ಸಿನಿ ಇಂಡಸ್ಟ್ರಿಯಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಮಹಿಳೆ ಎಂದರೆ ಅವರ ಪಾಲಿಗೆ ಏನು ಎಂಬುದನ್ನು ವಿಡಿಯೋ ಸಹಿತ ರಿವೀಲ್ ಮಾಡಿದ್ದಾರೆ ನಟಿ ಕಂಗನಾ ರಣಾವತ್!
ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರು ಮಾಡಿರುವ ನಟಿ, ಸಂಸದೆ ಕಂಗನಾ ರಣಾವತ್ (Kangana Ranaut) ಸದಾ ಒಂದಿಲ್ಲೊಂದು ವಿಷಯಗಳ ಕುರಿತು ಚರ್ಚೆಯಲ್ಲಿ ಇರುತ್ತಾರೆ. ಇದ್ದದ್ದನ್ನು ನೇರಾನೇರ ಹೇಳುವ ಈಕೆ ಹಲವರಿಗೆ ಫೆವರೆಟ್ ತಾರೆ. ಯಾವುದೇ ಅಳುಕೂ ಇಲ್ಲದೇ, ಕಂಡದ್ದನ್ನು ಹೇಳುವ ಮೂಲಕ ಇವರು ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ. ಇದೀಗ ಬಾಲಿವುಡ್‌ನ ಕರಾಳ ಮುಖವನ್ನು ನಟಿ ಬಯಲು ಮಾಡಿದ್ದಾರೆ. ಇದಾಗಲೇ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ನಟಿಯರು ಓಪನ್ ಆಗಿಯೇ ಮಾತನಾಡಿರೋದು ಇದೆ. ಅದಕ್ಕಿಂತಲೂ ಭಯಾನಕವಾಗಿರೋ ವಿಷಯವನ್ನು ಕಂಗನಾ ರಿವೀಲ್ ಮಾಡಿದ್ದು, ಅವರ ಮಾತಿನ ಬೆನ್ನಲ್ಲೇ ಕೆಲವೊಂದು ಕರಾಳ ವಿಡಿಯೋಗಳೂ ವೈರಲ್ ಆಗಿವೆ. ಬಾಲಿವುಡ್ (Bollywood) ಮಾಫಿಯಾ ಬಗ್ಗೆ ನಾನು ಹೆಚ್ಚೆಚ್ಚು ಮಾತನಾಡಲು ಶುರು ಮಾಡಿದ ಬಳಿಕ ತಮಗೆ ಚಿತ್ರಗಳಲ್ಲಿ ಹೆಚ್ಚು ಆಫರ್ಸ್ ಬಂದಿಲ್ಲ ಎಂದು ಇದಾಗಲೇ ಕಂಗನಾ ಹೇಳಿದ್ದರು. ಇದೊಂದು ದೊಡ್ಡ ಮಾಫಿಯಾ. ಅವರು ಹೇಳಿದಂತೆ ಕೇಳಿದರೆ ಮಾತ್ರ ಬದುಕಲು ಸಾಧ್ಯ. ಅವರ ವಿರುದ್ಧ ಈಜುತ್ತೇನೆ ಎಂದರೆ ತೊಂದರೆಗಳು ಶುರುವಾಗುತ್ತವೆ. ನಾನು ತೊಂದರೆಗಳನ್ನು ಅನುಭವಿಸಿದ್ದೇ ಅವರ ವಿರುದ್ಧ ಮಾತನಾಡಿದೆ ಎನ್ನುವ ಕಾರಣಕ್ಕಾಗಿ. ನಾನು ಬೇರೆಯ ಹುಡುಗಿಯರ ತರಹ ಅಲ್ಲ. ಹಾಗಾಗಿ ನನ್ನನ್ನು ದುರಂಹಕಾರಿ ಅಂತಾನೂ ಕರೆದರು ಎನ್ನುತ್ತಲೇ ಕಂಗನಾ ಕೆಲವೊಂದು ನಿದರ್ಶನಗಳನ್ನು ನೀಡಿದ್ದಾರೆ.
ಬಾಲಿವುಡ್ನಲ್ಲಿ, ಮಹಿಳೆಯರಿಗೆ ಸಿಕ್ಕಾಪಟ್ಟೆ ತೊಂದರೆ ಕೊಡಲಾಗುತ್ತದೆ. ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತದೆ. ಹೋಟೆಲ್, ರೆಸ್ಟೋರೆಂಟ್, ಪಾರ್ಟಿಗಳಿಗೆ ಕರೆಯಲಾಗುತ್ತದೆ. ಅಲ್ಲಿ ಅವರನ್ನು ಅತ್ಯಂತ ನಿಷ್ಕೃಷ್ಟವಾಗಿ ನೋಡಿಕೊಳ್ಳಲಾಗುತ್ತದೆ ಎಂದು ನಟಿ ಹೇಳಿದ್ದಾರೆ. ಮನೆಗಳಿಗೆ ನುಗ್ಗುತ್ತಾರೆ. ಅದಕ್ಕೆ ತಕ್ಕಂತೆಯೇ ಕೆಲವೊಂದು ನಟರ ಅತ್ಯಂತ ಅಶ್ಲೀಲ ಎನ್ನುವ ವಿಡಿಯೋಗಳೂ ವೈರಲ್ ಆಗಿವೆ. ಈವಿಡಿಯೋದಲ್ಲಿ ಶ್ರೀದೇವಿ ಪತಿ ಬೋನಿ ಕಪೂರ್ ಸೇರಿದಂತೆ ಫೇಮಸ್ ನಟರು, ನಿರ್ದೇಶಕರು, ನಿರ್ಮಾಪಕರು ನಟಿಯರನ್ನು ಎಷ್ಟೊಂದು ಅಸಭ್ಯ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎನ್ನುವುದನ್ನು ನೋಡಬಹುದಾಗಿದೆ. ಇದೇ ವೇಳೆ ನಟಿ, ತಾವು ಹುಟ್ಟುವ ಮುಂಚೆಯೇ ಖ್ಯಾತ ಕೋರಿಯಗ್ರಾಫರ್ ಆಗಿದ್ದ ಸರೋಜ್ ಖಾನ್ ಅವರು ಹೇಳಿರುವ ಮಾತನ್ನು ಇದೇ ವೇಳೆ ನಟಿ ಹೇಳಿದ್ದಾರೆ. ಇವರು ನಾನು ಹುಟ್ಟುವ ಮುಂಚೆಯೇ ಫೇಮಸ್ ಆದವರು. ಆಗಲೇ ಇವರು ಒಂದು ಮಾತನ್ನು ಹೇಳಿದ್ದರು. ಅದೇನೆಂದರೆ ನಾವು ನಟಿಯರ ಮೇಲೆ ರೇ*ಪ್ ಮಾಡಿದ್ರೆ ಏನಂತೆ, ಅವರಿಗೆ ಛಾನ್ಸ್ ಕೊಡ್ತೇವೆ ತಾನೇ ಎಂದಿದ್ದರು. ಅಂದರೆ ಅಲ್ಲಿಂದ ಇಲ್ಲಿಯವರೆಗೂ ನಮ್ಮ ಸಿನಿಮಾ ಇಂಡಸ್ಟ್ರಿ ಹೇಗೆ ಬಂದಿದೆ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ ಕಂಗನಾ.
ಅಷ್ಟಕ್ಕೂ, ನಟಿ ಕಂಗನಾ, ಈ ಹಿಂದೆ ಬಾಲಿವುಡ್ ಅನ್ನು ಮಾಫಿಯಾ ಗ್ಯಾಂಗ್ ಎಂದು ಟೀಕಿಸಿದ್ದರು. ಬಾಲಿವುಡ್ನಲ್ಲಿ ಅವಕಾಶಕ್ಕೆ ನಟಿಯರನ್ನು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರು. ತಮಗಾಗಿದ್ದ ಕೆಟ್ಟ ಅನುಭವವನ್ನೂ ಹೇಳಿಕೊಂಡಿದ್ದರು. 'ಬಾಲಿವುಡ್‌ನ ಹೀರೊಗಳ ರೂಮಿಗೆ ಹೋಗುವಂತೆ ಹಲವು ಬಾರಿ ನನ್ನನ್ನು ಒತ್ತಾಯ ಮಾಡುತ್ತಿದ್ದರು. ಅದನ್ನು ಒಪ್ಪದೆ ಇದ್ದಾಗ, ನನ್ನನ್ನು ಹುಚ್ಚಿ ಎಂದು ಕರೆದರು. ಬಾಲಿವುಡ್ ಗ್ಯಾಂಗ್ ನನ್ನ ವರ್ತನೆಯನ್ನು ಅಹಂಕಾರವೆಂದು ಕರೆಯಿತು. ಯಾಕೆಂದರೆ ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ, ಐಟಂ ಸಾಂಗ್ (Item Song) ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಅವರ ಬಾಯಲ್ಲಿ ಹುಚ್ಚಿಯಾದೆ' ಎಂದಿದ್ದರು.
ಬಾಲಿವುಡ್ ಮಾತ್ರವಲ್ಲದೇ ವಿವಿಧ ರಾಜ್ಯಗಳ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಕಿರುತೆರೆಗಳಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಇದಾಗಲೇ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಲಕ್ಷ್ಮೀ ನಿವಾಸ ಸೀರಿಯಲ್ ಚಿನ್ನುಮರಿ ಎಂದೇ ಫೇಮಸ್ ಆಗಿರೋ ಚಂದನಾ ಅನಂತಕೃಷ್ಣ ಅವರೂ ಈ ವಿಷಯದ ಬಗ್ಗೆ ಮಾತನಾಡಿದ್ದರು. ತಾವು ಸ್ವಲ್ಪ ದಪ್ಪ ಇದ್ದುದರಿಂದ ಎಲ್ಲಿಯೂ ಸೆಲೆಕ್ಟ್ ಆಗುತ್ತಿರಲಿಲ್ಲ ಎಂದೂ ಹೇಳಿಕೊಂಡಿರುವ ಚಂದನಾ ಅವರು, ಕೊನೆಗೆ ತಮಗಾದ ಕಹಿ ಅನುಭವ ತೆರೆದಿಟ್ಟಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಅದೊಂದು ದಿವಸ ಸಿನಿಮಾವೊಂದರಲ್ಲಿ ಅವಕಾಶ ಇದೆ ಎಂದು ಒಬ್ರು ಫೋನ್ ಮಾಡಿದ್ರು. ಮೊದಲಿಗೆ ಮಾಡರ್ನ್ ಡ್ರೆಸ್ ಹಾಕಿ ಕಳಿಸಿ ಅಂದ್ರು, ಆಮೇಲೆ ವಿತೌಟ್ ಮೇಕಪ್ ಅಂದ್ರು. ಎಲ್ಲಾ ಕಳಿಸಿದೆ. ಆಮೇಲೆ ವಿಡಿಯೋ ಕಾಲ್ ಮಾಡಿ, ನಿಮ್ಮನ್ನ ನೋಡಬೇಕು ಅಂದ್ರು. ಆಗ ನನಗೆ ಡೌಟ್ ಬಂತು. ನನ್ನ ಸ್ನೇಹಿತೆಯರ ಜೊತೆ ಇರುವಾಗ ಕಾಲ್ ಮಾಡಿದೆ. ನನ್ನ ಜೊತೆ ಸುಮಾರ್ ಮಂದಿ ಇದ್ದಾರೆ ಎಂದು ಅವರು ಏನೂ ಹೇಳಿಲ್ಲ. ಆಮೇಲೆ ನಾನು ಅದನ್ನು ಬ್ಲಾಕ್ ಮಾಡಿದೆ ಎಂದಿದ್ದರು.
