ಚಿತ್ರ ವಿಮರ್ಶೆ: ಪಡ್ಡೆಹುಲಿ
ಚಿತ್ರರಂಗದ ಸ್ಟಾರ್ ನಟ, ನಿರ್ಮಾಪಕರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವಾಗ ಸಕತ್ತಾಗಿ ಡಾನ್ಸು, ಫೈಟು ಕಲಿತು ಬರಬೇಕು ಅನ್ನುವುದು ಅಲಿಖಿತ ನಿಯಮ. ಈ ಹಿಂದೆಯೂ ಅದು ಸಾಬೀತಾಗಿದೆ. ಅದಕ್ಕೆ ತಕ್ಕಂತೆ ಕೆ.ಮಂಜು ಪುತ್ರ ಶ್ರೇಯಸ್ ನೋಡುತ್ತಾ ನೋಡುತ್ತಾ ಭಾರಿ ಬೆರಗಾಗುವಂತೆ ಎಂಟ್ರಿ ಕೊಟ್ಟಿದ್ದಾರೆ.
ರಾಜೇಶ್ ಶೆಟ್ಟಿ
ಶ್ರೇಯಸ್ ಮುಖದಲ್ಲಿ ಗೆರೆಗಳು ಬದಲಾಗುವುದಕ್ಕಿಂತಲೂ ಸಲೀಸಾಗಿ ಅವರು ದೇಹ ಬಾಗಿಸುತ್ತಾರೆ. ಹಾರುತ್ತಾರೆ, ಕುಣಿಯುತ್ತಾರೆ. ನೋಡುಗರು ಕಾಲು ತಟ್ಟುವಂತೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಪಡ್ಡೆಹುಲಿ ಅವರ ಶಕ್ತಿಯನ್ನು ಹೀರಿಕೊಂಡಿದೆ. ಶ್ರೇಯಸ್ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಅನ್ನುವುದೇ ಅವರ ಹೆಗ್ಗಳಿಕೆ.
ಈ ಚಿತ್ರದ ನಿಜವಾದ ಶಕ್ತಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಚಿತ್ರವನ್ನು ಸಂಗೀತದಿಂದಲೇ ತನ್ನ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಅವರ ಪ್ರತಿಭೆ ಅಗಾಧವಾದುದು. ಅದಕ್ಕೆ ಕಾರಣವಿದೆ.ಚಿತ್ರದಲ್ಲಿ ನಾಯಕ ಇಂಜಿನಿಯರಿಂಗ್ ವಿದ್ಯಾರ್ಥಿ.ಆದರೆ ಅವನಿಗೆ ಇಂಜಿನಿಯರಿಂಗ್‌ಗಿಂತ ಸಂಗೀತ ಹೆಚ್ಚು ಪ್ರೀತಿ. ಅದರಲ್ಲೂ ಕನ್ನಡದ ಖ್ಯಾತ ಕವಿಗಳ ಹಾಡುಗಳಿಗೆ ಪಾಶ್ಚಾತ್ಯ ಸಂಗೀತ ಸಂಯೋಜನೆ ಮಾಡಿಕೊಂಡು ಹಾಡುವುದು ಅವನಿಗೆ ಇಷ್ಟ. ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕು ಅನ್ನುವುದು ಅವನ ಬಯಕೆ. ಎಂದಿನಂತೆ ಕಷ್ಟ- ನಷ್ಟ ಅನುಭವಿಸುವ ಮಧ್ಯೆ ಗ್ಯಾಪಲ್ಲಿ ಲವ್ವ, ಫೈಟು, ಸೆಂಟಿಮೆಂಟು ಬಂದು ಹೋಗುತ್ತದೆ. ಕಡೆಗೇನಾಗುತ್ತದೆ ಅನ್ನುವುದು ಸಿನಿಮಾ ಪ್ರೇಮಿಗಳು ಊಹಿಸಲಾಗದಿರುವುದೇನೂ ಅಲ್ಲ.
ಪಡ್ಡೆಹುಲಿ ಎಂದೇಳಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್!
ತೆಯಲ್ಲಿ ಹೊಸತೇನೂ ಇಲ್ಲ. ಇಂಥದ್ದೇ ಪ್ಲಾಟ್ ಹೊಂದಿರುವ ಅನೇಕ ಸಿನಿಮಾಗಳು ಇವೆ. ತಮಿಳಿನ ಮೀಸೈ ಮುರುಕ್ಕು ಸಿನಿಮಾ ಸೇಮ್ ಕಥಾ ಹಂದರ ಹೊಂದಿರುವ ಚಿತ್ರ. ಅದರ ರೀಮೇಕ್ ಅನ್ನಿಸುವಂತೆ ಗುರು ಪಡ್ಡೆಹುಲಿ ಮಾಡಿದ್ದಾರೆ. ಶ್ರದ್ಧೆ ಇರುವ ಹೊಸ ನಟ ಸಿಕ್ಕಾಗ ಹೊಸತನದ ಕತೆಯನ್ನು ಹೇಳುವುದು ಕೂಡ ಒಂದು ಕಲೆ. ಆ ಕಲೆ ಇಲ್ಲಿ ಮಿಸ್ಸಿಂಗು. ಉದ್ದ ಅನ್ನಿಸುವ ಚಿತ್ರಕತೆ ಸಹಿಸುವಂತೆ ಮಾಡುವುದು ಮತ್ತದೇ ಸಂಗೀತ. ಸಂಗೀತಕ್ಕೆ ನೋವು ಮರೆಸುವ ಶಕ್ತಿ
ಇರುವುದು ಸುಳ್ಳಲ್ಲ.
ಚಿತ್ರದುದ್ದಕ್ಕೂ ಸಕತ್ತಾಗಿ ಫೈಟು, ಡಾನ್ಸು ಮಾಡಿ ಎಷ್ಟಾದರೂ ಕಷ್ಟ ಪಡುವುದಕ್ಕೆ ತಾನು ರೆಡಿ ಅನ್ನುವುದನ್ನು ಶ್ರೇಯಸ್ ತೋರಿಸಿಕೊಟ್ಟಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್, ಫೈಟಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದಲ್ಲಿನ ಅವರ
ಗೆಲುವಿನ ನಗು ಖುಷಿ ಕೊಡುತ್ತದೆ. ರವಿಚಂದ್ರನ್ ಈ ಚಿತ್ರದ ಘನತೆ. ಅತಿಥಿ ಪಾತ್ರದಲ್ಲಿ ನಟಿಸಿರುವ ರಕ್ಷಿತ್ ಶೆಟ್ಟಿ ಈ ಚಿತ್ರದ ಫೋರ್ಸ್. ಆ ಪಾತ್ರದ ಮಹತ್ವ ಅಷ್ಟೇನೂ ಮುಖ್ಯವಾಗಿಲ್ಲದಿದ್ದರೂ ಅವರ ಸ್ಕ್ರೀನ್ ಪ್ರೆಸೆನ್ಸ್ ಅದ್ಭುತ. ನಿಶ್ವಿಕಾ ಕಣ್ಣಲ್ಲೇ ಕಾಡುವ ಶಕ್ತಿ ಹೊಂದಿರುವವರು. ಪಡ್ಡೆಹುಲಿ ಒಂಥರಾ ವ್ಯಕ್ತಿತ್ವ ವಿಕಸನ ಪುಸ್ತಕದ ಥರ. ತರುಣರಿಗೆ ಜೀವನದ ಪಾಠ ಉಂಟು. ಸುದೀರ್ಘ ಉಪದೇಶ ಕೇಳುವ ಸಹೃದಯಿಗಳಿಗೆ ಪಡ್ಡೆಹುಲಿ ದಾರಿ ತೋರಿಸುತ್ತದೆ. ಉಳಿದಂತೆ ಅವರವರ ದಾರಿ ಅವರವರಿಗೆ.
ಪಡ್ಡೆಹುಲಿ ಅಡ್ಡದಲ್ಲಿ ಗುರು ದೇಶಪಾಂಡೆ ಸಂದರ್ಶನ