ಒಂದೇ ದಿನದಲ್ಲಿ ನಡೆಯುವ ಕಥೆ. ಇಬ್ಬರು ಅಪರಿಚಿತರ ಆಕಸ್ಮಿಕ ಭೇಟಿ. ಬದುಕಿನಲ್ಲಿ ಪ್ರೀತಿಯನ್ನು ಕಳೆದುಕೊಂಡ ಇಬ್ಬರು ವ್ಯಕ್ತಿಗಳು. ಮಾತಿಗಿಂತ ಮೌನವೇ ಹೆಚ್ಚಿರುವ ಸಂಬಂಧ. ಇವೆಲ್ಲದರ ನಡುವೆ ಇಡೀ ಕಥೆಗೆ ಸಾಕ್ಷಿಯಾಗಿ ನಿಲ್ಲುವ ವಾರಣಾಸಿ.
ಇದು ಮಾಮೂಲಿ ಗ್ಲಾಮರ್ ಸಿನಿಮಾ ಅಲ್ಲ. ಇದು ಬದುಕಿನ ಗ್ರಾಮರ್ ತೋರಿಸುವ ಸಿನಿಮಾ. ಎಂಥವರನ್ನೂ ಭಾವುಕರನ್ನಾಗಿಸಿ, ತಮ್ಮದೇ ಬದುಕಿನ ಬಗ್ಗೆ ಒಮ್ಮೆ ಯೋಚಿಸುವಂತೆ ಮಾಡಿ, ಸಿನಿಮಾ ಮುಗಿದ ಮೇಲೂ ಮನಸ್ಸಿನಲ್ಲೇ ಉಳಿದುಬಿಡುವ ಚಿತ್ರ. ಅದುವೇ ಚಿನ್ನ ಚಿನ್ನ ಆಸೈ. ತಮಿಳಿನ ಈ ಸಿನಿಮಾವನ್ನು ಕನ್ನಡದಲ್ಲಿ ನೋಡಿದ ಅನುಭವವೇ ಒಂದು ರೀತಿಯ ಭಾವನಾತ್ಮಕ ಪ್ರಯಾಣ. ಒಟಿಟಿಯಲ್ಲಿ ಲಭ್ಯವಿರುವ ಈ ಚಿತ್ರ, ನಿಧಾನವಾಗಿ ಸಾಗಿದರೂ ನೋಡುಗರನ್ನು ತನ್ನೊಳಗೆ ಸೆಳೆದುಕೊಂಡು, ಕೊನೆಯಲ್ಲಿ ಒಂದು ಒಳ್ಳೆಯ ಸಿನಿಮಾ ನೋಡಿದ ಸಂತೃಪ್ತಿಯನ್ನು ನೀಡುತ್ತದೆ.
ಇಬ್ಬರು ಪ್ರೀತಿವಂಚಿತರ ಆಕಸ್ಮಿಕ ಭೇಟಿ
ಚಿನ್ನ ಚಿನ್ನ ಆಸೈ ಚಿತ್ರದಲ್ಲಿ ಪ್ರಮುಖವಾಗಿ ಎರಡು ಪಾತ್ರಗಳಿವೆ. ಒಂದು, ತನ್ನನ್ನು ತಾನು ನತದೃಷ್ಟೆ ಎಂದುಕೊಂಡಿರುವ ನಡುವಯಸ್ಸಿನ ಲೀಲಾ. ಮತ್ತೊಂದು, ಬದುಕು ಬಂದಂತೆ ಸ್ವೀಕರಿಸಿರುವ ನಿವೃತ್ತ ಸ್ಕೂಲ್ ಮಾಸ್ಟರ್ ಮಾಧವನ್. ಲೀಲಾಗೆ ಮದುವೆಯಾಗಿದೆ. ಆದರೆ ಮಕ್ಕಳಿಲ್ಲ. ಗಂಡನಿಲ್ಲ. ಬದುಕಿನಲ್ಲಿ ಪ್ರೀತಿಯೂ ಸಿಕ್ಕಿಲ್ಲ. ಇತ್ತ ಮಾಧವನ್ ಪ್ರೀತಿಸಿ ಮದುವೆಯಾಗಿದ್ದರೂ, ಮಗಳು ಹುಟ್ಟಿದ ನಂತರ ಪತ್ನಿಯನ್ನು ಕಳೆದುಕೊಂಡಿದ್ದಾನೆ. ಮಗಳನ್ನು ನೋಡಿಕೊಳ್ಳುತ್ತಲೇ ಆತನ ಜೀವನದ ಬಹುಪಾಲು ಸಮಯ ಕಳೆದುಹೋಗಿದೆ. ಇಬ್ಬರೂ ಪ್ರೀತಿಯಿಂದ ವಂಚಿತರಾದವರು. ಇಬ್ಬರೂ ದಕ್ಷಿಣ ಭಾರತದವರು. ಆದರೆ, ದೂರದ ವಾರಣಾಸಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗುತ್ತಾರೆ.
ವಾರಣಾಸಿಗೆ ಬಂದ ಲೀಲಾ
ತಮಿಳುನಾಡಿನ ತಂಜಾವೂರಿನ ಲೀಲಾಗೆ ಬಹುದಿನಗಳಿಂದ ವಾರಣಾಸಿ ನೋಡಬೇಕೆಂಬ ಆಸೆ. ಪ್ರವಾಸದ ನೆಪದಲ್ಲಿ ನೆರೆಹೊರೆಯವರೊಂದಿಗೆ ವಾರಣಾಸಿಗೆ ಬಂದಾಗ ಆಕೆಯ ಮನಸ್ಸು ಖುಷಿಯಾಗುತ್ತದೆ. ಆದರೆ, ತನ್ನದೇ ಭಾಷೆಯ ಜನರ ನಡುವೆ ಇದ್ದರೂ ಆಕೆಗೆ ಯಾವುದೋ ಅನಾಥ ಭಾವ ಕಾಡುತ್ತದೆ. ಹೀಗಾಗಿ ಪ್ರವಾಸಿ ತಂಡದಿಂದ ದೂರವಾಗುತ್ತಾಳೆ. ಕೊನೆಗೆ ತಂಡದಿಂದಲೇ ತಪ್ಪಿಸಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿ ಆಕೆಯ ಪರ್ಸ್ ಮತ್ತು ಫೋನ್ ಕಳುವಾಗುತ್ತದೆ. ಅಪರಿಚಿತ ಊರಿನಲ್ಲಿ ಒಬ್ಬಂಟಿಯಾಗಿ ಕುಳಿತು ಕಣ್ಣೀರಿಡುವ ಲೀಲಾಳನ್ನು ದೂರದಿಂದಲೇ ಗಮನಿಸುವ ವ್ಯಕ್ತಿಯೇ ಮಾಧವನ್.
ಒಂದು ಕಪ್ ಟೀ, ಅಲ್ಲಿಂದ ಶುರುವಾದ ಸ್ನೇಹ
ಲೀಲಾಳ ಪರಿಸ್ಥಿತಿಯನ್ನು ಗಮನಿಸಿದ ಮಾಧವನ್ ಅಳುಕಿನಿಂದಲೇ ಆಕೆಯ ಬಳಿ ಬರುತ್ತಾನೆ. ನಿಧಾನವಾಗಿ ಮಾತನಾಡಿಸುತ್ತಾನೆ. ಒಂದು ಕಪ್ ಟೀ ಕೊಡಿಸುತ್ತಾನೆ. ನಂತರ ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಮಾಧವನ್ ಮಲಯಾಳಿ. ತಮಿಳು ಅರ್ಥವಾಗುತ್ತದೆ. ಆತನ ಮಗಳು ವಾರಣಾಸಿಯಲ್ಲಿ ಕಥಕ್ ಕಲಿಯುತ್ತಿದ್ದಾಳೆ. ಆಗಾಗ ವಾರಣಾಸಿಗೆ ಬಂದು ಹೋಗುವುದರಿಂದ ಅಲ್ಲಿನ ಜನರು ಮತ್ತು ಸ್ಥಳಗಳ ಪರಿಚಯವೂ ಆತನಿಗಿದೆ. ಲೀಲಾಳನ್ನು ಆಕೆಯ ಪ್ರವಾಸಿ ತಂಡದೊಂದಿಗೆ ಸೇರಿಸುವುದಾಗಿ ಮಾಧವನ್ ಹೇಳುತ್ತಾನೆ. ಆದರೆ, ತಂಡವನ್ನು ಹುಡುಕುವ ಪ್ರಯಾಣದಲ್ಲೇ ಇವರಿಬ್ಬರ ನಡುವೆ ಸಣ್ಣದೊಂದು ಸ್ನೇಹ ಮೊಳಕೆಯೊಡೆಯುತ್ತದೆ.
ವಾರಣಾಸಿಯೂ ಇಲ್ಲಿ ಒಂದು ಪಾತ್ರ
ಈ ಸಿನಿಮಾದಲ್ಲಿ ವಾರಣಾಸಿ ಕೇವಲ ಹಿನ್ನೆಲೆಯಲ್ಲ. ಅದೂ ಒಂದು ಪ್ರಮುಖ ಪಾತ್ರ. ಗಂಗಾ ನದಿ ತೀರ, ಗಂಗಾರತಿ, ಹಾಡುಗಾರರ ತಂಡ, ನೃತ್ಯ, ಮಸಾಲೆ ದೋಸೆ, ಸುಡುವ ಜಾಗ, ಪಿಂಡ ಹಾಕಲು ದೂರದೂರಿನಿಂದ ಬರುವ ಜನ, ಇವೆಲ್ಲವೂ ಚಿತ್ರದ ಕತೆಯ ಭಾಗವಾಗುತ್ತವೆ. ಇತರರ ಬದುಕಿನ ನೋವು, ಸಂಕಟ, ನಂಬಿಕೆಗಳನ್ನು ನೋಡುತ್ತಾ ಲೀಲಾ ಮತ್ತು ಮಾಧವನ್ ತಮ್ಮ ಬದುಕಿನ ಅರ್ಥವನ್ನೂ ಅರ್ಥಮಾಡಿಕೊಳ್ಳುತ್ತಾರೆ. ಒಬ್ಬರಿಗೊಬ್ಬರು ತಮ್ಮ ಕಥೆ ಹೇಳಿಕೊಳ್ಳುತ್ತಾ, ಸಣ್ಣ ಸಣ್ಣ ಸಂತೋಷಗಳನ್ನು ಹಂಚಿಕೊಳ್ಳುತ್ತಾ ಸಾಗುವ ಇವರ ಪ್ರಯಾಣ, ಪ್ರೇಕ್ಷಕರನ್ನೂ ಭಾವನಾತ್ಮಕವಾಗಿ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತದೆ.
ಅಗೋಚರ ಪ್ರೀತಿಗೆ ಕಾವು ಕೊಡುವ ಸನ್ನಿವೇಶಗಳು
ಮಗಳಿಗೆ ಸೀರೆ ಖರೀದಿಸುವುದು, ಒಂದಕ್ಕೊಂದು ಉಚಿತವಾಗಿ ಸಿಗುವ ಸೀರೆಯನ್ನು ಲೀಲಾಳಿಗೆ ಉಡಿಸಿ ನೋಡುವುದು, ಮಗಳ ಹುಟ್ಟುಹಬ್ಬದ ಪ್ರಯುಕ್ತ ಅನಾಥಾಶ್ರಮಕ್ಕೆ ಭೇಟಿ ನೀಡುವುದು, ತಿರುಗಾಡಿ ಸುಸ್ತಾದಾಗ ಹೋಟೆಲ್ ರೂಂ ಮಾಡಿಕೊಳ್ಳುವುದು. ಇವೆಲ್ಲವೂ ಇವರಿಬ್ಬರ ನಡುವಿನ ಅಗೋಚರ ಸಂಬಂಧಕ್ಕೆ ಮತ್ತಷ್ಟು ಕಾವು ಕೊಡುತ್ತವೆ. ಪ್ರವಾಸಿ ತಂಡ ಸಿಕ್ಕಾಗ ಮಾಧವನ್ ಲೀಲಾಳನ್ನು ಅವರೊಂದಿಗೆ ಕಳುಹಿಸಲು ಮುಂದಾಗುತ್ತಾನೆ. ಆದರೆ, ಲೀಲಾ ಆತನನ್ನು ಬಿಟ್ಟು ಹೋಗಲು ಬಯಸುವುದಿಲ್ಲ. ಕೊನೆಗೆ ಅಲ್ಲೇ ಉಳಿಯುತ್ತಾಳೆ. ಇಬ್ಬರಿಗೂ ಮೌನ ಇಷ್ಟ. ಆ ಮೌನಕ್ಕೆ ನಂಬಿಕೆಯೇ ಆಧಾರ.
ಇಂದ್ರನ್ಸ್ ಮತ್ತು ಮಧೂಬಾಲಾ ಅಭಿನಯಕ್ಕೆ ಫುಲ್ ಮಾರ್ಕ್ಸ್
ಈ ಚಿತ್ರದ ದೊಡ್ಡ ಶಕ್ತಿಯೇ ಇಂದ್ರನ್ಸ್ ಮತ್ತು ಮಧೂಬಾಲಾ ಅವರ ಅಭಿನಯ. ಎಪ್ಪತ್ತರ ಆಸುಪಾಸಿನ ಪೋಷಕ ನಟ ಇಂದ್ರನ್ಸ್ ಎದುರು, ಒಂದು ಕಾಲದಲ್ಲಿ ಲಕ್ಷಾಂತರ ಯುವಕರ ಹೃದಯ ಗೆದ್ದಿದ್ದ ಮಧೂಬಾಲಾ ನಟಿಸಿದ್ದಾರೆ. ಒಂದು ಕಾಲದಲ್ಲಿ 'ರೋಜಾ' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾದ ಮಧೂಬಾಲಾ, ಇಲ್ಲಿ ಲೀಲಾ ಪಾತ್ರದಲ್ಲಿ ಸಂಪೂರ್ಣವಾಗಿ ಬದುಕಿದ್ದಾರೆ. ದುಃಖ, ನಿರಾಶೆ ತುಂಬಿಕೊಂಡಿರುವ ಲೀಲಾ ನಿಧಾನವಾಗಿ ಸಣ್ಣ ಸಣ್ಣ ಸಂತೋಷಗಳಲ್ಲಿ ಖುಷಿ ಕಂಡುಕೊಳ್ಳುವ ವ್ಯಕ್ತಿಯಾಗಿ ಬದಲಾಗುವ ಪ್ರಯಾಣವನ್ನು ಮಧೂ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಮಾಧವನ್ ಪಾತ್ರದಲ್ಲಿ ಇಂದ್ರನ್ಸ್ ಅವರ ಅಭಿನಯವೂ ಅದ್ಭುತ. ಅವರ ಮುಗ್ಧ ಕಣ್ಣುಗಳು, ಮುಖಭಾವಗಳು, ಸಂಭಾಷಣೆ ಹೇಳುವ ರೀತಿ, ದೇಹಭಾಷೆ ಮತ್ತು ಮುಗುಳ್ನಗೆ ಎಲ್ಲವೂ ಪ್ರೇಕ್ಷಕರಿಗೆ ಮಾಧವನ್ ಪಾತ್ರವನ್ನು ಹತ್ತಿರವಾಗಿಸುತ್ತವೆ.
ಸಂಭಾಷಣೆಗಳೇ ಚಿತ್ರದ ದೊಡ್ಡ ಶಕ್ತಿ
ಲೀಲಾ ಹೆಚ್ಚಾಗಿ ತಮಿಳಿನಲ್ಲಿ ಮಾತನಾಡುತ್ತಾಳೆ. ಮಾಧವನ್ ತಮಿಳು ಮತ್ತು ಮಲಯಾಳಂ ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಾನೆ. ಆರಂಭದಲ್ಲಿ ಲೀಲಾ ಮಾತನಾಡಲು ಹಿಂಜರಿಯುವುದರಿಂದ ಚಿತ್ರದ ಲಯಕ್ಕೆ ಪ್ರೇಕ್ಷಕರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ, ನಂತರ ನಿರ್ದೇಶಕಿ ಅವರಿಬ್ಬರ ಸಂಬಂಧವನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಮೃದುವಾಗಿ ಬೆಳೆಸಿರುವ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇದು ದೊಡ್ಡ ದೊಡ್ಡ ಡೈಲಾಗ್‌ಗಳ ಸಿನಿಮಾ ಅಲ್ಲ. ಸಣ್ಣ ಮಾತುಗಳಲ್ಲಿ ದೊಡ್ಡ ಭಾವನೆಗಳನ್ನು ಹೇಳುವ ಸಿನಿಮಾ.
ಯಾರಿಗೆ ಈ ಸಿನಿಮಾ ಇಷ್ಟವಾಗಬಹುದು?
ಪುಸ್ತಕ ಓದುವ ಅಭ್ಯಾಸ ಇರುವವರು, ಹಾಡು ಕೇಳಲು ಇಷ್ಟಪಡುವವರು, ಟ್ರೆಕ್ಕಿಂಗ್ ಮಾಡುವವರು, ಒಂಟಿಯಾಗಿರಲು ಬಯಸುವವರು ಈ ಸಿನಿಮಾ ಖಂಡಿತ ನೋಡಬಹುದು. ಏಕೆಂದರೆ ಇದು ಕೇವಲ ಕಣ್ಣಿನಿಂದ ನೋಡುವ ಸಿನಿಮಾವಲ್ಲ. ಇದು ಹೃದಯದಿಂದಲೂ ನೋಡುವ ಸಿನಿಮಾ. ನಮ್ಮ ಬದುಕಿನಲ್ಲಿ ಕಳೆದುಹೋದ ಪ್ರೀತಿ, ಮರೆತುಹೋದ ಆಸೆ, ಸಣ್ಣ ಸಣ್ಣ ಸಂತೋಷಗಳು ಮತ್ತು ನಮ್ಮೊಳಗಿನ ಒಂಟಿತನವನ್ನು ಮತ್ತೆ ನಮ್ಮ ಮುಂದೆ ತಂದು ನಿಲ್ಲಿಸುವ ಸಿನಿಮಾ. ಒಟ್ಟಿನಲ್ಲಿ, 'ಚಿನ್ನ ಚಿನ್ನ ಆಸೈ' ಒಂದು ಸಿನಿಮಾ ಮಾತ್ರವಲ್ಲ. ಇದು ಇಬ್ಬರು ಅಪರಿಚಿತರು ತಮ್ಮ ಬದುಕಿನ ನೋವನ್ನು ಹಂಚಿಕೊಂಡು, ಒಬ್ಬರಿಗೊಬ್ಬರು ಸ್ವಲ್ಪ ಹೊತ್ತು ಬದುಕುವ ಧೈರ್ಯ ಕೊಡುವ ಭಾವನಾತ್ಮಕ ಪ್ರಯಾಣ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿದೆ.
