ಆರ್‌ ಕೇಶವಮೂರ್ತಿ

ಚಿತ್ರಕ್ಕೆ ಆಯ್ಕೆ ಆದಾಗ, ಚಿತ್ರೀಕರಣ ಮುಗಿದ ಮೇಲೆ ಮೂಡಿದ ಅಭಿಪ್ರಾಯವೇನು?

ಮೊದಲು ಚಿತ್ರದ ಪ್ರಮೋಷನ್‌ ಹಾಡಿಗೆ ಶೂಟಿಂಗ್‌ ಇತ್ತು. ಸೆಟ್‌ಗೆ ಹೋಗಿ ನಿಂತಾಗ ಯಾಕೋ ಭಯ ಆಯಿತು. ಲೈಟಿಂಗ್‌, ಕ್ಯಾಮೆರಾ, ಸುತ್ತಲು ಜನರನ್ನು ನೋಡಿ ನರ್ವಸ್‌ ಆದೆ. ಎರಡನೇ ದಿನಕ್ಕೆ ಇದು ನನ್ನ ಸಿನಿಮಾ. ನನ್ನ ಮೊದಲ ಕನಸು ಎನ್ನುವ ಭಾವನೆ ಮೂಡಿತು. ಶೂಟಿಂಗ್‌ ಮುಗಿಸಿ, ತೆರೆಗೆ ತರುತ್ತಿದ್ದಾಗಲೂ ಅದೇ ಭಾವನೆಯಲ್ಲಿದ್ದೇನೆ.

ನೀವು ನಿರ್ಮಾಪಕ ಕೆ ಮಂಜು ಅವರ ಪುತ್ರ ಎನ್ನುವ ಕಾರಣಕ್ಕೆ ದೊಡ್ಡ ಅವಕಾಶ ಸಿಕ್ಕಿದ್ದಾ?

ಅವಕಾಶ ಆ ಕಾರಣಕ್ಕೆ ಸಿಕ್ಕರಬಹುದು. ಆದರೆ, ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ, ಉಳಿಸಿಕೊಳ್ಳುವುದಕ್ಕೆ ನಮ್ಮ ಅಪ್ಪ ನಿರ್ಮಾಪಕ ಎನ್ನುವ ಲೇಬಲ್‌ ಸಾಲದು. ನನಗೂ ಆಸಕ್ತಿ ಇರಬೇಕು. ನಟನೆಯ ಬಗ್ಗೆ ತಿಳುವಳಿಕೆ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕನ ಕನಸಿಗೆ ಸಾರಥಿಯಾಗುವ ಶಕ್ತಿ ಇರಬೇಕು. ಹೀಗಾಗಿ ನಾನು ಒಂದು ಚಿತ್ರಕ್ಕೆ ಹೀರೋ ಅಂತ ಆಗಿ ನಿರ್ದೇಶಕರ ಬಳಿಗೆ ಹೋದ ಮೇಲೆ ನಿರ್ಮಾಪಕನ ಮಗ ಅನ್ನುವುದನ್ನು ಮರೆತುಬಿಟ್ಟೆ.

ನಟರಾಗಿ ನೀವು ಬೆಳೆಯುವುದಕ್ಕೆ ನಿಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳುತ್ತೀರಾ?

ವೈಯಕ್ತಿಕವಾಗಿ ನನ್ನು ಬೆಳವಣಿಗೆಗೆ ಅಪ್ಪನ ಹೆಸರು ಬಳಕೆ ಮಾಡಲ್ಲ. ಒಂದು ವೇಳೆ ಅಪ್ಪನ ಹೆಸರು ಹೇಳಿದರೆ ಒಂದಿಷ್ಟುಕೆಲಸಗಳು ಆಗುತ್ತವೆ ಅಂದರೆ ಅವರ ಹೆಸರು ಹೇಳುತ್ತೇನೆ. ಉದಾ: ಒಳ್ಳೆಯ ಕ್ಯಾಮೆರಾಮೆನ್‌, ಸಂಗೀತ ನಿರ್ದೇಶಕ, ಶೂಟಿಂಗ್‌ ಲೊಕೇಶನ್‌ ಇತ್ಯಾದಿ ಬೇಕು ಅಂದಾಗ ಅಪ್ಪನ ಹೆಸರು ಹೇಳುವೆ. ನನ್ನ ಬೆಳವಣಿಗೆ ಅಂತ ಬಂದಾಗ ನಾನೇ ಸ್ವತಃ ಶ್ರಮ ಹಾಕುತ್ತೇನೆ.

ನಿಮ್ಮ ತಂದೆ ನಿರ್ಮಾಣದ ಯಾವ ಚಿತ್ರಗಳನ್ನು ಹೆಚ್ಚು ಇಷ್ಟಪಟ್ಟು ನೋಡಿದ್ದೀರಿ?

ಸಾಹಸ ಸಿಂಹ ವಿಷ್ಣುವರ್ಧನ್‌ ಅಭಿನಯದ ಎಲ್ಲಾ ಸಿನಿಮಾಗಳು ಇಷ್ಟ. ಅದರಲ್ಲೂ ಯಜಮಾನ, ಜಮೀನ್ದಾರ, ಜೇನುಗೂಡು ಚಿತ್ರಗಳೆಂದರೆ ಹೆಚ್ಚು ಇಷ್ಟ.

ಪಡ್ಡೆಹುಲಿ ಅಡ್ಡದಲ್ಲಿ ಗುರು ದೇಶಪಾಂಡೆ ಸಂದರ್ಶನ

ಕೆ ಮಂಜು ಅವರು ಡಾ ವಿಷ್ಣುವರ್ಧನ್‌ ಅಭಿಮಾನಿಯಾದಂತೆ ನೀವು ದರ್ಶನ್‌ ಅಭಿಮಾನಿನಾ?

ನಾನೂ ಕೂಡ ಅಪ್ಪನಂತೆ ಡಾ ವಿಷ್ಣುವರ್ಧನ್‌ ಅವರ ದೊಡ್ಡ ಅಭಿಮಾನಿ. ಚಿಕ್ಕ ವಯಸ್ಸಿನಿಂದಲೂ ಅವರನ್ನು ಹತ್ತಿರದಿಂದ ನೋಡಿದವನು ನಾನು. ನನ್ನ ಮೊದಲ ಚಿತ್ರ ಕೂಡ ಅವರ ಆಶೀರ್ವಾದಿಂದಲೇ ಶುರುವಾಗಿದೆ. ‘ನಾಗರಹಾವು’ ಶೂಟಿಂಗ್‌ ಮಾಡಿದ ಸ್ಥಳದಲ್ಲೇ ಚಿತ್ರೀಕರಣ ಮಾಡಿರುವುದು, ಅವರ ಕಟೌಟ್‌ ತೆರೆ ಮೇಲೆ ಬರುವುದು ಕೂಡ ಆ ಕಾರಣಕ್ಕೆ. ಇವರ ಹೊರತಾಗಿ ವೈಯಕ್ತಿಕವಾಗಿ ನನಗೆ ದರ್ಶನ್‌, ಸುದೀಪ್‌, ಯಶ್‌ ಎಲ್ಲರು ಹತ್ತಿರವಾಗಿದ್ದಾರೆ. ನಾನು ಅವರ ಸಿನಿಮಾಗಳನ್ನು ನೋಡಿ ಬೆಳೆಯುತ್ತಿರುವ ಹುಡುಗ.

ನಿಮ್ಮ ಪ್ರಕಾರ ಹೊಸಬರು ಚಿತ್ರರಂಗಕ್ಕೆ ಬರಲು ಏನೆಲ್ಲ ತಯಾರಿಗಳು ಬೇಕು?

ಡೈಲಾಗ್‌ ಡೆಲಿವರಿ ಮಾಡುವ ದಾಟಿ, ಫೈಟ್‌ ದೃಶ್ಯಗಳನ್ನು ನಿಭಾಯಿಸುವ ರೀತಿ ಗೊತ್ತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕರು ಏನು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡು ಅವರ ಕನಸನ್ನು ಕಾರ್ಯಗತ ಮಾಡುವ ಜಾಣ್ಮೆ ಕಲಿಯಬೇಕು.

ಮೊದಲ ಚಿತ್ರದಿಂದ ನೀವು ಕಲಿತಿದ್ದೇನು? ಸವಾಲು ಆಗಿದ್ದೇನು?

ಒಂದೇ ಚಿತ್ರದಲ್ಲಿ ಕಲಿತಿದ್ದೇನೆ ಎಂದು ಹೇಳಿದರೆ ತಪ್ಪಾಗುತ್ತದೆ. ಆದರೆ, ಕ್ಯಾಮೆರಾ ಮುಂದೆ ಬಂದಾಗ ಹೇಗಿರಬೇಕು ಎನ್ನುವ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದೇನೆ. ಉಳಿದಂತೆ ಕಲಿಕೆ ಅನ್ನೋದು ನಿರಂತರ. ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಒಂಚೂರು ಸವಾಲು ಅನಿಸಿತು.

ಯಾವ ರೀತಿಯಲ್ಲಿ ಪಡ್ಡೆಹುಲಿ ನಿಮ್ಮ ಮೊದಲ ಚಿತ್ರವಾಗಲು ಸೂಕ್ತ?

ಒಂದು ಸಿಂಪಲ್‌ ಕತೆ ಇರಬೇಕು. ಈಗಿನ ಟ್ರೆಂಡ್‌ಗೆ ತಕ್ಕಂತೆ ಹುಡುಗರು ಯಾವುದರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೋ ಆ ಕ್ಯಾರೆಕ್ಟರ್‌ ನಾನು ಆಗಿರಬೇಕು, ತುಂಬಾ ವೆರೈಟಿ ಇರಬೇಕು, ಕ್ಯಾರೆಕ್ಟರ್‌ ಸ್ಟೈಲಿಶ್‌ ಆಗಿರಬೇಕು. ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾ ಆಚೆಗೂ ಕಾಡುವಂತಿರಬೇಕು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ನನಗೆ ‘ಪಡ್ಡೆಹುಲಿ’ ಮೊದಲ ಸಿನಿಮಾ ಆಗುವುದಕ್ಕೆ ಎಲ್ಲ ಅರ್ಹತೆಗಳೂ ಇವೆ.

ಸೆಟ್‌ನಲ್ಲಿ ನಿಮ್ಮ ಕನ್ನಡಿ ಆಗಿದ್ದು ಯಾರು?

ನನ್ನ ಮೊದಲ ಕನ್ನಡಿ ಛಾಯಾಗ್ರಾಹಕ ಕೆಎಸ್‌ ಚಂದ್ರಶೇಖರ್‌. ನಾನು ಅವರಿಗೆ ಎಷ್ಟುತಲೆ ತಿಂದಿದ್ದೆನೋ ಗೊತ್ತಿಲ್ಲ. ಪ್ರತಿ ದೃಶ್ಯ ಮುಗಿದ ಮೇಲೆ ಅವರ ಜತೆ ಹೋಗಿ ಮಾತಾಡುತ್ತಿದ್ದೆ. ಹೇಗೆ ಮಾಡಬೇಕು, ಈಗ ಮಾಡಿರೋದು ಸರಿನಾ ಅಂತ ಸಲಹೆ ಕೇಳುತ್ತಿದ್ದೆ. ಎರಡನೇ ಕನ್ನಡಿ ನಿರ್ದೇಶಕ ಗುರು ದೇಶಪಾಂಡೆ. ಅವರ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಎನ್ನುವುದೇ ದೊಡ್ಡ ಸಂಭ್ರಮ.

ಈ ಚಿತ್ರ ಹೇಳುವ ಕತೆ ಏನು?

ಕನ್ನ​ಡ​ತನ, ಮನ​ರಂಜನೆ, ಯುವ ಪೀಳಿ​ಗೆಯ ಕನ​ಸು​ಗಳು, ಕೇಳು​ವಂಥ ಹಾಡು​ಗಳು, ಪಾತ್ರ​ಗಳ ಸಂಯೋ​ಜ​ನೆ, ರುಕೇಶ್‌- ಶ್ರೀಕಾಂತ್‌ ಸಂಭಾ​ಷ​ಣೆ​ಗಳು ಹೀಗೆ ಹಲವು ವಿಶೇ​ಷ​ತೆ​ಗ​ಳು ‘ಪಡ್ಡೆ​ಹು​ಲಿ’ಯಲ್ಲಿ ಅಡ​ಗಿವೆ. ಇದೊಂದು ಟ್ರೆಂಡಿ ಕತೆ. ಈಗಿನ ಜನ​ರೇ​ಷ​ನ್‌ಗೆ ನೇರ​ವಾಗಿ ಕನೆಕ್ಟ್ ಆಗುವ ಕತೆ. ಇಂಜಿ​ನಿ​ಯರ್‌, ಡಾಕ್ಟರ್‌, ಸಾಫ್ಟ್‌​ವೇರ್‌ ಇಂಜಿ​ನಿ​ಯರ್‌ ಆಗುವ ಕನಸು ಕಾಣುವವರ ಮಧ್ಯೆ ರಾಕ್‌ಸ್ಟಾರ್‌ ಆಗಲು ಹೊರಡುವ ಹುಡುಗನ ಕತೆ. ಜತೆಗೆ ಅಪ್ಪ- ಮಗನ ಸಂಬಂಧ ಹೇಳುವ ಅಪ್ಪಟ ಕನ್ನಡಿಗರ ಸಿನಿಮಾ ಇದು.

ನಟರಾದ ರಕ್ಷಿತ್‌ ಶೆಟ್ಟಿಹಾಗೂ ಪುನೀತ್‌ ರಾಜ್‌ಕುಮಾರ್‌ ಜತೆ ನಟಿಸಿದ ಅನುಭವ ಹೇಗಿತ್ತು?

ಈ ಚಿತ್ರದಲ್ಲಿ ಮೂವರು ಸ್ಟಾರ್‌ಗಳು ಇದ್ದಾರೆ. ರವಿಚಂದ್ರನ್‌ ಗಾಡ್‌ಫಾದರ್‌ನಂತೆ. ಅಪ್ಪು ಅವರು ವಾಲ್‌ನಂತೆ. ರಕ್ಷಿತ್‌ ಶೆಟ್ಟಿನನಗೆ ಅಣ್ಣನ ಹಾಗೆ. ಅವರ ಜತೆ ಪಾತ್ರ ಮಾಡಿದಾಗಲೂ ಇದೇ ಅನುಭವ ಮತ್ತು ಅಭಿಪ್ರಾಯ ಮೂಡಿಸಿತು. ಮೊದಲ ದಿನ ಸೆಟ್‌ನಲ್ಲಿ ‘ನೀನೇ ಈ ಚಿತ್ರದ ಹೀರೋ’ ಎಂದು ಉತ್ಸಾಹ ತುಂಬಿದ್ದು ರವಿಚಂದ್ರನ್‌ ಅವರು. ಹೊಸ ಹುಡುಗ ಅಂತ ಯಾರೂ ನೋಡಲಿಲ್ಲ. ಇನ್ನೂ ರಮೇಶ್‌ ರೆಡ್ಡಿ ನಂಗ್ಲಿ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ನಿಶ್ವಿಕಾ ನಾಯ್ಡು ಇಲ್ಲಿದ್ದಾರೆ. ಇವರೆಲ್ಲ ಸೇರಿಯೇ ‘ಪಡ್ಡೆಹುಲಿ’ ಆಗಿದೆ.