ಆಪ್ತರಕ್ಷಕ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು 56ನೇ ವಯಸ್ಸಲ್ಲೂ ಯಾಕೆ ಮದುವೆಯಾಗದೆ ಒಂಟಿಯಾಗಿದ್ದಾರೆ ಎಂಬ ಬಗ್ಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು 56ನೇ ವಯಸ್ಸಲ್ಲೂ ಯಾಕೆ ಮದುವೆಯಾಗದೆ ಒಂಟಿಯಾಗಿದ್ದಾರೆ ಎಂಬ ಬಗ್ಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮಗೆ ಮದುವೆ ಮತ್ತು ತಾಯ್ತನ ದೊಡ್ಡ ಜವಾಬ್ದಾರಿ ಎನಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಲಯಾಳಂನ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟು, ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಮಿಂಚಿದ ನಟಿ ಲಕ್ಷ್ಮಿ ಗೋಪಾಲಸ್ವಾಮಿ, ಕನ್ನಡಿಗರಿಗೂ ಚಿರಪರಿಚಿತ ಮುಖ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟನೆಯ ಜೊತೆ ಜೊತೆಗೆ ನೃತ್ಯವನ್ನೂ ಮುಂದುವರಿಸಿಕೊಂಡು ಹೋಗುತ್ತಿರುವ ಲಕ್ಷ್ಮಿ ಅವರಿಗೆ ಈಗ 56 ವರ್ಷ. ಇಂದಿಗೂ ಅವರು ಮದುವೆಯಾಗದೆ ಸಿಂಗಲ್ ಆಗಿ ಉಳಿದಿದ್ದಾರೆ. ತಾವೇಕೆ ಮದುವೆಯಾಗಲಿಲ್ಲ ಎಂಬ ಬಗ್ಗೆ ಲಕ್ಷ್ಮಿ ಈ ಹಿಂದೆಯೂ ಹಲವು ಬಾರಿ ಮಾತನಾಡಿದ್ದಾರೆ. ಇದೀಗ, ತಮಗೆ ಮದುವೆಯಾಗಬೇಕೆಂದು ಎಂದಿಗೂ ಅನಿಸಲೇ ಇಲ್ಲ ಎಂದು ಅವರು ಹೇಳಿದ್ದ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ಕುಟುಂಬ, ಮಕ್ಕಳು ಎನ್ನುವುದು ಬಹಳ ದೊಡ್ಡ ಜವಾಬ್ದಾರಿ. ಆದರೆ ತಮಗೆ ಮದುವೆಯಾಗಬೇಕೆಂಬ ಆಸೆಯೇ ಮೂಡಿಲ್ಲ ಎಂದು ಲಕ್ಷ್ಮಿ ಗೋಪಾಲಸ್ವಾಮಿ ಹೇಳಿದ್ದಾರೆ. ಕೆಲವೊಮ್ಮೆ ಒಂಟಿತನ ಕಾಡಿದ್ದು, ಜೊತೆಗೊಬ್ಬರು ಬೇಕು ಎನಿಸಿದ್ದೂ ಇದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. 'ಮೈಲ್‌ಸ್ಟೋನ್ ಮೇಕರ್ಸ್'ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಆಡಿದ್ದರು. ಪ್ರಾಮಾಣಿಕವಾಗಿ ಹೇಳ್ತೀನಿ, ನನಗೆ ಮದುವೆ ಆಗ್ಬೇಕು ಅನ್ನೋ ಆಸೆ ಯಾವತ್ತೂ ಬಂದಿಲ್ಲ.

ಅಂತಹ ಆಸೆ ಹುಟ್ಟೇ ಇಲ್ಲ

ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳಿಸೋಕೆ ಅಮ್ಮಂದಿರು ಬ್ಯಾಗ್ ಹಿಡಿದು ನಿಂತಿರುವುದನ್ನು ನೋಡಿದ್ರೆ, ಅಬ್ಬಾ! ಅದೆಷ್ಟು ದೊಡ್ಡ ಜವಾಬ್ದಾರಿ ಅನ್ಸುತ್ತೆ. ಅದು ದೊಡ್ಡ ಜವಾಬ್ದಾರಿ, ಕಷ್ಟದ ಕೆಲಸ. ತಾಯಿಯಾಗುವುದು ಸುಲಭದ ಮಾತಲ್ಲ. ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಸ್ವಂತ ಕುಟುಂಬ ಬೇಕು, ಮಕ್ಕಳಿರಬೇಕು ಅನ್ನೋ ಆಸೆ ಇರುತ್ತೆ. ಆದರೆ ನನಗೆ ಈವರೆಗೂ ಅಂತಹ ಆಸೆ ಹುಟ್ಟೇ ಇಲ್ಲ.

ಮದುವೆಯಾಗದೆ ಇರುವ ನನ್ನ ಸ್ನೇಹಿತೆಯರೂ ಇದ್ದಾರೆ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಆದರೆ ತಾಯ್ತನ ಅನ್ನೋದು ಬೇರೆಯೇ ರೀತಿಯ ಜವಾಬ್ದಾರಿ. ಅದು ನನಗೆ ಸರಿಹೊಂದಲ್ಲ ಅಂತ ಗೊತ್ತು. ಕೆಲವೊಮ್ಮೆ ಒಂಟಿತನ ಕಾಡಿದ್ದು ನಿಜ. ಯಾರಾದರೂ ಜೊತೆಗಿದ್ದರೆ ಚೆನ್ನಾಗಿರುತ್ತಿತ್ತು ಅಂತಾನೂ ಅನಿಸಿದೆ. ಆದರೆ, ಆ ವ್ಯಕ್ತಿ ಸರಿಯಾದ ವ್ಯಕ್ತಿಯಾಗಿರಬೇಕು ಎಂದು ಲಕ್ಷ್ಮಿ ಗೋಪಾಲಸ್ವಾಮಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದರು.