ವರ್ಷದ ನಾಯಕಿ : ರಚಿತಾ ರಾಮ್

ಈ ವರ್ಷ ಶತ ದಿನೋತ್ಸವ ಕಂಡ ‘ಅಯೋಗ್ಯ’ ಚಿತ್ರಕ್ಕೆ ನಾಯಕಿ ಆಗುವ ಮೂಲಕ ನಟಿ ರಚಿತಾ ರಾಮ್ ಈ ವರ್ಷದ ನಾಯಕಿಯಾಗಿ ನಿಂತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶಿಸಿ, ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ, ಟಿಆರ್ ಚಂದ್ರಶೇಖರ್ ನಿರ್ಮಾಣದ ಈ ಚಿತ್ರವು ಡಿಂಪಲ್ ಕ್ವೀನ್‌ಗೆ ಸ್ಟಾರ್ ಪಟ್ಟ ಕೊಟ್ಟಿತು. ಈ ಚಿತ್ರದಲ್ಲಿನ ರಚಿತಾ ಅವರ ಸಿಂಪಲ್ ಲುಕ್ಕು, ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡು ಪಡ್ಡೆಗಳಿಗೂ ಹತ್ತಿರವಾದ ಬೆಡಗಿ. ‘ಏನಮ್ಮಿ ಏನಮ್ಮಿ...’ ಹಾಡಿನಲ್ಲಿ ರಚಿತಾ ರಾಮ್ರನ್ನು ಕಂಡು ಅವರ ಅಭಿಮಾನಿ ಬಳಗ ಮತ್ತಷ್ಟು ದೊಡ್ಡದಾಯಿತು. ಆ ಮೂಲಕ ಶತ ದಿನೋತ್ಸವ ಚಿತ್ರದ ನಾಯಕಿ, ಈ ವರ್ಷ ಯಶಸ್ವಿ ನಟಿ ಅನಿಸಿಕೊಂಡಿದ್ದಾರೆ. ಇನ್ನೂ ಮುಂದಿನ ವರ್ಷ ಇವರ ನಟನೆಯ ಮುಂದೆ ಸೀತಾರಾಮ ಕಲ್ಯಾಣ, ನಟಸಾರ್ವಭೌಮ, ಏಪ್ರಿಲ್, ಐ ಲವ್ ಯೂ ಮುಂತಾದ ಚಿತ್ರಗಳಿವೆ.

ವರ್ಷದ ನಾಯಕ: ಶಿವರಾಜ್ ಕುಮಾರ್

ಅಭಿನಯಿಸಿದ ಸಿನಿಮಾಗಳ ಪಟ್ಟಿ ನೂರು ದಾಟಿದೆ. ವಯಸ್ಸು ಐವತ್ತು ದಾಟಿ ತುಂಬಾ ದಿನ ಆಯ್ತು. ಆದರೂ ಈಗ ಅದೇ ‘ಚಿಗುರು ಮೀಸೆ’ಯ ಹುಡುಗನ ಎನರ್ಜಿ, ಖಡಕ್ ಲುಕ್ಕು ಮತ್ತು ಖದರ್ ಇರೋ ನಟ ಅದು ಶಿವಣ್ಣ ಮಾತ್ರ ಎಂದು ಹೇಳುವುದಕ್ಕೆ ಅವರ ನಟನೆಯ ‘ಟಗರು’ ಚಿತ್ರವೇ ಸಾಕ್ಷಿ. ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕೊಟ್ಟ ಹೀರೋ. ಜತೆಗೆ ‘ದಿ ವಿಲನ್’ನಂತಹ ಚಿತ್ರವೂ ಮೇಲೇರುವುದಕ್ಕೆ ಸಾಧ್ಯವಾಗಿದ್ದು ಶಿವಣ್ಣ ಅವರಿಂದಲೇ ಎಂಬುದರಲ್ಲಿ ಎರಡು ಮಾತಿಲ್ಲ. ಇವತ್ತಿನ ಯಂಗ್ ಹೀರೋಗಳ ನಡುವೆಯೂ ತಮ್ಮ ಛಾಪು ಮೂಡಿಸಿದವರು. ‘ಟಗರು’ ಚಿತ್ರದ ಟೈಟಲ್ ಹಾಡು, ಆ ಚಿತ್ರದ ಡೈಲಾಗ್ ಡೆಲಿವರಿಯ ರೀತಿ, ಶಿವಣ್ಣ ಅವರ ಲುಕ್ಕು, ನಿರ್ದೇಶಕ ಸೂರಿ ಅವರ ಕಲ್ಪನೆಗೆ ತಕ್ಕಂತೆ ತಮ್ಮನ್ನು ಬ್ಲೆಂಡ್ ಮಾಡಿಕೊಂಡ ರೀತಿಯನ್ನು ನೋಡಿದರೆ 2018ರಲ್ಲಿ ಶಿವಣ್ಣನನ್ನು ಮೀರಿ ಸುವ ಮತ್ತೊಂದು ಟಗರು ಬರಲಿಲ್ಲ ಅಂತಲೇ ಹೇಳಬೇಕು.

ವರ್ಷದ ಸಿನಿಮಾ: ಸ.ಹಿ.ಪ್ರಾ.ಕಾಸರಗೋಡು ಕೊಡಗೆ ರಾಮಣ್ಣ ರೈ

ಸರ್ಕಾರಿ ಶಾಲೆ, ಹಳ್ಳಿ, ಭಾಷೆ ಹಾಗೂ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡುವುದು ಎಂದರೆ ಕೇವಲ ಚಿತ್ರೋತ್ಸವ, ಪ್ರಶಸ್ತಿಗೆ ಸೀಮಿತ ಎನ್ನುವ ಮಾತುಗಳು ಕೇಳಿಬರುತ್ತವೆ. ಮಕ್ಕಳೇ ಪ್ರಧಾನವಾಗಿದ್ದರೂ ಆ ವ್ಯಾಪ್ತಿಯನ್ನು ಮೀರಿ ಜನರಿಗೆ ತಲುಪಿದ ಸಿನಿಮಾ. ಮಕ್ಕಳಂತೂ ಹಿರಿಯ ನಟರಾದ ಅನಂತ್‌ನಾಗ್, ರಮೇಶ್ ಭಟ್ ಅವರನ್ನೇ ಮೀರಿಸುವಂತೆ ಪಾತ್ರದೊಳಗೆ ಪ್ರವೇಶಿಸಿದ್ದರು. ಚಿತ್ರದಲ್ಲಿ ಕಾಣಿಸಿಕೊಂಡಿರುವ ಪರಿಸರ, ಹಳ್ಳಿ ನಮ್ಮ ರಾಜ್ಯದ ಕೊನೆಯ ಗಡಿಯಲ್ಲಿರುವ ಪ್ರತಿಯೊಂದು ಊರನ್ನು ನೆನಪಿಸುವಂತಿತ್ತು. ಮಾತೃಭಾಷೆಯೇ ತಾಯಿ ಎನ್ನುವ ಪ್ರತಿಯೊಬ್ಬನ ಚಿತ್ರವಾಗಿ ಈ ಸಿನಿಮಾ ಮನಸಾರೆ ಇಷ್ಟವಾಯಿತು. ಕೇವಲ ಕತೆ ಕಾರಣಕ್ಕೆ ಮಾತ್ರವಲ್ಲ, ಕಮರ್ಷಿಯಲ್ಲಾಗಿಯೂ ಗೆದ್ದ ಸಿನಿಮಾ. ತೀರಾ ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡು, ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ. ಈ ಎಲ್ಲ ಕಾರಣಗಳಿಗೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಿರ್ಮಿಸಿದ ‘ಸಹಿಪ್ರಾಶಾ’ ಈ ವರ್ಷದ ಹಿಟ್ ಚಿತ್ರ ಹಾಗೂ ವರ್ಷದ ಸಿನಿಮಾ.

ವರ್ಷದ ನಿರ್ದೇಶಕ:  ರಿಷಬ್ ಶೆಟ್ಟಿ

ಮೊದಲು ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶುರು ಮಾಡಿದಾಗ ಯಾಕೋ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ‘ಕಿರಿಕ್ ಪಾರ್ಟಿ’ಯಂತಹ ಹಿಟ್ ಸಿನಿಮಾ ಕೊಟ್ಟವರು ಈಗ ಶಾಲೆ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಎಂದೇ ಎಲ್ಲರು ಅಚ್ಚರಿಪಟ್ಟಿದ್ದರು. ಆದರೆ, ಎಲ್ಲರ ಅಚ್ಚರಿಗಳಿಗೆ ಸಿನಿಮಾ ಮೂಲಕವೇ ಉತ್ತರ ಕೊಟ್ಟು, ಈ ವರ್ಷದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡರು ರಿಷಬ್ ಶೆಟ್ಟಿ. ಆ ಮಟ್ಟಿಗೆ ಅವರನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಯಶಸ್ಸಿನ ಸಿಂಹಾಸನದಲ್ಲಿ ಕೂರಿಸಿತು. ಮಕ್ಕಳನ್ನು ಇಟ್ಟುಕೊಂಡು ಎಲ್ಲ ವರ್ಗದವರಿಗೂ ಇಷ್ಟವಾಗುವಂತೆ ಜತೆಗೆ ಕಮರ್ಷಿಯಲ್ಲಾಗೂ ಗೆಲ್ಲುವಂತಹ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಈ ಎಲ್ಲ ಮಿತಿಗಳನ್ನು ದಾಟಿಕೊಂಡು ಸ್ಟಾರ್‌ಗಳು, ಕೋಟಿಗಳ ಲೆಕ್ಕದಲ್ಲಿ ಬಜೆಟ್ ಇಲ್ಲದಿದ್ದರೂ ಸರಿ, ಜನ ಮೆಚ್ಚುವಂತಹ ಸಿನಿಮಾ ಮಾಡುತ್ತೇನೆ ಎಂದು ತೋರಿಸಿಕೊಟ್ಟರು. 

ವರ್ಷದ ಸಂಗೀತ ನಿರ್ದೇಶಕ: ಚರಣ್ ರಾಜ್

ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ಒಂದು ಸೂಪರ್ ಹಿಟ್ ಮತ್ತೊಂದು ಗಮನ ಸೆಳೆದ ಸಿನಿಮಾ. ಈ ಎರಡೂ ಸಿನಿಮಾಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶಕ ಎಂಬುದು ವಿಶೇಷ. ಆ ಚಿತ್ರಗಳೇ ‘ಟಗರು’ ಹಾಗೂ ‘ಜೀರ್ಜಿಂಬೆ’. ಕಾರ್ತಿಕ್ ಸರಗೂರು ನಿರ್ದೇಶನದ ‘ಜೀರ್ಜಿಂಬೆ’ ಚಿತ್ರ ಕತೆಯ ಜತೆಗೆ ರೀ-ರೆಕಾರ್ಡಿಂಗ್ ಹಾಗೂ ಹಾಡುಗಳು ಕೂಡ ಗಮನ ಸೆಳೆದಿವೆ ಎಂದರೆ ಅದಕ್ಕೆ ಚರಣ್‌ರಾಜ್ ಸಂಗೀತದ ಪಾಲು ದೊಡ್ಡದು. ಇನ್ನೂ ‘ಟಗರು’ ಹಾಡುಗಳ ಬಗ್ಗೆ ಹಾಗೂ ಹಿನ್ನೆಲೆ ಸಂಗೀತದ ಕುರಿತು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಟೈಟಲ್ ಹಾಡಿನ ಖದರ್ ನೋಡಿದರೆ ಚರಣ್ ರಾಜ್ ಸಂಗೀತದ ಮಹತ್ವ ಗೊತ್ತಾಗುತ್ತದೆ. ಆ ಮೂಲಕ ಈ ವರ್ಷದ ಹಿಟ್ ಸಂಗೀತ ನಿರ್ದೇಶಕ ಎನಿಸಿಕೊಂಡವರು ಚರಣ್‌ರಾಜ್.

ವರ್ಷದ ಛಾಯಾಗ್ರಾಹಕ: ಮಹೇಂದ್ರ ಸಿಂಹ

ತಾಂತ್ರಿಕವಾಗಿಯೂ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದರೆ ಅದರ ಮೊದಲ ಹೀರೋ ಛಾಯಾಗ್ರಾಹಕ ಮಹೇಂದ್ರ ಸಿಂಹ. ನಿರ್ದೇಶಕ ಸೂರಿಯ ಕಲ್ಪನೆಯ ಕತೆ ತೆರೆ ಮೇಲೂ ಮೋಡಿ ಮಾಡಿದ್ದು ಇದೇ ಮಹೇಂದ್ರ ಸಿಂಹ ಅವರ ಕ್ಯಾಮೆರಾ ಕಣ್ಣಲ್ಲಿ ಎಂಬುದು ಮರೆಯುವಂತಿಲ್ಲ. ಡೈರೆಕ್ಟರ್ ಸ್ಪೆಷಲ್ ಚಿತ್ರದಲ್ಲೇ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಮಹೇಂದ್ರ ಸಿಂಹ ಮಾಡಿದ್ದ ಲೈಟಿಂಗ್‌ಗೆ ಬೋಲ್ಡ್ ಆದವರು ಪ್ರೇಕ್ಷಕರು. ಅದೇ ರೀತಿಯ ‘ಟಗರು’ನಂತಹ ದೊಡ್ಡ ಕಮರ್ಷಿಯಲ್ ಚಿತ್ರಕ್ಕೆ ಮಹೇಂದ್ರ ಸಿಂಹ ಅವರು ಕಟ್ಟಿ ಕೊಟ್ಟ ನೆರಳು- ಬೆಳಕು ಇಡೀ ಚಿತ್ರಕ್ಕೆ ಹೊಸತನ ಮೂಡಿಸಿತು. ಡಾಲಿಯ ರಾಕ್ಷಸತ್ವದ ನಟನೆ, ಶಿವಣ್ಣನ ಎನರ್ಜಿ ಜತೆ ಸ್ಪರ್ಧಿಸುವಂತೆ ಇಡೀ ಸಿನಿಮಾ ಮೂಡಿ ಬಂದಿದ್ದು ಸಿಂಹ ಕ್ಯಾಮೆರಾ ಕಣ್ಣಲ್ಲಿ. 

ವರ್ಷದ ನಿರ್ಮಾಪಕ: ಟಿಆರ್ ಚಂದ್ರಶೇಖರ್ 

ಳೆದ ವರ್ಷದ ಕೊನೆಯಲ್ಲಿ ‘ಚಮಕ್’ ಮೂಲಕ ಹಿಟ್ ಕೊಟ್ಟವರು ನಿರ್ಮಾಪಕ ಟಿ ಆರ್ ಚಂದ್ರಶೇಖರ್. ಈ ವರ್ಷವೂ ಅದಕ್ಕಿಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದು ‘ಅಯೋಗ್ಯ’ ಸಿನಿಮಾ ಮೂಲಕ. ಒಬ್ಬ ಹೊಸ ನಿರ್ದೇಶಕನನ್ನು ನಂಬಿ ಬಂಡವಾಳ ಹಾಕುವಂತಹ ಧೈರ್ಯ ಮಾಡಿದ ಚಂದ್ರಶೇಖರ್ ಅವರಿಗೆ ಈ ವರ್ಷವೂ ಯಶಸ್ಸು ದಕ್ಕಿದೆ ಆ ಮೂಲಕ ವರ್ಷದ ಯಶಸ್ವಿ ನಿರ್ಮಾಪಕನ ಪಟ್ಟಕ್ಕೇರಿದ್ದಾರೆ. ಮುಂದೆ ‘ಬೀರ್‌ಬಲ್’, ‘ಬಿಚ್ಚುಗತ್ತಿ’ ಹಾಗೂ ಉಪೇಂದ್ರ ಅವರ ನಟನೆಯ ಚಿತ್ರಗಳನ್ನು ಘೋಷಿಸಿದ್ದಾರೆ. ಆ ಮೂಲಕ ಸಿನಿಮಾದಲ್ಲಿ ಪಡೆದುಕೊಂಡಿದ್ದನ್ನು ತಿರುಗಿ ಚಿತ್ರರಂಗಕ್ಕೇ ಕೊಡುತ್ತಿರುವ ಅಪ್ಪಟ ಸಿನಿಮಾ ಪ್ರೇಮಿ ನಿರ್ಮಾಪಕ ಚಂದ್ರಶೇಖರ್. ಸದ್ಯ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಅವರು 2018ರ ವರ್ಷದ ನಿರ್ಮಾಪಕ.

ಹಾಲ್ ಆಫ್ ಫೇಮ್! 

ಕನ್ನಡದ ಅಂಗಳದಲ್ಲೇ ಗಿರಕಿ ಹೊಡೆಯುತ್ತಾ, ಗಳಿಕೆ, ಮೆಚ್ಚುಗೆಗಳ ನಡುವೆ ಮಿಕ್ಕ ಚಿತ್ರಗಳು ತಮ್ಮ ತಮ್ಮ ಶಕ್ತಿ ತೋರುತ್ತಿರುವಾಗ, ಇದ್ದಕ್ಕಿದ್ದ ಹಾಗೆ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ರಾಷ್ಟ್ರೀಯ ರಂಗಕ್ಕೆ ಜಿಗಿದು ಹೆಸರು ಮಾಡಿದ್ದು
ಕೆಜಿಎಫ್! ಆ ಕಾರಣಕ್ಕೇ ಕೆಜಿಎಫ್ ಸ್ಪರ್ಧೆಯನ್ನು ಮೀರಿದ ಸಾಧನೆ ಮಾಡಿದೆ. 2018ರ ಬೆಳ್ಳಿತೆರೆಯಲ್ಲಿ ಬಂಗಾರದ ಗೆರೆಯಂತೆ ಮಿಂಚಿದ ಕೆಜಿಎಫ್ ಚಿತ್ರದ ಎಲ್ಲರೂ ವಿಶೇಷ ಗೌರವಕ್ಕೆ ಅರ್ಹರು ಎಂಬ ಕಾರಣಕ್ಕೆ ಅವರೆಲ್ಲರಿಗೂ ಒಂದು
ದೊಡ್ಡ ಚಪ್ಪಾಳೆ ಮತ್ತು ಭರಪೂರ ಮೆಚ್ಚುಗೆ. ರಾಕಿಂಗ್‌ಸ್ಟಾರ್ ಯಶ್ ಒಬ್ಬ ನಾಯಕ ನಟ ಒಂದು ಚಿತ್ರವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನುವುದನ್ನು ತೋರಿಸಿಕೊಟ್ಟರು. ಅವರ ವಿಶೇಷ ಶ್ರಮ ಮತ್ತು ಸಾಹಸದಿಂದಾಗಿ ಕೆಜಿಎಫ್ ಕನ್ನಡದ ಗಡಿರೇಖೆಗಳನ್ನು ಮೀರಿ ಭಾರತೀಯ ಚಿತ್ರರಂಗ ದಲ್ಲೂ ತನ್ನ ಛಾಪು ಮೂಡಿಸಿತು. ಈ ಐವರು ಆ ಕಾರಣಕ್ಕೆ ವಿಶೇಷ ಮನ್ನಣೆಗೆ ಅರ್ಹರು. ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಭುವನ್ ಗೌಡ, ರವಿ ಬಸ್ರೂರು