ನಟ ಕಮಲ್ ಹಾಸನ್ ಕನ್ನಡಕ್ಕೆ ಅವಮಾನ ಮಾಡಿರೋ ಸಮಯದಲ್ಲಿ, ಶಿವರಾಜ್‌ಕುಮಾರ್, ರಮ್ಯಾ ಸೇರಿದಂತೆ ಹಲವರು ಕಮಲ್ ಹಾಸನ್ ಅವರನ್ನೇ ಸಮರ್ಥಿಸಿಕೊಂಡು ಮಾತನ್ನಾಡುತ್ತಿದ್ದಾರೆ.. ಅಲ್ಲೇ ಅದನ್ನು ಕೇಳಿಸಿಕೊಂಡು ಚಪ್ಪಾಳೆ ತಟ್ಟುತ್ತಿರುವ ಶಿವಣ್ಣ ಅವರ ಬಗ್ಗೆ ಕನ್ನಡಿಗರು ತೀವ್ರ ಆಕ್ರೋಶ..

ಕನ್ನಡ ಭಾಷೆ ಬಗ್ಗೆ ಅವಹೇಳನ ಮಾಡಿರುವ ತಮಿಳು ನಟ ಕಮಲ್ ಹಾಸನ್ (Kamal Haasan) ಅವರ ವಿವಾದಕ್ಕೆ ಹೊಸಹೊಸ ತಿರುವುಗಳು ಸೇರಿಕೊಳ್ಳುತ್ತಿವೆ. ಕನ್ನಡ ಭಾಷೆ, ನೆಲ-ಜಲ ಅನ್ನೋ ವಿಷಯ ಬಂದಾಗ, ಈ ಹಿಂದೆ ಕನ್ನಡದ ಸ್ಟಾರ್ ನಟರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು ಎಂಬುದೀಗ ಸೋಷಿಯಲ್ ಮೀಡಿಯಾ ಮೂಲಕ ಮತ್ತೆ ವೈರಲ್ ಆಗುತ್ತಿದೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಹಲವು ನಟರು ಈ ಹಿಂದೆ ಕನ್ನಡಕ್ಕೆ ಅವಮಾನ ಆದಾಗ ಆ ಬಗ್ಗೆ ಖಂಡಿಸಿ ಮಾತನ್ನಾಡಿದ್ದರು, ವಿರೋಧಿಸಿದ್ದರು.

ಆದರೆ, ಈಗ ನಟ ಕಮಲ್ ಹಾಸನ್ ಕನ್ನಡಕ್ಕೆ ಅವಮಾನ ಮಾಡಿರೋ ಸಮಯದಲ್ಲಿ, ಶಿವರಾಜ್‌ಕುಮಾರ್, ರಮ್ಯಾ ಸೇರಿದಂತೆ ಹಲವರು ಕಮಲ್ ಹಾಸನ್ ಅವರನ್ನೇ ಸಮರ್ಥಿಸಿಕೊಂಡು ಮಾತನ್ನಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಮಲ್ ಹಾಸನ್ ಕನ್ನಡಕ್ಕೆ ಅವಮಾನ ಮಾಡುತ್ತಿರುವ ಸಮಯದಲ್ಲೇ ಅದನ್ನು ಅಲ್ಲೇ ಅದನ್ನು ಕೇಳಿಸಿಕೊಂಡು ಚಪ್ಪಾಳೆ ತಟ್ಟುತ್ತಿರುವ ಶಿವಣ್ಣ ಅವರ ಬಗ್ಗೆ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸಮಯದಲ್ಲಿ, ಕನ್ನಡ ಭಾಷೆ ಬಗ್ಗೆ ಅಭಿಮಾನದಿಂದ ನಟ ಕಿಚ್ಚ ಸುದೀಪ್ (Kichcha Sudeep) ಅವರು ಹಿಂದಿ ನೆಲದಲ್ಲಿ ಮಾತನ್ನಾಡಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಶಾಂತ್ ಸಂಬರ್ಗಿ ಸೋಷಿಯಲ್ ಮೀಡಿಯಾ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿ ಇದೀಗ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಅವರು ಕನ್ನಡದ ಬಗ್ಗೆ ಪರಭಾಷೆಯ ನೆಲದಲ್ಲಿ ಅಭಿಮಾನದಿಂದ ಮಾತನ್ನಾಡಿದ್ದಾರೆ. ನಿರೂಪಕಿಯೊಬ್ಬರು 'ಕನ್ನಡ' ಎನ್ನುವುದನ್ನು 'ಕನ್ನಡ್' ಎಂದು ತಪ್ಪಾಗಿ ಉಚ್ಚರಿಸಿರುವುದನ್ನು ಉಲ್ಲೇಖಿಸಿ ನಟ ಸುದೀಪ್ ಅವರು, ಹಿಂದಿ ಹೇಗೆ ಹಿಂದ್ ಆಗಲ್ವೋ ಹಾಗೇ ಕನ್ನಡ ಕನ್ನಡ್ ಆಗಲ್ಲ ಎಂದು ಅವರಿಗೆ ತಿಳಿಸಿ ಹೇಳಿದ್ದಾರೆ.

ಕಮಲ್ ಹಾಸನ್ ವಿವಾದ ತಾರಕಕ್ಕೇರಿರುವ ಈ ಸಮಯದಲ್ಲಿ ನಟ ಸುದೀಪ್ ಅವರು ಕನ್ನಡದ ಬಗ್ಗೆ ಅಭಿಮಾನದಿಂದ ಮಾತನ್ನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾ ಮೂಲಕ ಜಗತ್ತನ್ನು ಸುತ್ತತೊಡಗಿದೆ. ಈ ವಿಡಿಯೋವನ್ನು ನೋಡಿ ಅನೇಕರು ಸುದೀಪ್ ಆಡಿರೋ ಮಾತನ್ನು ಈ ಮೂಲಕ ಮತ್ತೆ ನೋಡಿ ಅವರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಅದೇ ರೀತಿ ಕೆಲವರು ತಮ್ಮ ಮೆಚ್ಚಿನ ನಟರ ವಿಡಿಯೋವನ್ನು ಈ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಈ ವಿವಾದಕ್ಕೆ ಪ್ಲಸ್ ಅಥವಾ ಮೈನಸ್ ಪಾಯಿಂಟ್ ಸೇರಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂದಹಾಗೆ, ನಟ ಕಮಲ್ ಹಾಸನ್ ಅವರು 'ಕರುನಾಡ ಚಕ್ರವರ್ತಿ' ಶಿವರಾಜ್‌ಕುಮಾರ್ ಅವರ ಮುಂದೆಯೇ 'ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ. ತಮಿಳು ಕನ್ನಡ ಭಾಷೆಗೆ ತಾಯಿ' ಎಂದು ತಪ್ಪಾಗಿ ಹೇಳಿ ಅವಮಾನ ಮಾಡಿದ್ದರು. ಈ ವಿಷಯಕ್ಕೆ ಕನ್ನಡ ಪರ ಸಂಘಟನೆಗಳು ಕೆರಳಿ ಕೆಂಡವಾಗಿದ್ದಾರೆ. ಜೊತೆಗ, ಕಮಲ್ ಹಾಸನ್ ಕನ್ನಡಿಗರ 'ಕ್ಷಮೆ' ಕೇಳದಿದ್ದರೆ ಮುಂದಿನ ತಿಂಗಳು, ಅಂದರೆ 5 ಜೂನ್ 2025ರಂದು ಬಿಡುಗಡೆಗೆ ಸಿದ್ಧವಾಗಿರೋ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಈ ವಿವಾದ ತಾರಕ್ಕಕ್ಕೇರಿದ್ದು, ಎಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ.