ಮದುವೆಯಾದ ಹೊಸತರದಲ್ಲಿ ತಮ್ಮ ಜೀವನ ಎಷ್ಟು ಕಷ್ಟಮಯವಾಗಿತ್ತು, ಮದುವೆಯಾದರೂ ಒಂಟಿಯಾಗಿ ಬದುಕಬೇಕಾಗಿತ್ತು ಎಂಬಿತ್ಯಾದಿ ನೋವು ತೋಡಿಕೊಂಡಿದ್ದಾರೆ ನಟಿ ಮಾಧುರಿ ದೀಕ್ಷಿತ್​. ಅವರು ಹೇಳಿದ್ದೇನು?

ಒಬ್ಬರ ಜೊತೆನೇ ದೀರ್ಘಕಾಲ ಸಂಸಾರ ನಡೆಸಿರುವ ಕೆಲವೇ ಕೆಲವು ನಟಿಯರ ಪೈಕಿ ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಎಂದೇ ಫೇಮಸ್​ ಆಗಿರುವ ಮಾಧುರಿ ದೀಕ್ಷಿತ್. 80-90ರ ದಶಕದಲ್ಲಿ ಬಾಲಿವುಡ್​ನ ನಂ.1 ನಟಿ ಎನಿಸಿಕೊಂಡಿದ್ದ ಮಾಧುರಿ, ಈ 57ರ ಹರೆಯದಲ್ಲಿಯೂ ಅದೇ ಚೆಲುವನ್ನು, ಚಾರ್ಮ್​ ಅನ್ನು ಜೊತೆಗೆ ಬೇಡಿಕೆಯನ್ನೂ ಉಳಿಸಿಕೊಂಡವರು. ಬಾಲಿವುಡ್​ನಲ್ಲಿ ಭಾರಿ ಡಿಮಾಂಡ್​ನಲ್ಲಿ ಇರುವಾಗಲೇ ಇವರು ಡಾಕ್ಟರ್​ ಆಗಿರುವ ಶ್ರೀರಾಮ್ ನೆನೆ ಅವರನ್ನು ಮಾಧುರಿ ದೀಕ್ಷಿತ್ ಮದುವೆಯಾದರು. 1999ರಲ್ಲಿ ಇವರ ಮದುವೆ ನಡೆಯಿತು. ಅಲ್ಲಿಂದ ಮಾಧುರಿ ದೀಕ್ಷಿತ್​ ಜೊತೆ ನೇನೆ ಕೂಡ ಸೇರಿಕೊಂಡಿತು. ಮದುವೆಗೂ ಮುನ್ನ ಮಾಧುರಿ ಅವರ ಹೆಸರು ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಿಥುನ್ ಚಕ್ರವರ್ತಿಯಂತಹ ನಟರೊಂದಿಗೆ ಸೇರಿಕೊಂಡಿತ್ತು. ಆದರೆ ಮಾಧುರಿ ಭಾರತೀಯ ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಎಲ್ಲಾ ಗುಸುಗುಸು ಪಿಸುಪಿಸು ನಡುವೆಯೇ ಮಾಧುರಿ ಅವರ ಮದುವೆ ವೈದ್ಯರ ಜೊತೆ ನಡೆಯಿತು. ಮದುವೆಯ ನಂತರ ಮಾಧುರಿ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟು ವಿದೇಶದಲ್ಲಿ ನೆಲೆಸಿದರು.

ಇದೀಗ ಮಾಧುರಿ ದೀಕ್ಷಿತ್ ಮದುವೆಯಾದ ಬಳಿಕ ತಮ್ಮ ದಾಂಪತ್ಯ ಜೀವನದ ಕೆಲವೊಂದು ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಪತಿ ಶ್ರೀರಾಮ್ ನೆನೆ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿ ಇದ್ದರೆ ಇಲ್ಲವೇ ಇಬ್ಬರಲ್ಲಿ ಒಬ್ಬರು ತುಂಬಾ ಹೊಣೆಗಾರಿಕೆ ಕೆಲಸದಲ್ಲಿ ಇದ್ದಾಗ ಸಾಮಾನ್ಯವಾಗಿ ಆಗುವ ತೊಂದರೆಗಳನ್ನು ತಾವು ಅನುಭವಿಸಿರುವ ಕುರಿತು ಅವರು ಮಾತನಾಡಿದ್ದಾರೆ. ಇವರ ಪತಿ ದೊಡ್ಡ ವೈದ್ಯರಾಗಿದ್ದ ಕಾರಣ, ತಮಗೆ ಮದುವೆಯಾದ ಮೇಲೆ ಒಟ್ಟಿಗೆ ಇರಲು ಸಮಯವೇ ಸಿಗುತ್ತಿರಲಿಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಅವರು ಇಲ್ಲದೇ ನಾನು ಎಷ್ಟೋ ಸಮಯವನ್ನು ಒಂಟಿಯಾಗಿಯೇ ಕಳೆಯಬೇಕಿತ್ತು ಎಂದಿದ್ದಾರೆ.

ಇವರಿಗೆ ಇಬ್ಬರು ಮಕ್ಕಳು ಅರಿಯನ್​ ಮತ್ತು ರಿಯಾನ್​. ಮಕ್ಕಳು ಹುಟ್ಟಿದ ಮೇಲೂ ಪತಿಯ ಜೊತೆ ಟೈಂ ಸ್ಪೆಂಡ್​ ಮಾಡುವುದು ಕಷ್ಟವೇ ಆಯಿತು. ಅವರಿಗೆ ನಮಗೆ ಹೆಚ್ಚು ವೇಳೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಎಲ್ಲಾ ಪ್ಲಾನ್ ಬದಲಾಗಿತ್ತು. ನಾನು ಇಡೀ ದಿನ ಫೋನ್​ನಲ್ಲಿ ಬ್ಯುಸಿಯಾಗಿ ಇರಬೇಕಿತ್ತು. ಆ ದಿನಗಳು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯೂ ನನ್ನ ಮೇಲೆಯೇ ಇತ್ತು. ಅಷ್ಟೇ ಅಲ್ಲ... ನಮ್ಮ ಮನೆಯಲ್ಲಿ ಏನಾದರೂ ವಿಶೇಷವಿದ್ದರೂ, ಹಬ್ಬದ ಸಮಯದಲ್ಲಿಯೂ ಅವರು ಜೊತೆಯಲ್ಲಿ ಇರುತ್ತಿರಲಿಲ್ಲ ಎಂದಿರುವ ಮಾಧುರಿ, ಒಂದು ಹಂತದಲ್ಲಿ ಕಣ್ಣೀರಿಟ್ಟಿದ್ದಾರೆ.

'ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನೀವು ಬೇರೆಯವರನ್ನು ನೋಡಿಕೊಂಡಿದ್ದೀರಿ. ಇದೆಲ್ಲಾ ನನಗೆ ಕೆಲವೊಮ್ಮೆ ತುಂಬಾ ಕಷ್ಟಕರ ಅನಿಸಿದೆ. ಇದರ ಹೊರತಾಗಿಯೂ ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ನೀವು ಯಾವಾಗಲೂ ರೋಗಿಗಳ ಪರವಾಗಿ ನಿಂತಿದ್ದೀರಿ, ಅವರ ಜೀವಕ್ಕಾಗಿ ಶ್ರಮಿಸಿದ ರೀತಿ ನನ್ನ ಹೃದಯವನ್ನು ಗೆದ್ದಿವೆ' ಎಂದು ಪತಿಯನ್ನು ಉದ್ದೇಶಿಸಿ ನಟಿ ಹೇಳಿದ್ದಾರೆ. ಪತಿ ನೆನೆ ಕೂಡ ಮಾತನಾಡಿದ್ದು, 'ನಾವಿಬ್ಬರೂ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದೇವೆ. ಮಕ್ಕಳಿಗಾಗಿ ಸದಾ ಜೊತೆಯಾಗಿ ನಿಂತಿದ್ದೇವೆ. ಜೀವನದಲ್ಲಿ ಏನೇ ಮಾಡಿದರೂ ಕುಟುಂಬದ ಒಳಿತಿಗಾಗಿ ಮಾಡುತ್ತೇವೆ’ ಎಂದು ಹೇಳಿದರು.