ಬಿಗ್ ಬಾಸ್ ಖ್ಯಾತಿಯ ಡ್ಯಾನ್ಸರ್ ನೈನಿಕಾ, ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ತಮಗೆ ಎದುರಾದ ಒಂದು ಕಹಿ ಘಟನೆಯನ್ನು ಅವರು ಬಹಿರಂಗಪಡಿಸಿದ್ದಾರೆ. 

ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿ ನೈನಿಕಾ ಅನಸೂರಿಗೆ ಒಳ್ಳೆಯ ಗುರುತಿದೆ. 'ಢೀ' ಶೋ ಮೂಲಕ ಅವರಿಗೆ ಸಿಕ್ಕಾಪಟ್ಟೆ ಕ್ರೇಜ್ ಬಂತು. ಇದೇ ಜನಪ್ರಿಯತೆಯಿಂದ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡರು. ಸೋಷಿಯಲ್ ಮೀಡಿಯಾದಲ್ಲೂ ನೈನಿಕಾ ತಮ್ಮ ಗ್ಲಾಮರ್ ಮತ್ತು ಡ್ಯಾನ್ಸ್‌ನಿಂದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ಸಂದರ್ಶನವೊಂದರಲ್ಲಿ ನೈನಿಕಾ, ಟಾಲಿವುಡ್‌ನ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. 'ಚಿತ್ರರಂಗ ಅಂದುಕೊಂಡಷ್ಟು ಸುಲಭವಾದ ಜಾಗವಲ್ಲ. ಇಲ್ಲಿ ಸಾಕಷ್ಟು ಕರಾಳ ಸತ್ಯಗಳಿವೆ. ಹೊಸಬರಿಗೆ ಈ ಜಾಗ ನರಕವೇ ಸರಿ. ನನಗೆ ಮಗಳು ಹುಟ್ಟಿದರೆ ನಾನು ಅವಳನ್ನು ಇಂಡಸ್ಟ್ರಿಗೆ ಕಳುಹಿಸುವುದಿಲ್ಲ. ನನ್ನ ತಂಗಿ ಇದ್ದರೂ ಬೇಡ ಎನ್ನುತ್ತೇನೆ. ನಾನು ಕಣ್ಣಾರೆ ಕೆಲವು ಕರಾಳ ಘಟನೆಗಳನ್ನು ನೋಡಿದ್ದೇನೆ' ಎಂದು ನೈನಿಕಾ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.

ಹೊಸದಾಗಿ ಬರುವ ಹುಡುಗಿಯರನ್ನು ನೇರವಾಗಿ ಕಾಂಪ್ರಮೈಸ್ ಆಗಲು ಕೇಳುತ್ತಾರೆ. ನನಗೊಂದು ಆಘಾತಕಾರಿ ಘಟನೆ ಎದುರಾಗಿತ್ತು. ಒಬ್ರು ನನಗೆ ಫೋನ್ ಮಾಡಿ ಜಾಹೀರಾತು ಶೂಟ್ ಮಾಡಬೇಕು ಅಂದರು. ಯಾವ ಬ್ರ್ಯಾಂಡ್ ಎಂದು ಕೇಳಿದೆ. ಅದಕ್ಕೆ ಅವರು, 'ಇದೊಂದು ರಿಯಲ್ ಎಸ್ಟೇಟ್ ಕಂಪನಿ, ತುಂಬಾ ಶ್ರೀಮಂತರು ಇದ್ದಾರೆ' ಎಂದು ಹೇಳಿದರು. ಬಜೆಟ್ ಚೆನ್ನಾಗಿರುತ್ತೆ ಅಂದುಕೊಂಡು ನಾನು ಓಕೆ ಹೇಳಿದೆ. ಆದರೆ ಆ ನಂತರ ಆತ, 'ನಿಮ್ಮ ಪರ್ಸನಲ್ ರೇಟ್ ಪ್ರಕಾರವೇ ಸಂಭಾವನೆ ಕೊಡುತ್ತೇವೆ' ಎಂದ. ನನಗೆ ಫ್ಯೂಸ್ ಹೋದಂತಾಯ್ತು.

ಫೋನ್ ಕಟ್ ಮಾಡಿದೆ

'ಪರ್ಸನಲ್ ರೇಟ್ ಅಂದ್ರೆ ಏನು?' ಅಂತ ನಾನು ಕೇಳಿದೆ. ಅದಕ್ಕೆ ಆತ, 'ನೀವು ಪರ್ಸನಲ್ ಆಗಿ ಭೇಟಿಯಾಗಬೇಕಾಗುತ್ತದೆ. ನಿಮ್ಮ ಫೋಟೋ ಕೆಳಗೆ ರೇಟ್ ಹಾಕಿ ವೈರಲ್ ಮಾಡ್ತಿದ್ದೀರಲ್ಲಾ, ಅದರ ಬಗ್ಗೆನೇ ಹೇಳ್ತಿರೋದು' ಅಂದ. ನಾನು ಅಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದೆ ಎಂದು ನೈನಿಕಾ ವಿವರಿಸಿದ್ದಾರೆ.

ಯಾರಾದರೂ ನನ್ನನ್ನು ಕಮಿಟ್‌ಮೆಂಟ್ ಕೇಳಿದರೆ, ನಾನು ತಕ್ಷಣವೇ ಇಲ್ಲ ಎಂದು ಹೇಳಿಬಿಡುತ್ತೇನೆ. ಅಂತಹ ಪ್ರಾಜೆಕ್ಟ್‌ನಲ್ಲಿ ನನಗೆ ಅವಕಾಶ ಬೇಕಾಗಿಲ್ಲ. ನನ್ನಲ್ಲಿ ಟ್ಯಾಲೆಂಟ್ ಇದೆ, ಅನುಭವ ಇದೆ. ಹಾಗಾಗಿ ನನಗೆ ಇಷ್ಟ ಬಂದಿದ್ದನ್ನು ನಾನು ಮಾಡಬಹುದು. ಕಮಿಟ್‌ಮೆಂಟ್‌ಗಳಿಗೆ ತಲೆಬಾಗುವ ಅವಶ್ಯಕತೆ ನನಗಿಲ್ಲ. ಆದರೆ ಹೊಸದಾಗಿ ಬರುವ ಹುಡುಗಿಯರ ಪರಿಸ್ಥಿತಿ ಮಾತ್ರ ತುಂಬಾ ದಾರುಣವಾಗಿದೆ ಎಂದು ನೈನಿಕಾ ಹೇಳಿದ್ದಾರೆ.