ನವದೆಹಲಿ(ಜು.3):  ಬಾಲಿವುಡ್‌ನ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಮಹಾಕ್ಷಯ್ ತಮಗೆ ಮೋಸ ಮಾಡಿದ್ದಲ್ಲದೇ , ತಮ್ಮ ಮೇಲೆ ಅತ್ಯಾಚಾರ ಕೂಡ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಮಹಾಕ್ಷಯ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು. ಈ ಹಿನ್ನೆಲೆಯಲ್ಲಿ ತಾವು ಗರ್ಭವತಿ ಆದ ಮೇಲೆ  ಬಲವಂತವಾಗಿ ತಮಗೆ ಔಷಧಿ ನೀಡಿ ಮಗು ಹೊಟ್ಟೆಯಲ್ಲೇ ಸಾಯುವಂತೆ ಮಾಡಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಮಹಾಕ್ಷಯ್ ತಾಯಿ, ಮಿಥುನ್ ಪತ್ನಿ ಯೋಗಿತಾ ಬಾಲಿ ಈ ವಿಷಯ ಯಾರಿಗೂ ಬಾಯ್ಬಿಡದಂತೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಮಹಿಳೆ ಮಾಡುತ್ತಿರುವ ಆಪಾದನೆ ಗಂಭೀರ ಸ್ವರೂಪದ್ದಾಗಿದ್ದು, ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.