‘ಚುಟ್ಟಮಲ್ಲೆ’ AI ಫೇಕ್ ವಿಡಿಯೋ ವಿವಾದಕ್ಕೆ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ನಕಲಿ ವಿಡಿಯೋ ಸೃಷ್ಟಿಸಿ ಶೇರ್ ಮಾಡದಂತೆ ಮನವಿ ಮಾಡಿರುವ ನಟಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಜೂ. ಎನ್‌ಟಿಆರ್ ಅಭಿನಯದ ‘ದೇವರ’ ಸಿನಿಮಾದ ‘ಚುಟ್ಟಮಲ್ಲೆ’ ಹಾಡನ್ನು AI ತಂತ್ರಜ್ಞಾನ ಬಳಸಿ ಅಸಭ್ಯ ರೀತಿಯಲ್ಲಿ ಮಾರ್ಫ್ ಮಾಡಿರುವ ವಿಚಾರಕ್ಕೆ ನಟಿ ಜಾನ್ವಿ ಕಪೂರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ನಕಲಿ ವಿಡಿಯೋಗಳನ್ನು ಸೃಷ್ಟಿಸುವುದು, ಅವುಗಳನ್ನು ಶೇರ್ ಮಾಡುವುದು ಹಾಗೂ ಪ್ರಚಾರ ಮಾಡುವುದು AI ತಂತ್ರಜ್ಞಾನದ ಸ್ಪಷ್ಟ ದುರುಪಯೋಗ ಎಂದು ಅವರು ಹೇಳಿದ್ದಾರೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಾನ್ವಿ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಎಲ್ಲೆಡೆ AI ವಿಡಿಯೋಗಳದ್ದೇ ಹವಾ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್‌ನಂತಹ ವೇದಿಕೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ AI ಕಂಟೆಂಟ್‌ಗಳು ವೈರಲ್ ಆಗುತ್ತಿವೆ. ತಂತ್ರಜ್ಞಾನ ಹಲವು ಕ್ಷೇತ್ರಗಳಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದ್ದರೂ, ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚಿತ್ರರಂಗದಲ್ಲಿ ಭಾರಿ ಚರ್ಚೆ

ವಿಶೇಷವಾಗಿ AI ತಂತ್ರಜ್ಞಾನ ಬಳಸಿ ನಟ-ನಟಿಯರ ಫೋಟೋಗಳನ್ನು ಅಸಭ್ಯವಾಗಿ ಮಾರ್ಫ್ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದೀಗ ಕೇವಲ ನಟಿಯರ ಫೋಟೋಗಳಿಗಷ್ಟೇ ಸೀಮಿತವಾಗದೆ, ‘ದೇವರ’ ಸಿನಿಮಾದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡನ್ನೇ AI ಬಳಸಿ ಅಸಭ್ಯ ರೀತಿಯಲ್ಲಿ ಮಾರ್ಫ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ಈ AI ವಿಡಿಯೋ ಕುರಿತು ‘ಮ್ಯಾನ್ ಆಫ್ ಮಾಸಸ್’ ಜೂ. ಎನ್‌ಟಿಆರ್ ಪ್ರತಿಕ್ರಿಯಿಸಿರುವುದು ಗೊತ್ತೇ ಇದೆ. ಇಂತಹ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಾರಕ್ ಎಚ್ಚರಿಕೆ ನೀಡಿದ್ದರು. ಇದೀಗ ‘ಚುಟ್ಟಮಲ್ಲೆ’ ವಿವಾದದ ಬಗ್ಗೆ ಜಾನ್ವಿ ಕಪೂರ್ ಕೂಡ ಪ್ರತಿಕ್ರಿಯಿಸಿದ್ದಾರೆ. AI ತಂತ್ರಜ್ಞಾನವನ್ನು ಇಂತಹ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ತೀವ್ರವಾಗಿ ಆತಂಕ ಮೂಡಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮನವಿ

ಇನ್ನು AI ಮೂಲಕ ಸೃಷ್ಟಿಸಿರುವ ಇಂತಹ ನಕಲಿ ವಿಡಿಯೋಗಳನ್ನು ದಯವಿಟ್ಟು ಯಾರೂ ಸೃಷ್ಟಿಸಬೇಡಿ. ಅವುಗಳನ್ನು ಇತರರೊಂದಿಗೆ ಶೇರ್ ಮಾಡಬೇಡಿ ಅಥವಾ ಪ್ರಚಾರ ಮಾಡಬೇಡಿ ಎಂದು ಜಾನ್ವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಇದು AI ತಂತ್ರಜ್ಞಾನದ ಸ್ಪಷ್ಟ ದುರುಪಯೋಗವಾಗಿದ್ದು, ಇಂತಹ ಕೃತ್ಯ ಎಸಗುವವರ ವಿರುದ್ಧ ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಾನ್ವಿ ಕಪೂರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ನಟಿಯ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.