ಗಾಯನ, ಸಿನಿಮಾದಲ್ಲಿ ಮಾತ್ರವಲ್ಲ, ಎಸ್‌ಪಿಬಿ ಕಿರುತೆರೆಯಲ್ಲೂ ಜನಪ್ರಿಯತೆ ಗಳಿಸಿದ್ದರು. ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ಅನೇಕ ಶೀರ್ಷಿಕೆ ಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಿಯಾಲಿಟಿ ಶೋಗಳ ನಿರೂಪಕ ಹಾಗೂ ತೀರ್ಪುಗಾರರಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡದ ಜನಪ್ರಿಯ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ನಡೆಸಿಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಗಾಯನದ ಜೊತೆಗೆ ನಟನೆಯಲ್ಲೂ ಮಿಂಚಿದ್ದ ಎಸ್‌ಪಿಬಿ; 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಗಾನಗಂಧರ್ವ!

S. P. Balasubrahmanyam: ಭಾರತೀಯ ಸಂಗೀತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (SPB) ಅವರ ಹೆಸರನ್ನು ಕೇಳಿದ ತಕ್ಷಣ ಸಾವಿರಾರು ಸುಮಧುರ ಗೀತೆಗಳು ನೆನಪಾಗುತ್ತವೆ. ತಮ್ಮ ಕಂಠಸಿರಿಯಿಂದ ಹಲವು ತಲೆಮಾರುಗಳ ಸಂಗೀತ ಪ್ರೇಮಿಗಳನ್ನು ರಂಜಿಸಿರುವ ಈ ಗಾನಗಂಧರ್ವ ಕೇವಲ ಗಾಯನಕ್ಕಷ್ಟೇ ಸೀಮಿತವಾಗಿರಲಿಲ್ಲ. ಅಭಿನಯದ ಮೂಲಕವೂ ಪ್ರೇಕ್ಷಕರ ಮನ ಗೆದ್ದಿದ್ದರು. ಬಿಡುವಿಲ್ಲದ ಕೆಲಸಗಳ ನಡುವೆಯೂ ಬರೋಬ್ಬರಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು.

1966ರಲ್ಲಿ ಗಾಯಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಎಸ್‌ಪಿಬಿ, ಕೇವಲ ಮೂರು ವರ್ಷಗಳಲ್ಲೇ ನಟನೆಯಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. 1969ರಲ್ಲಿ ಬಿಡುಗಡೆಯಾದ ತೆಲುಗಿನ 'ಪೆಳ್ಳಂಟೆ ನೂರೆಳ್ಳ ಪಂಟಾ' ಚಿತ್ರದ ಮೂಲಕ ನಟನಾಗಿ ಮೊದಲ ಹೆಜ್ಜೆಯಿಟ್ಟರು. ಬಳಿಕ ತಮಿಳಿನ 'ಮಹಮ್ಮದ್ ಬಿನ್ ತುಘಲಕ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದರು. ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರು ಕನ್ನಡದಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಗಾನಗಂಧರ್ವ

1982ರಲ್ಲಿ ತೆರೆಕಂಡ 'ಬಾಳೊಂದು ಚದುರಂಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ನಟನಾಗಿ ಪರಿಚಯವಾದರು. ನಂತರ ಅಂಬರೀಷ್ ಅಭಿನಯದ 'ತಿರುಗುಬಾಣ' ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದರು. 'ಇದೇ ನಾಡು ಇದೇ ಭಾಷೆ..' ಎಂಬ ಗೀತೆಯ ಮೂಲಕವೂ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. 'ಕಾದಲನ್', 'ಮುದ್ದಿನ ಮಾವ', 'ಮಾಂಗಲ್ಯಂ ತಂತುನಾನೇನಾ' ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.

'ಮಿಥುನಂ' ಪಾತ್ರದ ಮೇಲೆ ವಿಶೇಷ ಪ್ರೀತಿ

ಎಸ್‌ಪಿಬಿ ಅವರ ನಟನಾ ಬದುಕಿನಲ್ಲಿ 'ಮಿಥುನಂ' ಸಿನಿಮಾ ಅತ್ಯಂತ ವಿಶೇಷವಾದದ್ದು. ತನಿಕೆಳ್ಳ ಭರಣಿ ನಿರ್ದೇಶನದ ಈ ಚಿತ್ರದಲ್ಲಿ ಅವರು ಅಪ್ಪಾದಾಸ್ ಎಂಬ ಮನಮುಟ್ಟುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿರಿಯ ನಟಿ ಲಕ್ಷ್ಮೀ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ಎಸ್‌ಪಿಬಿ, ಈ ಸಿನಿಮಾದ ಬಗ್ಗೆ ಹಲವು ಸಂದರ್ಭಗಳಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

2018ರಲ್ಲಿ ಬಿಡುಗಡೆಯಾದ ನಾಗಾರ್ಜುನ, ನಾನಿ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ತೆಲುಗು ಸಿನಿಮಾ 'ದೇವದಾಸ್' ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.

ಕಿರುತೆರೆಯಲ್ಲೂ ತಮ್ಮದೇ ಆದ ಛಾಪು!

ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಎಸ್‌ಪಿಬಿ ಜನಪ್ರಿಯತೆ ಗಳಿಸಿದ್ದರು. ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ಅನೇಕ ಶೀರ್ಷಿಕೆ ಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಿಯಾಲಿಟಿ ಶೋಗಳ ನಿರೂಪಕ ಹಾಗೂ ತೀರ್ಪುಗಾರರಾಗಿಯೂ ಗುರುತಿಸಿಕೊಂಡಿದ್ದರು. ಕನ್ನಡದ ಜನಪ್ರಿಯ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ನಡೆಸಿಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹೀಗೆ ಗಾಯನ, ನಟನೆ, ನಿರೂಪಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದ ಎಸ್‌ಪಿಬಿ, ಬಹುಮುಖ ಪ್ರತಿಭೆಯ ಕಲಾವಿದರಾಗಿ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.