ಯಾರ ಹಣೆಬರಹದಲ್ಲಿ ಅದೇನು ಇರುತ್ತದೆಯೋ ಆ ದೇವನೇ ಬಲ್ಲ ಎನ್ನುವುದಕ್ಕೆ ಖ್ಯಾತ ನಟ ಮಿಥುನ್​ ಚಕ್ರವರ್ತಿಯವರ ಈ ದತ್ತು ಪುತ್ರಿಯೇ ಸಾಕ್ಷಿ. ಬೇಡ ಎಂದು ಬೀಸಾಕಿದ ಕಂದಮ್ಮ ಇಂದು ಹಾಲಿವುಡ್​ನಲ್ಲಿ ಮಿಂಚುತ್ತಿದ್ದು, ಆಕೆಯ ಸ್ಟೋರಿ ಇಲ್ಲಿದೆ... 

ಒಬ್ಬೊಬ್ಬರ ಹಣೆಬರಹವನ್ನು ಒಂದೊಂದು ರೀತಿ ಬರೆದು ಕಳಿಸಿರ್ತಾನೆ ಆ ಬ್ರಹ್ಮ. ಯಾರ ಅದೃಷ್ಟ ಅದ್ಯಾವಾಗ ಖುಲಾಯಿಸತ್ತೋ, ಯಾವ ಅದೃಷ್ಟವಂತರು ಅದ್ಯಾವಾಗ ಬೀದಿಗೆ ಬರುತ್ತಾರೋ ಆ ದೇವರೇ ಬಲ್ಲ. ಅಂಥದ್ದೇ ಒಂದು ರೋಚಕ ಸ್ಟೋರಿ ಹಾಲಿವುಡ್​ ನಟಿ ದಿಶಾನಿ ಚಕ್ರವರ್ತಿ ಅವರದ್ದು. ಡಿಸ್ಕೊ ಕಿಂಗ್​ ಎಂದೇ ಫೇಮಸ್​ ಆಗಿರೋ ಖ್ಯಾತ ಬಾಲಿವುಡ್​ ನಟ ಮಿಥುನ್​ ಚಕ್ರವರ್ತಿ ಅವರಿಗೆ ಕಸದ ತೊಟ್ಟಿಯಲ್ಲಿ ಸಿಕ್ಕ ದಿಶಾನಿ ಅವರ ಸ್ಟೋರಿ ಇದು. 2017 ರಲ್ಲಿ ಬಿಡುಗಡೆಯಾದ ತಮ್ಮ ಕಿರುಚಿತ್ರ 'ಗಿಫ್ಟ್' ಮೂಲಕ ಹಾಲಿವುಡ್‌ಗೆ ಪದಾರ್ಪಣೆ ಮಾಡಿದರು ದಿಶಾನಿ. ಅದಾದ ಬಳಿಕ 'ಹೋಲಿ ಸ್ಮೋಕ್', 'ಅಂಡರ್‌ಪಾಸ್', 'ವೈ ಡಿಡ್ ಯು ಡೂ ಇಟ್' ಮತ್ತು 'ಟು ಫೇಸ್ಡ್', 'ದಿ ಗೆಸ್ಟ್' ಎಂಬ ಹಾಲಿವುಡ್​ ಚಿತ್ರಗಳಿಂದ ಖ್ಯಾತಿ ಗಳಿಸಿದ್ದಾರೆ ಇವರು. ತಮ್ಮ ತಂದೆ ಮಿಥುನ್​ ಚಕ್ರವರ್ತಿ ಅವರಿಂದ ಪ್ರೇರಣೆಗೊಂಡು ಅಪ್ಪನ ಹಾದಿಯನ್ನೇ ತುಳಿದಿರುವ ದಿಶಾನಿ ಇಂದು ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ.

ಮಿಥುನ್ ಚಕ್ರವರ್ತಿ ಅವರಿಗೆ ಒಟ್ಟು ನಾಲ್ಕು ಜನ ಮಕ್ಕಳು. ಮಹಾಕ್ಷೆಯ್, ಉಶ್ಮೆಯ್, ನಮಾಶಿ ಹಾಗೂ ದಿಶಾನಿ. ಮೊದಲು ಮೂವರು ಗಂಡುಮಕ್ಕಳು ಇದ್ದರೂ ನಾಲ್ಕನೆಯ ಮಗು ದಿಶಾನಿಯನ್ನು ದತ್ತು ಪಡೆದವರು ನಟ. ಅಷ್ಟಕ್ಕೂ ಆಗಿದ್ದೇನೆಂದರೆ, ಮಗುವೊಂದು ರಸ್ತೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು. ಆ ಮಗುವಿನ ತಂದೆ-ತಾಯಿಗಾಗಿ ಹುಡುಕಾಟ ನಡೆಸಿದರು ಯಾರು ಎಂದು ಪತ್ತೆಯಾಗಿಲ್ಲ. ಮರುದಿನ ಪತ್ರಿಕೆಗಳಲ್ಲಿ ಈ ಮಗುವಿನ ಬಗ್ಗೆ ಸುದ್ದಿ ಮಾಡಲಾಗಿತ್ತು. ಇದನ್ನು ಮಿಥುನ್​ ಅವರು ಗಮನಿಸಿದರು. ಇದಾಗಲೇ ಮೂವರು ಗಂಡುಮಕ್ಕಳ ಅಪ್ಪ ಆಗಿದ್ದರೂ ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಇದಕ್ಕೆ ಪತ್ನಿ ಯೋಗಿತಾ ಬಾಲಿ ಕೂಡ ಒಪ್ಪಿಗೆ ನೀಡಿದರು.

ಇಂದು ಅದೇ ಪುತ್ರಿ ಹಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ತಂದೆಯ ನಟನೆಯೇ ಅವರಿಗೆ ಸ್ಫೂರ್ತಿ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ದಿಶಾ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಲಾಸ್ ಏಂಜಲೀಸ್​ಗೆ ತೆರಳಿದರು. ಅವರು ಪ್ರತಿಷ್ಠಿತ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ನಟನೆಯಲ್ಲಿ ಪದವಿ ಪಡೆದರು. ಅಲ್ಲಿ ತಮ್ಮ ನಟನಾ ಕೌಶಲ ಬೆಳೆಸಿಕೊಂಡರು. ಅಲ್ಲಿಯೇ ಅವರು ಹಾಲಿವುಡ್​ಗೆ ಎಂಟ್ರಿ ಕೊಟ್ಟರು. ಅವರು ಮಾಡಿದ ಹಾಲಿವುಡ್​ ಚಿತ್ರಗಳೆಲ್ಲವೂಎರಡೂ ಕಿರುಚಿತ್ರಗಳು ಹಿಟ್ ಆದವು. ದಿಶಾನಿ ಸಂದರ್ಶನವೊಂದರಲ್ಲಿ ತನ್ನ ತಂದೆ ಮಿಥುನ್ ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಬಹಿರಂಗಪಡಿಸಿದರು, ಅವರೇ ನನಗೆ ಸ್ಫೂರ್ತಿ ಮತ್ತು ಅವರ ಮಾರ್ಗದರ್ಶಕ ಎಂದು ಹೇಳಿದ್ದಾರೆ.

ಬಾಲಿವುಡ್​ನಲ್ಲಿಯೂ ದಿಶಾನಿ ಅವರಿಗೆ ಮಿಂಚುವ ಆಸೆ ಇದೆ. ಆಕೆಯ ನಟನೆಯಿಂದ ಇದಾಗಲೇ ಹಾಲಿವುಡ್​ನಲ್ಲಿ ಸಾಕಷ್ಟು ಅವಕಾಶಗಳೂ ಸಿಗುತ್ತಿದ್ದು, ಸದ್ಯ ಬಾಲಿವುಡ್​ನಲ್ಲಿಯೂ ಕಾಲಿಡುವ ಸಾಧ್ಯತೆ ಇದೆ. ಅದೃಷ್ಟ ಎಂದರೆ ಇದೇ ತಾನೆ? ಆಕೆ ಹುಟ್ಟಿದ ಮನೆಯಲ್ಲಿಯೇ ಇದ್ದಿದ್ದರೆ ಬಹುಶಃ ಅದ್ಯಾವ ಗುಡಿಸಿನಲ್ಲಿ, ಅದ್ಯಾರ ಮನೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕಿತ್ತೋ ಗೊತ್ತಿಲ್ಲ. ಆದರೆ ಕಸದ ತೊಟ್ಟಿಯೇ ಆಕೆಗೆ ಅದೃಷ್ಟ ತಂದುಕೊಟ್ಟಿತು. ವಿಧಿಯಾಟ, ದೈವಲೀಲೆ, ಹಣೆಬರಹ, ಕಾಲದ ಮಹಿಮೆ ಎಂದೆಲ್ಲಾ ಏನು ಕರೆಯಲಾಗುತ್ತದೆಯೋ ಅದಕ್ಕೆ ಸಾಕ್ಷಿಯಾಗಿದೆ ದಿಶಾನಿ ಸ್ಟೋರಿ.