ಭಾಗ್ಯಲಕ್ಷ್ಮಿ ಸೀರಿಯಲ್ಗೆ ಎಂಟ್ರಿ ಕೊಟ್ಟಿರೋ ಮುಖ್ಯಮಂತ್ರಿ' ಚಂದ್ರು ಮತ್ತು ಹರೀಶ್ ಅವರು ಈ ಸೀರಿಯಲ್ ಬಗ್ಗೆ ಹೇಳಿದ್ದೇನು? ಇಲ್ಲಿದೆ ಕುತೂಹಲದ ವಿಷ್ಯ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ಗೆ ನಟರಾದ ಹರೀಶ್ ಮತ್ತು ಮುಖ್ಯಮಂತ್ರಿ ಚಂದ್ರು ಎಂಟ್ರಿಯಾಗಿದೆ. ವಿಲನ್ ಕನ್ನಿಕಾಳ ಅಪ್ಪನಾಗಿ ಚಂದ್ರು ಹಾಗೂ ಅಣ್ಣನಾಗಿ ಹರೀಶ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸೀರಿಯಲ್ನಲ್ಲಿಲ ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ಮಾತುಕತೆ, ಗೊಂದಲ ನಡೀತಿದೆ. ಪೂಜಾಳನ್ನು ನೋಡಲು ಬಂದ ಹುಡುಗನ ಕಡೆಯವರಿಗೆ ಇಲ್ಲಸಲ್ಲದ್ದನ್ನು ಹೇಳಿ ತಾಂಡವ್ ಮದುವೆ ತಪ್ಪಿಸಿದ್ದಾನೆ. ಇದೀಗ ಪೂಜಾಳನ್ನು ಲವ್ ಮಾಡ್ತಿದ್ದ ಕಿಶನ್ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಕಿಷನ್ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿದ್ದ. ಆದರೆ ಅದು ವರ್ಕ್ಔಟ್ ಆಗದೇ ಮದುವೆಯವರೆಗೂ ಬಂದಿದೆ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ.
ಆದರೆ ಈಗ ಆಗಿರೋದೇ ಬೇರೆ. ಪೂಜಾಳ ಮದುವೆಯನ್ನು ಆಕೆ ಇಷ್ಟಪಟ್ಟಿರುವ ಕಿಶನ್ ಜೊತೆ ಮಾಡಿಸಲು ಆತನ ಅಪ್ಪ ಒಪ್ಪಿಗೆ ನೀಡಿದ್ದಾರೆ. ಈ ಅಪ್ಪನ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಎಂಟ್ರಿ ಆಗಿದೆ. ಆದರೆ ಮದುವೆಯನ್ನು ತಪ್ಪಿಸಲು ಕನ್ನಿಕಾ ಮತ್ತೊಬ್ಬ ಅಣ್ಣನ ಮೊರೆ ಹೋಗಿದ್ದಾಳೆ. ನಟ ಹರೀಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾಗ್ಯಳಿಗೆ ಹೊಸದೊಂದು ಸವಾಲು ಎದುರಾಗಿದೆ ಎನ್ನುವ ಮೂಲಕ ಈ ಪಾತ್ರದ ಎಂಟ್ರಿ ಆಗಿದೆ. ಆತ ಯಾರು ಎನ್ನುವುದು ತಿಳಿಯದೇ ಕುಸುಮಾ ಹೆಜ್ಜೆ ಹೆಜ್ಜೆಗೂ ಆತನ ಜೊತೆ ಕಾಲು ಕೆದರಿ ಜಗಳಕ್ಕೆ ನಿಂತಿದ್ದಾಳೆ. ಭಾಗ್ಯಳೂ ಸಾಥ್ ಕೊಟ್ಟಿದ್ದಾಳೆ. ಆದರೆ ತಾಂಡವ್ ಶ್ರೇಷ್ಠಾಳನ್ನು ಮದುವೆಯಾದ ಮೇಲೆ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವಂತೆ ನೆಟ್ಟಿಗರ ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿದೆ. ಇದರ ನಡುವೆಯೇ ಹೊಸ ಪಾತ್ರದ ಎಂಟ್ರಿ ಆಗಿರುವ ಕಾರಣ, ಈತ ಭಾಗ್ಯಳ ಲೈಫ್ಗೂ ಎಂಟ್ರಿ ಕೊಡುತ್ತಾನೆ. ಭಾಗ್ಯಳಿಗೆ ಜೋಡಿ ಆಗುತ್ತಾನೆ, ಹಾಗೆಯೇ ಆಗಬೇಕು. ಭಾಗ್ಯಳಿಗೆ ಇನ್ನೊಂದು ಮದುವೆಯಾಗಬೇಕು ಎನ್ನುವುದು ನೆಟ್ಟಿಗರ ಆಶಯ.
ಇದಿಷ್ಟು ಭಾಗ್ಯಲಕ್ಷ್ಮಿಯ ಕಥೆಯಾದ್ರೆ, ಇನ್ನು ಅಪ್ಪನ ಪಾತ್ರದಲ್ಲಿ ನಟಿಸ್ತಿರೋ ಮುಖ್ಯಮಂತ್ರಿ ಚಂದ್ರು ಅವರು, ಎಲ್ಲಾ ಸೀರಿಯಲ್ಗಳಲ್ಲಿಯೂ ನನಗೆ ಹೆಂಡ್ತಿನೇ ಇರಲ್ಲ ಎಂದು ತಮಾಷೆ ಮಾಡಿದ್ದಾರೆ. ಎಂಟರೇನ್ಮೆಂಟ್ ಟ್ಯಾಬ್ಲೆಟ್ ಎನ್ನುವ ಯುಟ್ಯೂಬ್ ಚಾನೆಲ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಭಾಗ್ಯಳ ತಂಗಿ ಪೂಜಾಳ ಮದುವೆ ರಾಜೇಶ್ ಧ್ರುವ (Rajesh Dhruva ) ಜೊತೆ ಫಿಕ್ಸ್ ಆಗಿದೆ. ಈ ಬಗ್ಗೆ ರಾಜೇಶ್ ಅವರು ಈ ಯುಟ್ಯೂಬ್ ಚಾನೆಲ್ನಲ್ಲಿ ಮುಖ್ಯಮಂತ್ರಿ ಚಂದ್ರು ಮತ್ತು ಹರೀಶ್ ಅವರ ಜೊತೆ ಮಾತನಾಡಿದ್ದಾರೆ. ಇಬ್ಬರೂ ಈ ಸೀರಿಯಲ್ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆಗ ರಾಜೇಶ್ ಅವರು ಇಲ್ಲಿಯೂ ನಿಮಗೆ ಪತ್ನಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಮುಖ್ಯಮಂತ್ರಿ ಚಂದ್ರು ಅವರು ಹೌದು. ಎಲ್ಲಾ ಸೀರಿಯಲ್ಗಳಲ್ಲಿಯೂ ನನಗೆ ಪತ್ನಿನೇ ಇರಲ್ಲ ಎಂದಿದ್ದಾರೆ.
ಅಂದಹಾಗೆ ಮುಖ್ಯಮಂತ್ರಿ ಚಂದ್ರು ಅವರ ರಿಯಲ್ ಲೈಫ್ ಪತ್ನಿ ಹೆಸರು ಪದ್ಮಾ ಚಂದ್ರು. ಈ ಹಿಂದೆ ಪದ್ಮಾ ಅವರು ತಮ್ಮ ಜೀವನದ ಹಲವು ಘಟನೆಗಳ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರ ಜೊತೆ ಮಾತನಾಡಿದ್ದರು. ತಮ್ಮ ಕುಟುಂಬದ ಹಲವು ವಿಷಯಗಳನ್ನು ಇಲ್ಲಿ ಅವರು ತೆರೆದಿಟ್ಟಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಆದರೆ ಕಿರಿಯ ಪುತ್ರ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿರುವ ಬಗ್ಗೆ ನೋವು ತೋಡಿಕೊಂಡಿದ್ದರು ಪದ್ಮಾ. ತಮ್ಮ ಮಗ ಮತ್ತು ಸೊಸೆಯ ಬಗ್ಗೆ ಸಿಕ್ಕಾಪಟ್ಟೆ ನೋವು ಹಾಗೂ ಸಿಟ್ಟಿನಿಂದ ಪದ್ಮಾ ಅವರು ಮಾತನಾಡಿದ್ದರು. ಮಗ ಯಾವಳನ್ನೋ ಕಟ್ಟಿಕೊಂಡ. ಅವಳ ಜಾತಕ ನೋಡಿದಾಗ, ಅತ್ತೆಗೆ ಸಾವು ಎಂದು ಇತ್ತು. ಅಣ್ಣ-ತಮ್ಮಂದಿರು ಚೆನ್ನಾಗಿ ಇರಲ್ಲ ಎಂದು ಇತ್ತು. ಅದಕ್ಕಾಗಿಯೇ ಅವಳ ಜೊತೆ ಮದುವೆಯಾಗುವುದು ಬೇಡ ಎಂದೇ ಹೇಳಿದೆವು. ಆದರೆ ಆತ ಅದನ್ನು ಕೇಳಲೇ ಇಲ್ಲ. ನಾವು ಬೇಕೋ, ಅವಳು ಬೇಕೋ ಎಂದು ಕೇಳಿದಾಗ, ಅವಳೇ ಬೇಕು ಎಂದು ಅವಳ ಹಿಂದೆ ಹೋದ. ಅವಳ ಜಾತಕ ಚೆನ್ನಾಗಿದ್ರೆ ನಾವು ಮದುವೆ ಮಾಡ್ತಿದ್ವಿ. ಆದರೆ ಹಾಗೆ ಇರಲಿಲ್ಲ. ಮಗನನ್ನು 33 ವರ್ಷ ಕಷ್ಟಪಟ್ಟು ಸಾಕಿದ್ವಿ. ವರ್ಷಾನುಗಟ್ಟಲೆ ನಿದ್ದೆ ಮಾಡದೇ ಸಾಕಿದ್ದೆ. ಅದ್ಯಾವುದೂ ಉಪಯೋಗಕ್ಕೆ ಬರಲೇ ಇಲ್ಲ. ಅವಳೇ ಬೇಕು ಎಂದು ನಮ್ಮನ್ನು ಬಿಟ್ಟು ಹೋಗೇ ಬಿಟ್ಟ ಎಂದು ಪದ್ಮಾ ಅವರು ನೋವು ತೋಡಿಕೊಂಡಿದ್ದರು.

