ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಚರ್ಚೆಗಳು ಭಾರೀ ಜೋರಾಗಿ ನಡೆಯುತ್ತಿರುವ ಹೊತ್ತಲ್ಲೇ, ಟಾಲಿವುಡ್ ನಿರ್ದೇಶಕರೊಬ್ಬರ ಜೊತೆ ಕನ್ನಡದ ರಾಕಿಭಾಯ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಫ್ಯಾಕ್ಟ್ಚೆಕ್ ಮೂಲಕ ವೈರಲ್ ಆಗಿರೋ ಆ ಸುದ್ದಿ ನಿಜವಲ್ಲ ಎಂಬ ಮಾಹಿತಿ ಸಿಕ್ಕಿದೆ.
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ವೈರಲ್ ಆಗಿರೋ ಸುದ್ದಿ ಸುಳ್ಳು!
ಸ್ಯಾಂಡಲ್ವುಡ್ನ ರಾಕಿಭಾಯ್ ಯಶ್ ಮುಂದಿನ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ಅವರು ಮತ್ತೆ ತೆರೆ ಮೇಲೆ ಅಬ್ಬರಿಸಲಿದ್ದಾರೆ? ‘ಕೆಜಿಎಫ್’ ಸರಣಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಯಶ್ ಅವರ ಮುಂದಿನ ಹೆಜ್ಜೆಯ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವಿರುವುದು ಸಹಜ. ಇದೀಗ, ಟಾಲಿವುಡ್ನ ಯುವ ನಿರ್ದೇಶಕರೊಬ್ಬರೊ ಜೊತೆ ಯಶ್ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
‘ಟಾಕ್ಸಿಕ್’ ಬಳಿಕ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ಗೆ ಯಾವ ನಿರ್ದೇಶಕರ ಜೊತೆ ಕೈಜೋಡಿಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸುಳಿದಾಡುತ್ತಲೇ ಇತ್ತು. ಈ ನಡುವೆ ತೆಲುಗಿನ ಹೊಸ ನಿರ್ದೇಶಕರೊಬ್ಬರ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಜೋರಾಗಿ ಹರಿದಾಡುತ್ತಿದೆ. ಆದರೆ, ಈ ಸುದ್ದಿ ನಿಜವೇ?
ಯಶ್ ಮುಂದಿನ ಸಿನಿಮಾ ಟಾಲಿವುಡ್ ಆ ನಿರ್ದೇಶಕರ ಜೊತೆ ಎಂಬಸುದ್ದಿ ಸುಳ್ಳು!
ಸದ್ಯಕ್ಕೆ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ‘ತೆಲುಗಿನ ಯುವ ನಿರ್ದೇಶಕರೊಬ್ಬರು ಯಶ್ ಅವರಿಗೆ ಕಥೆ ಹೇಳಿದ್ದು, ಈ ಕಥೆ ರಾಕಿಭಾಯ್ ಅವರಿಗೆ ಇಷ್ಟವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಮೂಡಿಬರಲಿದೆ’ ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿಯೇ ಸೌಂಡ್ ಮಾಡುತ್ತಿತ್ತು. ಆದರೆ ಈ ಕುರಿತು ಯಶ್ ಅಥವಾ ನಿರ್ದೇಶಕರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿರಲಿಲ್ಲ. ಇದೀಗ, ಯಶ್ ಟೀಮ್ನಿಂದ ‘ಹರಿದಾಡುತ್ತಿರುವ ಆ ಸುದ್ದಿ ಸತ್ಯವಲ್ಲ’ ಎಂಬ ಮಾಹಿತಿ ಹೊರಬಿದ್ದಿದೆ.
‘ರಾಮಾಯಣ’ದಲ್ಲಿ ರಾವಣನಾಗಿ ಯಶ್ ಅಬ್ಬರ
ಇನ್ನೊಂದೆಡೆ, ಯಶ್ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಚಿತ್ರದ ನಿರ್ಮಾಣದಲ್ಲಿಯೂ ಯಶ್ ಪಾಲುದಾರರಾಗಿದ್ದಾರೆ. ಈ ಚಿತ್ರವು ಪ್ಯಾನ್ ವರ್ಲ್ಡ್ ಬಿಡುಗಡೆ ಕಾಣಲಿದ್ದು, ಈ ಚಿತ್ರದ ಬಗ್ಗೆ ಇಡೀ ಜಗತ್ತಿನಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ.
'ಕೆಜಿಎಫ್-3' ಸಿನಿಮಾ ಬರಲಿದೆಯೇ?
ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅಬ್ಬರಿಸಿದ್ದು ‘ಕೆಜಿಎಫ್-ಚಾಪ್ಟರ್ 1’ ಹಾಗೂ 'ಕೆಜಿಎಫ್-ಚಾಪ್ಟರ್ 2' ಸರಣಿ ಸಿನಿಮಾಗಳಲ್ಲಿ ಎಂಬುದು ಎಲ್ಲರಿಗೂ ಗೊತ್ತು. ಮುಂದೆ ಕೆಜಿಎಫ್-ಚಾಪ್ಟರ್-3' ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾ ಭವಿಷ್ಯದಲ್ಲಿ ಬರಬಹುದು ಎಂಬ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಸುದ್ದಿಗಳಿದ್ದರೂ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಲ್ಲ.
ಆದರೆ, ಈಗ ಬರಲಿರುವ ‘ರಾಮಾಯಣ-1’ ಚಿತ್ರದ ಬಳಿಕ ಮುಂದಿನ ವರ್ಷ ‘ರಾಮಾಯಣ-2’ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತವಾಗಿ ಹೇಳಿಕೊಂಡಿದೆ. ಆದ್ದರಿಂದ ಯಶ್ ಮುಂದಿನ ಚಿತ್ರ ‘ರಾಮಾಯಣ-2’ ಅನ್ನೋದಂತೂ ಸ್ಪಷ್ಟ. ಆದರೆ, ರಾಮಾಯಣ ಹೊರತುಪಡಿಸಿ ನಮ್ಮ ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.






