ಬಾಲಿವುಡ್ ನಟ ಸಂಜಯ್ ದತ್ 'ಶೇಖರ್ ಟುನೈಟ್' ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಕಹಿ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ. 1993ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡು ಬಂಧನಕ್ಕೊಳಗಾದಾಗ ತಮ್ಮ ತಂದೆ ಸುನಿಲ್ ದತ್ ಕಣ್ಣೀರು ಹಾಕಿದ್ದನ್ನು ಸ್ಮರಿಸಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಂಬೈ (ಅಕ್ಟೋಬರ್ 11): ಬಾಲಿವುಡ್ ಸ್ಟಾರ್ ಸಂಜಯ್ ದತ್ (Sanjay Dutt) ಅವರು ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನ ಸ್ಮರಿಸಿ ಮತ್ತೊಮ್ಮೆ ಭಾವುಕರಾಗಿದ್ದಾರೆ. ಶೇಖರ್ ಸುಮನ್ ಅವರ 'ಶೇಖರ್ ಟುನೈಟ್' (Shekhar Tonight) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ ತಮ್ಮ ಬದುಕಿನಲ್ಲಿ ನಡೆದ ವಿವಾವಾದಗಳ ಬಗ್ಗೆ ಬಹಿರಂಗವಾಗಿ ಮಾತನ್ನಾಡಿದ್ದಾರೆ. ಅಲ್ಲದೇ ಪ್ರಕರಣಗಳ ಬಗ್ಗೆ ಬಹಿರಂಗವಾಗಿ ಕ್ಷಮೆ ಯಾಚಿಸಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸಂಜಯ್ ದತ್ ಕಣ್ಣೀರು ಇಟ್ಟಿದ್ದು ಏಕೆ?
ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳ ನಂತರ ಸಂಜಯ್ ದತ್ ಸಂಕಷ್ಟಕ್ಕೆ ಸಿಲುಕಿದರು. 1993ರಲ್ಲಿ AK-56 ರೈಫಲ್ ಸೇರಿದಂತೆ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದರು. ಇದೇ ವಿಚಾರದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನ್ನಾಡಿರುವ ದತ್, ನಾನು ಶಸ್ತ್ರಾಸ್ತ್ರವನ್ನು ಇಟ್ಟುಕೊಳ್ಳುವ ಮೊದಲು ಏನೋ ತಪ್ಪಾಗಿದೆ ಎಂದು ನನ್ನಲ್ಲಿ ಅನಿಸಿತ್ತು. ಆ ಭಾವನೆ ನನ್ನನ್ನು ಕಾಡುತ್ತಿತ್ತು. ಆದರೆ ನನ್ನ ಮನಸ್ಸಿನ ಧ್ವನಿಯನ್ನು ನಾನು ನಿರ್ಲಕ್ಷ್ಯ ಮಾಡಿದೆ ಎಂದಿದ್ದಾರೆ.
ಅಂದು ತಪ್ಪು ನನ್ನದಾಗಿತ್ತು. ನಿಮ್ಮ ಮನಸ್ಸು ಏನಾದರೂ ಹೇಳಿದರೆ ನಾವು ಅದನ್ನು ಮುಕ್ತವಾಗಿ ಕೇಳಬೇಕು. ಆ ಘಟನೆ ಬಗ್ಗೆ ನಾನು ಸ್ಮರಿಸಿ ಹೇಳೋದಾರೆ.. ನನಗೆ ಅಂದೇ ಅದನ್ನು ಮಾಡಬಾರದು ಅನಿಸಿತ್ತು. ಆದರೆ ನಾನು ಅವುಗಳನ್ನು ಒಂದು ವಾರ ಇಟ್ಟುಕೊಳ್ಳೋಣ. ಅದು ಏನು ಮಾಡುತ್ತದೆ ಎಂಬ ವಾದಕ್ಕೆ ನಾನು ಬಿದ್ದಿದ್ದೆ. ನಂತರ ಅದರ ಪರಿಣಾಮವನ್ನು ನಾನು ಎದುರಿಸಿದೆ. ದೇಶದ ಪ್ರಜೆಯಾಗಿ ನಾವು ನಮ್ಮ ಕಾನೂನುಗಳನ್ನ ತಿಳಿದುಕೊಂಡು ಕೆಲವು ನಿರ್ಧಾರಗಳನ್ನ ಮಾಡಬೇಕಾಗುತ್ತದೆ. ಅಂದು ನನಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಆ ವಸ್ತುಗಳನ್ನ ಇಟ್ಟುಕೊಳ್ಳಲು ಅಂದು ಹಿಂಜರಿಕೆ ಅನಿಸಿತ್ತು. ಆದರೂ ತಪ್ಪು ಮಾಡಿಬಿಟ್ಟೆ.
ಇದೇ ಕಾರ್ಯಕ್ರಮದಲ್ಲಿ ತಂದೆಯನ್ನು ಸ್ಮರಿಸಿ ಮಾತನ್ನಾಡಿದ ದತ್.. ನಾನು ಜೈಲಿಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಅಪ್ಪ ಸುನಿಲ್ ದತ್ ಕಣ್ಣೀರು ಇಟ್ಟಿದ್ದರು. ಪೊಲೀಸರು ನನ್ನ ಕೈಗೆ ಕೋಳ ಹಾಕುತ್ತಿದ್ದಾಗ ಅಪ್ಪ ಅಳುತ್ತಿದ್ದರು. ಮಗನನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುತ್ತಿರೋದಕ್ಕೆ ಅವರು ತುಂಬಾ ನೊಂದುಕೊಂಡಿದ್ದರು. ಆಗ ನಾನು ಅಪ್ಪನನ್ನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಎಷ್ಟೇ ಸಮಾಧಾನ ಮಾಡಿದರೂ ತಂದೆ ಮತ್ತೆ ಮತ್ತೆ ಕುಸಿದು ಬೀಳುತ್ತಿರೋದನ್ನ ನೋಡಿ ನನಗೆ ತುಂಬಾ ನೋವು ಆಗಿತ್ತು ಎನ್ನುತ್ತ ಸಂಜಯ್ ದತ್ ಕಣ್ಣೀರು ಇಟ್ಟಿದ್ದಾರೆ.
ಸಂಜಯ್ ದತ್ ಸಿನಿಮಾ ರಂಗ ಮತ್ತು ತಮ್ಮ ವೈಯಕ್ತಿಕ ಬದುಕಿನಲ್ಲಿ ನಡೆದ ವಿಚಾರಗಳಿಂದ ಖ್ಯಾತಿ ಪಡೆದವರು. ಮಾದಕ ವ್ಯಸನದ ವಿರುದ್ಧ ಹೋರಾಡುವುದರಿಂದ ಹಿಡಿದು ಜೈಲು ಶಿಕ್ಷೆ ಅನುಭವಿಸುವವರೆಗೂ ಸಂಜಯ್ ದತ್ ಬದುಕನ್ನು ನೋಡಿದ್ದಾರೆ. 1993ರಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟದ ಬಳಿಕ ಅವರ ಬದುಕು ಸಂಪೂರ್ಣವಾಗಿ ಕುಸಿದು ಹೋಗಿತ್ತು. ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದರು.


