ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ, ಈ ಕನ್ನಡದ ನಟಿ ಹೇಳಿದ್ದೇನು ಗೊತ್ತಾ? ನೋಡಿ..
Talk of the Town- Ramayana Movie Trailer: 'ರಾಮಾಯಣ'ದ ಸೀತೆ ಇವಳೇ ಆಗಬೇಕಿತ್ತಾ? ಸಾಯಿ ಪಲ್ಲವಿಗಿಂತಲೂ ಮೊದಲು ಆಡಿಷನ್ ನೀಡಿದ್ದ ಆ 'ಕನ್ನಡದ ಬೆಡಗಿ' ಯಾರು?
Sai Pallavi Goddess Sita role Controversy: ಸೀತಾಮಾತೆ ಪಾತ್ರ- ಸಾಯಿ ಪಲ್ಲವಿ ವಿವಾದ:
ಸದ್ಯಕ್ಕೆ ಎಲ್ಲಿನೋಡಿದರೂ ರಾಮಾಯಣ ಸಿನಿಮಾದ್ದೇ ಸುದ್ದಿ..! ರಾವಣ-ಯಶ್, ರಾಮ-ರಣಬೀರ್ ಕಪೂರ್ ಹಾಗೂ ಸೀತೆ-ಸಾಯಿ ಪಲ್ಲವಿ ಅವರ ಬಗ್ಗೆ ಮೆಚ್ಚುಗೆ, ಟೀಕೆ ಹಾಗೂ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಅದೀಗ ಸೋಷಿಯಲ್ ಮೀಡಿಯಾಗಲ್ಲಿ ಭಾರೀ ದೊಡ್ಡ ಟ್ರೆಂಡ್ ಕೂಡ ಸೃಷ್ಟಿಸಿದೆ. ಇದೀಗ ಹೊಸದೊಂದು ಸುದ್ದಿ ಸ್ಫೋಟವಾಗಿದೆ. ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅವರಿಗಿಂತ ಮೊದಲು ಕನ್ನಡದ ಇನ್ನೊಬ್ಬರು ನಟಿಗೆ ಅವಕಾಶ ಬಂದಿತ್ತು ಅನ್ನೋ ಸುದ್ದಿ!

ಹೌದು, ಈಗ ಎಲ್ಲೆಡೆ 'ರಾಮಾಯಣ'ದ್ದೇ ಮಾತು. ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದ ತೆರೆಯ ಮೇಲಿನ ಆವೃತ್ತಿಯನ್ನು ನೋಡಲು ಭಾರತ ಮಾತ್ರವಲ್ಲ, ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಆದರೆ, ಸಿನಿಮಾ ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿರುವುದು ಮಾತ್ರ 'ಸೀತೆ'ಯ ಆಯ್ಕೆ! ಹೌದು, ಬಹುಭಾಷಾ ನಟಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಕೆಲವರು ಅವರ ನೈಜ ಸೌಂದರ್ಯಕ್ಕೆ ಮನಸೋತರೆ, ಇನ್ನು ಕೆಲವರು ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅಷ್ಟು ಹೊಂದುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಈ ಎಲ್ಲ ಗದ್ದಲದ ನಡುವೆ ಒಂದು ಅಚ್ಚರಿಯ ವಿಷಯ ಹೊರಬಿದ್ದಿದೆ. ಈ 'ರಾಮಾಯಣ'ದ ಸೀತೆಯಾಗುವ ಅವಕಾಶ ಮೊದಲು ಒಲಿದು ಬಂದಿದ್ದು ನಮ್ಮ ಕನ್ನಡದ ಮಣ್ಣಿನ ಹುಡುಗಿಗೆ! ಹಾಗಿದ್ದರೆ ಆ ನಟಿ ಯಾರು? ಇದೀಗ ಆ ಚರ್ಚೆ ದೊಡ್ಡಮಟ್ಟದಲ್ಲಿ ಶುರುವಾಗಿದೆ. ಅದಕ್ಕೆ ಉತ್ತರ ಆಕೆ ಬೇರೆ ಯಾರೂ ಅಲ್ಲ, 'ಕೆಜಿಎಫ್' ಸಿನಿಮಾದ ಮೂಲಕ ಇಡೀ ಭಾರತದಾದ್ಯಂತ ಮೋಡಿ ಮಾಡಿದ್ದ ಶ್ರೀನಿಧಿ ಶೆಟ್ಟಿ.

ಏನಿದು ಶ್ರೀನಿಧಿ ಮತ್ತು ರಾಮಾಯಣದ ನಡುವಿನ ಕಥೆ?
KGF actress Srinidhi Shetty: ಕಳೆದ ಕೆಲವು ದಿನಗಳಿಂದ ರೆಡ್ಡಿಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿಧಿ ಶೆಟ್ಟಿ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಶ್ರೀನಿಧಿ ನೀಡಿದ ಉತ್ತರ ಎಲ್ಲರ ಹೃದಯ ಗೆದ್ದಿದೆ. ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ ಶ್ರೀನಿಧಿ ಮಾತ್ರ ತುಂಬಾ ಪ್ರಾಮಾಣಿಕವಾಗಿ ವಿಷಯ ಹಂಚಿಕೊಂಡಿದ್ದಾರೆ.

"ನಾನು ಸೀತಾ ಪಾತ್ರವನ್ನು ತಿರಸ್ಕರಿಸಲಿಲ್ಲ. ಆ ಪಾತ್ರವನ್ನು ರಿಜೆಕ್ಟ್ ಮಾಡಲು ನಾನೇನು ಅಷ್ಟು ದೊಡ್ಡ ನಟಿಯಲ್ಲ. ನಿಜ ಹೇಳಬೇಕೆಂದರೆ ನಾನು ಆ ಪಾತ್ರಕ್ಕಾಗಿ ಆಡಿಷನ್ ನೀಡಿದ್ದೆ. ಆದರೆ ಆ ಸಿನಿಮಾಗೆ ನಾನು ಆಯ್ಕೆಯಾಗಲಿಲ್ಲ. ಆ ಪಾತ್ರ ಸಾಯಿ ಪಲ್ಲವಿ ಅವರಿಗೆ ಸಿಕ್ಕಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ" ಎಂದು ಮುಗುಳ್ನಗುತ್ತಲೇ ಹೇಳಿದ್ದಾರೆ. ಅವರ ಈ ನೇರ ಮತ್ತು ವಿನಮ್ರ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ರಾಮಾಯಣದ ರಂಗು: ಯಾರು ರಾಮ? ಯಾರು ರಾವಣ?
ಇನ್ನು ಸಿನಿಮಾದ ತಾರಾಗಣವಂತೂ ಕಣ್ಣು ಕುಕ್ಕುವಂತಿದೆ. ಬಾಲಿವುಡ್‌ನ ಚಾಕೊಲೇಟ್ ಬಾಯ್ ರಣಬೀರ್ ಕಪೂರ್ ಮರ್ಯಾದಾ ಪುರುಷೋತ್ತಮ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದರೆ, ನಮ್ಮ 'ರಾಕಿಂಗ್ ಸ್ಟಾರ್' ಯಶ್ ದಶಕಂಠ ರಾವಣನಾಗಿ ಅಬ್ಬರಿಸಲಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಜೀಮರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಸಿನಿಮಾದ ತೂಕವನ್ನು ಹತ್ತರಷ್ಟು ಹೆಚ್ಚಿಸಿದೆ.

ಟ್ರೇಲರ್ ಹವಾ ಮತ್ತು ಪ್ರೇಕ್ಷಕರ ಅಸಮಾಧಾನ:
ಬ್ರಹ್ಮ ಮುಹೂರ್ತದಲ್ಲೇ ಬಿಡುಗಡೆಯಾದ ಟ್ರೇಲರ್ ಭರ್ಜರಿ ದೃಶ್ಯಾವಳಿಗಳಿಂದ ಕೂಡಿದೆ. ಚಿನ್ನದ ನಗರಿ ಅಯೋಧ್ಯೆ, ರಾವಣನ ಅರಮನೆಯ ವೈಭವ ಎಲ್ಲವೂ ಗ್ರಾಂಡ್ ಆಗಿ ಮೂಡಿಬಂದಿದೆ. ಆದರೆ ಕಾಮೆಂಟ್ ಬಾಕ್ಸ್‌ನಲ್ಲಿ ಮಾತ್ರ ನೆಟ್ಟಿಗರ ಕಿತ್ತಾಟ ನಿಂತಿಲ್ಲ. "ಸೀತೆಗಿಂತ ಶೂರ್ಪನಖಿಯೇ (ರಕುಲ್ ಪ್ರೀತ್) ಚೆನ್ನಾಗಿ ಕಾಣುತ್ತಿದ್ದಾಳೆ" ಎಂಬ ವ್ಯಂಗ್ಯದ ಮಾತುಗಳು ಕೇಳಿಬರುತ್ತಿವೆ. ಸಾಯಿ ಪಲ್ಲವಿ ಅವರ ಪಾತ್ರದ ಲುಕ್ ಹಳೆಯ ಸೀರಿಯಲ್‌ಗಳಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಕೆಲವರ ವಾದ.

ಒಟ್ಟಿನಲ್ಲಿ, ಶ್ರೀನಿಧಿ ಶೆಟ್ಟಿ ಸೀತೆಯಾಗಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆ ಒಂದೆಡೆಯಾದರೆ, ಸಾಯಿ ಪಲ್ಲವಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಬಾಯಿ ಮುಚ್ಚಿಸುತ್ತಾರೆ ಎಂಬ ಖಾತರಿ, ಪ್ರಶಂಸೆ ಇನ್ನೊಂದೆಡೆ. ಅಂತಿಮವಾಗಿ ಸಿನಿಮಾ ತೆರೆಯ ಮೇಲೆ ಬಂದಾಗ ಮಾತ್ರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಅಲ್ಲಿಯವರೆಗೆ ಈ 'ಅಭಿಪ್ರಾಯ ಬೇಧಗಳು' ಹಾಗೂ ಚರ್ಚೆಗಳು ಮುಂದುವರಿಯುತ್ತಲೇ ಇರುತ್ತವೆ ಎನ್ನಬಹುದು.


