ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಕಥಾಸಾರಾಂಶದ ಬಗ್ಗೆ ಸದ್ಯ ಸಿನಿಮಾ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ. ನಿವೃತ್ತ ಜೈಲು ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಅವರ ಶಾಂತಿಯುತ..

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’ ಸದ್ಯ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತೊಮ್ಮೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸಿನಿಮಾ ಬಿಡುಗಡೆಯ ಮುನ್ನವೇ ಇದರ ಕಥಾಸಾರಾಂಶಕ್ಕೆ ಸಂಬಂಧಿಸಿದ ಮಾಹಿತಿ ಸೋಷಿಯಲ್ ಮೀಡಿಯಾ ಹಾಗೂ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.

ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲದೆ, ಪ್ರೇಕ್ಷಕರ ವಲಯದಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸುತ್ತವೆ. ಈ ವಯಸ್ಸಿನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಜನಿಕಾಂತ್ ಅವರ ಎನರ್ಜಿ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇದ್ದಾರೆ.

ಇದೀಗ ರಜನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ 2026ರ ಅಕ್ಟೋಬರ್ 15ರಂದು ಚಿತ್ರಮಂದಿರಗಳಿಗೆ ಬರಲಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರದ ಕಥೆ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ಜೈಲರ್ 2’ ಚಿತ್ರದ ಕಥಾಸಾರಾಂಶ ಇದೇನಾ?

ಸದ್ಯ ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕ್ರೈಂ ಜಗತ್ತಿನಿಂದ ಎದುರಾಗುವ ಹೊಸದೊಂದು ಬೆದರಿಕೆ ನಿವೃತ್ತ ಜೈಲು ಅಧಿಕಾರಿ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಅವರ ಶಾಂತಿಯುತ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎನ್ನಲಾಗುತ್ತಿದೆ. ತಮ್ಮ ಕುಟುಂಬ ಹಾಗೂ ತಮ್ಮ ಪರಂಪರೆಯನ್ನು ರಕ್ಷಿಸಲು ಮುತ್ತುವೇಲ್ ಪಾಂಡಿಯನ್ ಮತ್ತೆ ತಮ್ಮ ಹಳೆಯ ಖಡಕ್ ಮತ್ತು ಆ್ಯಕ್ಷನ್ ಅವತಾರಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬುದು ವೈರಲ್ ಆಗುತ್ತಿರುವ ಕಥಾಸಾರಾಂಶದ ಪ್ರಮುಖ ಅಂಶ.

ಹೀಗಾಗಿ ‘ಜೈಲರ್’ ಸಿನಿಮಾದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಟೈಗರ್ ಮುತ್ತುವೇಲ್ ಪಾಂಡಿಯನ್ ಮತ್ತೊಮ್ಮೆ ಅದೇ ಮಾಸ್ ಅವತಾರದಲ್ಲಿ ಅಬ್ಬರಿಸಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಸದ್ಯ ಹರಿದಾಡುತ್ತಿರುವ ಈ ಕಥಾಸಾರಾಂಶಕ್ಕೆ ಚಿತ್ರತಂಡದಿಂದ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕವೇ ನಿಜವಾದ ಕಥೆ ಏನೆಂಬುದು ಸಂಪೂರ್ಣವಾಗಿ ತಿಳಿಯಲಿದೆ.