18 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಾಟ್' ಚಿತ್ರಕ್ಕೆ ಮೋಹನ್‌ಲಾಲ್ ಆಯ್ಕೆಯಾಗಿದ್ದು ಹೇಗೆ ಎಂಬ ಸೀಕ್ರೆಟ್ ಅನ್ನು ಮಮ್ಮುಟ್ಟಿ ಅವರೇ ರಿವೀಲ್ ಮಾಡಿದ್ದಾರೆ.

ಮಲಯಾಳಂ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ, ಇಡೀ ದೇಶದ ಸಿನಿ ರಸಿಕರು 'ಪೇಟ್ರಿಯಾಟ್' ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಬರೋಬ್ಬರಿ 18 ವರ್ಷಗಳ ನಂತರ ಮಲಯಾಳಂನ ಇಬ್ಬರು ದಿಗ್ಗಜರಾದ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಂದೇ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು. ಈ ಸಿನಿಮಾ ಸದ್ಯ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

Add Asianetnews Kannada as a Preferred SourcegooglePreferred

ಈಗ, ಈ ಸಿನಿಮಾದಲ್ಲಿ ಕರ್ನಲ್ ರಹೀಂ ನಾಯಕ್ ಪಾತ್ರಕ್ಕೆ ಮೋಹನ್‌ಲಾಲ್ ಅವರನ್ನು ಆಯ್ಕೆ ಮಾಡಿದ್ದರ ಹಿಂದಿನ ಕಥೆಯನ್ನು ಸ್ವತಃ ಮಮ್ಮುಟ್ಟಿ ಅವರೇ ಬಿಚ್ಚಿಟ್ಟಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಶುರುವಾಗಿರುವ 'ಪೇಟ್ರಿಯಾಟ್: ಲೆಜೆಂಡ್ಸ್ ಹ್ಯಾಂಗ್‌ಔಟ್' ಅನ್ನೋ ಚಾಟ್ ಶೋನಲ್ಲಿ ಮಮ್ಮುಟ್ಟಿ ಈ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ಮಮ್ಮುಟ್ಟಿ ಹೇಳಿದ್ದೇನು?

"ನಮ್ಮ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಬೇಕು, ಅದಕ್ಕೆ ಬೇರೆ ಇಂಡಸ್ಟ್ರಿಯಿಂದ ಯಾರನ್ನಾದರೂ ಹಾಕಿಕೊಳ್ಳೋಣ ಅಂತ ನಿರ್ದೇಶಕ ಮಹೇಶ್ ನಾರಾಯಣನ್ ಮೊದಲು ಐಡಿಯಾ ಕೊಟ್ಟರು. ಬೇರೆ ಭಾಷೆಯ ಕೆಲವು ನಟರ ಹೆಸರನ್ನೂ ಅವರು ಹೇಳಿದ್ದರು. ಆಗ ನಾನು ಹೇಳಿದೆ, 'ನಾವು ಯಾಕೆ ದೂರ ಹೋಗ್ಬೇಕು? ಇಲ್ಲೇ ನಮ್ಮಲ್ಲೊಬ್ಬರು ಇದ್ದಾರಲ್ಲಾ. ಅವರ ಹತ್ತಿರ ಒಮ್ಮೆ ಮಾತಾಡಿ ನೋಡೋಣ' ಅಂತ. ಹಾಗೆ ಮಹೇಶ್ ಅವರು ಮೋಹನ್‌ಲಾಲ್ ಹತ್ತಿರ ಹೋಗಿ ಕಥೆ ಹೇಳಿದರು" ಎಂದು ಮಮ್ಮುಟ್ಟಿ ಅಸಲಿ ಕಥೆ ಬಿಚ್ಚಿಟ್ಟರು.

"ಈ ಪಾತ್ರ ತುಂಬಾನೇ ಮುಖ್ಯವಾದದ್ದು. ಸಿನಿಮಾದ ಒಂದು ಹಂತದಲ್ಲಿ ಕಥೆ ಮುಂದೆ ಸಾಗಬೇಕೆಂದರೆ ಈ ಪಾತ್ರ ಬೇಕೇಬೇಕು. ಈ ಬಗ್ಗೆ ಮಾತಾಡಿದಾಗ ಅವರು (ಮೋಹನ್‌ಲಾಲ್) ಸರಿ, ನಾನು ಜೊತೆಯಾಗುತ್ತೇನೆ ಎಂದರು. ನಿಜ ಹೇಳಬೇಕೆಂದರೆ, ನಾನು ಇದನ್ನು ನಿರೀಕ್ಷಿಸಿರಲಿಲ್ಲ" ಎಂದು ಮಮ್ಮುಟ್ಟಿ ಹೇಳಿದರು. ಈ ಬಗ್ಗೆ ಮೋಹನ್‌ಲಾಲ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. "ಇಂಥದ್ದೊಂದು ಸಿನಿಮಾದ ಭಾಗವಾಗೋದು ಅಂದ್ರೆ ಅದೊಂದು ಥ್ರಿಲ್ ಮತ್ತು ಅದೃಷ್ಟ ಕೂಡ. ಇಂಥ ಪಾತ್ರ ಸಿಗೋದು ಸುಲಭವಲ್ಲ.

ನಾವು ಒಟ್ಟಿಗೆ ಸಿನಿಮಾ ಮಾಡಿ ತುಂಬಾ ದಿನಗಳಾಗಿತ್ತು. ನನ್ನ ಪಾತ್ರಕ್ಕೆ ಸಿನಿಮಾದಲ್ಲಿ ಅದ್ಭುತವಾದ ಸ್ಥಾನವಿದೆ. ಅದರ ಆರಂಭ ಮತ್ತು ಅಂತ್ಯ ಎರಡೂ ತುಂಬಾ ಚೆನ್ನಾಗಿ ಬಂದಿದೆ. ಬಹುಶಃ ನಾನು ಇಂಥ ಪಾತ್ರ ಮಾಡುತ್ತಿರುವುದು ಇದೇ ಮೊದಲು. ಇದರಲ್ಲಿ ಒಬ್ಬ ಸ್ಟಾರ್ ನಟನನ್ನು ಬಳಸಿಕೊಂಡಿಲ್ಲ, ಬದಲಿಗೆ ಒಬ್ಬ ನಟನಾಗಿ ಪರ್ಫಾರ್ಮ್ ಮಾಡುವವರಿಗೆ ಅವಕಾಶ ಕೊಟ್ಟಿದ್ದಾರೆ. ಇದು 'ಬೇಡ' ಎಂದು ಹೇಳಲು ಆಗದಂಥ ಪಾತ್ರ" ಎಂದು ಮೋಹನ್‌ಲಾಲ್ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಮಮ್ಮುಟ್ಟಿ, "ಸಿನಿಮಾ ನೋಡುವಾಗ ನಿಮಗೆ ಆ ಪಾತ್ರ ಮಾತ್ರ ನೆನಪಿರುತ್ತೆ, ಮೋಹನ್‌ಲಾಲ್ ಕೂಡ ನೆನಪಾಗಲ್ಲ" ಎಂದರು.