ನಾ ನಿನ್ನ ಬಿಡಲಾರೆ ಶರತ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಗಳು ಹಿತಾಳ ಬಾಯಲ್ಲಿ ಅಪ್ಪಾ ಎಂದು ಕರೆಸಿಕೊಳ್ಳಲು ಕಾಯ್ತಿರೋ ನಟನ ಸ್ಟೋರಿ ಇಲ್ಲಿದೆ... 

ಅಮ್ಮ-ಮಗಳ ಬಾಂಧವ್ಯ ಹೊಂದಿರುವ ಜೀ ಕನ್ನಡದ "ನಾ ನಿನ್ನ ಬಿಡಲಾರೆ" ಸೀರಿಯಲ್​ನಲ್ಲಿ ಸದ್ಯ ಅಮ್ಮನ ಸಾವಿಗೆ ಅಪ್ಪನೇ ಕಾರಣ ಎಂದು ಮಗಳು ಹಿತಾ ಅಪ್ಪನನ್ನು ಅಪ್ಪ ಎನ್ನದೇ ಸತಾಯಿಸುತ್ತಿದ್ದಾಳೆ. ಇವಳ ಲೈಫ್​ನಲ್ಲಿ ಈಗ ದುರ್ಗಾಳ ಎಂಟ್ರಿಯಾಗಿದೆ. ದುರ್ಗಾ ಹಿತಾಳಿಗೆ ಅಮ್ಮನ ಪ್ರೀತಿಯನ್ನೇ ಕೊಡುತ್ತಿರುವ ಮುಗ್ಧೆ. ಆದರೆ, ಹಿತಾಳ ಅಮ್ಮ ಸತ್ತುಹೋಗಿರುವ ಅಂಬಿಕಾ ತನ್ನ ಅಕ್ಕನೇ ಎನ್ನುವುದು ಆಕೆಗೆ ಗೊತ್ತಿಲ್ಲ. ಆದರೆ ಅಂಬಿಕಾ ಮಾತ್ರ ಆತ್ಮವಾಗಿದ್ದು, ದುರ್ಗಾಳಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾಳೆ. ಆದರೆ ಅದು ಆತ್ಮ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಈಗ ತಾನೇ ಅಂಬಿಕಾಗೆ ದುರ್ಗಾ ತನ್ನ ತಂಗಿಯೇ ಎನ್ನುವ ಸತ್ಯ ಗೊತ್ತಾಗಿದೆ. ಅದರೆ ತಾನು ಸತ್ತು ಹೋಗಿರುವ ವಿಷಯ ಹೇಳಲು ಆಗದೇ ಅವಳು ಒದ್ದಾಡುತ್ತಿದ್ದಾಳೆ.

ಅದೇ ಇನ್ನೊಂದೆಡೆ, ಅಮ್ಮನ ಸಾವಿಗೆ ಅಪ್ಪನೇ ಕಾರಣ ಎಂದು ಹಿತಾ ಆತನನ್ನು ಕೊಲೆಗಾರ ಎನ್ನುತ್ತಿದ್ದಾಳೆ. ಹೇಗಾದರೂ ಮಾಡಿ ಅಪ್ಪ ಎಂದು ಕರೆಸಿಕೊಳ್ಳುವ ಸಂಕಟದಲ್ಲಿದ್ದಾನೆ ಶರತ್​. ಹೀಗೆ ಶರತ್​ ಎಂಬ ಪಾತ್ರದಲ್ಲಿ ನಟಿಸ್ತಿರೋ ನಟನ ಹೆಸರು ಕೂಡ ನಿಜವಾಗಿಯೂ ಶರತ್ ಪದ್ಮನಾಭ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ನಾಯಕ ಆದಿತ್ಯ ಅರಸನಕೋಟೆಯಾಗಿ ಅಭಿನಯಿಸುತ್ತಿದ್ದ ಶರತ್​ ಈಗ ಆರು ವರ್ಷಗಳ ಕಾಲ 'ಪಾರು' ಸೀರಿಯಲ್​ ಮುಗಿಸಿ ಮತ್ತೊಂದು ಇನ್ನಿಂಗ್ಸ್​ ಅನ್ನು ನಾನಿನ್ನ ಬಿಡಲಾರೆ ಮೂಲಕ ಆರಂಭಿಸಿದ್ದಾರೆ. ಇಂದುದ ಶರತ್​ ಪದ್ಮನಾಭ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಇನ್ನು ನಟನ ಕುರಿತು ಹೇಳುವುದಾದರೆ, ಇವರು ಪಡೆದದ್ದು ಇಂಜಿನಿಯರಿಂಗ್ ಪದವಿ. ಆದರೆ ಒಲಿದದ್ದು ನಟನೆ. ಗ್ರಾಫಿಕ್ಸ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಶರತ್. ಆದರೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಯ ನಂಟು ಬೆಳೆದಿದೆ. ಫೇಸ್ ಬುಕ್‌ನಲ್ಲಿ ಇವರ ಹ್ಯಾಂಡ್​ಸಮ್​ ಫೋಟೋ ನೋಡಿದ ದಿಲೀಪ್ ರಾಜ್ ನಟಿಸಲು ಅವಕಾಶ ನೀಡಿದ್ದರು. ಅಲ್ಲಿಂದಲೇ ಕಿರುತೆರೆ ನಂಟು ಬೆಳೆಯಿತು. ಆಗಲೇ ವೃತ್ತಿ ಬಿಟ್ಟು ಫುಲ್​ಟೈಂ ನಟನಾಗುವ ನಿರ್ಧಾರ ಮಾಡಿದರು. ಬಳಿಕ ನಟನಾ ತರಬೇತಿ ಪಡೆದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಸ್ಟ್ ಮಾತ್ ಮಾತಲ್ಲಿ' ಎಂಬ ಸೀರಿಯಲ್​ ಮೂಲಕ ಪದಾರ್ಪಣೆ ಮಾಡಿದರು.

ನಂತರ, ಪುಟ್ಮಲ್ಲಿ' ಧಾರಾವಾಹಿಯಲ್ಲಿ ಇವರು ನಾಯಕನಾಗಿ ಮನೆಮಾತಾದರು. ನಂತರ 'ಪಾರು' ಸೀರಿಯಲ್​ನಲ್ಲಿ ಆರು ವರ್ಷ ರಂಜಿಸಿದರು. ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟು 'ನೀವು ಕರೆ ಮಾಡಿರುವ ಚಂದದಾರರು' ಸಿನಿಮಾದಲ್ಲಿ ನಟಿಸಿದರು. 'ಅನೀಮಾ' ಸಿನಿಮಾದಲ್ಲಿಯೂ ನಾಯಕನಾಗಿ ನಟಿಸಿದರು. ಬಳಿಕ ಈಗ 'ನಾ ನಿನ್ನ ಬಿಡಲಾರೆ' ಯ ನಾಯಕನಾಗಿ ಕಿರುತೆರೆಗೆ ಮತ್ತೆ ಮರಳಿದ್ದಾರೆ. ಇವರ ಹುಟ್ಟುಹಬ್ಬದ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.