ನಟಿ ಮೀರಾ ವಾಸುದೇವನ್ ಅವರು ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್‌ನಿಂದ ಶುರುವಾದ ಈ ದೌರ್ಜನ್ಯ ಹದಿನೇಳನೇ ವಯಸ್ಸಿನವರೆಗೂ ಮುಂದುವರಿದಿತ್ತು ಎಂದು ಮೀರಾ ಹೇಳಿದ್ದಾರೆ.

ಮೋಹನ್‌ಲಾಲ್ ನಟನೆಯ, ಬ್ಲೆಸ್ಸಿ ನಿರ್ದೇಶನದ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಮೀರಾ ವಾಸುದೇವನ್. ಮಲಯಾಳಂ ಮತ್ತು ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ಮೀರಾ ವಾಸುದೇವನ್ ಉತ್ತಮ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಮತ್ತು ವಿಚ್ಛೇದನದ ಬಗ್ಗೆ ಮೀರಾ ಮಾತನಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗ, ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಅವರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್‌ನಿಂದ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮೀರಾ ವಾಸುದೇವನ್ ಇದೀಗ ಮಾತನಾಡಿದ್ದಾರೆ. "ನೀನೊಬ್ಬಳು ಕೆಟ್ಟ ಹುಡುಗಿ ಅಂತ ಮನೆಯಲ್ಲಿ ಹೇಳಿಬಿಡ್ತೀನಿ, ಅದರಿಂದ ನಿಮ್ಮ ಅಪ್ಪ-ಅಮ್ಮ ಆತ್ಮ*ಹ*ತ್ಯೆ ಮಾಡ್ಕೊತಾರೆ" ಅಂತ ಆತ ಬೆದರಿಸಿದ್ದಾಗಿಯೂ ಮೀರಾ ಹೇಳಿದ್ದಾರೆ. ಹದಿನೇಳು ವರ್ಷ ವಯಸ್ಸಿನವರೆಗೂ ಈ ದೌರ್ಜನ್ಯವನ್ನು ಸಹಿಸಿಕೊಂಡಿದ್ದೆ, ಈ ನೋವಿನಿಂದಾಗಿ ಕಿರುಚಾಡುತ್ತಿದ್ದೆ, ಅಳುತ್ತಿದ್ದೆ ಮತ್ತು ನನಗೆ ನಾನೇ ಗಾಯ ಮಾಡಿಕೊಳ್ಳುತ್ತಿದ್ದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಧನ್ಯಾ ವರ್ಮಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮೀರಾ ಈ ಎಲ್ಲ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಅವನು ನನಗೆ ತಮಿಳು ಹೇಳಿಕೊಡುತ್ತಿದ್ದ ಟ್ಯೂಷನ್ ಟೀಚರ್. ನಾನು ತಮಿಳಿನಲ್ಲಿ ಸ್ವಲ್ಪ ವೀಕ್ ಇದ್ದೆ. ನಮ್ಮ ಅಜ್ಜಿ ಮೂಲಕ ಆತ ಪರಿಚಯ ಆಗಿದ್ದ. ಮನೆಯಲ್ಲಿ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಆತ ನನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲಿಗೆ ಬರುತ್ತಿದ್ದ ಬೇರೆ ಹುಡುಗರು ಮತ್ತು ಹುಡುಗಿಯರ ಮೇಲೂ ಆತ ದೌರ್ಜನ್ಯ ನಡೆಸುತ್ತಿದ್ದ. ವರ್ಷಗಳ ಕಾಲ ನಾನು ಯಾರ ಹತ್ತಿರವೂ ಹೇಳಲಿಲ್ಲ. ಯಾಕಂದ್ರೆ ಅವನು ಸದಾ ನನ್ನನ್ನು ಬೆದರಿಸುತ್ತಿದ್ದ. ಈ ಘಟನೆ ಶುರುವಾದಾಗ ನನಗೆ ಏಳು ಅಥವಾ ಎಂಟು ವರ್ಷ ಅಷ್ಟೇ.

ಆ ಕಾಲದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವಿರಲಿಲ್ಲ. ಅವನು ನನ್ನನ್ನು ಬೆದರಿಸಿದ. ನಾನು ಚಿಕ್ಕವಳಾಗಿದ್ದರಿಂದ ಅವನ ಮಾತಿಗೆ ಹೆದರಿದೆ. ನಾನು ಕೆಟ್ಟ ಹುಡುಗಿ ಅಂತ ಸ್ಕೂಲ್ ಟೀಚರ್ಸ್, ಅಪ್ಪ-ಅಮ್ಮನ ಹತ್ತಿರ ಹೇಳಿಬಿಡ್ತೀನಿ ಅಂತ ಬೆದರಿಸಿದ. ಅದರಿಂದ ನಿನ್ನನ್ನು ಮನೆಯಿಂದ ಹೊರಗೆ ಹಾಕ್ತಾರೆ, ಅವರು ಆತ್ಮ*ಹ*ತ್ಯೆ ಮಾಡ್ಕೊತಾರೆ ಅಂದಾಗ ನಾನು ಪೂರ್ತಿ ಹೆದರಿಹೋದೆ ಎಂದು ಮೀರಾ ವಾಸುದೇವನ್ ಹೇಳಿದ್ದಾರೆ. ದೌರ್ಜನ್ಯಕ್ಕೆ ಒಳಗಾದವರ ದೇಹ ಭಾಷೆಯೇ ಬದಲಾಗಿಬಿಡುತ್ತದೆ. ದೌರ್ಜನ್ಯ ಮಾಡುವವರ ಮುಂದೆ ಸಂತ್ರಸ್ತರ ನಡವಳಿಕೆಯೇ ಬದಲಾಗುತ್ತದೆ. ಯಾವುದೇ ಕೆಟ್ಟ ಅನುಭವ ಆಗದವರು, ಏನಾದರೂ ಆದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ.

ಕಿರುಚುತ್ತಿದ್ದೆ, ಅಳುತ್ತಿದ್ದೆ

ಆದರೆ ಈ ರೀತಿ ಕೆಟ್ಟ ಅನುಭವ ಆದವರ ಪ್ರತಿಕ್ರಿಯೆ ಬೇರೆಯೇ ಇರುತ್ತದೆ. ಅವರ ದೇಹ ಭಾಷೆ ಬದಲಾಗುತ್ತದೆ. ಹೆದರಿಕೆ ಕಾಣಿಸುತ್ತದೆ. ಅವರು ಸುಲಭವಾಗಿ ಬಗ್ಗುತ್ತಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಾರೆ. ಇದರಿಂದ ನಾವು ಹೊರಬರಬೇಕು. ಹದಿನೇಳು ವರ್ಷದವರೆಗೂ ನಾನು ಈ ನರಕಯಾತನೆ ಅನುಭವಿಸಬೇಕಾಯಿತು. ಅದು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ನಾನು ಕಿರುಚುತ್ತಿದ್ದೆ, ಅಳುತ್ತಿದ್ದೆ, ನನಗೆ ನಾನೇ ಗಾಯ ಮಾಡಿಕೊಳ್ಳುತ್ತಿದ್ದೆ. ನಂತರ, ನಾನು ಹೇಳುವುದನ್ನು ಯಾರೂ ಕೇಳುವುದಿಲ್ಲ, ಅರ್ಥಮಾಡಿಕೊಳ್ಳುವುದಿಲ್ಲ ಅಂತ ಅನಿಸಿದ ಮೇಲೆ ಸುಮ್ಮನಾಗಿಬಿಟ್ಟೆ. ನನಗೆ ಸ್ನೇಹಿತರೂ ಇರಲಿಲ್ಲ. ಅದೇ ಟೀಚರ್ ನನ್ನ ತಂಗಿಗೂ ಪಾಠ ಮಾಡ್ತೀನಿ ಅಂದಾಗ ನಾನು ದೊಡ್ಡ ಗಲಾಟೆ ಮಾಡಿದೆ. ಆದರೆ ನನಗೆ ಲೈಂಗಿಕತೆಯ ಬಗ್ಗೆ ಏನೂ ಗೊತ್ತಿರಲಿಲ್ಲ. ನನಗೆ ಏನಾಗುತ್ತಿದೆ ಅಂತಾನೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ, ಅಪ್ಪ-ಅಮ್ಮನಿಗೆ ಹೇಗೆ ವಿವರಿಸಬೇಕು ಅಂತಲೂ ನನಗೆ ಗೊತ್ತಿರಲಿಲ್ಲ ಎಂದು ಮೀರಾ ವಾಸುದೇವನ್ ಮಾತು ಮುಗಿಸಿದರು.