ಧಾರವಾಹಿಗಳಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಂದ್ರಕಲಾ ಮೋಹನ್‌ ಅವರ ನಿಜ ಜೀವನವನ್ನು ತಿಳಿದುಕೊಂಡರೆ ನೀವು ಶಾಕ್‌ ಆಗ್ತೀರಾ! ಬಣ್ಣದ ಲೋಕದಲ್ಲಿ ತುಂಬಾ ರಫ್‌ ಆಂಡ್‌ ಟಫ್ ಆಗಿ ಅಭಿನಯಿಸುವ ಇವರ ರಿಯಲ್ ಲೈಫ್ ಕಥೆ ಒಂದು ಧಾರಾವಾಹಿಯಂತಿದೆ.

 

ಹತ್ತನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿದ ಚಂದ್ರಕಲಾ 13 ನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾದರಂತೆ. ಎಳೆಯ ಪ್ರಾಯದಲ್ಲೇ ಸಂಸಾರದ ಹೊಣೆ ಹೊತ್ತವರಿಗೆ ಗಂಡನ ಪ್ರೋತ್ಸಾಹದ ಫಲವಾಗಿ ಇಂದು ಅನನ್ಯ ಪ್ರತಿಭೆಯಾಗಿ ತುಳು ಚಿತ್ರರಂಗದ ಮಾಲಾಶ್ರೀ ಹಾಗೂ ಈ ಕನ್ನಡ ಕಿರುತೆರೆಯ ಅಜ್ಜಮ್ಮ ಎಂದೇ ಖ್ಯಾತರಾಗಿದ್ದಾರೆ.

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!

ಮಧ್ಯ ವಯಸ್ಸಿನ ಚಂದ್ರಕಲಾ ವಯಸ್ಸಿಗೂ ಮೀರಿದ ರೋಲ್ ಮಾಡುವ ಮೂಲಕ ಪಾತ್ರಗಳಿಗೆ ವಯಸ್ಸು, ಗ್ಲಾಮರ್ ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ತಿಳಿಸುತ್ತಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕಮಲಿ’ ಧಾರಾವಾಹಿಯ ಅಮ್ಮಮ್ಮಾ ಪಾತ್ರ ಪಾಪ್ಯುಲರ್ ಆಗಿದೆ.

 

"ಯಾವುದೇ ಪಾತ್ರವಾಗಲಿ ಅದಕ್ಕೆ ಜೀವ ತುಂಬುವುದು ಕಲಾವಿದನ ಕರ್ತವ್ಯ. ಇಂದು ನಾನು ಲಕ್ಷಾಂತರ ಜನರ ಪ್ರೀತಿಗೆ ಪಾತ್ರಳಾಗಿದ್ದೇನೆ ಎಂದರೆ ಅದಕ್ಕೆ ನನ್ನ ಪತಿಯೇ ಪ್ರಮುಖ ಕಾರಣ. ಹೆಚ್ಚಾಗಿ ನನಗೆ ಚಾಲೆಂಜಿಂಗ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಸೆ. ಯಾವುದೇ ಪಾತ್ರ ಸಿಕ್ಕಾಗಲೂ ಅದನ್ನುಅಚ್ಚು ಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು. ದುಡ್ಡಿನ ಹಿಂದೆ ಹೋದರೆ ಅದು ಕೇವಲ ಕೆಲವೇ ದಿನಗಳಿಗೆ. ಆದರೆ ಮನಸ್ಸಿಟ್ಟು ಮಾಡಿದ ಪಾತ್ರಗಳು ಎಂದಿಗೂ ಅಜರಾಮರವಾಗಿ ಉಳಿದಿರುತ್ತದೆ" ಎನ್ನುತ್ತಾರೆ ಚಂದ್ರಕಲಾ.

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ಮರೀಚಿಕೆ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಂದ್ರಕಲಾ ಸುಮಾರು 80 ಧಾರಾವಾಹಿಗಳಲ್ಲಿ ಹಾಗೂ 60 ಚಿತ್ರಗಳಲ್ಲಿ ಮಿಂಚಿದ್ದಾರೆ.

ನೋವಿನ ದಿನಗಳು:

ಚಂದ್ರಕಲಾ ಅವರ ಮಗ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಮಗನನ್ನು ಉಳಿಸಿಕೊಳ್ಳಬೇಕೆಂದು ಕೈಯಲ್ಲಿದ್ದ ಹಣವೆಲ್ಲಾ ಸುರಿದರು. ಮಗ ಮಾತ್ರ ಚೇತರಿಕೆ ಕಾಣಲಿಲ್ಲ. ಕೈಯಲ್ಲಿ ಬಿಡಿಗಾಸೂ ಇಲ್ಲದ ಸ್ಥಿತಿ ಉಂಟಾಗಿತ್ತು. ಒಂದು ಬಾರಿ ಮಕ್ಕಳಿಗೆ ವಿಷ ನೀಡಿ ಈ ಲೋಕವನ್ನೇ ಬಿಟ್ಟು ಹೋಗೋಣ ಎಂಬ ನಿರ್ಧಾರ ಮಾಡಿಕೊಂಡಿದ್ದರಂತೆ. ಆದರೆ ಆ ಸಂಕಷ್ಟದ ಸಂದರ್ಭದಲ್ಲಿ ಕೈ ಹಿಡಿದು ಧೈರ್ಯ ತುಂಬಿ ಮುನ್ನಡೆಸಿದವರು ನಟ ಶರಣ್ ಮತ್ತು ಕೃಷ್ಣ ರುಕ್ಮಿಣಿ ಧಾರವಾಹಿಯ ನಿರ್ದೇಶಕ ರವಿ ಆರ್‌ ಗರಣಿ. ಇವರಿಬ್ಬರನ್ನೂ ಚಂದ್ರಕಲಾ ಅವರು ಎಂದೆಂದಿಗೂ ಮರೆಯಲಾರೆ ಎನ್ನುತ್ತಾರೆ. ಇನ್ನೂ ಉತ್ತಮವಾದ ಪಾತ್ರಗಳಲ್ಲಿ ನಟಿಸಬೇಕು. ಹಾಗೆಯೇ ಸಾಧಿಸುವ ಛಲದೊಂದಿಗೆ ಮುನ್ನುಗ್ಗಿದರೆ ಜಯವೆಂಬುದು ಸ್ವಲ್ಪ ತಡವಾದರೂ ಖಚಿತವಾಗಿ ಸಿಕ್ಕೇ ಸಿಗುತ್ತದೆ ಎಂಬುದು ಇವರ ಕಿವಿಮಾತು.

ಸುಷ್ಮಾ ಸದಾಶಿವ್

ಪುತ್ತೂರು