ರಾಜಕೀಯಕ್ಕೆ ಬರುವ ಮುನ್ನ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' ರಿಲೀಸ್ ತಡವಾಗಿದೆ. ಇದರ ನಡುವೆಯೇ ಸಿನಿಮಾದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.

ತಮಿಳು ಸೂಪರ್‌ಸ್ಟಾರ್ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ನಟಿಸುತ್ತಿರುವ ಕೊನೆಯ ಸಿನಿಮಾ 'ಜನ ನಾಯಗನ್' ಅಂತಾನೇ ಭಾರಿ ಸುದ್ದಿ ಆಗಿತ್ತು. ಈ ಸಿನಿಮಾ ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಕಾರಣ, ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಈ ನಡುವೆ, ಯಾರೋ ಕಿಡಿಗೇಡಿಗಳು ಸಿನಿಮಾದ ಕೆಲವು ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ. ಈ ಘಟನೆಯಿಂದ ತಮಿಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಕಾರ್ತಿಕೇಯನ್, ವಿಶಾಲ್ ಸೇರಿದಂತೆ ಹಲವು ನಟರು ಈ ಪೈರಸಿ ವಿರುದ್ಧ ಧ್ವನಿ ಎತ್ತಿದ್ದಾರೆ. ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಕೂಡ, ದೃಶ್ಯಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈಗ, 'ಜನ ನಾಯಗನ್' ಚಿತ್ರತಂಡಕ್ಕೆ ಬೆಂಬಲವಾಗಿ ನಟಿ ಮಮಿತಾ ಬೈಜು ಕೂಡ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.

ಪೈರಸಿಯನ್ನು ಬೆಂಬಲಿಸಬೇಡಿ

"ಪ್ರಿಯ ಪ್ರೇಕ್ಷಕರೇ, ಒಂದು ಸಿನಿಮಾ ರೆಡಿಯಾಗೋಕೆ ನೂರಾರು ಜನರ ಶ್ರಮ, ಆಸಕ್ತಿ ಮತ್ತು ಸಮರ್ಪಣೆ ಇರುತ್ತೆ. ಪ್ರತಿದಿನ ಅವರೆಲ್ಲರೂ ತಮ್ಮ ಬೆಸ್ಟ್ ಕೊಟ್ಟಿರುತ್ತಾರೆ. ಹೀಗಿರುವಾಗ, ಅದು ಕಾನೂನುಬಾಹಿರವಾಗಿ ಲೀಕ್ ಆಗಿರೋದನ್ನು ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ. ಕೆಲವು ದೃಶ್ಯಗಳನ್ನು ನಾವು ದೊಡ್ಡ ಪರದೆಯಲ್ಲೇ ಎಲ್ಲರ ಜೊತೆ ನೋಡಬೇಕು ಅಂತಾನೇ ಮಾಡಿರುತ್ತೇವೆ. ಸಿನಿಮಾ ಅಧಿಕೃತವಾಗಿ ರಿಲೀಸ್ ಆದಾಗ, ದಯವಿಟ್ಟು ಸರಿಯಾದ ರೀತಿಯಲ್ಲೇ ನೋಡಿ ಆನಂದಿಸಿ. ಪೈರಸಿಯನ್ನು ಬೆಂಬಲಿಸಬೇಡಿ. ಸಿನಿಮಾ ಮತ್ತು ಅದರ ಹಿಂದಿರುವ ಪ್ರತಿಯೊಬ್ಬರನ್ನು ರಕ್ಷಿಸಲು ಇದೊಂದೇ ದಾರಿ," ಎಂದು ಮಮಿತಾ ಬೈಜು ಬರೆದುಕೊಂಡಿದ್ದಾರೆ.