64ರ ವಯಸ್ಸಿನಲ್ಲೂ ಯುವಕರಂತೆ ಫಿಟ್ ಆಗಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ವ್ಯಾಯಾಮದ ಶಿಸ್ತು, ಬಾಲ್ಯದ ಅಭ್ಯಾಸ, ಕುಟುಂಬದ ಜವಾಬ್ದಾರಿ ಮತ್ತು ಆ ಭಯವೇ ನನ್ನನ್ನು ಫಿಟ್ ಆಗಿರಿಸುತ್ತದೆ.
ದಕ್ಷಿಣ ಚಿತ್ರರಂಗದಲ್ಲಿ ‘ಆಕ್ಷನ್ ಕಿಂಗ್’ ಎಂದೇ ಖ್ಯಾತಿ ಪಡೆದಿರುವ ನಟ ಅರ್ಜುನ್ ಸರ್ಜಾ ಅವರಿಗೆ ಈಗ 64 ವರ್ಷ. ಆದರೆ ಅವರ ಫಿಟ್ನೆಸ್ ಮತ್ತು ಮೈಕಟ್ಟು ನೋಡಿದರೆ ವಯಸ್ಸು ಕೇವಲ ಅಂಕಿ ಮಾತ್ರ ಎನಿಸುತ್ತದೆ. ಇಂದಿನ ಯುವ ನಟರಿಗೂ ಪೈಪೋಟಿ ನೀಡುವಂತೆ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅರ್ಜುನ್, ತಮ್ಮ ಫಿಟ್ನೆಸ್ ವಿಚಾರದಲ್ಲಿ ಇಂದಿಗೂ ಅಷ್ಟೇ ಕಾಳಜಿ ವಹಿಸುತ್ತಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ತಮ್ಮ ಫಿಟ್ನೆಸ್ ಸೀಕ್ರೆಟ್, ವ್ಯಾಯಾಮದ ಶಿಸ್ತು ಹಾಗೂ ಸದಾ ಆರೋಗ್ಯವಾಗಿರಲು ತಮಗೆ ಸ್ಫೂರ್ತಿ ನೀಡುವ ಅಂಶಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಅರ್ಜುನ್ ಸರ್ಜಾ ಅವರ ಪ್ರಕಾರ, ಉತ್ತಮ ಫಿಟ್ನೆಸ್ ಕಾಯ್ದುಕೊಳ್ಳಲು ಹಣ, ಸಾಕಷ್ಟು ಸಮಯ ಅಥವಾ ಅತ್ಯುತ್ತಮ ತರಬೇತುದಾರರಿದ್ದರೆ ಮಾತ್ರ ಸಾಲದು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ವೈಯಕ್ತಿಕ ಪ್ರೇರಣೆ ಮತ್ತು ಆತ್ಮವಿಶ್ವಾಸ. ಈ ಸಂದರ್ಭದಲ್ಲಿ ಸ್ವಾಮೀಜಿಯೊಬ್ಬರು ಹೇಳಿದ್ದ ಮಾತನ್ನು ಅವರು ನೆನಪಿಸಿಕೊಂಡಿದ್ದಾರೆ. 'ನೀವು ನಿಮ್ಮ ದೇಹದ ಬಗ್ಗೆ ಒಂದು ಗಂಟೆ ಕಾಳಜಿ ವಹಿಸಿದರೆ, ಅದು ಉಳಿದ 23 ಗಂಟೆಗಳ ಕಾಲ ನಿಮ್ಮನ್ನು ನೋಡಿಕೊಳ್ಳುತ್ತದೆ' ಎಂಬ ಮಾತು ತಮ್ಮ ಜೀವನದಲ್ಲಿ ನಿಜವೆನಿಸಿದೆ ಎಂದು ಹೇಳಿದ್ದಾರೆ.
ವ್ಯಾಯಾಮ ಮಾಡಲು ಮನಸ್ಸಿಲ್ಲದ ದಿನಗಳಲ್ಲೂ ನಮ್ಮನ್ನು ನಾವೇ ಪ್ರೇರೇಪಿಸಿಕೊಂಡು ಜಿಮ್ಗೆ ಹೋಗಬೇಕು ಎಂಬುದು ಅವರ ಅಭಿಪ್ರಾಯ. ಬೆಳಗ್ಗೆ ಎದ್ದ ತಕ್ಷಣ ಎಲ್ಲರಂತೆ ತಮಗೂ ಕಾಫಿ ಕುಡಿಯುತ್ತಾ ಟಿವಿ ನೋಡುತ್ತಾ ಕುಳಿತುಕೊಳ್ಳಬೇಕು ಎನಿಸುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇಂತಹ ಆಸೆಗಳನ್ನು ನಿಯಂತ್ರಿಸಿಕೊಳ್ಳುವುದನ್ನು ಕಲಿತಿದ್ದೇನೆ ಎಂದು ಅರ್ಜುನ್ ತಿಳಿಸಿದ್ದಾರೆ.
ತಮ್ಮನ್ನು ಜನರು ಇಂದಿಗೂ ಯಂಗ್ ಆಗಿ ಮತ್ತು ಆರೋಗ್ಯವಾಗಿ ನೋಡಲು ಇದೇ ಶಿಸ್ತು ಕಾರಣ ಎಂದು ಅವರು ಹೇಳಿದ್ದಾರೆ. ಫಿಟ್ನೆಸ್ ಎನ್ನುವುದು ಕೇವಲ ನಟನಾಗಿ ತಮ್ಮ ವೃತ್ತಿಗೆ ಮಾತ್ರ ಅಗತ್ಯವಲ್ಲ. ಕುಟುಂಬಕ್ಕಾಗಿ ಮತ್ತು ತಮ್ಮ ಸ್ವಂತ ಆರೋಗ್ಯಕ್ಕಾಗಿಯೂ ಅದು ಮುಖ್ಯ. ಕುಟುಂಬಕ್ಕೆ ತಮ್ಮ ಅಗತ್ಯವಿದ್ದಾಗ ಸಂಪೂರ್ಣ ಶಕ್ತಿಯೊಂದಿಗೆ ಅವರ ಜೊತೆ ನಿಲ್ಲಬೇಕು ಎಂಬ ಆಲೋಚನೆಯೇ ತಮಗೆ ದೊಡ್ಡ ಪ್ರೇರಣೆ ನೀಡುತ್ತದೆ ಎಂದು ವಿವರಿಸಿದ್ದಾರೆ.
ಇನ್ನು ನಟರನ್ನು ಫಿಟ್ ಆಗಿ ಇಡುವ ಮತ್ತೊಂದು ಅಂಶ ‘ಭಯ’ ಎಂದು ಅರ್ಜುನ್ ಸರ್ಜಾ ತಮಾಷೆಯಾಗಿ ಹೇಳಿದ್ದಾರೆ. ಪ್ರೇಕ್ಷಕರು ತಮ್ಮನ್ನು ಹೇಗೆ ನೋಡುತ್ತಾರೆ ಎಂಬ ಭಯವೇ ನಟರಲ್ಲಿ ಶಿಸ್ತು ಬೆಳೆಸುತ್ತದೆ ಎಂಬುದು ಅವರ ಮಾತು. ಉದಾಹರಣೆಗೆ, ತಾವು ದಪ್ಪಗಾದರೆ ಪ್ರೇಕ್ಷಕರು ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಂಡು, 'ಆಗ ಚೆನ್ನಾಗಿದ್ದರಲ್ಲ, ಈಗ ಹಾಗಿಲ್ಲ' ಎಂದುಕೊಳ್ಳಬಹುದು. ಇಂತಹ ಟೀಕೆಗಳಿಗೆ ಅವಕಾಶ ನೀಡಬಾರದು ಎಂಬ ಭಯವೇ ತಮ್ಮನ್ನು ಸದಾ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಿದ್ದೆ
ತಮ್ಮ ಫಿಟ್ನೆಸ್ಗೆ ಬಾಲ್ಯದಲ್ಲೇ ಭದ್ರ ಬುನಾದಿ ಹಾಕಿಕೊಂಡಿದ್ದಾಗಿ ಅರ್ಜುನ್ ನೆನಪಿಸಿಕೊಂಡಿದ್ದಾರೆ. 'ನನ್ನ ಹಳೆಯ ಫೋಟೋಗಳನ್ನು ನೋಡಿದರೆ, ನಾನು ಕೇವಲ ಒಂದು ಗಂಟೆಯಲ್ಲ, ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಿದ್ದೆ' ಎಂದು ಹೇಳಿದ್ದಾರೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲ ಓಟ, ವಿವಿಧ ಕ್ರೀಡೆಗಳು, ಕರಾಟೆ, ಕುದುರೆ ಸವಾರಿ, ಈಜು ಹಾಗೂ ಜಿಮ್ನಾಸ್ಟಿಕ್ಸ್ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ.
ಕಟ್ಟಡವೊಂದಕ್ಕೆ ಅಡಿಪಾಯ ಎಷ್ಟು ಮುಖ್ಯವೋ, ದೇಹಕ್ಕೂ ಬಾಲ್ಯದಲ್ಲೇ ಇಂತಹ ತರಬೇತಿಯ ಮೂಲಕ ಗಟ್ಟಿಯಾದ ಅಡಿಪಾಯ ಹಾಕಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ. ಆರಂಭದಲ್ಲೇ ದೈಹಿಕ ಸಾಮರ್ಥ್ಯವನ್ನು ಬೆಳೆಸಿಕೊಂಡರೆ, ಮುಂದಿನ ದಿನಗಳಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ದೇಹ ಅದನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಶಿಸ್ತನ್ನು ಕೈಬಿಡಬಾರದು ಎಂದು ಹೇಳಿದ್ದಾರೆ.
ವ್ಯಾಯಾಮಕ್ಕೂ ಪ್ರಾಮುಖ್ಯತೆ
ಬಿಡುವಿಲ್ಲದ ಸಿನಿಮಾ ಶೆಡ್ಯೂಲ್ ನಡುವೆಯೂ ವ್ಯಾಯಾಮಕ್ಕೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅರ್ಜುನ್, 'ವ್ಯಾಯಾಮವನ್ನೇ ಮೊದಲು ನಿಮ್ಮ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಆಗ ಉಳಿದ ಕೆಲಸಗಳೂ ತಾವಾಗಿಯೇ ವೇಳಾಪಟ್ಟಿಗೆ ಬರುತ್ತವೆ' ಎಂದಿದ್ದಾರೆ. ಬೆಳಗಿನ ಉಪಾಹಾರಕ್ಕೆ ಹೇಗೆ ಆದ್ಯತೆ ನೀಡುತ್ತೇವೆಯೋ, ಅದೇ ರೀತಿ ವ್ಯಾಯಾಮಕ್ಕೂ ಪ್ರಾಮುಖ್ಯತೆ ನೀಡಿ ದಿನಚರಿಯಲ್ಲಿ ಅದಕ್ಕೆ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು 64ರ ಹರೆಯದಲ್ಲೂ ಅರ್ಜುನ್ ಸರ್ಜಾ ಅವರ ಫಿಟ್ನೆಸ್ ಹಿಂದಿರುವುದು ಯಾವುದೇ ಮ್ಯಾಜಿಕ್ ಅಲ್ಲ; ಬಾಲ್ಯದಿಂದ ರೂಢಿಸಿಕೊಂಡ ವ್ಯಾಯಾಮದ ಅಭ್ಯಾಸ, ನಿರಂತರ ಶಿಸ್ತು, ಆತ್ಮವಿಶ್ವಾಸ ಮತ್ತು ಕುಟುಂಬದ ಮೇಲಿನ ಜವಾಬ್ದಾರಿಯ ಭಾವನೆ. ಜೊತೆಗೆ ಪ್ರೇಕ್ಷಕರ ಟೀಕೆಯ ಭಯವೂ ತಮ್ಮನ್ನು ಫಿಟ್ ಆಗಿರಲು ಪ್ರೇರೇಪಿಸುತ್ತದೆ ಎಂಬ ಅವರ ಮಾತು ಇದೀಗ ಗಮನ ಸೆಳೆಯುತ್ತಿದೆ.















