋಡಿಯನ್ನು ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಕಾವ್ಯಾ ಶೈವ (Bigg Boss Kavya Shaiva) ಅವರು, ನಾನು ಚಿತ್ರಕ್ಕೆ ವಿಷಸ್ ಹೇಳಲು ಬರುವ ಬದಲು ನಾಯಕಿಯಾಗಿ ಬಂದು ಈ ರೀತಿಯ ವೇದಿಕೆಯ ಮೇಲೆ ನಿಂತರೆ ಇನ್ನೂ ಖುಷಿಯಾಗುತ್ತದೆ ಎಂದರು. ಅದಕ್ಕೆ ನಮ್ಮನ್ನೂ ಸ್ವಲ್ಪ ಪರಿಗಣಿಸಿ ಎಂದು ಕೇಳಿಕೊಳ್ತಾ ಇದ್ದೇನೆ ಎಂದರು.
ಕಾವ್ಯಾ ಆಸೆ ಈಡೇರಿಸೋಣ
ಅದಕ್ಕೆ ಗಿಲ್ಲಿ ನಟ (Bigg Boss Gilli Nata) ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿ, ಇವರ ಆಸೆ ಈಡೇರಿಸಿ ಬಿಡೋಣ. ಇವರಿಗೆ ನಾಯಕಿಯಾಗಿ ಬರಲು ಖುಷಿಯಾಗುತ್ತದೆ, ಹಾಗೆಯೇ ಇವರಿಗೆ ನಾಯಕ ಆಗಿ ಬರಲು ನನಗೂ ಖುಷಿಯಾಗುತ್ತದೆ ಎಂದಾಗ ಅಲ್ಲಿದ್ದವರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿದರು. ಕಾವ್ಯನ ಆಸೆ ಈಡೇರಿಸೋಣ ಎಂದ ಆ್ಯಂಕರ್, ಗಿಲ್ಲಿ ನಟ ಡೈರೆಕ್ಟರ್ ಆದರೆ ಹೇಗಿರುತ್ತದೆ ಎಂದು ನೋಡೋಣ ಎಂದಾಗ, ಇದಕ್ಕೆ ಗಿಲ್ಲಿ ನಟ ಸುತರಾಂ ಒಪ್ಪಲಿಲ್ಲ. ನಾನು ಬೇರೆ ಸಿನಿಮಾಕ್ಕೆ ಡೈರೆಕ್ಟರ್ ಆಗ್ತೇನೆ, ಆದರೆ ಕಾವ್ಯಾ ಹೀರೋಯಿನ್ ಆಗುವ ಸಿನಿಮಾಕ್ಕೆ ನಾನೇ ಹೀರೋ ಆಗೋದು. ಉಳಿದದ್ದನ್ನೆಲ್ಲಾ ನಾನು ಒಪ್ಪಲ್ಲ ಎಂದರು.
ಆಗ ನಿರೂಪಕಿ ಸರಿ ನೀವೇ ಹೀರೋ, ಕಾವ್ಯಾ ಹೀರೋಯಿನ್ ಅಂದುಕೊಳ್ಳೋಣ. ಕಥೆ ಯಾವ ರೀತಿ ಇದ್ದರೆ ನಿಮಗೆ ಇಷ್ಟ ಎಂದು ಪ್ರಶ್ನಿಸಿದರು. ಅದಕ್ಕೆ ಕಾವ್ಯಾ ಅದನ್ನು ಜನರಿಗೇ ಅದನ್ನು ಡಿಸೈಡ್ ಮಾಡಲಿ ಎಂದಾಗ, ಗಿಲ್ಲಿ ನಟ, ಮಧ್ಯೆ ಪ್ರವೇಶಸಿಸಿ ಒಳ್ಳೆ ಲವ್ ಸ್ಟೋರಿ, ಕಾಮಿಡಿ, ಫೈಟ್ ಎಲ್ಲಾ ಇರಬೇಕು. ಒಂದೇ ಹೀರೋಯಿನ್ ಸಾಕಾ ಎಂದಾಗ, ಕಾವ್ಯಾ ಇರುವಾಗ ಬೇರೆ ಯಾಕೆ, ಒಬ್ಬಳೇ ಸಾಕು ಎಂದು ತಮಾಷೆ ಮಾಡಿದರು. ಕೊನೆಗೆ ಎಲ್ಲರೂ ಹೌದು, ಇಬ್ಬರೂ ನಾಯಕ-ನಾಯಕಿಯಾಗಿ ಒಂದು ಸಿನಿಮಾಆಗಬೇಕು ಎಂದಿದ್ದಾರೆ. ಇದೇ ಆಸೆಯನ್ನು ನೆಟ್ಟಿಗರೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವೇದಿಕೆ ಮೇಲೆ ಗಿಲ್ಲಿ ಮತ್ತು ಕಾವ್ಯಾ ಕೆಲ ಕಾಲ ನಾಯಕ-ನಾಯಕಿ ಆದರು.















